ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಪ್ರಸಾದ್



ಜಿ.ವಿ. ಕೃಷ್ಣಪ್ರಸಾದ್ 


ಜಿ.ವಿ. ಕೃಷ್ಣಪ್ರಸಾದ್ ಮಹಾನ್ ಸಂಗೀತ ಸೇವಕರು.  ಅವರು ಶ್ರೀರಾಮ ಲಲಿತ ಕಲಾ ಮಂದಿರದ ಕಾರ್ಯದರ್ಶಿಗಳಾಗಿ ಅಪಾರ ಕೆಲಸ ಮಾಡಿದವರು.  ಇಂದು ಅವರ ಸಂಸ್ಮರಣೆ ದಿನ. 

ಕೃಷ್ಣಪ್ರಸಾದ್ ಅವರ ಕುಟುಂಬವೇ ಸಂಗೀತಕ್ಕೆ ಮುಡಿಪಾಗಿತ್ತು. ಇವರ ತಂದೆ ಸಂಗೀತ ಕಲಾನಿಧಿ ವೇದಾಂತ ಅಯ್ಯಂಗಾರ್‌ 1955ರಲ್ಲಿ ಹುಟ್ಟುಹಾಕಿದ ಸಂಗೀತ ಸಂಸ್ಥೆ ಶ್ರೀರಾಮ ಲಲಿತ ಕಲಾ ಮಂದಿರ. ಅಂದಿನಿಂದ ಇಲ್ಲಿಯವರೆಗೆ ಈ ಸಂಸ್ಥೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನಿರಂತರವಾಗಿ ಬೆಳೆಸುತ್ತಾ, ಪೋಷಿಸುತ್ತಾ ಬಂದಿದೆ.   ಇಲ್ಲಿ ವರ್ಷಪೂರ್ತಿ ವಿಭಿನ್ನ, ವಿಶಿಷ್ಟವಾದ ಸಂಗೀತ ಚಟುವಟಿಕೆಗಳು ನಡೆಯುತ್ತವೆ. ವಿಚಾರ ಸಂಕಿರಣ, ಉಪನ್ಯಾಸ, ಸಂಗೀತ ಕಛೇರಿಗಳು, ರಸಗ್ರಹಣ ಶಿಬಿರಗಳು ನಡೆಯುತ್ತವೆ.  ಸಂಗೀತದಲ್ಲಿ ಖ್ಯಾತನಾಮರಾದವರ ಕಛೇರಿಗಳನ್ನೂ ಸಂಸ್ಥೆ ಆಯೋಜಿಸುತ್ತದೆ. ಈ ಸಂಸ್ಥೆಗೆ ಕರ್ನಾಟಕ ಕಲಾಶ್ರೀ ಗೌರವ ಸಂದಿದೆ.

ಹೀಗೆ ಸದಾ ಒಂದಲ್ಲ ಒಂದು ಸಂಗೀತ
ಚಟುವಟಿಕೆಯಿಂದ ಕೂಡಿರುವ ಈ ಸಂಸ್ಥೆಗೆ ಭದ್ರ ಬುನಾದಿ. ಹಾಕಿದವರು ದಿ. ವೇದಾಂತ ಅಯ್ಯಂಗಾರ್ ‌. ಅವರ  ಮಕ್ಕಳಾದ ಜಿ.ವಿ. ರಂಗನಾಯಕಮ್ಮ, ಜಿ.ವಿ. ನೀಲಾ, ಜಿ.ವಿ. ವಿಜಯಲಕ್ಷಿ ಹಾಗೂ ಜಿ.ವಿ.ಕೃಷ್ಣಪ್ರಸಾದ್‌ ಇದನ್ನು ಅಷ್ಟೇ ಸುವ್ಯವಸ್ಥಿತವಾಗಿ ಮುನ್ನಡೆಸಿಕೊಂಡು 
ಬಂದರು. ಕೃಷ್ಣಪ್ರಸಾದ್ ಅವರು ಈ ಸಂಸ್ಥೆಯ ದೊಡ್ಡ ಶಕ್ತಿಯಾಗಿದ್ದರು.

ಜಿ.ವಿ. ಕೃಷ್ಣಪ್ರಸಾದ್‌ ಅವರು ಹಿರಿಯ ವಿದ್ವಾಂಸರಾಗಿದ್ದ ಟಿ.ಕೆ.ವಯ್ಯಾಪುರಿ ದೇವರ್‌, ಎ.ರಾಜಾಚಾರ್‌, ಎಂ.ಎಸ್‌. ರಾಮಯ್ಯ, ಎಚ್‌. ಪುಟ್ಟಾಚಾರ್‌ ಮತ್ತು ಎಂ.ಎಲ್‌. ವೀರಭದ್ರಯ್ಯ ಅವರಲ್ಲಿ ಹಂತ ಹಂತವಾಗಿ ಮೃದಂಗ ಕಲಿತವರು. ಹಲವಾರು ವರ್ಷಗಳಿಂದ ನೂರಾರು ಮಕ್ಕಳಿಗೆ ಮೃದಂಗ ಹೇಳಿಕೊಟ್ಟು ಮಕ್ಕಳು ಸ್ವತಂತ್ರವಾಗಿ ಕಛೇರಿ ಕೊಡುವಷ್ಟು ಪಳಗಿಸಿದ್ದರು. 

ಶ್ರೀರಾಮ ಲಲಿತ ಕಲಾ ಮಂದಿರದಲ್ಲಿ  ಯೋಗ, ವೇದ ತರಗತಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣೆ, ಪಿಟೀಲು ಮತ್ತು ಮೃದಂಗ ಪಾಠಗಳು ಲಭ್ಯ. ಸಂಗೀತ ಪಾಠದ ಜತೆಗೆ ಯೋಗ ತರಗತಿ, ಶ್ಲೋಕ, ಧ್ಯಾನಗಳ ತರಗತಿಗಳೂ ನಡೆಯುತ್ತವೆ. ಸಂಜೆ ವೇದ ತರಗತಿ ಇದೆ. ಬೆಳೆಗ್ಗೆ ಒಂದು ಗಂಟೆ 'ಲಾಪ್ಟರ್‌ ಕ್ಷಬ್‌' ಕೂಡ ನಡೆಯುತ್ತದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಸದಾ ಸಂಗೀತ ತರಗತಿಗಳು ನಡೆಯುತ್ತಲೇ ಇರುತ್ತವೆ.  ವಿದ್ಯಾರ್ಥಿಗಳು ಅವರವರ ಅನುಕೂಲದ ಸಮಯಕ್ಕೆ ಬಂದು ಪಾಠ ಹೇಳಿಸಿಕೊಳ್ಳುತ್ತಾರೆ. ಶನಿವಾರ, ಭಾನುವಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್‌ ಎಂಜಿನಿಯರುಗಳು, ವೈದ್ಯರು ಕೂಡ ಇಲ್ಲಿ ಸಂಗೀತ ಕಲಿಯುತ್ತಾರೆ.

ಮೊದಲಿಗೆ ನಗರದ ಸನ್ನಿಧಿ ರಸ್ತೆಯಲ್ಲಿ ಸಣ್ಣ ಕೊಠಡಿಯೊಂದರಲ್ಲಿ ಶ್ರೀರಾಮ ಲಲಿತ ಕಲಾ ಮಂದಿರ ಆರಂಭವಾಯಿತು. ಬಳಿಕ ಟಾಟಾ ಸಿಲ್ಕ್‌ ಫಾರಂನ ಮತ್ತೊಂದು ಜಾಗಕ್ಕೆ ಸ್ಥಳಾಂತರಗೊಂಡಿತು. 1981ರಲ್ಲಿ ಬನಶಂಕರಿಯ ಸುಸಜ್ಜಿತ ಕಟ್ಟಡದಲ್ಲಿ ಈ ಸಂಗೀತ ಸಂಸ್ಥೆ ಕಾರ್ಯಾರಂಭ ಮಾಡಿತು.  ಹಿರಿಯ ವಾಗ್ಗೇಯಕಾರರ ಅಪರೂಪದ ಕೃತಿಗಳನ್ನು ಕುರಿತ ವಿಚಾರ ಸಂಕಿರಣವನ್ನು  ಈ ಸಂಸ್ಥೆ ಆಗಾಗ ಆಯೋಜಿಸುತ್ತಾ ಬಂದಿದೆ. ಈ ಸಂಗೀತ ಸಂಸ್ಥೆ ಪ್ರತಿವರ್ಷ ವಸಂತ ಸಂಗೀತೋತ್ಸವ ಮತ್ತು ಸಂಕ್ರಾಂತಿ ಸಂಗೀತೋತ್ಸವವನ್ನು  ಅದ್ದೂರಿಯಾಗಿ ಆಚರಿಸುತ್ತಾ ಬಂದಿದೆ. ನಾಡಿನ ಖ್ಯಾತನಾಮರೆಲ್ಲ ಬಂದು ಹಾಡಿದ್ದಾರೆ. ಸಂಗೀತೋತ್ಸವದ ಕೊನೆಯ
ದಿನ 'ಸಂಗೀತ ವೇದಾಂತ ಧುರೀಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಡಾ. ಆರ್‌.ಕೆ. ಶ್ರೀಕಂಠನ್‌, ಬಾಲಮುರಳಿಕೃಷ್ಣ, ಸುಧಾ ರಘುನಾಥನ್‌, ಬಾಂಬೆ ಜಯಶ್ರೀ ಅಂತಹ ಮಹನೀಯರುಗಳೂ ಸೇರಿದಂತೆ ಅನೇಕ ವಿದ್ವಾಂಸರು ಇಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. 

ಕೃಷ್ಣ ಪ್ರಸಾದ್ ಅವರು ಗಾಯನ ಸಮಾಜದ ಗೌರವ ಕಾರ್ಯದರ್ಶಿಯಾಗಿಯೂ ಅನೇಕ ವರ್ಷ ಸೇವೆ ಸಲ್ಲಿಸಿದ್ದರು. ಅವರಿಗೆ ಗಾಯನ ಸಮಾಜ ನೀಡುವ ಪ್ರಶಸ್ತಿ, ದೇವಗಿರಿ ಸಭೆ ಪ್ರಶಸ್ತಿ, ಜೆ.ಎಸ್‌.ಎಸ್‌. ಸಭೆ ಗೌರವ, ಕೆಂಪೇಗೌಡ ಪ್ರಶಸ್ತಿ, ಲಲಿತ ಕಲಾಶ್ರಯ ಬಿರುದು, ಲಲಿತ ಕಲಾ ಪೋಷಕ ಮಣಿ ಪ್ರಶಸ್ತಿ ಸೇರಿದಂತೆ  ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದವು.

ಕೃಷ್ಣ ಪ್ರಸಾದ್ 2023ರ ಮೇ 13ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ. 

On Remembrance Day of Great connoisseur of music G.V. Krishna Prasad 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ