ಕೃಷ್ಣ-ಕುಚೇಲ
ಕೃಷ್ಣ-ಕುಚೇಲ
ಸಾಂದೀಪ ಋಷಿಯ ಬಳಿ ಕೃಷ್ಣನೂ ಕುಚೇಲನೂ ಶಿಷ್ಯರಾಗಿದ್ದರು. ಅವರಿಬ್ಬರೂ ದಿನವೂ ಸಮಿತ್ತುಗಳನ್ನು ಆಯ್ದು ತರಲು ಹೋಗುತ್ತಿದ್ದರು. ಒಂದು ದಿನ ಹಾಗೆ ಅವರು ಹೋಗಿರುವಾಗ ದೊಡ್ಡ ಮಳೆ ಬಂತು. ಕೃಷ್ಣ ಕುಚೇಲರಿಬ್ಬರೂ ನೆನೆಯದಂತೆ ಮರದ ಕೆಳಗೆ ನಿಂತರು. ಆಗ ಕೃಷ್ಣನೆಂದ:
“ಕುಚೇಲ, ನಾವು ದೊಡ್ಡವರಾದಮೇಲೆಯೂ ಇದೇ ರೀತಿ ಸ್ನೇಹಿತರಾಗಿರಬೇಕು ಕಂಡೆಯಾ?”
ವಿದ್ಯಾಭ್ಯಾಸ ಪೂರ್ತಿಯಾದ ಬಳಿಕ ಅವರಿಬ್ಬರೂ ಬೇರೆ ಬೇರೆ ಆದರು. ಕೃಷ್ಣ ದ್ವಾರಕೆಯ ಅಧಿಪತಿಯಾದ. ಕುಚೇಲನಿಗೆ ಬಡತನ ಅಡರಿತು. ದಿನವಿಡೀ ದುಡಿದರೂ ಹಿಡಿತುತ್ತು ಸಿಗದಾಯಿತು. ಆದರೂ ಅವನು ಮದುವೆ ಆದ. ತಮ್ಮ ಕಷ್ಟದ ಸಮಯದಲ್ಲೆಲ್ಲಾ ಅವನು ಹೆಂಡತಿಗೆ ಕೃಷ್ಣನ ವಿಷಯವನ್ನು ಹೇಳುತ್ತಿದ್ದ. ಒಂದು ದಿನ ಅವನ ಹೆಂಡತಿ ಹೇಳಿದಳು:
“ಅಲ್ಲ, ನಿನ್ನ ಸ್ನೇಹಿತ ಕೃಷ್ಣ ಅಷ್ಟೊಂದು ದೊಡ್ಡ ರಾಜ ಎಂದು ಹೇಳ್ತೀಯಲ್ಲಾ ಅದು ನಿಜವಾದರೆ ಅವನ ಬಳಿ ನೀನು ಹೋಗಿ ಏನಾದರೂ ತರಬಾರದೇಕೆ?”
ಅದು ಒಳ್ಳೆಯ ಯೋಚನೆ, ಎನಿಸಿತು ಕುಚೇಲನಿಗೆ. ಆದರೆ ಕೃಷ್ಣನ ಮನೆಗೆ ಕೊಂಡೊಯ್ಯುವಂತಹ ವಸ್ತು ಆತನ ಬಳಿ ಯಾವುದೂ ಇರಲಿಲ್ಲ.
ಕಡೆಗೆ ಹೆಂಡತಿಯೆಂದಳು: “ಮನೇಲಿ ಒಂದು ಹಿಡಿ ಅವಲಕ್ಕಿ ಇದೆ. ಅದನ್ನೇ ಗಂಟುಕಟ್ಟಿ ಕೊಡಲಾ?” ಚಿಂದಿಬಟ್ಟೆಯಲ್ಲಿ ಕುಚೇಲ ಅವಲಕ್ಕಿಯನ್ನು ಗಂಟುಕಟ್ಟಿಕೊಂಡ. ಹರಿದ ಪಂಚೆ, ಮೈಮೇಲೊಂದು ತೂತುಗಳಿದ್ದ ಉತ್ತರೀಯ, ಕೈಯಲ್ಲಿ ಗಂಟು ಇವುಗಳಿಂದ ಶೊಭಿತನಾದ ಕುಚೇಲ ದ್ವಾರಕೆಗೆ ಹೊರಟ.
ರಾಜಭಟರು ಅವನನ್ನು ಬಾಗಿಲಿನಲ್ಲೇ ತಡೆದರು.
“ಯಾವೂರ ದಾಸಯ್ಯನಪ್ಪ ನೀನು? ಅರಮನೆಯಲ್ಲಿ ನಿನಗೇನು ಕೆಲಸ?ಹೋಗು, ಹೋಗು”ಎಂದರು.
“ಅಯ್ಯಾ, ನಾನು ಕೃಷ್ಣಪರಮಾತ್ಮನ ಬಾಲ್ಯ ಸ್ನೇಹಿತನಪ್ಪ.”
“ಈ ಭಿಕ್ಷುಕನಿಗೆ ನಿಜವಾಗಿ ಹುಚ್ಚು ಹಿಡಿದಿದೆ” ಎಂದು ರಾಜಭಟರು ಬಿದ್ದು ಬಿದ್ದು ನಗಲಾರಂಭಿಸಿದರು. ನಾಚಿಕೆಯಿಂದ ಕುಚೇಲ ಹಿಡಿಮೈ ಮಾಡಿಕೊಂಡು ನಿಂತ.
ಹೊರಗೆ ಗಲಭೆಯೇನೆಂದು ನೋಡಲು ಬಂದ ಕೃಷ್ಣ ಕುಚೇಲನನ್ನು ನೋಡಿ “ಓ ಕುಚೇಲನೇ? ಬಾರಯ್ಯಾ, ಬಾ ನನ್ನ ಸ್ನೇಹಿತ” ಎಂದು ಓಡಿಬಂದು ಅವನನ್ನು ಅಪ್ಪಿಕೊಂಡ. ಒಳಗೆ ಕರೆದು ಕೊಂಡು ಹೋಗಿ ನವರತ್ನ ಖಚಿತ ಪೀಠದ ಮೇಲೆ ಕುಳ್ಳಿರಿಸಿದ.
ಕುಚೇಲ ಸಂಕೋಚದಿಂದಲೇ ಕುಳಿತ. ಸ್ವಲ್ಪ ಹೊತ್ತು ಮಾತು ಕತೆಯಾದ ಬಳಿಕ “ಕುಚೇಲ, ನನಗೆ ತಿನ್ನೋದಕ್ಕೆ ಏನು ತಂದಿದೀಯಾ?”ಎಂದು ಕೇಳಿದ ಕೃಷ್ಣ.
ನಾಚಿಕೆಯಿಂದ ಕುಚೇಲ ಭೂಮಿಗಿಳಿದುಹೋದ. ಸಕಲ ವೈಭವಗಳುಳ್ಳ, ದಿನವೂ ಭೂರಿಭೋಜನ ಮಾಡುವ ಆ ರಾಜಾಧಿರಾಜ ಕೃಷ್ಣನಿಗೆ, ತನ್ನ ಹರಕಲು ಬಟ್ಟೆಯಲ್ಲಿ ಗಂಟು ಕಟ್ಟಿದ ಅವಲಕ್ಕಿ ಕೊಡುವುದೇ ಬೇಡ, ಎಂದುಕೊಂಡ.
ಆದರೆ ಕೃಷ್ಣ ಗಂಟನ್ನು ನೋಡಿಬಿಟ್ಟಿದ್ದ. ಅದನ್ನು ತಾನೇ ಎತ್ತಿಕೊಂಡು, “ಅಹಾ ಎಷ್ಟು ರುಚಿಯಾಗಿದೆ” ಎನ್ನುತ್ತಾ ಅವಲಕ್ಕಿಯನ್ನು ತಿಂದೇಬಿಟ್ಟ ಶ್ರೀಕೃಷ್ಣ.
ಊಟೋಪಚಾರಗಳ ಬಳಿಕ ಕೃಷ್ಣ ಕುಚೇಲನನ್ನು ಬೀಳ್ಕೊಟ್ಟ. ಬರಿಗೈಲಿ ಊರಿಗೆ ಹೊರಟ ಕುಚೇಲ ಅಂದುಕೊಂಡ: “ಅಲ್ಲ, ಕೃಷ್ಣ ಎಂಥ ಜಿಪುಣ ಅಷ್ಟೊಂದು ವೈಭವಗಳು ತನಗಿದ್ದರೂ ಸ್ನೇಹಿತನಿಗೆ ಒಂದು ಚೂರನ್ನೂ ಕೊಡಲಿಲ್ಲವಲ್ಲಾ ಇನ್ನು ನನ್ನ ಹೆಂಡತಿಗೆ ಏನು ಹೇಳಲಿ?”
ಕುಚೇಲ ಬೇಸರದಿಂದ ತನ್ನ ಊರಿನತ್ತ ಸಾಗಿದ. ಅವನು ಊರಿನ ಹೊರವಲಯ ತಲಪುವ ಹೊತ್ತಿಗೆ ಅಲ್ಲೊಂದು ದೊಡ್ಡ ಅರಮನೆ ನಿರ್ಮಾಣವಾಗಿತ್ತು. ನವರತ್ನ ಖಚಿತ ರೇಷ್ಮೆ ವಸ್ತ್ರಗಳನ್ನು ಧರಿಸಿದ ಸ್ತ್ರೀಯೊಬ್ಬಳು ಅವನನ್ನು ಸಂಭ್ರಮದಿಂದ ಇದಿರ್ಗೊಂಡಳು.
ಆಕೆ ಅವನ ಹೆಂಡತಿ. ಕುಚೇಲ ಮೂಕನಾದ.
ನಿರೂಪಣೆ: ಡಾ. ಅನುಪಮಾ ನಿರಂಜನ, ‘ದಿನಕ್ಕೊಂದು ಕಥೆ’
Photo courtesy and copy rights: shree49 (http://www.flickr.com/photos/80183256@N00/)
ಕಾಮೆಂಟ್‌ಗಳು