ರಾಜೀವ್ ಗಾಂಧಿ
ರಾಜೀವ್ ಗಾಂಧಿ
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ದಿನ.
ರಾಜೀವ್ ಗಾಂಧೀ ಈ ಲೋಕ ಬಿಟ್ಟು ಹೋಗಿಯೇ 34 ವರ್ಷ ಆಗಿ ಹೋಯಿತು. ಅಂದಿನ ದಿನ ಇನ್ನೂ ಮಂಪರು ನಿದ್ರೆಯಲ್ಲಿ, ಇದೇನಿದು ಹಜಾರದಲ್ಲಿ ಇಷ್ಟು ಬೆಳಿಗ್ಗೆ ಟಿ.ವಿ ಯಾಕೆ ಹಾಕಿದ್ದಾರೆ ಎಂದು ಕಣ್ಣುಜ್ಜುತ್ತಾ ಬಂದಾಗ ಈ ಸುರದ್ರೂಪಿ ಮಾಜಿ ಪ್ರಧಾನಿ ಹತ್ಯೆಯಾಗಿದ್ದು ನೋಡಿ ದಿಗ್ಭ್ರಮೆಗೊಂಡಿದ್ದು ನೆನೆಪಿದೆ. ರಾಜೀವ್ ಗಾಂಧಿ ಸಮಾಧಿ ಮಾಡಿದ ದಿನದ ಸಂದರ್ಭದಲ್ಲಿ ಕೊಲ್ಲೂರಿನಲ್ಲಿದ್ದೆ. ಆ ಊರಿನ ಒಬ್ಬ ವರ್ತಕ ಅಂಗಡಿ ಮುಚ್ಚುತ್ತಿದ್ದ. ಇದೇಕೆ ನಿಮಗೆ ಯಾರಾದರೂ ಗಲಾಟೆ ಮಾಡುತ್ತಾರೆ ಎಂದು ಭಯವೇ ಅಂಗಡಿ ಮುಚ್ಚುತ್ತಿದ್ದೀರ ಅಂತ ಕೇಳಿದೆ? ಆತ ಹೇಳಿದ, "ನನಗೆ ರಾಜೀವ್ ಗಾಂಧೀ ಅಂದರೆ ತುಂಬಾ ಗೌರವ ಅದಕ್ಕೇ ಅಂಗಡಿ ಮುಚ್ಚುತ್ತಿದ್ದೇನೆ".
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಓದಿ ಇಟಾಲಿಯನ್ ಹುಡುಗಿ ಪ್ರೇಮ ಮಾಡಿ ಮದುವೆಯಾಗಿ ಪೈಲಟ್ ಆಗಿ ಜೀವನ ಸಾಧಿಸುತ್ತಿದ್ದ ಈ ಸುಂದರ ಮಗನನ್ನು ಇಂದಿರಾಗಾಂಧಿ ತಮ್ಮ ಮತ್ತೊಬ್ಬ ಪುತ್ರ ಅಪಘಾತದಲ್ಲಿ ಅಸುನೀಗಿದ ಸಂದರ್ಭದಲ್ಲಿ ಮತ್ತು ತಮಗಿದ್ದ ಇನ್ನಿತರ ಹಲವು ಭಯಗಳ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ತಂದುಕೊಂಡರು.
ಆಗಿನ ಸಂದರ್ಭದಲ್ಲಿ ಈ ಹುಡುಗ ಮುಗ್ದನಾಗಿದ್ದ. ಭಾರತದಲ್ಲಿ ಹೀಗಾಗುತ್ತದೆ ಎಂದು ಯಾರೂ ಊಹಿಸದಿದ್ದ ಹಾಗೆ ಇಂದಿರಾ ಗಾಂಧಿಯವರ ಹತ್ಯೆಯಾದಾಗ, ಒಬ್ಬ ಹಂಗಾಮಿ ಪ್ರಧಾನ ಮಂತ್ರಿಯಾಗಿ ರಕ್ಷಣಾ ಸಚಿವರನ್ನು ಮಾಡಬೇಕು ಎಂಬ ಔಚಿತ್ಯ ಕೂಡಾ ಮೀರಿ ಕಾಂಗ್ರೆಸ್ ಪಕ್ಷ, ರಾಜೀವ್ ಗಾಂಧಿಯನ್ನು ಪ್ರಧಾನಿ ಪಟ್ಟಕ್ಕೆ ತಂದಿತು.
ನಮ್ಮ ದೇಶದಲ್ಲಿ ಒಂದು ಯುದ್ಧ ಮತ್ತು ಒಂದು ಕೊಲೆ ಜನಗಳ ಸಂವೇದನೆಯನ್ನು ಅತೀ ಆಳವಾಗಿ ತಟ್ಟಿಬಿಡುತ್ತೆ. 'ಇಂದಿರಾ ಗಾಂಧೀ ಪುತ್ರ ರಾಜೀವ್ ಗಾಂಧೀ ನಾಯಕ'ನೆಂದು ಹೇಳಿಕೊಂಡ ಪಕ್ಷ ನಿರಾಯಾಸವಾಗಿ 542 ಸ್ಥಾನಗಳಲ್ಲಿ 411 ಸ್ಥಾನಗಳನ್ನು ಪಡೆದು ವಾಜಪೇಯಿ ಅಂತಹ ಶ್ರೇಷ್ಠ ರಾಜಕಾರಣಿಯನ್ನು ಸಹಾ ಸೋಲಿಸಿ ದೇಶದ ಕಡಿವಾಣವನ್ನು ರಾಜೀವ್ ಗಾಂಧೀ ಕೈಯಲ್ಲಿ ಒಪ್ಪಿಸಿತು. ನನ್ನ ಅತ್ಯಂತ ಬುದ್ಧಿವಂತ ಗೆಳೆಯರೊಬ್ಬರು ಹೇಳುತ್ತಿದ್ದರು. "ಆತನಿಗೆ ಎಂತಹ ಬಲ ನಮ್ಮ ದೇಶ ಕೊಟ್ಟಿದೆ ಅಂದ್ರೆ ಆ ಬಲದಲ್ಲಿ ಆತ ಏನನ್ನೂ ಸಾಧಿಸಬಹುದು!" ಅಂತ.
ರಾಜೀವ್ ಗಾಂಧೀ ಭರವಸೆಯನ್ನು ಹುಟ್ಟಿಸಿದರು. ಲೈಸೆನ್ಸ್ ರಾಜ್ ಬುಡವನ್ನು ಭಾರತದಲ್ಲಿ ಪ್ರಥಮವಾಗಿ ಅಲ್ಲಾಡಿಸಿದರು. ಟ್ಯಾರಿಫ್‍ಗಳು, ಪರವಾನಗಿಗಳನ್ನು ಬೇಡಬೇಕಾದ ಸ್ಥಿತಿಯನ್ನು ಕಡಿಮೆ ಮಾಡುವ ಸಾಧ್ಯತೆಗಳನ್ನು ತೋರಿದರು. ಟೆಲಿ ಸಂಪರ್ಕ ವ್ಯವಸ್ಥೆಗಳು, ಶಿಕ್ಷಣ ವ್ಯವಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆ ಇವುಗಳಲ್ಲೆಲ್ಲಾ ಹೊಸ ಉತ್ಸಾಹ, ಆಸಕ್ತಿಗಳು ಮೊಳಗುವತ್ತ ನೋಟ ಬೀರಿದರು. ಅಮೆರಿಕದೊಡನೆ ಸ್ನೇಹ ಸೇತು ಬೆಳೆಸಿದರು.
ರಾಜೀವ್ ಗಾಂಧೀ ಅಧಿಕಾರದ ಅವಧಿಯಲ್ಲಿ ನಮ್ಮ ಆರ್. ಕೆ. ಲಕ್ಷ್ಮಣ್ ಒಂದು ಕಾರ್ಟೂನ್ ಬರೆದಿದ್ರು. ಆ ಕಾರ್ಟೂನಿನಲ್ಲಿ ಒಬ್ಬ ಮನೆಯಲ್ಲಿ ಕೂತುಕೊಂಡು ರಾಜೀವ್ ಗಾಂಧೀ ಫೋಟೋನೇ ನೋಡ್ತಾ ಕೂತಿದ್ದ! ಅದಕ್ಕೆ ಕೆಳಗಿದ್ದ ವಿವರಣೆ "ಆತನ ಮನೆಯ ಟಿ.ವಿ. ಕೆಟ್ಟು ಹೋಗಿದೆ!". ರಾಜೀವ್ ಗಾಂಧೀಗೆ ಅಷ್ಟೊಂದು ಪ್ರಚಾರ ಪ್ರಿಯತೆ ಅಂಟುಕೊಂಡಿತ್ತು.
ಇಂದಿರಾ ಗಾಂಧೀ ಸತ್ತ ಸಂದರ್ಭದಲ್ಲಿ ಪ್ರಣಬ್ ಮುಖರ್ಜಿ ಅವರು ತಾನು ಪ್ರಧಾನಿ ಆಗಬೇಕು ಅಂತ ಒಂದು ಚೂರು ಆಸೆ ಇಟ್ಟುಕೊಂಡು ಒಂದಿಬ್ಬರನ್ನು ಸಂಪರ್ಕಿಸಿದ್ದರು ಅಂತ ಗೊತ್ತಾಗಿ, ಅಂತಹ ಮೇಧಾವಿಯನ್ನು ರಾಜೀವ್ ಗಾಂಧೀ ಮೂಲೆ ಗುಂಪು ಮಾಡಿದ್ರು. ವಿಶ್ವನಾಥ್ ಪ್ರತಾಪ್ ಸಿಂಗ್, ಅರುಣ್ ಸಿಂಗ್ ಅಂತಹ ಅಂದಿನ ದಿನದಲ್ಲಿ ಒಳ್ಳೆಯ ಕೆಲಸ ಮಾಡಿದ್ದ ಮಂತ್ರಿಗಳ ಬಳಿ ವೈಮನಸ್ಯ ಕಟ್ಟಿ ಕೊಂಡ್ರು. ತಾವು ಮುಂದೆಂದೂ ಸೋಲದೆ ಇರೋ ತರಹ ರಾಜಕೀಯ ಶಕ್ತಿ ಆಗ್ಬೇಕು ಅಂತ ಬೋಫೋರ್ಸ್ ಅಂತಹ ವ್ಯವಹಾರದಲ್ಲಿ ಆಳಕ್ಕೆ ಇಳಿದಿದ್ರು! ತಮ್ಮ ತಾಯಿ ಸತ್ತ ಸಂದರ್ಭದಲ್ಲಿ ಸಿಖ್ಖರನ್ನು ದೆಹಲಿಯಲ್ಲಿ ಅಮಾನುಷವಾಗಿ ಹಿಂಸಿಸದ್ದನ್ನು ತಪ್ಪು ಅಂತ ಅರ್ಥ ಮಾಡಿಕೊಳ್ಳಲಾಗದ ಕೃತ್ರಿಮತೆ ಅವರನ್ನು ಆವರಿಸಿಕೊಂಡಿತ್ತು. ತಮಿಳು ಉಗ್ರಗಾಮಿಗಳನ್ನು ಹತ್ಯೆ ಮಾಡೋಕೆ ಗೊತ್ತು ಗುರಿ ಇಲ್ಲದೆ ಭಾರತೀಯ ಸೇನೆಯ ಸಂಖ್ಯೆಯನ್ನು ವಿದೇಶಗಳಲ್ಲಿ ನಿಯೋಜಿಸಿದ್ರು. ತಾವು ಮಾಡ್ತಾ ಇರೋ ದೊಡ್ಡ ದೊಡ್ಡ ಪ್ರಚಾರದ, "ಭಾರತವನ್ನು ಅಮೇರಿಕಾ ಮಾಡಿ ಬಿಡ್ತೇನೆ!" ಎಂಬ ಕಲ್ಪನೆಗಳು ಭಾರತೀಯ ಮೂಲ ತಂತುವನ್ನ, ಕಷ್ಟ ನಷ್ಟಗಳನ್ನ ಅನುಭವಿಸುತ್ತಿರುವ ಸಾಧಾರಣ ಭಾರತೀಯರನ್ನು ಸ್ಪಂದಿಸುತ್ತಿಲ್ಲ ಎಂದು ಅವರಿಗೆ ಗೊತ್ತಾಗುವ ಒಳಗೆ ಅವರ ಅಧಿಕಾರಾವಧಿ ಕೂಡಾ ಗತಿಸಿ ಹೋಗಿತ್ತು. ರಾಮಕೃಷ್ಣ ಹೆಗ್ಗಡೆ ಸರ್ಕಾರ ಒಳ್ಳೇ ಕೆಲಸ ಮಾಡ್ತಿದ್ದಾಗ ಆ ಸರ್ಕಾರಕ್ಕೆ ಒಂದೊಂದು ಬಿಡುಗಾಸಿಗೂ ಅಡ್ಡಗಾಲು ಹಾಕಿದರು. ತಮ್ಮದೇ ಪಕ್ಷದ ಸರ್ಕಾರ ಇದ್ದಾಗ ವೀರೇಂದ್ರ ಪಾಟೀಲ್ ಅಂತಹ ಸಜ್ಜನ ಕಾಯಿಲೆ ಬಿದ್ದಿದ್ದಾಗ ಆ ಜಾಗದಲ್ಲಿ ಬಂಗಾರಪ್ಪನವರನ್ನು ದೊಡ್ಡವನನ್ನಾಗಿ ಮಾಡಿ ಕೂರಿಸಿದರು. ವಿಶ್ವಭಾರತಿಯಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಯಾವುದೇ ಘನತೆ ಇಲ್ಲದಿದ್ರೂ ತಾವು ದೊಡ್ಡವರಾಗಿ ಕೂತರು. ಎಲ್ಲೋ ಅವರಿಗೆ ಒಂದು ಸಮರ್ಥ ತಂಡವನ್ನು ಬೆಳೆಸುವುದು ಸಾಧ್ಯವಾಗಲಿಲ್ಲ. ದೊಡ್ಡ ಬೆಂಬಲ ಕೊಟ್ಟಿದ್ದ ಜನತೆಯ ನಿರೀಕ್ಷೆಗಳು ಫಲಿಸದೆ, ಸೋಲು ಅವರನ್ನು ಹಿಂಬಾಲಿಸಿತ್ತು.
ರಾಜೀವ್ ಗಾಂಧೀ ಮುಂದೆ ಅಧಿಕಾರ ಕಳೆದುಕೊಂಡರೂ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಭಾರತಕ್ಕೆ ಉತ್ತಮ ಭವಿಷ್ಯಕ್ಕೆ ಕಾಯಕ ಮಾಡುತ್ತಾರೇನೊ ಎಂದು ಭಾರತೀಯರು ಭಾವಿಸಿದ್ದರು. ಆದರೆ ಆತ ತಮಿಳು ಉಗ್ರಗಾಮಿಗಳಿಗೆ ಹತ್ಯೆ ಆಗಿದ್ದು ನೆನೆಸಿಕೊಂಡರೆ ಈಗಲೂ ನೋವಾಗುತ್ತೆ.
ಹಸನ್ಮುಖಿ ರಾಜೀವ್ ಗಾಂಧೀ ಅವರ ನೆನಪು, ಹಲವು ದೆಸೆಗಳಲ್ಲಿ ನಮ್ಮ ನೆನಪುಗಳಿಂದ ಮಾಸದೆ ಉಳಿದಿದೆ.
On Remembrance Day of Rajiv Gandhi 🌷🙏🌷
ಕಾಮೆಂಟ್‌ಗಳು