ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಟ್ಟಾಭಿರಾಮ ಗುರೂಜಿ


 ಪಟ್ಟಾಭಿರಾಮ ಗುರೂಜಿ
ಲೇಖಕರು: ರಾಧಿಕಾ ವಿಟ್ಲ, ದೆಹಲಿ


ಒಮ್ಮೆ ಹಿಮಾಲಯದ ಯೋಗಿ, ಗುರುದೇವ ಸ್ವಾಮಿ ರಾಮ ಅವರನ್ನು ಕಾಣಲೆಂದು ಪಟ್ಟಾಭಿರಾಮ ಗುರೂಜಿಯವರು ಋಷಿಕೇ಼ಶಕ್ಕೆ ತೆರಳಿದ್ದರಂತೆ. ಆಗೆಲ್ಲ ದೂರವಾಣಿಗಳ, ಪತ್ರಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದ ಸಮಯ. ಹೀಗಾಗಿ ಋಷಿಕೇಶದಲ್ಲಿ ಹತ್ತು ದಿನಗಳ ಕಾಲ ಇದ್ದು ವಾಪಾಸಾಗುತ್ತೇನೆಂದು ಹೇಳಿ ತೆರಳಿದ್ದ ಅವರು ಹತ್ತು ದಿನಗಳಲ್ಲ, ವಾರಗಳೇ ಕಳೆದರೂ ಪತ್ತೆಯೇ ಇಲ್ಲ. ಇಂದು, ನಾಳೆ ಎಂದು ಅವರ ದಾರಿ ಕಾಯುತ್ತಿದ್ದ ಕುಟುಂಬ ಹಾಗೂ ಆಪ್ತರಿಗೆ ಅವರು ಯಾಕೆ ಬರಲಿಲ್ಲ ಎಂಬ ಗೊಂದಲ, ಆತಂಕ. ಋಷಿಕೇಶದ ಸ್ವಾಮಿ ರಾಮ ಆಶ್ರಮಕ್ಕೆ ಸಂಪರ್ಕಿಸಿದರೂ ಅವರ ಬಗ್ಗೆ ನಿಖರವಾದ ಮಾಹಿತಿಗಳು ದಕ್ಕಲಿಲ್ಲ. ಬಹಳ ದಿನಗಳ ನಂತರ ಮನೆಗೆ ಮರಳಿ ಬಂದ ಪಟ್ಟಾಭಿರಾಮ ಗುರೂಜಿ, ಅಷ್ಟೂ ದಿನ ಕಾಣೆಯಾಗಿದ್ದು ಹಿಮಾಲಯದಲ್ಲಿ. ಸ್ವಾಮಿ ರಾಮ ಅವರ ಮಾರ್ಗದರ್ಶನದಂತೆ ಹಿಮಾಲಯದ ಒಂದು ಗುಹೆಯಲ್ಲಿ ತಪಸ್ಸು ಮಾಡಲು ತೆರಳಿದ್ದ ಅವರು, ಅವರ ಆಜ್ಞೆಯನ್ನು ಮೀರದೆ, ಅವರು ಹೇಳಿದಷ್ಟು ದಿನ ಅಲ್ಲಿದ್ದು ತಪಸ್ಸು ಮಾಡಿ ಮರಳಿದ್ದರು. ಇಂದು ಅಂತಹ ಶ್ರೇಷ್ಠ ಯೋಗಿ ಕೀರ್ತಿಶೇಷ ಪಟ್ಟಾಭಿರಾಂ ಗುರೂಜಿ ಅವರ ಜನ್ಮದಿನ.

ಪಟ್ಟಾಭಿರಾಂ ಗುರೂಜಿಯವರು ಹುಟ್ಟಿದ್ದು ಅರಕಲಗೂಡಿನಲ್ಲಿ. ಹಾಸನದ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ಪದವಿ ಮುಗಿಸಿದ ಇವರ ಬದುಕು ತಾವು ಓದಿದ ವಿಷಯಕ್ಕಿಂತ ಬೇರೆಯದೇ ಮಜಲಿನತ್ತ ಬಹುಬೇಗನೆ ಹೊರಳಿತ್ತು. ಸ್ವಾಮಿ ವಿವೇಕಾನಂದರಿಂದ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪ್ರಭಾವಕ್ಕೆ ಒಳಗಾಗಿದ್ದ ಇವರು ಯೋಗದತ್ತ ಆಕರ್ಷಿತರಾದರು. ಹೀಗಾಗಿ ಇವರು ಯೋಗಗುರು ಬಿಕೆಎಸ್‌ ಅಯ್ಯಂಗಾರ್‌, ಸ್ವಾಮಿ ವಿಷ್ಣುವೇದಾನಂದ ಹಾಗೂ ಜಿಡ್ಡು ಕೃಷ್ಣಮೂರ್ತಿಗಳಂತಹ ಪ್ರಮುಖರ ಗರಡಿಯಲ್ಲಿ ಯೋಗ, ಧ್ಯಾನ, ಆಧ್ಯಾತ್ಮದ ಮಾರ್ಗದರ್ಶನ ಪಡೆದರು. ಜೆಕೆ ಫೌಂಡೇಶನ್‌, ಕೈವಲ್ಯ ಧಾಮ ಹಾಗೂ ಯೋಗ ವೇದಾಂತ ಫಾರೆಸ್ಟ್‌ ಅಕಾಡೆಮಿ ಇತ್ಯಾದಿಗಳಲ್ಲೂ ಕಾರ್ಯ ನಿರ್ವಹಿಸುವ ಮೂಲಕ ಯೋಗ ಪ್ರಸರಣ ಕೈಕಂರ್ಯದಲ್ಲಿ ಮಹತ್ವದ ಹೆಜ್ಜೆಯಿಟ್ಟರು. ೧೯೮೬ರಲ್ಲಿ ರಾಮನಗರದಲ್ಲಿ ತಮ್ಮದೇ ಆದ ಸಾಧನ ಸಂಗಮ ಟ್ರಸ್ಟ್‌ ಎಂಬ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಆ ಮೂಲಕ ಮತ್ತಷ್ಟು ಜನರಿಗೆ ಯೋಗ- ಅಧ್ಯಾತ್ಮದ ಬೆಳಕನ್ನು ಪಸರಿಸುವ ಮಹಾತ್ವಾಂಕಾಂಕ್ಷೆಯಿಂದ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು. ಅಷ್ಟೇ ಅಲ್ಲ, ಈ ಟ್ರಸ್ಟ್‌ ಮೂಲಕ ಗ್ರಾಮೀಣ ಮಕ್ಕಳಿಗಾಗಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನೂ ಆರಂಭಿಸಿದರು. ಮಕ್ಕಳ ಯೋಗ ಶಿಬಿರಗಳು, ಜೀವನದರ್ಶನ ಕಾರ್ಯಾಗಾರಗಳು, ಬೇಸಿಗೆ ಶಿಬಿರಗಳನ್ನು ನಡೆಸುವ ಮೂಲಕ ಎಳವೆಯಲ್ಲಿಯೇ ಮಕ್ಕಳಲ್ಲಿ ಯೋಗ, ಅಧ್ಯಾತ್ಮದ ರುಚಿ ಚಿಗುರಲು ಶ್ರಮಿಸಿದರು.

ಇವರ ಬದುಕು ಮತ್ತೊಂದು ಮಜಲಿನತ್ತ ಹೊರಳಿದ್ದು ಸ್ವಾಮಿ ರಾಮ ಅವರ ಸಂಪರ್ಕಕ್ಕೆ ಬಂದ ಮೇಲೆ. ೧೯೯೨ರಲ್ಲಿ ಸ್ವಾಮಿ ರಾಮರ ಭೇಟಿಯ ನಂತರ ಅವರ ನೇರ ಶಿಷ್ಯರಾಗಿ ಮಂತ್ರ ದೀಕ್ಷೆಯನ್ನು ಪಡೆದು, ನಂತರ ಮೈಸೂರಿನ ಮಹೋಪಾಧ್ಯಾಯ ಪದ್ಮಶ್ರೀ ರಾ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಶ್ರೀವಿದ್ಯಾ ತಂತ್ರವನ್ನೂ ಕಲಿತರು. ಈ ನಡುವೆ ಭಾರತದ ಉದ್ದಗಲವೂ ಸೇರಿದಂತೆ ಯುಎಸ್‌ಎ, ಕೆನಡಾ, ಇಂಗ್ಲೆಂಡ್‌ಗಳಲ್ಲೂ ನೂರಾರು ಶಿಬಿರ, ಕಾರ್ಯಾಗಾರ ಹಾಗೂ ಉಪನ್ಯಾಸಗಳನ್ನು ನಡೆಸುವ ಮೂಲಕ ಋಷಿ ಹಾಗೂ ಗುರು ಪರಂಪರೆಯ ಸಂದೇಶಗಳನ್ನು ಮನುಕುಲದ ಏಳಿಗೆಗೆ ರವಾನಿಸುವಲ್ಲಿ ಶ್ರಮಿಸಿದರು. ಅಂತರದರ್ಶನ, ಗಾಯತ್ರಿ ಮಹಾಮಂತ್ರ, ಮೃತ್ಯುಂಜಯ ಮಂತ್ರ, ಪತಂಜಲಿ ಯೋಗ ಸೂತ್ರಗಳಂತಹ ಗಂಭೀರ ವಿಷಯಗಳ ಕುರಿತ ಇವರ ಉಪನ್ಯಾಸಗಳು ಇಂದಿಗೂ ಬಹಳ ಪ್ರಸಿದ್ಧವಾಗಿವೆ. ಭಗವದ್ಗೀತೆ, ಉಪದೇಶಸಾರ, ಒತ್ತಡದ ನಿರ್ವಹಣೆ, ಶಕ್ತಿ ವಿಕಾಸ, ಧ್ಯಾನ ಸಾಧನ ಚಿತ್ತ ಪ್ರಸಾಧನ, ಒತ್ತಡ ರಹಿತ ಜೀವನ, ಸಾಧನಾ ಆರೋಗ್ಯ ವರ್ಧಿನಿ, ಮಂತ್ರ ಮತ್ತು ಧ್ಯಾನ ಸೇರಿದಂತೆ ನೂರಾರು ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಇಂತಹ ಉಪನ್ಯಾಸಗಳೂ, ಶಿಬಿರಗಳೂ ಇವರ ಬಳಿಗೆ ಸಾವಿರಾರು ಮಂದಿಯನ್ನು ಆಕರ್ಷಿಸಿದ್ದೂ ಅಲ್ಲದೆ, ಹಲವರ ಬದುಕಿನ ದಾರಿದೀಪವಾದವು. ಸಾವಿರಾರು ಮಂದಿಗೆ ತಮ್ಮ ಪ್ರೀತಿ ಹಾಗೂ ವಾತ್ಸಲ್ಯವನ್ನು ಧಾರೆ ಎರೆಯುವ ಮೂಲಕ ಗುರುವಾಗಿ ಮುನ್ನಡೆಸಿದರು. ದೂರದರ್ಶನ, ಬಾನುಲಿಗಳಲ್ಲೂ ಯೋಗ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಎಲ್ಲ ಸ್ತರದ ಮಂದಿಗೂ ಯೋಗ ತಲುಪಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಭಾರತದ ಉದ್ದಗಲಕ್ಕೂ ಸಂಚರಿಸಿ ಯೋಗ, ಧ್ಯಾನ ಹಾಗೂ ಆಧ್ಯಾತ್ಮದ ಜ್ಞಾನದ ಬೆಳಕನ್ನು ಹಂಚಿದರು. ಅಜಿತ್‌ ಕುಮಾರ್‌ ಸ್ಮಾರಕ ಯೋಗಶ್ರೀ ಪ್ರಶಸ್ತಿ, ಆರ್ಯಭಟ ಆಂತಾರಾಷ್ಟ್ರೀಯ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ ಸೇರಿದಂತೆ ಇವರಿಗೆ ಹತ್ತು ಹಲವು ಪ್ರಶಸ್ತಿಗಳೂ, ಸನ್ಮಾನಗಳೂ ಸಂದಿದ್ದವು.

ಪಟ್ಟಾಭಿರಾಮ ಗುರೂಜಿಯವರು 2016ರ ಮಾರ್ಚ್ 16ರಂದು ಈ ಲೋಕವನ್ನಗಲಿದರು. ಕೀರ್ತಿಶೇಷ ಪಟ್ಟಾಭಿರಾಮ ಗುರೂಜಿಯವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರು ಪಸರಿಸಿದ ಯೋಗ ಹಾಗೂ ಆಧ್ಯಾತ್ಮದ ಜ್ವಾನಪ್ರಭೆ ಇಂದಿಗೂ ಬೆಳಗುತ್ತಿದೆ. ಅವರ ಬಾಳ ಸಂಗಾತಿ ನೃತ್ಯ ಗುರು ಜ್ಯೋತಿ ಪಟ್ಟಾಭಿರಾಂ ಅವರು  ಗುರೂಜಿ ಜೊತೆಯಲ್ಲೇ ಸ್ವಾಮಿ ರಾಮ ಹಾಗೂ ರಾ ಸತ್ಯನಾರಾಯಣರಿಂದ ಶ್ರೀ ವಿದ್ಯೆಯಲ್ಲಿ ದೀಕ್ಷೆ ಪಡೆದು ಹಿಮಾಲಯನ್ ಭಾರತೀ ಪರಂಪರೆ ಹಾಗೂ ವಿದ್ಯಾರಣ್ಯ ಪರಂಪರೆಯ ಮೂಲಕ 'ಸಕಲಮಾ' ಆಗಿ ಜ್ಞಾನದ ಬೆಳಕನ್ನು ಮತ್ತಷ್ಟು ವಿಸ್ತಾರಕ್ಕೆ ತಲುಪುವ ಕಾರ್ಯದಲ್ಲಿ ತೊಡಗಿದ್ದಾರೆ.

ಲೇಖಕಿ: ರಾಧಿಕಾ ವಿಟ್ಲ, ದೆಹಲಿ
Thank you: Rajkumar Holealur

On the birth anniversary of Yoga Master Pattabhiram Guruji

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ