ಭರತ್ ಭೂಷಣ್
ಭರತ್ ಭೂಷಣ್
ಭರತ್ ಭೂಷಣ್ ಭಾರತೀಯ ಚಿತ್ರರಂಗದ ಶ್ರೇಷ್ಠ ನಟ, ಚಿತ್ರಕಥೆಗಾರ ಮತ್ತು ನಿರ್ಮಾಪಕ. 1952ರ 'ಬೈಜು ಬಾವ್ರಾ' ಚಿತ್ರದಲ್ಲಿನ ಅವರ ಪಾತ್ರ ನಿರ್ವಹಣೆ ಚಿರಸ್ಮರಣೀಯ.
ಭರತ್ ಭೂಷಣ್ ಅವರ ಹುಟ್ಟು ಹೆಸರ ಕಿದಾರ್ ಶರ್ಮ. ಇವರು ಉತ್ತರ ಪ್ರದೇಶದ ಮೀರತ್‌ನಲ್ಲಿ 1920ರ ಜೂನ್ 14ರಂದು
ಜನಿಸಿದರು. ಅವರ ತಂದೆ ರಾಯಬಹದ್ದೂರ್ ಮೋತಿಲಾಲ್ ಮೀರತ್‌ನ ಸರ್ಕಾರಿ ವಕೀಲರಾಗಿದ್ದರು. ಈತ ಎರಡು ವರ್ಷದವನಿದ್ದಾಗ ತಾಯಿ ತೀರಿಕೊಂಡರು. ಇವರ ಸಹೋದರ ರಮೇಶ್ ಚಂದ್ರ ಅವರು ಲಕ್ನೋದಲ್ಲಿ ಐಡಿಯಲ್ ಸ್ಟುಡಿಯೋವನ್ನು ಹೊಂದಿದ್ದರು. ಸಹೋದರರು ತಮ್ಮ ತಾಯಿಯ ಮರಣದ ನಂತರ ತಮ್ಮ ಅಜ್ಜನೊಂದಿಗೆ ಇರಲು ಅಲಿಗಢಕ್ಕೆ ತೆರಳಿದರು. ಭರತ್ ಭೂಷಣ್ ಅಲಿಘರ್‌ನ ಧರಮ್ ಸಮಾಜ ಕಾಲೇಜಿನಲ್ಲಿ ಪದವಿ ಪಡೆದರು. ಇದಾದ ನಂತರ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟರು.
ಭರತ್ ಭೂಷಣ್ ಕಲ್ಕತ್ತಾಗೆ ಹೋಗಿ
ಸಿನಿಮಾ ಲೋಕದಲ್ಲಿ ಅವಕಾಶ ಅರಸಿ ನಂತರ ಮುಂಬೈಗೆ ಬಂದರು.
ಭರತ್ ಭೂಷಣ್ ಯಶಸ್ವೀ ಚಿತ್ರ 'ಚಿತ್ರಲೇಖ' (1941) ಮೂಲಕ ಚೊಚ್ಚಲ ಪ್ರವೇಶ ಮಾಡಿದರು. ಆದಾಗ್ಯೂ, ಅವರು ಬೈಜು ಬಾವ್ರಾ (1952) ವರೆಗೆ ಹಿಂದಿ ಚಲನಚಿತ್ರಗಳಲ್ಲಿ ಛಾಪು ಮೂಡಿಸಲು ಒಂದು ದಶಕಕ್ಕೂ ಹೆಚ್ಚು ಕಾಲ ಹೆಣಗಾಡಿದರು. 1950 ಮತ್ತು 1960ರ ದಶಕದ ಅತ್ಯಂತ ಪ್ರತಿಭಾವಂತ ನಟ ಮತ್ತು ಪ್ರಮುಖ ತಾರೆಯಾಗಿದ್ದರೂ, ಅವರು ಚಲನಚಿತ್ರಗಳಲ್ಲಿ ದುರಂತ ಸಂಗೀತಗಾರನ ಪಾತ್ರಗಳನ್ನು ನಿರ್ವಹಿಸಿದ್ದೇ ಹೆಚ್ಚು. ‘ಬಸಂತ್ ಬಹಾರ್' ಅವರು ಪ್ರಮುಖ ನಟನಾಗಿ ನಟಿಸಿದ ಮತ್ತೊಂದು ಜನಪ್ರಿಯ ಚಿತ್ರ. ಭರತ್ ಭೂಷಣ್ ಮತ್ತು ಮಧುಬಾಲಾ ಜೋಡಿ 'ಗೇಟ್‌ವೇ ಆಫ್ ಇಂಡಿಯಾ' (1957), 'ಫಾಗುನ್' (1958) ಮತ್ತು 'ಬರ್ಸಾತ್ ಕಿ ರಾತ್’ (1960) ಅಂತಹ ಯಶಸ್ವಿ ಚಿತ್ರಗಳಲ್ಲಿ ಜನಪ್ರಿಯವಾಯಿತು.
ಭರತ್ ಭೂಷಣ್ ಬರ್ಸತ್ ಕಿ ರಾತ್, ನಯೀ ಉಮರ್ ಕಿ ನಯೀ ಫಸಲ್, ಬಸಂತ್ ಬಹಾರ್, ದೂಜ್ ಕಾ ಚಾಂದ್ ಮುಂತಾದ ಚಿತ್ರಗಳಿಗೆ ಕಥೆ ಮತ್ತು ಸಂಭಾಷಣೆಗಳನ್ನು ಬರೆದರು. ಅವರು ದೂಜ್ ಕಾ ಚಂದ್ ನಿರ್ಮಾಪಕರಾಗಿದ್ದರು. ಅವರ ಸಹೋದರ ಆರ್.ಚಂದ್ರ ಅವರು ಬೆಬಸ್, ಮಿನಾರ್, ಮತ್ತು ಬಸಂತ್ ಬಹರ್ ಮುಂತಾದ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದರು.
ಭರತ್ ಭೂಷಣ್ 1954ರಲ್ಲಿ ಶ್ರೀ ಚೈತನ್ಯ ಮಹಾಪ್ರಭು ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಆ ಕಾಲದ ಪ್ರಮುಖ ಗಾಯಕರಾದ ರಫಿ, ಮನ್ನಾ ಡೇ, ತಲತ್ ಮಹಮೂದ್ ಮತ್ತು ಮುಖೇಶ್ ಅವರುಗಳು ಹಾಡಿದ ಸುಶ್ರಾವ್ಯ ಹಾಡುಗಳಿಗೆ ಅವರು ಅಭಿನಯಿಸಿದ್ದರು. ಅವರು ಹಿಂದಿ ಚಲನಚಿತ್ರಗಳ ಮೊದಲ ಚಾಕೊಲೇಟ್ ಮುಖದ ಚೆಲುವಿನ ತಾರೆ. ಸಂಗೀತದ ಉತ್ತಮ ಪ್ರಜ್ಞೆ ಹೊಂದಿದ್ದ ಕೆಲವೇ ಕೆಲವು ನಟರಲ್ಲಿ ಅವರು ಒಬ್ಬರಾಗಿದ್ದರು. ಹೀಗಾಗಿ 1950 ಮತ್ತು 1960ರ ದಶಕಗಳಲ್ಲಿ ಅವರು ಅಭಿನಯದ ಅನೇಕ ಸಂಗೀತ ಆಧಾರಿತ ಚಲನಚಿತ್ರಗಳು ನಿರ್ಮಾಣಗೊಂಡವು.
ಭರತ್ ಭೂಷಣ್ 1990ರ ದಶಕದವರೆಗೆ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದರು. ವೈಯಕ್ತಿಕ ದುರಂತಗಳು ಮತ್ತು ಸಮಕಾಲೀನರಿಂದ ತೀವ್ರ ಸ್ಪರ್ಧೆಯ ನಡುವೆಯೂ, ಉತ್ತಮ ಚಲನಚಿತ್ರಗಳು ಮತ್ತು ಉತ್ತಮ ಹಾಡುಗಳಿಗಾಗಿನ ಅಭಿನಯದಿಂದ ಇಂದಿಗೂ ಭಾರತೀಯರಿಂದ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದಾರೆ.
ಭರತ್ ಭೂಷಣ್ ಅವರು ಮೀರತ್‌ನ ಪ್ರಮುಖ ಕುಟುಂಬವಾದ, ಜಮೀನ್ದಾರ ರಾಯಬಹದ್ದೂರ್ ಬುಧ ಪ್ರಕಾಶ್ ಅವರ ಮಗಳು ಸರಳಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಅನುರಾಧಾ ಮತ್ತು ಅಪರಾಜಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಅನುರಾಧಾ ಅವರಿಗೆ ಪೋಲಿಯೊ ಸಂಬಂಧಿತ ತೊಡಕುಗಳಿದ್ದವು. ರಮಾನಂದ್ ಸಾಗರ್ ಅವರ ಪ್ರಸಿದ್ಧ ಧಾರಾವಾಹಿ ರಾಮಾಯಣದಲ್ಲಿ ಅವರ ಮಗಳು ಅಪರಾಜಿತಾ ಮಂಡೋದರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಭೂಷಣ್ ಅವರ ಪತ್ನಿ ಸರಳಾ ಅವರು 1960ರ ದಶಕದ ಆರಂಭದಲ್ಲಿ ಬರ್ಸಾತ್ ಕಿ ರಾತ್ ಚಲನಚಿತ್ರದ ಬಿಡುಗಡೆಯ ನಂತರ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಉಂಟಾದ ಆರೋಗ್ಯ ತೊಂದರೆಗಳಿಂದ ನಿಧನರಾದರು. 1967ರಲ್ಲಿ, ಅವರು ಅದೇ ಚಿತ್ರದಲ್ಲಿ ತಮ್ಮ ಸಹನಟಿಯಾಗಿದ್ದ ರತ್ನ ಅವರನ್ನು ವಿವಾಹವಾದರು.
ಭೂಷಣ್ ಅವರು ಬಾಂಬೆಯ ಬಾಂದ್ರಾ ಉಪನಗರದಲ್ಲಿ ಬಂಗಲೆಯನ್ನು ಹೊಂದಿದ್ದರು. ಅವರು ಅತ್ಯಾಸಕ್ತಿಯ ಓದುಗರಾಗಿದ್ದರು. ಅವರು ತಮ್ಮ ಸಹೋದರನ ಜೊತೆಯಲ್ಲಿ ಚಿತ್ರನಿರ್ಮಿಸಿದವುಗಳಲ್ಲಿ ಕೆಲವು ಚಿತ್ರಗಳು ಮಾತ್ರ ಯಶಸ್ವಿಯಾಗಿ ಉಳಿದವುಗಳು ವಿಫಲವಾಗಿ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಯಿತು.
ಭರತ್ ಭೂಷಣ್ 1992ರ ಜನವರಿ 27ರಂದು ನಿಧನರಾದರು. ಮಹಾನ್ ಕಲಾವಿದರಾಗಿ ಅವರು ಅಮರ ಹೆಸರು.
On the birth anniversary of greatest actor of Indian Cinema Bharath Bhushan
ಕಾಮೆಂಟ್‌ಗಳು