ಟುನ್ ಟುನ್
ಟುನ್ ಟುನ್
ಟುನ್ ಟುನ್ ಹಿಂದೀ ಚಿತ್ರರಂಗದ ಮೊದಲ ಪ್ರಧಾನ ಹಾಸ್ಯ ನಟಿ ಎಂದೇ ಖ್ಯಾತರು. ಅವರೊಬ್ಬ ಪ್ರಖ್ಯಾತ ಹಿನ್ನೆಲೆ ಗಾಯಕಿಯಾಗಿದ್ದು ನಂತರದಲ್ಲಿ ನಟನೆಗೆ ಬಂದರು.
ಟುನ್ ಟುನ್ ಅವರ ಮೂಲ ಹೆಸರು ಉಮಾದೇವಿ ಖತ್ರಿ. ಅವರು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗ್ರಾಮವೊಂದರಲ್ಲಿ 1923ರ ಜುಲೈ11ರಂದು ಜನಿಸಿದರು. ಚಿಕ್ಕಂದಿನಲ್ಲೇ ಇವರ ತಂದೆ ತಾಯಿಯರು ಭೂವ್ಯಾಜ್ಯದಲ್ಲಿ ಕೊಲೆಗೀಡಾದರು. ಸಹೋದರನೂ ಕೊಲೆಗೀಡಾದ. ಸಂಬಂಧಿಗಳ ಮಧ್ಯವರ್ತಿಕೆಯಿಂದ ಬದುಕುಳಿದ ಇವರ ಬದುಕು ಕಡುಬಡತನದಲ್ಲಿ ಸಾಗಿತು. ಮುಂದೆ ಆಕೆ ಎಕ್ಸೈಸ್ ಅಧಿಕಾರಿಯಾಗಿದ್ದ ಅಖ್ತರ್ ಅಬ್ಬಾಸ್ ಖಾಜಿ ಎಂಬವರಿಂದ ಪ್ರಭಾವಿತರಾದರು. ದೇಶ ವಿಭಜನೆ ಆದಾಗ ಖಾಜಿ ಲಾಹೋರಿಗೆ ಹೋದರೆ, ಉಮಾ ಮುಂಬೈಗೆ ಬಂದರು.
ಸಂಗೀತ ಸಂಯೋಜಕ ನೌಶಾದ್‌ರಲ್ಲಿಗೆ ಹೋದ ಉಮಾದೇವಿ ಖತ್ರಿ ತಮಗೆ ಹಾಡಲು ಬರುತ್ತದೆ, ಅವಕಾಶ ಕೊಡದಿದ್ದರೆ ಸಮುದ್ರದಲ್ಲಿ ಮುಳುಗುವುದಾಗಿ ಹೇಳಿದರಂತೆ. ನೌಶಾದ್ ಆಕೆಗೆ ಆಶ್ರಯ ನೀಡಿದರು. 'ವಾಮಿಕ್ ಆಜ್ರಾ’ (1946) ಚಿತ್ರದೊಂದಿಗೆ ಉಮಾ ಗಾಯನ ಅಭಿಯಾನ ಆರಂಭವಾಯಿತು.
ಮೇರು ಸಂಗೀತ ಸಂಯೋಜಕ ನೌಶಾದ್ ಆಲಿ, ಉಮಾರನ್ನು ಉತ್ತಮ ಹಿನ್ನೆಲೆ ಗಾಯಕಿಯಾಗಿ ರೂಪಿಸಿದರು. ಅಂದಿನ ಹೆಸರಾಂತ ಗಾಯಕ – ಗಾಯಕಿಯರಾದ ನೂರ್ ಜಹಾನ್, ರಾಜ್‌ಕುಮಾರಿ, ಖುರ್ಷಿದ್, ಜೊಹ್ರಾಭಾಯ್ ಅಂಬಾಲೇವಾಲಿ ಅವರ ನಡುವೆ ಉಮಾ ಕೂಡಾ ಪ್ರಸಿದ್ಧಿ ಪಡೆದರು. 1947ರಲ್ಲಿ ಉಮಾ, 'ದರ್ದ್’ ಚಿತ್ರಕ್ಕಾಗಿ 'ಅಫ್ಸಾನಾ ಲಿಖ್ ರಹೀ ಹೂ…’ ಹಾಗೂ ಚಿತ್ರದ ಇತರೆ ಗೀತೆಗಳಿಗೆ ದನಿಯಾದರು. ಸುರಯ್ಯಾ ನಟಿಸಿದ್ದ ಈ ಚಿತ್ರ ಹಾಡುಗಳಿಂದಲೇ ಯಶಸ್ವಿಯಾಯ್ತು. ಉಮಾ ಮೇರು ಗಾಯಕಿಯಾಗಿ ಹೊರಹೊಮ್ಮಿದರು. ನೌಶಾದ್ ತಮ್ಮ ಅನೇಕ ಚಿತ್ರಗಳಲ್ಲಿ ಅವರಿಂದ ಹಾಡಿಸಿದ್ದರು.
ಉಮಾರ 'ಅಫ್ಸಾನಾ ಲಿಖ್ ರಹೀ ಹೂ…’ ಹಾಡಿನಿಂದ ಪ್ರಭಾವಿತನಾದ ಒಬ್ಬಾತ ದೆಹಲಿಯಿಂದ ಈಕೆಯನ್ನರಸಿ ಬಂದು ಈಕೆಯ ಜೊತೆಯೇ ನೆಲೆಸಿದರು. ಈಕೆ ಆತನನ್ನು ಮೋಹನ್ ಎಂದು ಕರೆಯುತ್ತಿದ್ದರು. ಮುಂದೆ ಇವರು ದಂಪತಿಗಳಾದರು.
'ದರ್ದ್’ ಚಿತ್ರದ ಯಶಸ್ಸಿನ ನಂತರ ಉಮಾ ಮುಂದೆ 'ಅನೋಖಿ ಅದಾ’ (1948), 'ಚಂದ್ರಲೇಖಾ’ (1948) ಚಿತ್ರಗಳಲ್ಲೂ ಮಿಂಚಿದರು. ಲತಾ ಮಂಗೇಶ್ಕರ್, ಆಶಾ ಬೋಂಸ್ಲೆ ಪ್ರಸಿದ್ಧರಾಗುತ್ತಿದ್ದಂತೆ ಉಮಾಗೆ ಅವಕಾಶಗಳು ಕಡಿಮೆಯಾದವು. ನೌಶಾದ್ ಸಲಹೆಯಂತೆ ಉಮಾ ನಟನೆಯತ್ತ ಹೊರಳಿದರು. ಉಮಾಗೆ ಉತ್ತಮ ಹಾಸ್ಯ ನಟನಾ ಅಭಿವ್ಯಕ್ತಿ ಇತ್ತು. ನೌಶಾದ್ ಅವರು ನಟ ದಿಲೀಪ್ ಕುಮಾರ್ ಅವರಲ್ಲಿ ಉಮಾಗೆ ಚಿತ್ರದಲ್ಲಿ ಅಭಿನಯಿಸುವ ಅವಕಾಶದ ಬಗ್ಗೆ ಪ್ರಸ್ತಾಪಿಸಿದರು. ದಿಲೀಪ್‌ರ 'ಬಾಬೂಲ್’ (1950) ಚಿತ್ರದೊಂದಿಗೆ ಉಮಾ ನಟಿಯಾದರು. ಕಾಮಿಡಿ ಪಾತ್ರಗಳಿಗೆ ಹೊಂದಿಕೆಯಾಗುವಂತೆ ಆಕೆಗೆ 'ಟುನ್ ಟುನ್’ ಎಂದು ನಾಮಕರಣ ಮಾಡಿದ್ದೇ ದಿಲೀಪ್. ಹಾಗೆ ಹಿಂದಿ ಚಿತ್ರರಂಗದಲ್ಲಿ ಹಾಸ್ಯನಟಿಯೊಬ್ಬರ ಉದಯವಾಯಿತು.
ಗುರುದತ್‌ರ ಕ್ಲಾಸಿಕ್ ಚಿತ್ರಗಳಾದ 'ಆರ್ ಪಾರ್’, 'ಮಿಸ್ಟರ್ ಅಂಡ್ ಮಿಸೆಸ್ 55′, 'ಪ್ಯಾಸಾ’ ಚಿತ್ರಗಳು ಟುನ್ ಟುನ್ ಅವರ ನಟನಾ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟವು. 60, 70ರ ದಶಕಗಳ ಹಿಂದಿ ಚಿತ್ರರಂಗದ ಪ್ರಮುಖ ಹಾಸ್ಯನಟಿಯಾಗಿ ಅವರು ಹೊರಹೊಮ್ಮಿದರು. ಐದು ದಶಕಗಳ ತಮ್ಮ ಸಿನಿಮಾ ಜೀವನದಲ್ಲಿ ಆಕೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ತಮ್ಮ ಸಮಕಾಲೀನ ಶ್ರೇಷ್ಠ ಹಾಸ್ಯನಟರಾದ ಭಗವಾನ್ ದಾದಾ, ಅಘಾ, ಸುಂದರ್, ಮುಕ್ರಿ, ದುಮಾಲ್, ಜಾನಿ ವಾಕರ್, ಕೆಶ್ಟೋ ಮುಖರ್ಜಿ ಅವರೊಂದಿಗೆ ನಟಿಸಿದ್ದರು. ಟುನ್‌ಟುನ್ ಕಾಣಿಸಿಕೊಂಡ ಕೊನೆಯ ಚಿತ್ರ 'ಕಸಮ್ ದಂಡೇ ಕಿ’ (1990). ದಪ್ಪಗಿರುವವರನ್ನು `ಟುನ್ ಟುನ್’ ಎಂದೇ ಕರೆಯುವಷ್ಟು ಅವರು ಜನಪ್ರಿಯರಾಗಿದ್ದರು.
ಟುನ್ ಟುನ್ ತಮ್ಮ 80ನೇ ವಯಸ್ಸಿನಲ್ಲಿ 2003ರ ನವೆಂಬರ್ 24ರಂದು ನಿಧನರಾದರು.
Playback singer and Hindi Cinema’s first ever comedienne Tun Tun
ಕಾಮೆಂಟ್‌ಗಳು