ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಪುಟ್ಟಸ್ವಾಮಿ


 ಕೆ. ಪುಟ್ಟಸ್ವಾಮಿ 


ಡಾ. ಕೆ. ಪುಟ್ಟಸ್ವಾಮಿ ತಮ್ಮ 'ಸಿನಿಮಾ ಯಾನ' ಕೃತಿಯ ಮೂಲಕ ಸಿನಿಮಾ ರಂಗದ ಬರಹದಲ್ಲಿ ಪ್ರಪ್ರಥಮ ಸ್ವರ್ಣಕಮಲ  ಪ್ರಶಸ್ತಿ ತಂದ ಕೀರ್ತಿವಂತರು.  ಅವರೊಬ್ಬ ಬರಹಗಾರ, ಚಲನಚಿತ್ರ ವಿಮರ್ಶಕ, ಅನುವಾದಕ, ಕೃಷಿ ತಜ್ಞ, ಪರಿಸರವಾದಿ ಮತ್ತು ಸಾಮಾಜಿಕ ಕಳಕಳಿಯುಳ್ಳ ಕಾರ್ಯಕರ್ತರು.

ಪುಟ್ಟಸ್ವಾಮಿ ಕನಕಪುರ ತಾಲೂಕಿನ ವರಗೇರಹಳ್ಳಿ ಗ್ರಾಮದಲ್ಲಿ ಜನಿಸಿದರು.   ಶಾಲೆಯ ಅಗತ್ಯಕ್ಕೆ ತಕ್ಕಂತೆ 1957ರ ಜುಲೈ 16 ಎಂದು ಅವರ ಜನ್ಮದಿನ ಎಂದು ದಾಖಲಾಯ್ತಂತೆ.   ತಂದೆ ಕೆಂಪೇಗೌಡರು.   ತಾಯಿ ಸಿದ್ಧಲಿಂಗಮ್ಮ. ಕನಕಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಕೆಜಿಎಫ್‌ನಲ್ಲಿರುವ ಸುಮತಿ ಜೈನ್ ಹೈಸ್ಕೂಲಿನಲ್ಲಿ ಓದಿದರು. ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ವಿಜ್ಞಾನ ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಇವರಿಗೆ ಡಿ.ಲಿಟ್ ಸಂದಿದೆ.

ಪುಟ್ಟಸ್ವಾಮಿಯವರು ತಮ್ಮ ವಿಸ್ತೃತ ವೃತ್ತಿ ಜೀವನದಲ್ಲಿ ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಖೆಯಲ್ಲಿ;  ಹಲವಾರು ವರ್ಷಗಳ ಕಾಲ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳಲ್ಲಿ ಸಾರ್ವಜನಿಕ ಸಂಪಾರ್ಕಾಧಿಕಾರಿಗಳಾಗಿ;  ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಕ ನಿರ್ದೇಶಕರಾಗಿ, ಹೀಗೆ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪುಟ್ಟಸ್ವಾಮಿ ಅವರು 1991ರಲ್ಲಿ ಕನ್ನಡಕ್ಕೆ ತಂದಿರುವ 'ಜೀವ ಸಂಕುಲಗಳ ಉಗಮ', ಚಾರ್ಲ್ಸ್ ಡಾರ್ವಿನ್ ರಚಿತ "ದಿ ಒರಿಜಿನ್ ಆಫ್ ಸ್ಪೀಸೀಸ್" ಆಧರಿಸಿದ್ದು ಕನ್ನಡದಲ್ಲಿ ಮೂಡಿರುವ ಅಮೂಲ್ಯ ಜೀವಶಾಸ್ತ್ರ ಕೃತಿ ಎನಿಸಿದೆ. ಅವರ ‘ಸಿನಿಮಾ ಯಾನ’ ಪುಸ್ತಕಕ್ಕೆ ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಸಿನಿಮಾ ಕುರಿತ ಕನ್ನಡ ಪುಸ್ತಕವೊಂದು ರಾಷ್ಟ್ರಪ್ರಶಸ್ತಿ ಪಡೆದದ್ದು ಅದೇ ಮೊದಲು. 'ಸಿನಿಮಾ ಯಾನ' 75 ವರ್ಷಗಳ ಕನ್ಡಡ ಚಿತ್ರರಂಗದ ಫ್ಲ್ಯಾಶ್‌ಬ್ಯಾಕ್ ಅನ್ನು ಕಟ್ಟಿಕೊಡುತ್ತದೆ.‍ ಇದು ಕನ್ನಡ ಚಲನಚಿತ್ರರಂಗಕ್ಕೆ ಸಂದ ಮಹಾನ್ ಗೌರವವೇ ಆಗಿದೆ. 

ಪುಟ್ಟಸ್ವಾಮಿ ಅವರ ಬರಹಗಳಲ್ಲಿ ಪ್ರಕೃತಿಯ ಕುರಿತೇ ಆಗಲಿ, ವಿಜ್ಞಾನದ ಕುರಿತೇ ಆಗಲಿ, ಸಿನಿಮಾ ವಿಚಾರದಲ್ಲಿ 'ಸತ್ಯ ಹರಿಶ್ಚಂದ್ರ' ಮೂಡಿಸಿದ ಸಮಾನತೆಯ ವೈಚಾರಿಕ ಕ್ರಾಂತಿಯೇ ಆಗಲಿ, ಮಿಂಚಿ ಮರೆಯಾದ ಪುನೀತ್ ಆಗಲಿ, ತಾಯ್ ನಾಗೇಶ್ ಅಂತಹ ಕಲಾವಿದನಲ್ಲಿ ಅವರು ಕಾಣಿಸುವ ವೈಶಿಷ್ಟ್ಯತೆಯೇ  ಆಗಲಿ,  ಹೀಗೆ ಏನೇ ಓದಿದರೂ ಅವರಲ್ಲಿರುವ ಸೂಕ್ಷ್ಮತೆಗಳನ್ನು ಕಾಣುವ ಹೃದಯದ ಕಣ್ಣುಗಳು ಅಚ್ಚರಿ ಹುಟ್ಟಿಸುತ್ತವೆ. 

ಸ್ವಯಂ ಪರಿಸರ ಪ್ರಿಯರಾದ ಪುಟ್ಟಸ್ವಾಮಿ ಅವರು ಮತ್ತೋರ್ವ ಪ್ರಸಿದ್ಧ ಸಾಧಕ ಜೋಡಿ ಕೃಪಾಕರ - ಸೇನಾನಿ ಅವರೊಂದಿಗೆ ಸೇರಿ 1999ರಲ್ಲಿ ಮೂಡಿಸಿದ ಕೃತಿ 'ಜೀವಜಾಲ' ಕೃತಿಯೂ ಸಾಹಿತ್ಯ ಅಕಾಡೆಮಿ ಪುರಸ್ಕಾರ ಗಳಿಸಿತ್ತು. 

ಕೆ. ಪುಟ್ಟಸ್ವಾಮಿ ಅವರ ಕೊಡುಗೆಗಳಲ್ಲಿ ಮೇಲ್ಕಂಡ ಕೃತಿಗಳೇ ಅಲ್ಲದೆ ಭುವನದ ಬೆಡಗು, ಜನತೇಯ ರಾಜ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬೀರೇಂದ್ರ ಕುಮಾರ್ ಭಟ್ಟಾಚಾರ್ಯರ ಅಸ್ಸಾಮಿ ಕೃತಿ "ಯಾರ್ಯುಂಗಂ" ಅನುವಾದ, ಸುನಿಲ್ ಸಹಸ್ರಬುದ್ಧೆ ಅವರ ಕೃತಿಯ ಅನುವಾದ 'ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು', 
ಕಿರಿಯರ ಸಚಿತ್ರ ವಿಜ್ಞಾನ ವಿಶ್ವಕೋಶ, ಡಿ. ದೇವರಾಜ ಅರಸು ಚಿತ್ರ ಕಥಾಕೋಶ, 
ಬೂಕರ್ ಟಿ ವಾಷಿಂಗ್ಟನ್ ಅವರ ಆತ್ಮಚರಿತ್ರೆ
'ದಾಸ್ಯದಿಂದ ಆಚೆಗೆ', ಮಣಿ ಭೌಮಿಕ್ ಅವರ  ಕೃತಿಗಳ ಅನುವಾದಗಳಾಧ 'ದೇವರು ಎಂಬ ಸಂಕೇತನಾಮ' ಮತ್ತು 'ಕಾಸ್ಮಿಕ್ ಡಿಟೆಕ್ಟಿವ್'; ಎಚ್. ಜಿ. ವೇಲ್ಸ್ ಅವರ ಕೃತಿಗಳ ಅನುವಾದಗಳಾದ ಕಾಲನೌಕೆ, ಮಾಯಾ ಮನುಷ್ಯ; ಜೂಲ್ಸ್ ವೆರ್ನೆ ಅವರ ಕೃತಿ ಅನುವಾದಗಳಾದ 'ಭೂ ಮಧ್ಯಕ್ಕೆ ಪಯಣ', 'ಎಂಬತ್ತು ದಿನಗಳಲ್ಲಿ ಭೂಪ್ರದಕ್ಷಿಣೆ', 'ಸಾಗರದಲ್ಲಿ ಸಾಹಸ'; ಲ್ಯೂ ವಾಲೇಸರ ಬೆನ್ಹರ್ ಅನುವಾದ ಮುಂತಾದವು ಸೇರಿವೆ.‍
ಪುಟ್ಟಸ್ವಾಮಿ ಅವರು ರಚಿಸಿದ ಜೀವನಚಿತ್ರಣಗಳಲ್ಲಿ  ಚಾರ್ಲ್ಸ್ ಡಾರ್ವಿನ್, ಅಲೆಕ್ಸಾಂಡರ್ ಫ್ಲೆಮಿಂಗ್, ಮಾರ್ಗರೇಟ್ ಮೀಡ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಫ್ಲಾರೆನ್ಸ್ ನೈಟಿಂಗೇಲ್ ಮುಂತಾದವು ಸೇರಿವೆ. 

ಪುಟ್ಟಸ್ವಾಮಿ ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಜ್ಯೂರಿ ಸದಸ್ಯರಾಗಿ ಸಹಾ ಗೌರವಾನ್ವಿತರಾಗಿದ್ದಾರೆ. 

ಪುಟ್ಟಸ್ವಾಮಿ ಅವರಿಗೆ 'ಜೀವ ಜಾಲ' ಮತ್ತು 'ಸಿನಿಮಾ ಯಾನ'  ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜೀವ ವಿಜ್ಞಾನ ಮತ್ತು ಪರಿಸರಕ್ಕೆ ಜೀವಮಾನದ ಕೊಡುಗೆಗಾಗಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ, 'ಸಿನಿಮಾ ಯಾನ' ಕೃತಿಗೆ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸ್ವರ್ಣ ಕಮಲ ಪ್ರಶಸ್ತಿ,ಕೆಂಪೇಗೌಡ ಪ್ರಶಸ್ತಿ, ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯಿಂದ ಹಾಲ್ ಆಫ್ ಫೇಮ್‌ ಗೌರವ, ದಾಸ್ಯದಿಂದ ಆಚೆಗೆ ಕೃತಿಗೆ ಕುವೆಂಪು ಭಾಷಾಭಾರತಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ಮಹಾನ್ ಸಾಧಕರಾದ ಕೆ. ಪುಟ್ಟಸ್ವಾಮಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Puttaswamy K Sir.  We are proud of you 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ