ಮಾಲತಿ ಭಟ್
ಮಾಲತಿ ಭಟ್
ಮಾಲತಿ ಭಟ್ ಬರಹಗಾರ್ತಿ ಹಾಗೂ ಬಹುಮುಖಿ ಪ್ರತಿಭಾನ್ವಿತರು. ಅವರ ಬದುಕಿನ ನಡೆ ಸ್ಫೂರ್ತಿದಾಯಕವಾದದ್ದು.
ಮಾಲತಿ ಅವರು 1970ರ ಜುಲೈ 15ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಮಂಜುನಾಥ ಭಟ್. ತಾಯಿ ಯಶೋಧಾ ಭಟ್. 1988ರಲ್ಲಿ ಕಿರಿಯ ಇಂಜನಿಯರ್ ಆಗಿದ್ದ ರಾಮಕೃಷ್ಣ ಭಟ್ ಅವರೊಂದಿಗೆ ಹದಿನೆಂಟರ ವಯಸ್ಸಲ್ಲಿ ಮಾಲತಿ ಅವರ ವಿವಾಹವಾಯಿತು. ಇವರು ಕುಟುಂಬದೊಡನೆ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ನೆಲೆಸಿದ್ದರು. ಗಂಡು ಮಕ್ಕಳ ತಾಯಾಗಿ ಗೃಹಿಣಿಯಾಗಿದ್ದ ಇವರು 2000 ನೇ ಇಸವಿಯಲ್ಲಿ ತಮ್ಮ ಪತಿಯವರ ಆಕಸ್ಮಿಕ ಮರಣದಿಂದ ಅನಿರೀಕ್ಷಿತವಾಗಿ ಅನುಕಂಪದ ಆಧಾರಿತ ಸರ್ಕಾರಿ ಸೇವೆಗೆ ಸೇರುವ ಹಾಗಾಯಿತು. ನಂತರ ಮಕ್ಕಳೊಂದಿಗೆ ತಾವೂ ಓದುತ್ತಾ ಇಲಾಖಾ ಪರೀಕ್ಷೆಗಳನ್ನು ಕಟ್ಟಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.
ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಸಿದ್ದಾಪುರ ಕಛೇರಿಯಲ್ಲಿ ಕಿರಿಯ ಸಹಾಯಕಿಯಾಗಿ 2001 ರಲ್ಲಿ ಉದ್ಯೋಗ ಪರ್ವ ಪ್ರಾರಂಭಿಸಿದ ಮಾಲತಿ ಭಟ್ ಅವರು, ನಾನಾ ವೃತ್ತಿ ಜವಾಬ್ದಾರಿಗಳನ್ನು ನಿರ್ವಹಿಸಿ, ಪ್ರಸ್ತುತ ಲೋಕೋಪಯೋಗಿ ಇಲಾಖೆ ಉಪವಿಭಾಗದಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಮಾಲತಿ ಅವರಿಗೆ ಚಿಕ್ಕಂದಿನಿಂದಲೂ ಓದುವ, ಬರೆಯುವ ಮತ್ತು ಹಾಡುವ ಆಸಕ್ತಿ ಇತ್ತು. 1994 ರಿಂದಲೇ ಅಲ್ಲಲ್ಲಿ ಸಣ್ಣ ಕಥೆ ಬರೆದು ಪತ್ರಿಕೆಗಳಿಗೆ ಕಳಿಸುತ್ತಿದ್ದರು. 2012 ರಲ್ಲಿ ಇವರ 60 ಸಣ್ಣ ಕಥೆಗಳ ಸಂಕಲನ ಮೊದಲ ಪುಸ್ತಕವಾಗಿ ಪ್ರಕಟವಾಯಿತು. ಇದುವರೆಗೂ ಇವರ 120ಕ್ಕೂ ಹೆಚ್ಚು ಕಥೆ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮಾಲತಿ ಭಟ್ ಅವರ 2 ಕಥಾ ಸಂಕಲನ, 3 ಕಾದಂಬರಿ ಹಾಗೂ 1 ಪ್ರಬಂಧ ಸಂಕಲನ ಹೀಗೆ 6 ಪುಸ್ತಕಗಳು ಪ್ರಕಟಗೊಂಡಿವೆ. ಆಕಾಶವಾಣಿ ಮಡಿಕೇರಿ ಹಾಗೂ ಕಾರವಾರ ಕೇಂದ್ರಗಳಲ್ಲಿ ಅನೇಕ ಕಥೆ, ಕವನ, ಚಿಂತನಗಳನ್ನು ವಾಚಿಸಿದ್ದಾರೆ. ಹಲವಾರು ಕಥಾಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನ ಸಂದಿವೆ.
ಮಾಲತಿ ಭಟ್ ಅವರು 2003 ರಲ್ಲಿ ಹಿಂದೂಸ್ತಾನಿ ಸಂಗೀತವನ್ನು ಕಲಿತು ಜ್ಯೂನಿಯರ್ ಪರೀಕ್ಷೆ ಪಾಸು ಮಾಡಿದರು. ಹೀಗೆ ಹಾಡುವುದರ ಜೊತೆಗೆ ಅನೇಕ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ ಕೆಲಸ ಮಾಡಿದ್ದಾರೆ. ಹೊಲಿಗೆ, ಕಸೂತಿ, ಸೀರೆ ಇತರೇ ಬಟ್ಟೆಯ ಮೇಲೆ ಫ್ಯಾಬ್ರಿಕ್ ಪೇಯಿಂಟ್, ಚಿತ್ರಕಲೆ, ಹೂಗಿಡ ಬೆಳೆಸುವುದು ಇವರ ಆಪ್ತ ಬಹುಮುಖಿ ಹವ್ಯಾಸಗಳಾಗಿವೆ. ಸ್ವಾವಲಂಬನೆಗಾಗಿ ವಾಹನ ಚಾಲನೆ ಕಲಿತು ಸಮಯದ ಸದುಪಯೋಗ ಮಾಡಿದ್ದಾರೆ.
ಮಾಲತಿ ಭಟ್ ಅವರು 2024ರ ಜನವರಿಯಿಂದ ಡಿಸೆಂಬರ್ ವರೆಗೆ ದಿನಕ್ಕೊಂದು ಪುಸ್ತಕ ಪರಿಚಯದಂತೆ 366 ಪುಸ್ತಕಗಳ ಬಗ್ಗೆ "ಪುಸ್ತಕ ಅವಲೋಕನ ಕಸ್ತೂರಿ ಬಳಗ” ದಲ್ಲಿ ಬರೆದು ದಾಖಲೆ ಮಾಡಿದ್ದಾರೆ. ಒಳ್ಳೊಳ್ಳೆಯ ಪುಸ್ತಕ ಬಹುಮಾನ ನೀಡಿ ಪರೋಕ್ಷವಾಗಿ ಬರೆಯಲು ಪ್ರೇರಣೆ ನೀಡಿದ ವೀಣಾ ನಾಯಕ್ ಅವರ ಪ್ರೋತ್ಸಾಹವೇ ಇದಕ್ಕೆ ಕಾರಣ ಎಂಬುದು ಮಾಲತಿ ಭಟ್ ಅವರ ಕೃತಜ್ಞತಾ ಭಾವವಾಗಿದೆ.
ಮಾಲತಿ ಅವರು ಮನೆಕಟ್ಟಿ ಮಕ್ಕಳ ಮದುವೆ ಮಾಡಿ ಈಗ ಅಜ್ಜಿಯ ಪಟ್ಟವನ್ನೂ ಗಳಿಸಿದ್ದಾರೆ. ಇಬ್ಬರೂ ಮಕ್ಕಳು ಓದಿ ವಿದ್ಯಾವಂತರಾಗಿ, ವಿವಾಹಿತರಾಗಿ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಹೀಗೆ ಕುಟುಂಬದ ಕರ್ತವ್ಯವನ್ನು ಸಾರ್ಥಕವಾಗಿ ನಿಭಾಯಿಸಿದ ಸಂತೃಪ್ತಿ ಇವರಲ್ಲಿದೆ.
ಸರಳ ಸೌಮ್ಯ ನಡೆಯ ದಿಟ್ಟ ನಿಷ್ಠಾವಂತ ಸಾಹಸಿ, ಸಹೃದಯಿ ಮಾಲತಿ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Malathi Bhat 🌷🌷🌷
ಕಾಮೆಂಟ್‌ಗಳು