ಎಂ. ಎಸ್. ಸತ್ಯು
ಎಂ.ಎಸ್. ಸತ್ಯು
ಎಂ.ಎಸ್. ಸತ್ಯು ಕನ್ನಡ ನಾಡು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಮಹಾನ್ ಪ್ರತಿಭೆ. ಇವರು ಚಲನಚಿತ್ರ ನಿರ್ದೇಶನ, ರಂಗಸಜ್ಜಿಕೆ, ಚಲನಚಿತ್ರ ಕಲಾ ನಿರ್ದೇಶನ, ಚಿತ್ರಕಥೆ ರಚನೆ, ನಾಟಕ ಒಳಾಂಗಣ ವಿನ್ಯಾಸ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧ ಹೆಸರು.
ಎಂ.ಎಸ್. ಸತ್ಯು ಅವರ ಪೂರ್ಣ ಹೆಸರು ಮೈಸೂರು ಶ್ರೀನಿವಾಸ ಸತ್ಯನಾರಾಯಣ.ಅವರು 1930ರ ಜುಲೈ 6ರಂದು ಮೈಸೂರಿನಲ್ಲಿ ಜನಿಸಿದರು.
ಸತ್ಯು ಅವರಿಗೆ ಬಾಲ್ಯದಿಂದಲೂ ರಂಗ ಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿ. ಬಾಲ್ಯದಿಂದಲೇ ಕಂಪನಿ ನಾಟಕಗಳನ್ನು ನೋಡುವ ಹವ್ಯಾಸವನ್ನು ಮೈಗೂಡಿಸಿಕೊಂಡ ಸತ್ಯು ಅವರಿಗೆ ವರದಾಚಾರ್ಯರ ಕಂಪನಿ, ಗುಬ್ಬಿ ವೀರಣ್ಣ, ಹಿರಣ್ಣಯ್ಯ, ಸುಬ್ಬಯ್ಯನಾಯ್ದು ಕಂಪನಿಗಳ ನಾಟಕಗಳನ್ನು ನೋಡಿ ಆನಂದಿಸಿದ ನೆನಪು ಹಚ್ಚ ಹಸುರು. ಮೈಸೂರಿನ ಯುವರಾಜ, ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಸತ್ಯು ಅವರಿಗೆ ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಪದವಿ ಶಿಕ್ಷಣವನ್ನು ಪೂರೈಸುವುದು ಸಾಧ್ಯವಾಗಲಿಲ್ಲ.
ಕೆಲಕಾಲ ಅನಿಮೇಟರ್ ಆಗಿ ಕೆಲಸ ಮಾಡಿದ ಸತ್ಯು ನಾಲ್ಕು ವರ್ಷಗಳ ಕಾಲ ನಿರುದ್ಯೋಗಿಯಾಗಿದ್ದರು. ರಂಗಭೂಮಿಯಲ್ಲಿ ರಂಗಸಜ್ಜಿಕೆ ಮತ್ತು ನಿರ್ದೇಶನಗಳಲ್ಲಿ ಕೆಲಸ ಮಾಡಿದರು. ಹಿಂದೂಸ್ಥಾನಿ ಥಿಯೇಟರ್, ಹಬೀಬ್ ತನ್ವೀರ್ ಅವರ ಓಕ್ಲಾ ಥಿಯೇಟರ್, ದೆಹಲಿಯ ಕನ್ನಡ ಭಾರತಿ ತಂಡಗಳಿಗೆ ವೇದಿಕೆ ನಿರ್ಮಾಣ ಮತ್ತು ಬೆಳಕಿನ ವ್ಯವಸ್ಥೆಗಳಿಗೆ ಕಾರ್ಯಮಾಡಿದರು.
ಸತ್ಯು ಅವರು ಚಿತ್ರರಂಗದಲ್ಲಿ ಮೊದಲಿಗೆ ಚೇತನ್ ಆನಂದ್ ಅವರ ಬಳಿ ಸಹಾಯಕರಾಗಿ ಸೇರಿ ಅವರ “ಹಕೀಕತ್” ಚಿತ್ರಕ್ಕೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಸಿನಿಮಾ ಮತ್ತು ರಂಗಭೂಮಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸತ್ಯು ಅವರು ಸುಮಾರು ಹದಿನೈದು ಸಾಕ್ಷ್ಯಚಿತ್ರಗಳು, ಇಪ್ಪತ್ತೈದಕ್ಕೂ ಅಧಿಕ ಜಾಹೀರಾತು ಚಿತ್ರಗಳು ಹಾಗೂ ಕನ್ನಡ, ಹಿಂದಿ, ಉರ್ದು ಭಾಷೆಯಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸತ್ಯು ನಿರ್ದೇಶಿಸಿದ 'ಗರಂಹವಾ' ಚಲನಚಿತ್ರಕ್ಕೆ 1974ರಲ್ಲಿ ರಾಷ್ಟ್ರಪ್ರಶಸ್ತಿ ಸಂದಿತು. 'ಏಕ್ ಥಾ ಚೋಟು ಏಕ್ ಥಾ ಮೋಟು’, ‘ಗರಂ ಹವಾ’, ‘ಚಿತೆಗೂ ಚಿಂತೆ’, ‘ಕನ್ನೇಶ್ವರರಾಮ’, ‘ಬರ’, ‘ಸೂಖಾ’, ‘ಘಳಿಗೆ’, ‘ಕೊಟ್ಟ’ ಹಾಗೂ ‘ಇಜ್ಜೋಡು’ ಸತ್ಯು ಅವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು. ‘ಗರಂ ಹವಾ’ ಭಾರತೀಯ ಚಿತ್ರರಂಗಕ್ಕೆ ಸತ್ಯು ಅವರ ಪ್ರತಿಭೆಯನ್ನು ದರ್ಶನ ಮಾಡಿಸಿತು. ಕಾನ್ ಚಿತ್ರೋತ್ಸವದ ಮುಖ್ಯ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಖ್ಯಾತಿಯೂ ಈ ಚಿತ್ರಕ್ಕಿದೆ.
ಸತ್ಯು ಅವರ ಚಿತ್ರಗಳಲ್ಲಿ ಸಾಮಾಜಿಕ ಪ್ರಸ್ತುತಿ ಮಹತ್ವ ಸ್ಥಾನ ಪಡೆದಿರುತ್ತದೆಯಲ್ಲದೆ ರಾಜಕೀಯ ವಿಡಂಬನೆಯನ್ನೂ ಕಾಣಬಹುದು. ಭಾರತದ ಪ್ರಮುಖ ರಂಗ ಚಳುವಳಿಗಳಲ್ಲಿ ಒಂದಾದ “ಇಪ್ಟಾ” ಪ್ರಮುಖರಲ್ಲಿ ಸತ್ಯು ಒಬ್ಬರು.
ಸತ್ಯು ಅವರು ಸುಧೀರ್ ಅತ್ತಾವರ್ ಅವರ ಗುಲೇಬಾಕಾವಾಲಿ ನಿರ್ದೇಶಿಸಿದರು. ಅದು 2018ರ ವಿಶ್ವ ಥಿಯೇಟರ್ ಒಲಿಂಪಿಕ್ಸ್'ನಲ್ಲಿ ಪ್ರವೇಶ ಪಡೆದಿತ್ತು. ದಾರಾ ಶಿಖಾವೊ ಅಮಿತಾ ಬಕ್ರಿ, ಆಖ್ರಿಶಾಮಾ, ಕುರಿ, ಆಖ್ರಿ ಶಾಮಾ, ರಾಜಾ ರಾಣಿ ಮಂತ್ರಿ ತಂತ್ರಿ ಮುಂತಾದವು ಅವರ ನಿರ್ದೇಶನದ ಇತರ ಪ್ರಮುಖ ನಾಟಕಗಳು.
ಸತ್ಯು ಅವರ ಪ್ರತಿಯೊಂದು ಚಿತ್ರವೂ ಒಂದಲ್ಲ ಒಂದು ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿಯನ್ನು ಪಡೆದವು. ಅವರು ಅನೇಕ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ. ಸತ್ಯು ಅವರಿಗೆ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ತಾವು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದ ಎಂ.ಎಸ್. ಸತ್ಯು ಅವರು ಚಲನಚಿತ್ರ ಮತ್ತು ರಂಗಕರ್ಮಿಯಾಗಿ ಸಲ್ಲಿಸಿದ ಸೇವೆ ಮಹತ್ವದ್ದು.
Great personality in theatre and movies M. S. Sathyu
ಕಾಮೆಂಟ್‌ಗಳು