ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜುಗಲ್ ಹನ್ಸರಾಜ್


 ಜುಗಲ್ ಹನ್ಸರಾಜ್


ಕೆಲವೊಂದು first impressions ನಮ್ಮಲ್ಲಿ ಎಷ್ಟೊಂದು ಆಪ್ತವಾಗಿರುತ್ತೆ ಅಂದರೆ ಅದರಿಂದ ನಾವು ಜೀವನ ಪರ್ಯಂತ ಈಚೆ ಬರದಿರುವಷ್ಟು! ಇವತ್ತು ಜುಗಲ್ ಹನ್ಸರಾಜ್ ಹುಟ್ಟುಹಬ್ಬ ಅಂದಾಗ ಹೀಗೆ ಅನ್ನಿಸ್ತು.  ಈ ಹುಡುಗ ಮಾಸೂಮ್ ಚಿತ್ರದಲ್ಲಿ ಬಾಲನಟನಾಗಿ ಬೀರಿದ ಪ್ರಭಾವ ಅವಿಸ್ಮರಣೀಯ. ಆ ಚಿತ್ರದಲ್ಲಿನ ಆತನ ಪಿಳಿ ಪಿಳಿ ಕಣ್ಣಿನ ಮುಗ್ದ ಮುಖರಾವಿಂದದ ಆಕರ್ಷಣೆ ಇಂದೂ ನನ್ನ ಕಣ್ಮುಂದೆ ಕಟ್ಟಿದಂತಿದೆ.

ಜುಗಲ್ ಹನ್ಸರಾಜ್ 1972ರ ಜುಲೈ 26ರಂದು ಮುಂಬೈನಲ್ಲಿ ಜನಿಸಿದರು.

ಜುಗಲ್ ಹಂಸರಾಜ್ 1983ರಲ್ಲಿ ನಾಸಿರುದ್ದೀನ್ ಶಾ ಮತ್ತು ಶಬಾನಾ ಅಜ್ಮಿ ನಟಿಸಿ ಶೇಖರ್ ಕಪೂರ್ ನಿರ್ದೇಶಿಸಿದಗ ಮೇಲ್ಕಂಡ ಅದ್ಭುತ 'ಮಾಸೂಮ್' ಚಿತ್ರದಲ್ಲಿ ಬಾಲ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 9 ವರ್ಷದ ಈ ಹುಡುಗ ವಿವಾಹೇತರ ಸಂಬಂಧದಿಂದ ಬಂದಿದ್ದರಿಂದ ಆತನ ಮಲತಾಯಿ ಆತನನ್ನು ತನ್ನ ಕುಟುಂಬದ ಭಾಗವಾಗಿ ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿರುವುದಿಲ್ಲ.  ಈ ಪ್ರತೀಕೂಲ ಪರಿಸ್ಥಿತಿಯನ್ನು ತನ್ನ ಮುಗ್ದತೆಯಲ್ಲಿ ಗೆಲ್ಲುವ ಈ ಬಾಲನಟನೆ ವಿಶಿಷ್ಟವಾದದ್ದು. 

ಬಾಲಕ ಹಂಸರಾಜ್ ವಿಕ್ಸ್ ವೆಪೊರಬ್, ಸಫೊಲಾ ಮತ್ತು ನ್ಯೂಟ್ರಾಮುಲ್‌ನಂತಹ ಗಮನಾರ್ಹ ಜಾಹೀರಾತುಗಳಲ್ಲಿಯೂ ಜನಪ್ರಿಯರಾಗಿದ್ದರು.  ಆ ಜಾಹಿರಾತುಗಳನ್ನು ಟಿವಿಯಲ್ಲಿ ಆಪ್ತವಾಗಿ ನೋಡುತ್ತಿದ್ದದು ಸಹಾ ನೆನಪಾಗುತ್ತೆ. 

ಮುಂದೆ ಹನ್ಸರಾಜ್ ಕರ್ಮ (1986) ಮತ್ತು ಸುಲ್ತಾನತ್ (1986) ಮುಂತಾದ ಚಿತ್ರಗಳಲ್ಲಿ ಬಾಲ ನಟರಾಗಿದ್ದರು.   1994ರಲ್ಲಿ ಆ ಗಲೇ ಲಗ್ ಜಾ ಚಿತ್ರದೊಂದಿಗೆ ಯುವ ಕಲಾವಿದರಾದರು.  ಇಲ್ಲಿ ಇವರ ಜೋಡಿಯಾಗಿದ್ದು 'ಮಾಸೂಮ್‌'ನಲ್ಲಿ ಇವರ ತಂಗಿಯಾಗಿ ನಟಿಸಿದ್ದ ಊರ್ಮಿಳಾ ಮಾತೋಂಡ್ಕರ್.  ಪಾಪಾ ಕೆಹ್ತೆ ಹೈ, ಮೊಹಬ್ಬತೇನ್, ಕಭಿ ಖುಷಿ ಕಭಿ ಗಮ್, ಸಲಾಮ್ ನಮಸ್ತೆ, ಆಜಾ ನಾಚ್ಲೆ ಮತ್ತು ಕಹಾನಿ 2  ಮುಂತಾದವು ಇವರು ಮುಂದೆ ನಟಿಸಿದ ಕೆಲವೊಂದು ಚಿತ್ರಗಳಲ್ಲಿ ಸೇರಿವೆ. 

1998ರಲ್ಲಿ, ಜುಗಲ್ ತನ್ನ ಸ್ನೇಹಿತ ಕರಣ್ ಜೋಹರ್ ಅವರ "ಕುಚ್ ಕುಚ್ ಹೋತಾ ಹೈ" ಚಿತ್ರದ ಜನಪ್ರಿಯ ಶೀರ್ಷಿಕೆ ಗೀತೆಯ ಟ್ಯೂನ್ ಸಂಯೋಜಿಸಿದರು. 

ಹನ್ಸರಾಜ್ 2008ರ ಕಂಪ್ಯೂಟರ್-ಆನಿಮೇಟೆಡ್ ಚಲನಚಿತ್ರ ರೋಡ್‌ಸೈಡ್ ರೋಮಿಯೋಗೆ ಚಿತ್ರಕಥೆಗಾರ ಮತ್ತು ನಿರ್ದೇಶಕರಾದರು. ಇದು ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿತು. ಲಾಸ್ ಏಂಜಲೀಸ್‌ನಲ್ಲಿನ ವಿಷುಯಲ್ ಎಫೆಕ್ಟ್ಸ್ ಸೊಸೈಟಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಸಹಾ ಪಡೆಯಿತು.  ಹನ್ಸರಾಜ್ 'ಪ್ಯಾರ್ ಇಂಪಾಸಿಬಲ್' ಎಂಬ ಹಾಸ್ಯಪ್ರೇಮ ಚಿತ್ರವನ್ನೂ ನಿರ್ದೇಶಿಸಿದರು. 

2017ರಲ್ಲಿ, ಜುಗಲ್ ಹನ್ಸರಾಜ್ "ಕ್ರಾಸ್ ಕನೆಕ್ಷನ್: ದಿ ಬಿಗ್ ಸರ್ಕಸ್ ಅಡ್ವೆಂಚರ್" ಎಂಬ ಕಾದಂಬರಿ ಪ್ರಕಟಿಸಿದ್ದಾರೆ.

On the birthday of unforgettable child of Masoom, Jugal Hansraj

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ