ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಾಲಹಳ್ಳಿ ವಿಶ್ವನಾಥ್


 ಪಾಲಹಳ್ಳಿ ವಿಶ್ವನಾಥ್


ಡಾ. ಪಾಲಹಳ್ಳಿ ವಿಶ್ವನಾಥ್ ವಿಜ್ಞಾನಿಗಳಾಗಿ, ವಿಜ್ಞಾನ ಸಂವಹನಕಾರಾಗಿ,  ಲೇಖಕರಾಗಿ ಮತ್ತು ಅಂಕಣಕಾರರಾಗಿ ಹೆಸರಾಗಿದ್ದಾರೆ.

ಮೂಲತಃ ಬೆಂಗಳೂರಿನವರಾದ ಪಾಲಹಳ್ಳಿ ವಿಶ್ವನಾಥ್  1942ರ ಜುಲೈ 26ರಂದು ಜನಿಸಿದರು.  ಇವರ ತಂದೆ ಪಿ. ಆರ್. ರಾಮಯ್ಯನವರು ಕಳೆದ ಶತಮಾನದ ಮಹಾನ್ ಸಾಹಸಿ ಪತ್ರಿಕೋದ್ಯಮಿ. ರಾಮಯ್ಯನವರು ತಾವು ಹುಟ್ಟುಹಾಕಿ ಅನೇಕ ಪ್ರತೀಕೂಲ ಪರಿಸ್ಥಿತಿಗಳ ನಡುವೆ ನಡೆಸಿದ 'ತಾಯಿನಾಡು' ಪತ್ರಿಕೆಯಿಂದ 'ತಾಯಿನಾಡು ರಾಮಯ್ಯ' ಎಂದೇ ಪ್ರಸಿದ್ಧರಾದವರು. ತಾಯಿ ಜಯಲಕ್ಷಮ್ಮ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡವರು. ಸಹೋದರ ಪಿ. ಆರ್. ಬ್ರಹ್ಮಾನಂದ ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞರು.  ಸಹೋದರಿ ರಾಮೇಶ್ವರಿ ವರ್ಮ ಮೈಸೂರು ವಿಶ್ವವಿದ್ಯಾಲಯದಲ್ಲಿ ನಿರ್ದೇಶಕಿಯಾಗಿ ದುಡಿದವರು.  ರಾಮಯ್ಯನವರ ಸಾಹಸ, ಕಳೆದ ಶತಮಾನದ ವಾತಾವರಣ ಹಾಗೂ ತಮ್ಮ ಕುಟುಂಬದ ಚಿತ್ರಣವನ್ನು ಪಾಲಹಳ್ಳಿ ವಿಶ್ವನಾಥ್ ಅವರು ತಮ್ಮ ಕೃತಿ 'ಹೀಗೊಂದು ಕುಟುಂಬದ ಕಥೆ' ಕೃತಿಯಲ್ಲಿ ಮನನೀಯವಾಗಿ ಕಟ್ಟಿಕೊಟ್ಟಿದ್ದಾರೆ.

ವಿಶ್ವನಾಥ್  ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪೂರೈಸಿ ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. 

ವಿಶ್ವನಾಥ್ ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ(ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಅವರು ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ),  ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು.  ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾದವರು. ಅಮೆರಿಕದ ಮುಖ್ಯ ಪ್ರಯೋಗಾಲಯಗಳಾದ ಫರ್ಮಿ ಲ್ಯಾಬ್, ಲಾಸ್ ಆಲಮೋಸ್ ಲ್ಯಾಬ್, ಗೊಡಾರ್ಡ್ ಸ್ಪೇಸ್‌ ಸೆಂಟರ್‌ಗಳಲ್ಲಿ ಅವರು ಕೆಲಸ ಮಾಡಿದ್ದಾರೆ. 

ವಿಶ್ವನಾಥ್ ನೂರಾರು ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.  ಸಾಹಿತ್ಯ, ಚರಿತ್ರೆ ಮತ್ತು ವಿಜ್ಞಾನ ಅವರ ಆಸಕ್ತ ಕ್ಷೇತ್ರಗಳು. ಮೂಲಭೂತ ವಿಜ್ಞಾನದ ಸ್ವಾರಸ್ಯವನ್ನು ಜನರಿಗೆ ಅರ್ಥ ಮಾಡಿಸಲು ಮತ್ತು ವೈಜ್ಞಾನಿಕ ಮನೋಭಾವದ ಅರಿವು ಮೂಡಿಸಲು ಕಳೆದ ಹಲವಾರು ವರ್ಷಗಳಿಂದ ಕನ್ನಡದಲ್ಲಿ ವಿಜ್ಞಾನ ಸಂವಹನಕಾರ್ಯವನ್ನು ಮಾಡುತ್ತಿದ್ದಾರೆ. ಕನ್ನಡದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮತ್ತು ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಮತ್ತು ವಿಜ್ಞಾನದ ಕುರಿತ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ. 

ಪಾಲಹಳ್ಳಿ ವಿಶ್ವನಾಥ್ ಅವರ ಕೃತಿಗಳಲ್ಲಿ 'ಖಗೋಳ ವಿಜ್ಞಾನದ ಕಥೆ',  'ಆಕಾಶದಲ್ಲೊಂದು ಮನೆ', 'ಕಣ ಕಣ ದೇವಕಣ', 'ಭೂಮಿಯಿಂದ ಬಾನಿನತ್ತ', 'ಪಾಪ ಬ್ಲೂಟೊ', 'ಶತಮಾನ ಪುರುಷ ಐನ್‍ಸ್ಟೈನ್', 'ಹೀಗೊಂದು ಕುಟುಂಬದ ಕಥೆ', 'ವಿಶ್ವದ ವೈವಿಧ್ಯ', ‘ಆಕಾಶದ ಅದ್ಭುತಗಳು', 'ಯಾಮಿನಿಯ ಯಾತ್ರಿಕರು', 'ಅಲ್ಪಸ್ವಲ್ಪ ವುಡ್‍ಹೌಸ್ ಮತ್ತು ಇತರಕಥೆಗಳು', ‘Dr, B. V. Sreekantan, A pioneer Physicist’ ಮುಂತಾದವು ಸೇರಿವೆ.

ಡಾ. ಪಾಲಹಳ್ಳಿ ವಿಶ್ವನಾಥ್ ಅವರಿಗೆ ಅನೇಕ ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳು ಫೆಲೋಷಿಪ್ ನೀಡಿ ಗೌರವಿಸಿವೆ.

Our great scientist, writer and well wisher Dr. Palahalli Vishwanath Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ