ಎನ್.ಎಸ್.ಹರ್ಡೀಕರ್
ಎನ್.ಎಸ್.ಹರ್ಡೀಕರ್
ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಪ್ರಸಿದ್ಧ ಸೇವಾದಳದ ಸ್ಥಾಪಕರಾಗಿ ಸ್ಮರಣೀಯರಾಗಿದ್ದಾರೆ.
ಹರ್ಡೀಕರ್ ಅವರು 1889ರ ಮೇ 7ರಂದು ಧಾರವಾಡದಲ್ಲಿ ಸುಬ್ಬರಾವ್ ಮತ್ತು ಯಮುನಾಬಾಯಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ಅವರು ಕೊಲ್ಕತ್ತಾದ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಅಲ್ಲಿ ವೈದ್ಯಕೀಯ ಅಧ್ಯಯನ ನಡೆಸಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದರು. 1916ರಲ್ಲಿ, ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆರೋಗ್ಯದಲ್ಲಿ ತಮ್ಮ ಎಂ. ಎಸ್ಸಿ ಅನ್ನು ಪೂರ್ಣಗೊಳಿಸಿದರು. ಅಮೆರಿಕದಲ್ಲಿದ್ದ ವರ್ಷಗಳಲ್ಲಿ, ಹರ್ಡೀಕರ್ ಅವರು ಲಾಲಾ ಲಜಪತ್ ರಾಯ್ ಅವರ ನಿಕಟ ಸಹವರ್ತಿಯಾದರು. ಲಜಪತ್ ರಾಯ್ ಅವರೊಡನೆ ಹರ್ಡೀಕರ್ ಅಮೆರಿಕದಲ್ಲಿ ಅನೇಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾದರು. ಅವರು ಹೋಮ್ ರೂಲ್ ಲೀಗ್‌ನ ಕಾರ್ಯದರ್ಶಿಯಾಗಿದ್ದರಲ್ಲದೆ ಅಮೆರಿಕದ ಇಂಡಿಯನ್ ವರ್ಕರ್ಸ್ ಯೂನಿಯನ್ ಅನ್ನು ಸಂಘಟಿಸಲು ಸಹಾಯ ಮಾಡಿದರು. ಹೋಮ್ ರೂಲ್ ಲೀಗ್‌ನ ಪದಾಧಿಕಾರಿಗಳಾಗಿ ಲಜಪತ್ ರಾಯ್ ಮತ್ತು ಹರ್ಡೀಕರ್ ಅವರು, ಯುಎಸ್ ಸೆನೆಟ್‌ನ ವಿದೇಶಿ ಸಂಬಂಧಗಳ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಅಮೆರಿಕದ ಹಿಂದೂಸ್ತಾನ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದರು. ಹರ್ಡೀಕರ್ ಅವರು ಪ್ರಕಟಿಸಿದ ಕರಪತ್ರವಾದ “ಇಂಡಿಯಾ – ಎ ಗ್ರೇವ್‌ಯಾರ್ಡ್” ವಿಚಾರವು ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ವ್ಯಾಪಕವಾದ ಚರ್ಚೆಯನ್ನು ಮೂಡಿಸಿತ್ತು. ಅವರು ಯಂಗ್ ಇಂಡಿಯಾ ಜರ್ನಲ್‌ನ ವ್ಯವಸ್ಥಾಪಕ ಸಂಪಾದಕರಾಗಿದ್ದರು. ಇದನ್ನು ಗಮನಿಸಿದ ವಿದೇಶಾಂಗ ಸಂಬಂಧಗಳ ಸಮಿತಿಯ ಮೇರಿಲ್ಯಾಂಡ್‌ನ ಸೆನೆಟರ್ ಫ್ರಾನ್ಸ್ ಅವರು, "ಭಾರತದ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಅಮೆರಿಕದ ಜನರಿಗೆ ಪರಿಚಯಿಸುವಲ್ಲಿ ಇದು ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದೆ" ಎಂದು ಶ್ಲಾಘಿಸಿದ್ದರು.
ಹರ್ಡೀಕರ್ 1921ರಲ್ಲಿ ಭಾರತಕ್ಕೆ ಹಿಂದಿರುಗಿದರು. 1923ರ ಧ್ವಜ ಸತ್ಯಾಗ್ರಹದ ಸಮಯದಲ್ಲಿ, ಹರ್ಡೀಕರ್ ಮತ್ತು ಅವರ ಹುಬ್ಬಳ್ಳಿ ಸೇವಾ ಮಂಡಲವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಗಳಿಸಿತು. ಅವರು ತಮಗೆ ನೀಡಲಾದ ಜೈಲು ಶಿಕ್ಷೆಯ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳಲ್ಲಿ ಕ್ಷಮೆಯಾಚಿಸಲು ನಿರಾಕರಿಸಿದರು. ಈ ಪ್ರತಿರೋಧವು ಬ್ರಿಟಿಷ್ ರಾಜ್ ವಿರುದ್ಧ ಹೋರಾಡಲು ಸ್ವಯಂಸೇವಕರ ತಂಡವನ್ನು ರೂಪಿಸಲು ಕಾಂಗ್ರೆಸ್ ಅನ್ನು ಪ್ರೇರೇಪಿಸಿತು. 1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಹರ್ಡೀಕರ್ ಅವರ ನೇತೃತ್ವದಲ್ಲಿ 13 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಹಿಂದೂಸ್ತಾನಿ ಸೇವಾ ಮಂಡಲವನ್ನು 1923ರಲ್ಲಿ ರಚಿಸಲಾಯಿತು. ನಂತರ ಅದಕ್ಕೆ ಸೇವಾದಳ ಎಂದು ಮರುನಾಮಕರಣ ಮಾಡಲಾಯಿತು. ದಳವು ನಾಗರಿಕ ಅಸಹಕಾರ ಚಳವಳಿಯಲ್ಲಿ ಸಾಮೂಹಿಕ ಪಿಕೆಟಿಂಗ್ ನಡೆಸುವುದರ ಮೂಲಕ ದಿಟ್ಟ ಪಾತ್ರವನ್ನು ವಹಿಸಿತು. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸದಸ್ಯರ ಸೇರ್ಪಡೆಯನ್ನು ವ್ಯಾಪಕವಾಗಿ ಆಯೋಜಿಸಿತು. ಸೇವಾದಳವು ಕಾಂಗ್ರೆಸ್‌ನ ಕೇಂದ್ರ ಸ್ವಯಂಸೇವಕ ಸಂಸ್ಥೆಯಾಗಿ, ಅದರ ಸ್ವಯಂಸೇವಕರಿಗೆ ದೈಹಿಕ ತರಬೇತಿಯನ್ನು ನೀಡುವತ್ತ ಗಮನವನ್ನು ಕೇಂದ್ರೀಕರಿಸಿತಲ್ಲದೆ ಕೋಮು ಸೌಹಾರ್ದವನ್ನು ಉತ್ತೇಜಿಸಲು ಕೆಲಸ ಮಾಡಿತು.
ಸ್ವಾತಂತ್ರ್ಯಾ ನಂತರದಲ್ಲಿ ಡಾ ಹರ್ಡೀಕರ್ ಅವರು ಘಟಪ್ರಭಾದಲ್ಲಿ ಕರ್ನಾಟಕ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದರು. ಅವರು 1952ರಿಂದ 1962ರ ವರೆಗೆ ಎರಡು ಬಾರಿ ರಾಜ್ಯಸಭಾ ಸಂಸದರಾಗಿದ್ದರು. 1958ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಸಲ್ಲಿಸಲಾಯಿತು. ಡಾ ಹರ್ಡಿಕರ್ 1975ರ ಆಗಸ್ಟ್ 26ರಂದು ನಿಧನರಾದರು.
On Remembrance Day of freedom fighter and founder of Seva Dal Dr. N.S. Hardikar
ಕಾಮೆಂಟ್‌ಗಳು