ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮಭದ್ರನ್


 ವೆಲ್ಲೂರ್ ಜಿ. ರಾಮಭದ್ರನ್


ವೆಲ್ಲೂರು ಜಿ.ರಾಮಭದ್ರನ್ ಶ್ರೇಷ್ಠ ಮೃದಂಗ ಕಲಾವಿದರಾಗಿ ಹೆಸರಾಗಿದ್ದವರು. 

ರಾಮಭದ್ರನ್ 1929ರ ಆಗಸ್ಟ್ 4ರಂದು ವೆಲ್ಲೂರಿನಲ್ಲಿ ಜನಿಸಿದರು. ಎಳೆಯ ವಯಸ್ಸಿನಲ್ಲೇ ಸಂಗೀತದಲ್ಲಿ ಆಸಕ್ತಿ ತೋರಿದರು. ಅವರ ತಂದೆ ಕೊನ್ನಕೋಲ್ ಟಿ.ಪಿ. ಗೋಪಾಲಾಚಾರಿ, ಸ್ವತಃ ಸಂಗೀತಗಾರರಾಗಿ ವೆಲ್ಲೂರಿನಲ್ಲಿ ಸಂಗೀತ ಸಭಾ ನಡೆಸುತ್ತಿದ್ದರು. ಈ ಸಭೆಯು ಮಕ್ಕಳ ನಡುವೆ ಕರ್ನಾಟಕ ಸಂಗೀತ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಕಾಂಚೀಪುರಂ ನೈನಾ ಪಿಳ್ಳೈ, ಪಾಲ್ಘಾಟ್ ಮಣಿ ಅಯ್ಯರ್,  ಪುದುಕೊಟ್ಟೈ ದಕ್ಷಿಣಾಮೂರ್ತಿ ಪಿಳ್ಳೈ ಮುಂತಾದ ಶ್ರೇಷ್ಠ ಸಾಧಕರು ಸ್ಪರ್ಧಿಗಳನ್ನು ನಿರ್ಣಯಿಸಿ ಬಹುಮಾನಗಳನ್ನು ನೀಡುತ್ತಿದ್ದರು. ಎಂ.ಎಸ್. ಸುಬ್ಬುಲಕ್ಷ್ಮಿ ಅವರು 1936ರಲ್ಲಿ ಈ ಸಭಾದಲ್ಲಿ ಸಂಗೀತ ಕಛೇರಿ ನೀಡಿದ್ದರು. ರಾಮಭದ್ರನ್ ಸಂಗೀತ ಕಛೇರಿಗಳಿಂದ ಆಕರ್ಷಿತರಾಗಿ ತಮ್ಮ ಎಂಟನೇ ವಯಸ್ಸಿನಲ್ಲಿ ತಂದೆಯಿಂದ ಮೃದಂಗವನ್ನು ಕಲಿಯಲು ಪ್ರಾರಂಭಿಸಿದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಮದ್ರಾಸ್‌ನಲ್ಲಿ ವಾಸಿಸುತ್ತಿದ್ದ ಅನೇಕರು ನಗರವನ್ನು ಖಾಲಿ ಮಾಡಿ  ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಿಗೆ ತೆರಳಿದರು. 1942ರಲ್ಲಿ ತಿರುಪರ್ಕಡಲ್ ಶ್ರೀನಿವಾಸ ಅಯ್ಯಂಗಾರ್ ಚೆನ್ನೈನಿಂದ ಸೇಲಂಗೆ ಬಂದರು. ರಾಮಭದ್ರನಿಗೆ ಅವರಿಂದ ಸಂಗೀತ ಗಾಯನ ಕಲಿಯುವ ಅವಕಾಶ ದೊರಕಿತು. ರಾಮಭದ್ರನ್ 1950ರಲ್ಲಿ ಚೆನ್ನೈಗೆ ಬಂದರು.

ರಾಮಭದ್ರನ್ ಮೊದಲು ಮಧುರೈ ಮಣಿ ಅಯ್ಯರ್ ಅವರಿಗೆ ಮೃದಂಗದಲ್ಲಿ ಜೊತೆಗೂಡಿದರು. ಮುಂದೆ ತಮಿಳುನಾಡಿನಾದ್ಯಂತ ವಿವಿಧ ದೇವಾಲಯಗಳಲ್ಲಿ ನಡೆದ ಸಂಗೀತ ಕಚೇರಿಗಳಲ್ಲಿ ಮಧುರೈ ಮಣಿ ಅಯ್ಯರ್ ಅವರೊಂದಿಗೆ ಇದ್ದರು. ರಾಮಭದ್ರನ್ ಅವರು ಕರ್ನಾಟಕ ಸಂಗೀತದ ಮೇರು ಕಲಾವಿದರುಗಳಾದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈ ವೈದ್ಯನಾಥ ಭಾಗವತರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಜಿ.ಎನ್. ಬಾಲಸುಬ್ರಮಣ್ಯಂ, ಎಸ್. ಎನ್. ಬಾಲಸುಬ್ರಮಣ್ಯಂ, ಟಿ.ಎನ್. ಬಾಲಸುಬ್ರಮಣ್ಯಮ್, ಟಿ.ಎನ್. ಶೇಷಗೋಪಾಲನ್, ಬಿ. ರಾಜಮ್ ಅಯ್ಯರ್, ಪಿ. ಎಸ್. ನಾರಾಯಣಸ್ವಾಮಿ, ಟಿ. ಆರ್. ಮಹಾಲಿಂಗಂ, ಎನ್. ರಮಣಿ, ಲಾಲ್ಗುಡಿ ಜಯರಾಮನ್,  ಟಿ.ಎನ್. ಕೃಷ್ಣನ್, ಝಕೀರ್ ಹುಸೇನ್, ಅಲ್ಲಾ ರಖಾ, ಅಮ್ಜದ್ ಅಲಿ ಖಾನ್,  ಹರಿಪ್ರಸಾದ್ ಚೌರಾಸಿಯಾ ಮುಂತಾದವರೂ ಸೇರಿದಂತೆ ಬಹುತೇಕರಿಗೆ ಮೃದಂಗವಾದನ ಸಹಕಾರ ನೀಡಿದ್ದರು.  ಕೆ.ಬಾಲಚಂದರ್ ನಿರ್ಮಾಣದ ಪ್ರಸಿದ್ಧ ಚಲನಚಿತ್ರ 'ಸಿಂಧು ಭೈರವಿ'ಯಲ್ಲಿನ ಕೆ.ಜೆ.ಯೇಸುದಾಸ್ ಅವರ ಗಾಯನಕ್ಕೆ ಅದ್ಭುತ ಮೃದಂಗ ವಾದನ ನೀಡಿದ್ದರು.

ರಾಮಭದ್ರನ್ ಅವರು 1948ರಲ್ಲಿ ಪಾಳಯಂಕೊಟ್ಟೈ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎದುರಿಗೆ ನೀಡಿದ ಸಂಗೀತ ಕಾರ್ಯಕ್ರಮವನ್ನು ಮರೆಯಲಾಗದ ಅನುಭವವಾಗಿ ನೆನಪಿಸಿಕೊಳ್ಳುತ್ತಿದ್ದರು. ಆ ಗೋಷ್ಠಿಯಲ್ಲಿ ಎಂ.ಎಂ.ದಂಡಪಾಣಿ ದೇಶಿಕರೂ ಪಾಲ್ಗೊಂಡಿದ್ದರು.1975ರಲ್ಲಿ ಮಹಾನ್ ಮೃದಂಗ ವಿದ್ವಾನ್ ಪಾಲ್ಘಾಟ್ ಮಣಿ ಅಯ್ಯರ್ ಅವರಿಂದ ಸಂಗೀತ ಚೂಡಾಮಣಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು ತಮ್ಮ ಸುಕೃತವೆನ್ನುತ್ತಿದ್ದರು. ರಾಮಭದ್ರನ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಇನ್ನಿತರ ಗೌರವಗಳೂ ಸಂದಿದ್ದವು. 

ವಿದ್ವಾನ್ ವೆಲ್ಲೂರ್ ಜಿ. ರಾಮಭದ್ರನ್ 2012 ಫೆಬ್ರವರಿ 27ರಂದು ತಮ್ಮ 82 ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.

On the birth anniversary of great Mridanga Vidwan Vellore G. Ramabhadran 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ