ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬರಾಕ್ ಒಬಾಮ


 ಬರಾಕ್ ಒಬಾಮ


ಸುಮಾರು ಮೂರೂವರೆ ದಶಕಗಳ ಹಿಂದೆ ಯಾವುದೋ ಆಫ್ರಿಕಾದ ಹಳ್ಳಿಯಲ್ಲಿ ತನ್ನಜ್ಜಿಯ ಮನೆಯಲ್ಲಿ ಹೀಗೆ ಫೋಟೋದಲ್ಲಿ ಕಾಣಿಸಿಕೊಂಡವ ಬರಾಕ್ ಒಬಾಮ.  ಹವಾಯಿ ದ್ವೀಪದ ಹೊನಲುಲು ಎಂಬ ಗ್ರಾಮದಲ್ಲಿ 1961 ವರ್ಷದ ಆಗಸ್ಟ್ 4ರಂದು ಜನಿಸಿದ ಈ ಆಫ್ರಿಕಾದ ಹುಡುಗ ಮುಂದೆ ವಿಶ್ವದ ದೊಡ್ಡಣ್ಣನಾದ ಅಮೆರಿಕಾದ ಅಧ್ಯಕ್ಷನಾಗಿ 2009ರಿಂದ 2017ರವರೆಗೆ ಎರಡು ಅವಧಿಯಲ್ಲಿ ಕಾರ್ಯಬಾರ ನಡೆಸಿದ.

ಒಬಾಮಾ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಕಾನೂನು ಪದವಿಗಳನ್ನು ಪಡೆದು ಹಲವು ಮೆಟ್ಟಿಲು ಮೆಟ್ಟಿಲುಗಳನ್ನು ಏರಿ ಇಲಿನಾಯ್ಸ್ ಸೆನೆಟರ್ ಆಗಿ ಹಲವು ರಾಜಕೀಯ ಪರೀಕ್ಷೆಗಳಲ್ಲಿ ಮಿಂದು ರಾಷ್ಟ್ರಾಧ್ಯಕ್ಷರೂ ಆಗಿಬಿಟ್ಟರು.  ತಮ್ಮ ವಿರುದ್ಧ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲೇರಿ ಕ್ಲಿಂಟನ್ ಅವರನ್ನು ಗೌರವದಿಂದ ನಡೆಸಿಕೊಂಡು ತಮ್ಮ ವಿದೇಶಾಂಗ ಖಾತೆಯ ಮುಖ್ಯಸ್ಥರನ್ನಾಗಿಸಿದ್ದು ಆತನ ರಾಜಕೀಯ ಮುತ್ಸದ್ದಿತನ ಮತ್ತು ಉತ್ತಮ ನಡವಳಿಕೆಗಳಿಗೆ ಸಾಕ್ಷಿ ಎಂಬಂತಿತ್ತು.

ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷನಾಗಿದ್ದು ಅತ್ಯಂತ ಕಷ್ಟಕಾಲದಲ್ಲಿ.  ಬುಶ್ ಎಂಬ ಹಿಂದಿನವ ತೊಘಲಕ್ ಅಂತೆ ರಾಜ್ಯಭಾರ ಮಾಡಿ ಆಫ್ಘನ್ ಮತ್ತು ಇರಾಕ್ ಯುದ್ಧದಲ್ಲಿ ಅಮೇರಿಕಾದ ಜೊತೆಗೆ ವಿಶ್ವದ ಇತರ ದೇಶಗಳನ್ನೂ ಸೈನ್ಯ ಕಳುಹಿಸುವಂತೆ ಮಾಡಿ, ಇಲಿ ಹಿಡಿಯಲು ಹೋಗಿ ಗುಡ್ಡವನ್ನೆಗೆದ ಭೂಪನಂತೆ ಅಮೆರಿಕವನ್ನು ಹಾಸ್ಯಾಸ್ಪದ ಸ್ಥಾನಕ್ಕೆ ತಂದು ನಿಲ್ಲಿಸಿದ್ದ.  ವಿಶ್ವವೆಲ್ಲ ಮಾಯೆಯೆಂಬ ಷೇರು ಮಾರುಕಟ್ಟೆಗೆ ಸಿಲುಕಿ ಅದರ ಯಶಸ್ಸಿಗಾಗಿ ನಿರ್ಮಿಸಿದ್ದ ಕುಹಕಗಳ ಬಣ್ಣ ಒಂದೊಂದಾಗಿ ಕಳಚಿ ಅದೆಲ್ಲಾ ನಡೆಯುತ್ತಿರುವುದು ಕೃತ್ರಿಮತೆಯಿಂದ ಎಂದು ವಿಶ್ವವೆಲ್ಲಾ ಅರಿತುಕೊಂಡಾಗ ಉಂಟಾದ 'ವಿಶ್ವ ಮಾರುಕಟ್ಟೆಯಲ್ಲಿನ ಡಿಪ್ರೆಶನ್' ಎಂಬ ಕುಸಿತದಲ್ಲಿ ಪ್ರಧಾನವಾಗಿ ಏಟು ತಿಂದದ್ದು, ತನ್ನ ಸೋಗಿನ ಧಿಮಾಕಿನಲ್ಲಿ ವಿಶ್ವವನ್ನೆಲ್ಲಾ ಭ್ರಮೆಗೆ ಸಿಲುಕಿಸಿದ್ದ ಅಮೇರಿಕ.    ಇಂತಹ ಪರಿಸ್ಥಿತಿಯಲ್ಲಿ ದಿನ ಬೆಳಗಾದರೆ ಬರಾಕ್ ಒಬಾಮಾ ಅವರ ಜನಪ್ರಿಯತೆ ಎಷ್ಟು ಇಂಚು, ಎಷ್ಟು ಸೆಂಟಿ ಮೀಟರು ಕುಸಿಯಿತು ಎಂದು ಸುದ್ಧಿ ಮಾಧ್ಯಗಳು ಅಳೆಯತೊಡಗಿದವು.

ಇವೆಲ್ಲವುಗಳ ಮಧ್ಯೆ ಬರಾಕ್ ಒಬಾಮ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಆತನಿಗೆ ನೊಬೆಲ್ ಶಾಂತಿ ಪುರಸ್ಕಾರ ಕೊಟ್ಟದ್ದು ಬೇರೆಯವರಿಗಿರಲಿ ಒಬಾಮಾಗೇ ಆಶ್ಚರ್ಯ ತಂದಿತ್ತು.  

ತನ್ನ ಹಾವ ಭಾವಗಳಲ್ಲಿ, ಆಡಳಿತದಲ್ಲಿ ಅತೀವ ಪ್ರಚಾರ ತಂತ್ರವಿಲ್ಲದೆ, ವಿಧೇಯತೆಯ ಜೊತೆಗೆ, ಸನ್ನಿವೇಶಕ್ಕೆ ಅಗತ್ಯವಾದ ದೃಢ ಮನೋಭಾವ ತಳೆಯುತ್ತಾ ಸಾಗಿದ ಬರಾಕ್ ಒಬಾಮ ವಿವಿಧ ಸನ್ನಿವೇಶಗಳನ್ನು ಅದಕ್ಕನುಗುಣವಾದ ಕ್ರಮಗಳಿಂದ ಗಂಭೀರವಾಗಿ ಆಡಳಿತ ನಡೆಸಿದರು.  ಅದರಲ್ಲೂ ಒಸಾಮಾ ಬಿನ್ ಲಾಡೆನ್ ಅನ್ನು ಮುಗಿಸುವಲ್ಲಿ ಆತ ತೋರಿದ ಗಾಂಭೀರ್ಯಪೂರ್ಣ ತಂತ್ರಗಾರಿಕೆ ವಿಶ್ವವನ್ನೆಲ್ಲಾ ಅಚ್ಚರಿಗೆ ಸಿಲುಕಿಸಿ ಆತನ ಜನಪ್ರಿಯತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿತು.  ಒಬ್ಬ ವ್ಯಕ್ತಿ ಎಷ್ಟು ಉತ್ತಮ ಆಡಳಿತ ನೀಡಿದ ಎಂದು ತಿಳಿಯುವುದು ಆತ ಅಧಿಕಾರದಲ್ಲಿದ್ದಾಗ ಅಲ್ಲ. ಆತ ಅಧಿಕಾರದಿಂದ ಹೊರಬಂದಾಗ ಅದೇ ಸ್ಥಾನದಲ್ಲಿ ಮುಂದೆ ಕೂತ ಅಸಮರ್ಪಕ ಭೂಪರಿಂದ.  ಒಬಾಮ ನಂತರದಲ್ಲಿದ್ದ ಭೂಪ,  ಒಬಾಮ ಅಂತಹ ಒಬ್ಬ ವ್ಯಕ್ತಿ ಅಮೆರಿಕಕ್ಕೆ ಮತ್ತು ವಿಶ್ವಸಮುದಾಯಕ್ಕೆ ಎಷ್ಟು ಮುಖ್ಯನಿದ್ದ ಎಂಬುದನ್ನು ಚೆನ್ನಾಗಿ ಮನವರಿಕೆ ಮಾಡಿಕೊಟ್ಟು ಹೋದ..

ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ.  ದುರದೃಷ್ಟವಶಾತ್ ರಾಜಕಾರಣಿಗಳಲ್ಲಿನ ಒಳ್ಳೆಯ ಗುಣಗಳೂ ಶಾಶ್ವತವಾಗಿರುವುದು ಕೂಡಾ ಅಪರೂಪ.  ಮಹಾತ್ಮ ಗಾಂಧಿ, ಅಬ್ರಹಾಂ ಲಿಂಕನ್ ಅವರನ್ನು ತನ್ನ ಆರಾಧ್ಯ ದೈವ ಎಂದು ಹೇಳುವ ಬರಾಕ್ ಒಬಾಮ ಒಳ್ಳೆಯ ಭಾವಗಳನ್ನೇ ಮೂಡಿಸಿದವರು. 

On the birth day Barack Obama. 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ