ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೋಕಿಲ ಮೋಹನ್


 ಕೋಕಿಲ ಮೋಹನ್


ಸಿನಿಮಾ ಪ್ರೇಮಿಗಳಿಗೆ 'ಮೋಹನ್' ಎಂದರೆ ಯಾರು ಎಂದು ತಕ್ಷಣ ಹೊಳೆಯುವುದಿಲ್ಲ.  ಕೋಕಿಲ ಮೋಹನ್ ಅಂದರೆ ಆಂತರ್ಯ ಅರಳುತ್ತದೆ.  ಕನ್ನಡದ ಈ ಹುಡುಗನಷ್ಟು ದಕ್ಷಿಣ ಭಾರತದ ಅಸಂಖ್ಯಾತ ಚಿತ್ರಗಳಲ್ಲಿ ಯಶಸ್ಸು ಪಡೆದು ತನ್ನ  ಪಾಡಿಗೆ ಮೌನಲೋಕದಲ್ಲಿರುವ ಮತ್ತೊಬ್ಬ ನಟನಿಲ್ಲ.


ಮೋಹನ್ ತಮ್ಮ ಚೊಚ್ಚಲ ಚಿತ್ರ 'ಕೋಕಿಲ' ಮೂಲಕ ಕೋಕಿಲ ಮೋಹನ್ ಎಂದೇ ಖ್ಯಾತರಾದವರು. ಬಾಲು ಮಹೇಂದ್ರ ಅವರ ನಿರ್ದೇಶನದ ಆ ಚಿತ್ರದಲ್ಲಿ, ದೈತ್ಯ ಪ್ರತಿಭೆ ಕಮಲಹಾಸನ್ ಉಪಸ್ಥಿತಿಯಲ್ಲೂ ತನ್ನ ಉಲ್ಲಾಸಕರ ಅಭಿನಯದಿಂದ ಸಿನಿರಸಿಕರ ಮನಗೆದ್ದ ಮೋಹನ್, ಆ ಚಿತ್ರದ ಹೆಸರಿನ ಜೊತೆಗೆ ನಿಜಕ್ಕೂ ನೆನಪಲ್ಲುಳಿದಂತವರು. ಮೋಹನ್ ಅವರ ಚಿತ್ರಗಳ ಮತ್ತೊಂದು ವೈಶಿಷ್ಟ್ಯವೆಂದರೆ ಸುಶ್ರಾವ್ಯ ಗೀತೆಗಳ ಗಾಯಕರಾಗಿ ಅವರ ಪಾತ್ರಗಳು ಮೂಡಿದ್ದು. ಮೈಕ್ ಬಳಸಿ ಗಾಯಕನ ಪಾತ್ರದಲ್ಲಿ ಮಿನುಗಿದ ತಮ್ಮ ಅನೇಕ ಪಾತ್ರಗಳಿಂದಾಗಿ ಅವರು 'ಮೈಕ್ ಮೋಹನ್' ಎಂದೇ ಪ್ರಸಿದ್ಧರಾಗಿದ್ದವರು.


ಮೋಹನ್ 1956ರ ಮೇ 10ರಂದು  ಕೋಟೇಶ್ವರದಲ್ಲಿ ಜನಿಸಿದರು.


ಮೋಹನ್ ಅವರನ್ನು ರೆಸ್ಟೋರೆಂಟ್‌ ಒಂದರಲ್ಲಿ ಗುರುತಿಸಿದ ಬಿ.ವಿ.ಕಾರಂತರು ಅವರನ್ನು ರಂಗಭೂಮಿಗೆ ಪರಿಚಯಿಸಿದರು. ಮುಂಬೈನಲ್ಲಿ ಬಿ.ವಿ. ಕಾರಂತರು, ಬಿ. ಜಯಶ್ರೀ ಅವರೊಂದಿಗೆ ಮೋಹನ್ ಅವರು ಪಿ. ಲಂಕೇಶರ 'ಸಿದ್ಧತೆ' ಎಂಬ ನಾಟಕದಲ್ಲಿ ಅಭಿನಯಿಸಿದ ಸಂದರ್ಭದಲ್ಲಿ ಜಿ. ವಿ. ಶಿವಾನಂದ ಅವರು ಸಿನಿಮಾಗೆ ಸೇರುವಂತೆ ಮೋಹನ್ ಅವರ ಮನವೊಲಿಸಿ ಅವರ ಹಲವು ಫೋಟೊಗಳನ್ನು ತೆಗೆಸಿದರು. ಶಿವಾನಂದರು ಬಾಲುಮಹೇಂದ್ರ ಅವರ 'ಕೋಕಿಲ' ಚಿತ್ರದ‍ ಸಹನಿರ್ದೇಶಕರಾಗಿದ್ದು ಅದರಲ್ಲಿನ ಪ್ರಮುಖ ಪಾತ್ರಕ್ಕೆ ಯುವ ನಟನನ್ನು ಅರಸುತ್ತಿದ್ದರು. ಮೋಹನ್ ಅವರ ರಂಗಾಭಿನಯವು ಎಲ್ಲೆಡೆ ಮೆಚ್ಚುಗೆ ಗಳಿಸಿತ್ತು.  ಮೋಹನ್ ಅವರ ಅಭಿನಯವನ್ನು ಬೆಂಗಳೂರಿನಲ್ಲಿ ನೇರ ಕಂಡು ಸಂತೋಷಿಸಿದ  ಬಾಲು ಮಹೇಂದ್ರ ಅವರು  1977ರಲ್ಲಿ 'ಕೋಕಿಲ’  ಮೂಲಕ ಮೋಹನ್ ಅವರನ್ನು ಪರಿಚಯಿಸಿದರು.


1980ರಲ್ಲಿ 'ಮೂಡುಪನಿ' ಬಿಡುಗಡೆಯಾದಾಗಿನಿಂದ ಮೋಹನ್ ಅವರು ತಮಿಳು ಚಿತ್ರರಂಗದ ದೊಡ್ಡ ತಾರೆಗಳಲ್ಲಿ ಒಬ್ಬರಾದರು. 1980ರ ದಶಕದಲ್ಲಿ ಮೋಹನ್ ಅವರ ಎಷ್ಟೊಂದು ಚಿತ್ರಗಳು ಯಶಸ್ಸು ಗಳಿಸಿದ್ದವೆಂದರೆ ಉದ್ಯಮದಲ್ಲಿ ಅವರನ್ನು 'ರಜತ ಮಹೋತ್ಸವಗಳ ನಾಯಕ' ಎಂದು ಬಣ್ಣಿಸಲಾಗುತ್ತಿತ್ತು. 


ಕೋಕಿಲ ಚಿತ್ರದ ನಂತರ ಮೋಹನ್ ಮಲಯಾಳದ 'ಮದಾಲಸ' (1978) ಚಿತ್ರದಲ್ಲಿ ನಟಿಸಿದರು. 'ತೂರ್ಪು ವೆಲ್ಲೆ ರೈಲು' (1979) ಎಂಬ ತೆಲುಗು ಚಿತ್ರದಲ್ಲಿ ಅಭಿನಯಿಸಿದರು.  ಸುಹಾಸಿನಿ ಅವರನ್ನು ಚಿತ್ರರಂಗಕ್ಕೆ ತಂದ  ಮೊದಲ ಚಿತ್ರವಾದ ತಮಿಳಿನ  'ನೆಂಜತ್ತೈ ಕಿಳ್ಳಾದೆ' (1980) ಚಿತ್ರದಲ್ಲಿ  ಅದ್ಭುತವಾಗಿ ನಟಿಸಿದರು. ಈ ಚಿತ್ರ ಒಂದು ವರ್ಷ ಓಡಿತಲ್ಲದೆ  ತಮಿಳಿನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿತು.  1982ರಲ್ಲಿ 'ಪಯಣಂಗಳ್ ಮುಡಿವದಿಲ್ಲೈ' ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದು ದೊಡ್ಡ ತಾರೆಯಾದರು.


ಮೋಹನ್ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೂ ವಿಧಿ (1984), ನೂರಾವದು ನಾಳ್ (1984), ರೆಟ್ಟೈ ವಾಲ್ ಕುರುವಿ (1987), ಸಹದೇವನ್ ಮಹಾದೇವನ್ (1988) ಮುಂತಾದ ಚಿತ್ರಗಳಲ್ಲಿ ಅಭಿನಯಕ್ಕೆ ಆಸ್ಪದವಿದ್ದ ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸುವುದಕ್ಕೆ  ಹಿಂಜರಿಯಲಿಲ್ಲ.


1985ರಲ್ಲಿ 2 ದಿನಗಳ ಅವಧಿಯಲ್ಲಿ ಅವರ 3 ಚಿತ್ರಗಳು ಬಿಡುಗಡೆ ಆಗಿ ದಾಖಲೆ ನಿರ್ಮಿಸಿದ್ದವು. ಚೆನ್ನೈನ 'ದೇವಿ ಥಿಯೇಟರ್ ಕಾಂಪ್ಲೆಕ್ಸ್‌ನಲ್ಲಿ' ಪ್ರತಿದಿನ  ಮೂರು ಹೊತ್ತಿನಲ್ಲಿ ಅವರ ಮೂರು ಚಿತ್ರಗಳು ಪ್ರದರ್ಶನಗೊಂಡವು.  ಈ ಮೂರು ಚಿತ್ರಗಳೂ ದೊಡ್ಡ ಯಶಸ್ಸನ್ನು ಕಂಡವು. ಇಲ್ಲಿಯವರೆಗೆ ಯಾವುದೇ ನಟ ಅವರ ಈ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಿಲ್ಲ.


ಮೋಹನ್ ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ಮೌನ ರಾಗಂ' (1986) ಚಿತ್ರದಲ್ಲಿ ಅತ್ಯುತ್ತಮ ಅಭಿನಯವನ್ನು ನೀಡಿದರು.  ಆ ಚಿತ್ರವು ಯಶಸ್ಸಿನ ಜೊತೆಗೆ ತಮಿಳಿನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿ,  ನಿರ್ದೇಶಕ ಮಣಿರತ್ನಂ ಅವರಿಗೆ ದೊಡ್ಡ ಮನ್ನಣೆ  ತಂದಿತು. 


ಮೋಹನ್ ಅವರ ಬಹುತೇಕ ಚಲನಚಿತ್ರಗಳು, ಇಳಯರಾಜಾ ಸಂಗೀತ ನೀಡಿದ ಉತ್ತಮ ಸಂಗೀತದ ಆಲ್ಬಮ್‌ಗಳಾಗಿದ್ದು ಇಂದೂ ಜನಪ್ರಿಯತೆ ಉಳಿಸಿಕೊಂಡಿವೆ. 80ರ ದಶಕದ ಚಲನಚಿತ್ರಗಳು ಮತ್ತು ಇಳಯರಾಜರ ಸಂಯೋಜನೆಯ ಹಾಡುಗಳ ಮಾತು ಬಂದಾಗ ಮೋಹನ್ ಅವರ ಹೆಸರೂ ಪ್ರಸ್ತಾವನೆಗೊಳ್ಳುತ್ತದೆ.


ಕಾಲಾನುಕ್ರಮದಲ್ಲಿ ಹೊಸ ಅಲೆಯ ಪ್ರವಹಿನಿಯಲ್ಲಿ ಹಳತು,  ಜನರಿಗೆ ಕಾಣುವುದಿಲ್ಲ. 1990ರ ನಂತರ ಮೂಡಿಬಂದ ಅವರ ಅಭಿನಯದ ಚಿತ್ರಗಳು ಕಡಿಮೆ.  1999ರಲ್ಲಿ 'ಅನ್ಬುಳ್ಳ ಕಡಲುಕ್ಕು' ಚಿತ್ರ ನಿರ್ಮಿಸಿ  ನಿರ್ದೇಶಿಸಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಮೋಹನ್ ಅವರ ಪುನರಾಗಮನದ ಪ್ರಯತ್ನ ಯಶ ಕಾಣಲಿಲ್ಲ.‍ ಮೋಹನ್  ಅಚಮ್ ಮೇಡಂ ನಾನ, ಸೆಲ್ವಂಗಲ್, ಹಸಿಯರಾಮಾಯಣ,  ಬೃಂದಾವನಂ ಮುಂತಾದ ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸಿದ್ದರು. ಅವರು ಸಿನಿಮಾ ನಿರ್ಮಾಣವನ್ನೂ ಮಾಡಿದರು. ಅನೇಕ ಸಮಾಜ ಮುಖಿ ಕಾರ್ಯಗಳನ್ನೂ ಮಾಡುತ್ತ ಬಂದಿದ್ದಾರೆ.


2008ರಲ್ಲಿ ಬಿಡುಗಡೆಯಾದ 'ಸುತ್ತ ಪಝಂ'ನಲ್ಲಿ ಅವರು  9 ವರ್ಷಗಳ ವಿರಾಮದ ನಂತರ ನಾಯಕನಾಗಿ ನಟಿಸಿದ್ದರು. ಈ ಚಲನಚಿತ್ರವು ಕಡಿಮೆ ಬಜೆಟ್ನಲ್ಲಿ ಮೂಡಿ ಲಾಭ  ಮಾಡಿತು. 2024 ವರ್ಷದಲ್ಲಿ ಅವರ  'ಹರಾ' ಎಂಬ ಚಿತ್ರ ತೆರೆಕಂಡಿತು. 


ಮೋಹನ್ ಅವರು ಕನ್ನಡದಲ್ಲಿ ಕೋಕಿಲ ಅಲ್ಲದೆ ಅಪರಿಚಿತ, ಭೂಲೋಕದಲ್ಲಿ ಯಮರಾಜ, ನಮ್ಮಮ್ಮನ ಸೊಸೆ, ಗಾಳಿ ಮಾತು, ಮುನಿಯನ ಮಾದರಿ, ಹೆಣ್ಣಿನ ಸೇಡು, ಹಾವಾದ ಹೂವು, ಗೌತಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಉಳಿದ ಭಾಷಾ ಚಿತ್ರಗಳಲ್ಲಿ ಗಂಭೀರ ಪಾತ್ರಗಳ ನಿರ್ವಹಣೆ ಮಾಡಿದ್ದರೆ ಕನ್ನಡದಲ್ಲಿ ಅವರ ಪಾತ್ರಗಳು ಹಾಸ್ಯಯುಕ್ತ ಲವ ಲವಿಕೆ ತುಂಬಿಕೊಂಡಿದ್ದವು.  ಇತರ ಭಾಷೆಗಳಲ್ಲಿ ಬಹುಬೇಡಿಕೆಯ ನಟರಾಗಿದ್ದ ಸಂದರ್ಭದಲ್ಲೂ ಕನ್ನಡದಲ್ಲಿ ಅವರು ಯಾವುದೇ ಪ್ರಧಾನ ಭೂಮಿಕೆಯಲ್ಲಿದ್ದ ಚಿತ್ರ ಮೂಡಲಿಲ್ಲ ಎಂಬುದು ಅಚ್ಚರಿಯ ಸಂಗತಿ.


ಮೋಹನ್ ನಮ್ಮ ಕನ್ನಡ ನೆಲದ ಹೆಮ್ಮೆ. ಅಷ್ಟು ಸಾಧಿಸಿದ್ದರೂ ನನ್ನ ಬರಹದ ಬಗ್ಗೆ ತಿಳಿದು ನನ್ನನ್ನರಸಿ ಕೃತಜ್ಞತೆ ಸಲ್ಲಿಸಿದರು.  ಆತ್ಮೀಯರಾದ ಮಹಾನ್ ಕಲಾವಿದ ಮೋಹನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 


On the Birth Day of Great  actor Mohan 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ