ಜ್ಯೋತ್ಸ್ನಾ ಕಾಮತ್
ಜ್ಯೋತ್ಸ್ನಾ ಕಾಮತ್
ಜ್ಯೋತ್ಸ್ನಾ ಕಾಮತ್ ಅವರು ನಮ್ಮನ್ನಗಲಿ 3 ವರ್ಷವಾಗಿ ಹೋಯ್ತು. ಕಾಲ ಓಡಿ ಹೋಗುತ್ತದೆ!
ಜ್ಯೋತ್ಸ್ನಾ ಕಾಮತ್ ಹೆಸರಾಂತ ಸಂಶೋಧಕಿ, ದಕ್ಷ ಆಡಳಿತಗಾರ್ತಿ ಮತ್ತು ಕನ್ನಡ ಸಾಹಿತ್ಯಲೋಕದಲ್ಲಿ ಅಪೂರ್ವ ಬರಹಗಾರ್ತಿ ಎಂದು ಹೆಸರಾಗಿದ್ದವರು. ಅವರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಿಂದ ನಿರ್ದೇಶಕರ ಹುದ್ದೆಯತನಕ ಕೆಲಸ ಮಾಡಿದವರು. ಪತಿ ದಿವಂಗತ ಡಾ.ಕೃಷ್ಣಾನಂದ ಕಾಮತ್ ಅವರು ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿತವಾದ ಹೆಸರು. ಮಗ ವಿಕಾಸ್ ಕಾಮತ್ Vikas Kamat. ಈ ಪರಿವಾರದವರ ಅಂತರ್ಜಾಲ ‘www.kamat.com’ ಎಂಬುದು ಒಂದು ಅಮೂಲ್ಯ ಸಾಂಸ್ಕೃತಿಕ ತಾಣವೇ ಎಂಬಷ್ಟು ಅಂತರ್ಜಾಲದ ಲೋಕದಲ್ಲಿ ಕಂಗೊಳಿಸುತ್ತಿದೆ.
ಜ್ಯೋತ್ಸ್ನಾ 1937ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ತಂದೆ ಗಣೇಶರಾವ್ ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್. ತಾಯಿ ಶಾರದಾಬಾಯಿ. ಜ್ಯೋತ್ಸ್ನಾ ಅವರ ವಿದ್ಯಾಭ್ಯಾಸವೆಲ್ಲ ಉತ್ತರ ಕನ್ನಡದಲ್ಲಿ ಮತ್ತು ಧಾರವಾಡ ಜಿಲ್ಲೆಯಲ್ಲಿ ನಡೆಯಿತು. ಕುಮಟಾದ ಕೆನರಾ ಕಾಲೇಜಿನಲ್ಲಿ 1957ರಲ್ಲಿ ಬಿ.ಎ. ಪದವಿ ಪಡೆದರು. ಸಂಸ್ಕೃತ ಹಾಗು ಇತಿಹಾಸದಲ್ಲಿ ಅವರಿಗೆ ವಿಶೇಷ ಒಲವಿತ್ತು. ಬಿ.ಎ.ಪದವಿಯ ನಂತರ 'ಡಿಪ್ಲೊಮ ಇನ್ ಎಜುಕೇಷನ್' ನಲ್ಲಿ ಒಂದು ವರ್ಷ ಅಧ್ಯಯನ ಮಾಡಿ ಧಾರವಾಡದ ವನಿತಾ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿ ಸೇರಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ. ಪದವಿ ಗಳಿಸಿದರು.
ಡಾ.ಬಿ.ಎ.ಸಾಲೆತೊರೆ, ಡಾ.ಪಿ.ಬಿ.ದೇಸಾಯಿ ಮತ್ತು ಡಾ. ಜಿ.ಎಸ್. ದೀಕ್ಷಿತ್ ರಂತಹ ಇತಿಹಾಸ ವಿದ್ವಾಂಸರ ಪ್ರಭಾವಕ್ಕೆ ಒಳಗಾಗಿದ್ದ ಜ್ಯೋತ್ಸ್ನಾ ಎರಡು ವರ್ಷ ಸಹಾಯಕ ಸಂಶೋಧಕಿಯಾಗಿ ಕೆಲಸ ನಿರ್ವಹಿಸಿದರು. ಇತಿಹಾಸದಲ್ಲಿ ಡಾಕ್ಟರೇಟ್ ಗಳಿಸಿದರು. ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜ್ಯೋತ್ಸ್ನಾರವರು, 1964ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ಮುಂದೆ ಕೋಲ್ಕತ, ಜೈಪುರ್, ಮುಂಬಯಿ, ಮೈಸೂರು ಮತ್ತು ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ 1994ರಲ್ಲಿ ನಿವೃತ್ತಿ ಹೊಂದಿದರು. ಕೊಂಕಣಿ, ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಬೆಂಗಾಳಿ, ಸಂಸ್ಕೃತಗಳಲ್ಲಿ ಅವರು ಪರಿಣಿತೆಯಾಗಿದ್ದರು.
ಡಾ.ಜ್ಯೋತ್ಸ್ನಾ ಕಾಮತ್ ಅವರು, ತಾವು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬಿತ್ತರಗೊಂಡ ಎರಡು ಕಾರ್ಯಕ್ರಮಗಳಾದ 'ಗಾಂಧಿ-ಒಂದು ಪುನರ್ದರ್ಶನ' ಮತ್ತು 'ಹಿರಿಯರ ಯುಗಾದಿ ಮೇಳ' ಗಳನ್ನು ಪುಸ್ತಕರೂಪದಲ್ಲೂ ಪ್ರಕಟಿಸಿದರು.
‘ಸಂಸಾರದಲ್ಲಿ ಸ್ವಾರಸ್ಯ (ಪ್ರಬಂಧಗಳ ಸಂಕಲನ)’, ‘ಕರ್ನಾಟಕದ ಶಿಕ್ಷಣ ಪರಂಪರೆ (ಶಿಕ್ಷಣ)’, ‘ಹೀಗಿದ್ದೇವೆ ನಾವು (ಹಾಸ್ಯ)’, ‘ಮಹಿಳೆ – ಒಂದು ಅಧ್ಯಯನ’, ‘ನೆನಪಿನಲ್ಲಿ ನಿಂತವರು’, ‘ನಗೆ ಕೇದಿಗೆ’, ‘ಪತ್ರ ಪರಾಚಿ’, ‘ಹೀಗಿದ್ದರು ನಮ್ಮ ಕಂತಿ (ಪತಿ ಕೃಷ್ಣಾನಂದ ಕಾಮತ್ ಅವರ ಕುರಿತು ನೆನಪು)’, ‘Social Life in Medieval Karnataka’, ‘Education in Karnataka through the Ages’, ಕೊಂಕಣಿಯಲ್ಲಿ ‘ಸುರಾಗ್ಯ ಸಾರ್’, ಮುಂತಾದವು ಜ್ಯೋತ್ಸ್ನಾ ಅವರ ಪ್ರಸಿದ್ಧ ಪ್ರಕಟಿತ ಕೃತಿಗಳಾಗಿವೆ.
1991ರಲ್ಲಿ ಕರ್ನಾಟಕ ಸರ್ಕಾರವು ಜ್ಯೋತ್ಸ್ನಾ ಅವರಿಗೆ "ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿತ್ತು. ಅವರ 'ಕರ್ನಾಟಕ ಶಿಕ್ಷಣ ಪರಂಪರೆ' ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ ಸಂದಿತ್ತು. ಕನ್ನಡ ಸಾಹಿತ್ಯ ಸಂಶೋಧನೆಗಾಗಿ ಅವರಿಗೆ 'ಕಿಟ್ಟಲ್ ಪುರಸ್ಕಾರ' ದೊರೆತಿತ್ತು. ಕರ್ಣಾಟಕ ಇತಿಹಾಸ ಕಾಂಗ್ರೆಸ್ಸಿನ ಅಧ್ಯಕ್ಷತೆ, ಉತ್ತರ ಅಮೆರಿಕದ ಕೊಂಕಣಿ ಕೂಟದ ಅಧ್ಯಕ್ಷತೆ ಮುಂತಾದ ಗೌರವಗಳು ಸಹಾ ಅವರಿಗೆ ಸಂದಿತ್ತು.
ಕೆ. ಎಲ್. ಕಾಮತ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾಗಿ ಕೃಷ್ಣಾನಂದ ಕಾಮತ್ ಅವರ ಕಾರ್ಯಗಳು ಮತ್ತು ಆಶೋತ್ತರಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಜ್ಯೋತ್ಸ್ನಾ ಕಾಮತ್ ಅವರು ಭಾರತೀಯ ಪುರಾತತ್ವ ಸಮಾಜ, ಮಿಥಿಕ್ ಸೊಸೈಟಿ, ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನಗಳ ಸದಸ್ಯರಾಗಿ ಕೂಡಾ ಕ್ರಿಯಾಶೀಲರಾಗಿದ್ದರು.
‘Amma’s Column’ ಎಂಬ ಬ್ಲಾಗಿನಲ್ಲಿ ಮನೋಜ್ಞ ಲೇಖನಗಳನ್ನು ನಿರಂತರವಾಗಿ ಪ್ರಕಟಿಸಿದ್ದ ಜ್ಯೋತ್ಸ್ನಾ ಅವರು ‘The History of Kannada Literature’, ‘A series on saints of India’ ಮುಂತಾದ ಪ್ರಮುಖ ಕಾರ್ಯಗಳನ್ನು ತಮ್ಮ ಕುಟುಂಬವು ಸಾಂಸ್ಕೃತಿಕ ಲೋಕಕ್ಕೆ ಮಹತ್ಕೊಡುಗೆಯಾಗಿ ನೀಡಿರುವ ‘Kamat’s Potpurri (kamat.com)’ ಅಂತರ್ಜಾಲದಲ್ಲಿ ಮೂಡಿಸುವ ಬೃಹತ್ ಕಾಯಕದಲ್ಲಿ ತೊಡಗಿದ್ದರು. ಮಗನೊಂದಿಗೆ ನಡೆಸಿದ ಪತ್ರಗಳ ಸರಣಿಯಾಗಿ “Remote Control – Letters to a Son” ಎಂಬ ಕೃತಿಯ ಸಂಪಾದನೆಯನ್ನೂ ನಿರ್ವಹಿಸಿದ್ದರು.
ಡಾ. ಜ್ಯೋತ್ಸ್ನಾ ಕಾಮತ್ ಅವರು 2022ರ ಆಗಸ್ಟ್ 24ರಂದು ಈ ಲೋಕವನ್ನಗಲಿದರು. ಶ್ರೇಷ್ಠ ಜೀವಿಗಳನ್ನು ಕರೆದೊಯ್ಯುವ ಕಾಲವು, ಅದಕ್ಕೆ ಸೂಕ್ತ ಬದಲಿ ಶ್ರೇಷ್ಠ ಜೀವಿಗಳನ್ನು ನಮಗೆ ಸುಲಭವಾಗಿ ಕಾಣುವಂತೆ ಮಾಡುವುದಿಲ್ಲ. ಅದೂ ಜ್ಯೋತ್ಸ್ನಾ ಕಾಮತ್ ಅವರ ಕ್ರಿಯಾಶೀಲತೆಯ ಜೊತೆಗೆ ನಾವು ಅವರಲ್ಲಿದ್ದ ಪ್ರೀತಿಯ ಆಳದ ಬಗ್ಗೆ ಕೇಳುತ್ತ ಬೆಳೆದವರು. ಅಂತಹ ಪ್ರೀತಿ ಪುನಃ ದಕ್ಕುವುದುಂಟೆ.
ಜ್ಯೋತ್ಸ್ನಾ ಕಾಮತ್ ಅವರನ್ನು ಒಂದು ಚೇತನವಾಗಿ ಕಂಡಾಗ ಅದಕ್ಕೆ ಎಂದೂ ಅಳಿವಿಲ್ಲ.
ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
ಜ್ಯೋತ್ಸ್ನಾ ಕಾಮತ್ ಮತ್ತು ಅವರ ಪತಿ ಕೃಷ್ಣಾನಂದ ಕಾಮತ್ ದಂಪತಿಗಳು ನಮ್ಮ ಹೃದಯಗಳಲ್ಲಿ ಸದಾ ಅಮರರು.
Great research scholar, writer and administrator Dr. Jyotsna Kamat 🌷🙏🌷
ಕಾಮೆಂಟ್‌ಗಳು