ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಲಾ ಭಾಗ್ವತ್

 


ಕಲಾ ಭಾಗ್ವತ್

ಕಲಾ ಚಿದಾನಂದ ಭಾಗ್ವತ್ ಸಾಹಿತ್ಯ, ಸಂಸ್ಕೃತಿ, ಸಂಗೀತ ಮುಂತಾದ ಕ್ಷೇತ್ರಗಳ ಬಹುಮುಖಿ ಪ್ರತಿಭೆ. 

ಆಗಸ್ಟ್ 24, ಕಲಾ ಅವರ ಜನ್ಮದಿನ.  ಇವರ ತವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ. ಪತಿಯವರ ಊರು ಕುಮಟಾ ತಾಲೂಕಿನ ಧಾರೇಶ್ವರ. ಪ್ರಸ್ತುತ ಮುಂಬೈನ ಪವಾಯಿಯಲ್ಲಿ ವಾಸಿಸುತ್ತಿದ್ದಾರೆ.

ಕಲಾ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ ಸಿ ಪದವಿ ಪಡೆದು, ಮುಂದೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ  ಪ್ರಥಮ ರ್‍ಯಾಂಕ್ ಹಾಗೂ ಎಂ.ಬಿ.ಕುಕ್ಯಾನ್ ಬಂಗಾರದ ಪದಕದೊಂದಿಗೆ ಎಂ.ಎ.ಪದವಿ ಗಳಿಸಿದರು. ಪ್ರಸಕ್ತದಲ್ಲಿ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಡಾ.ಜಿ ಎನ್ ಉಪಾಧ್ಯ Upadhya G N ಅವರ ಮಾರ್ಗದರ್ಶನದಲ್ಲಿ ಪಿಎಚ್. ಡಿ ಅಧ್ಯಯನ ನಿರತರಾಗಿದ್ದಾರೆ. 

ಕಲಾ ಅವರು ತಾಯಿಯಿಂದ ಸುಗಮಸಂಗೀತವನ್ನೂ, ಮುಂಬಯಿಯ ಗಂಧರ್ವ ಮಹಾವಿದ್ಯಾಲಯದಲ್ಲಿ ಹಿಂದೂಸ್ತಾನಿ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ.

ಕಲಾ ಅವರ ಕವಿತೆ, ಕತೆ, ಪ್ರಬಂಧ, ಅಂಕಣ, ವಿಮರ್ಶಾ ಲೇಖನಗಳು ಹಾಗೂ ಶೋಧ ಲೇಖನಗಳು ನಿರಂತರವಾಗಿ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತ ಬಂದಿವೆ. ಹೀಗೆ ಕಲಾ ಅವರು ಸಂಗೀತ,  ಸಾಹಿತ್ಯ ಹಾಗೂ ಸಾಂಘಿಕ ಚಟುವಟಿಕೆಗಳಲ್ಲಿನ ಸಮನ್ವಯ ಆಸಕ್ತಿಯನ್ನು ಹೊಂದಿದ್ದಾರೆ. 

ಕಲಾ ಭಾಗ್ವತ್ ಅವರು ವೈದ್ಯ ಭೂಷಣ ಡಾ 'ಬಿ. ಎಂ ಹೆಗ್ಡೆ ಅವರ ಜೀವನ ಸಾಧನೆ',  'ಜೀವ ಸ್ವರ' - ಜಯಂತ ಕಾಯ್ಕಿಣಿ ಪ್ರಬಂಧ ಲೋಕ, ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ' ಹಾಗೂ  'ಜಾಲಂದರ' ಎಂಬ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.  

ಕಲಾ ಅವರು ಮುಂಬೈಯಲ್ಲಿ ಹಾಗೂ ಒಳ ನಾಡಿನಲ್ಲಿ ಗಮಕ, ಸುಗಮ ಸಂಗೀತ  ಕಾರ್ಯಕ್ರಮಗಳನ್ನೂ ನೀಡಿ ಹೆಸರಾಗಿದ್ದಾರೆ.

ಕಲಾ ಭಾಗ್ವತ್ ಅವರಿಗೆ ಸುಗಮ ಸಂಗೀತ ಪರಿಷತ್ತು ಮಹಾರಾಷ್ಟ್ರ ಘಟಕದ ಬಹುಮಾನ, ವಿಕಾಸ ಪುಸ್ತಕ ಬಹುಮಾನ, ಶೋಧ ಸಿರಿ ಪುರಸ್ಕಾರ ಮುಂತಾದ ಹಲವಾರು ಗೌರವಗಳು ಸಂದಿವೆ. ಮೈಸೂರು ದಸರಾ ಕವಿಗೋಷ್ಠಿಯೂ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಭಾಗವಹಿಸಿದ್ದಾರೆ.

ಆತ್ಮೀಯ ಸರಳ ಸಹೃದಯಿ ಪ್ರತಿಭಾಶಾಲಿನಿ ಕಲಾ ಭಾಗ್ವತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Kala Bhagwat 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ