ವಿದ್ಯಾರ್ಥಿ ಭವನ
ವಿದ್ಯಾರ್ಥಿ ಭವನದಲ್ಲಿ ಅತಿಥಿಯಾದಾಗ
7.8.2022 ಕಾರ್ಯಕ್ರಮದಲ್ಲಿ ಪ್ರಥಮ ಭೇಟಿಯ ಪ್ರಥಮ ಕ್ಷಣದಲ್ಲೇ ಸುದ್ಧಿಲೋಕದ ಭೀಷ್ಮರಾದ ಶೇಷಚಂದ್ರಿಕ ಸಾರ್, “ನನಗೆ ನಿಮ್ಮ ಭೇಟಿ ಇಷ್ಟಕ್ಕೆ ಸಾಲಲ್ಲ, ನಾಳೆ ಬೆಳಿಗ್ಗೆ ನೀವು ನನ್ನ ಮತ್ತು ಅರುಣ ಅಡಿಗರಿಗೆ ವಿದ್ಯಾರ್ಥಿ ಭವನದಲ್ಲಿ ಅತಿಥಿ ಆಗಬೇಕು” ಎಂದರು. ಪರಿಮಳ ಪ್ರಶಸ್ತಿಗೆಂದು ಹೋದರೆ ಇಂತದ್ದೊಂದು ಪ್ರಶಸ್ತಿ ಜೊತೆಗೂಡಿತು.
ವಿದ್ಯಾರ್ಥಿ ಭವನದಲ್ಲಿ ನಾವು ಯುವಕರಾಗಿದ್ದಾಗ ದಂಡು ದಂಡಾಗಿ ಹೋಗಿ ಇಡೀ ಹೋಟಲನ್ನು ಆಕ್ರಮಿಸಿ ಅಲ್ಲಿನ ತಿಂಡಿಗಳನ್ನೆಲ್ಲ ಖಾಲಿ ಮಾಡುತ್ತಿದ್ದೆವು. ಮುಂದೆ ಅಲ್ಲಿ ಹಲವು ನಿಮಿಷ ಕಾದು ಯಾವಾಗ ಸೀಟು ಸಿಗುತ್ತೊ ಅಂತ ಕಾತರಿಸಿ ದೋಸೆ ತಿಂದದ್ದು ಎಷ್ಟು ಸಲವೊ. ಬೇಕಾದಷ್ಟು ಸಲ “ಬೆಳಿಗ್ಗೆ ಏಳರ ಸಮಯವೇ ಅಲ್ಲಿ ಹೋಗೋಣ ಸೀಟು ಸಿಗುತ್ತೆ” ಅಂತ ಆತ್ಮೀಯರಿಗೆ ಹೇಳಿ ಭೇಟಿ ಆಗಿರುವುದು ಅನೇಕ ಬಾರಿ.
ಇಂತಹ ವಿದ್ಯಾರ್ಥಿ ಭವನದಲ್ಲಿ ಅನೇಕ ಮಂದಿ ಗಣ್ಯರು ತಮ್ಮ ರುಚಿ ನೆನಪಿಸಿಕೊಂಡು ತಿಂಡಿ ತಿನ್ನುವ ಚಿತ್ರ ನೋಡುವುದು ಆಗಾಗ ಕಾಣುತ್ತಿರುತ್ತೆ. ಇಂತಹ ವಿದ್ಯಾರ್ಥಿ ಭವನಕ್ಕೆ ನನ್ನನ್ನು ಶೇಷಚಂದ್ರಿಕ ಮತ್ತು ಅರುಣ ಅಡಿಗರು ಅತಿಥಿಯಾಗಿಸಿಕೊಂಡಿದ್ದು ವಿಸ್ಮಯ - ಸಂಕೋಚ - ಸಂತೋಷ ಉಂಟುಮಾಡಿ ಕಂಗೆಡಿಸಿತಾದರೂ, ಈ ಜಿಹ್ವಾ ಚಪಲವನ್ನು ಮೀರುವುದುಂಟೆ! ಶೇಷಚಂದ್ರಿಕ ಮತ್ತು ಅರುಣ್ ಅಡಿಗರ ಜೊತೆ ಮಾತಾಡುತ್ತಾ ಸಂಕೋಚವಿಲ್ಲದೆ ಒಂದಾದ ಮೇಲೊಂದು ತಿಂಡಿ ಬಾರಿಸಿದ್ದೂ ಬಾರಿಸಿದ್ದೇ. ನಾನು ನಿನ್ನೆ ದುಬೈಗೆ ವಾಪಸ್ ಹೊರಡಲು ಟಿಕೆಟ್ ಬುಕ್ಕಾಗಿತ್ತು. ಇಲ್ಲದಿದ್ರೆ ಹೋಟೆಲ್ ಖಾಲಿ ಮಾಡಿಬಿಡ್ತಿದ್ದೆ!
ನನಗೆ ಈ ಸಂದರ್ಭದಲ್ಲಿ ಸಿಕ್ಕ ಅಮೂಲ್ಯ ಕಾಣಿಕೆ ವಿದ್ಯಾರ್ಥಿ ಭವನದ ಅಮೃತ ಮಹೋತ್ಸವದ ಸಂಚಿಕೆಯಾದ 'ನೆನಪಿನಂಗಳ'. ಅದರ ಮೆಲ್ಮುಖದಲ್ಲಿ ಇರುವ ದೋಸೆ ಚಿತ್ರ ಮುಟ್ಟಿದರೆ ದೋಸೆಯನ್ನೇ ಮುಟ್ಟಿದ ಅನುಭವ ಮೂಡುವಂತೆ ಮುದ್ರಿತಗೊಂಡಿದೆ. ಯಾವತ್ತೋ ಅತಿ ಹಸಿವೊ, ಜಿಹ್ವಾ ಚಾಪಲ್ಯವೋ ಕಾಡಿದಾಗ ಅದನ್ನೇ ತಿಂದು ಬಿಟ್ಟರೂ ಅಚ್ಚರಿ ಇಲ್ಲ. ಹಾಗೆ ಗುಳುಂ ಮಾಡುವ ಮುಂಚೆ, ಹಿಂದೆ ಅಲ್ಲಲ್ಲಿ ಓದಿದ್ದ ಇದರೊಳಗಿನ ಅಮೂಲ್ಯ ರುಚಿ - ಅಭಿರುಚಿಗಳನ್ನು ಆಸ್ವಾದಿಸಬೇಕು ಎಂದು ಈ 'ನೆನಪಿನಂಗಳ'ವನ್ನು ದುಬೈಗೆ ಹೊತ್ತು ತಂದಿದ್ದೇನೆ.
ನಾನು ವಿದ್ಯಾರ್ಥಿ ಭವನದ ಅತಿಥಿ ಪುಸ್ತಕದಲ್ಲಿ ಬರೆದಿರುವ ಕೋಳಿಕಾಲಕ್ಷರ ನಿಮಗೆ ಮೇಲೆ ಫೋಟೊದಲ್ಲಿ ಓದಲಾಗದಿರಬಹುದು. ಅದು ಹೀಗಿದೆ:
"ವಿದ್ಯಾರ್ಥಿ ಭವನ ಅಂದರೆ ಹೃದಯದಲ್ಲಿ ಮಿಂಚು, ನಾಲಗೆಯಲ್ಲಿ ಹೊಳಹು. ಆಗಾಗ ಸಾಧ್ಯವಾದಾಗೆಲ್ಲ ಕ್ಯೂ ನಿಂತು ಇಲ್ಲಿ ದೋಸೆ ತಿಂದು ಚಪಲ ತೀರಿಸಿಕೊಂಡ ನನಗೆ, ಇಂದು ಪೂಜ್ಯ ಶೇಷಚಂದ್ರಿಕ ಮತ್ತು ಆತ್ಮೀಯ ಅರುಣ ಅಡಿಗರ ಅತಿಥಿಯಾಗಿ ತಿಂದ ತಿಂಡಿ ರುಚಿ ಮತ್ತು ಆತ್ಮೀಯ ಹರಟೆ ಜೀವನದಲ್ಲಿ ಅವಿಸ್ಮರಣೀಯ. - ತಿರು ಶ್ರೀಧರ, ಬೆಂಗಳೂರು 08.08.2022”
ನನಗೆ ಅತಿಥಿ ಸೌಭಾಗ್ಯ ಕರುಣಿಸಿದ ಶೇಷಚಂದ್ರಿಕರಿಗೂ ವಿದ್ಯಾರ್ಥಿ ಭವನದ ರೂವಾರಿ ಅರುಣ ಅಡಿಗರಿಗೂ ಕೃತಜ್ಞನಾಗಿದ್ದೇನೆ.
Sesha Chandrika & Arun Adiga
While I enjoyed hospitality of great Vidhyarthi Bhavan, Bengaluru
ಕಾಮೆಂಟ್‌ಗಳು