ನರೇಂದ್ರ ದಾಭೋಲ್ಕರ್
ನರೇಂದ್ರ ದಾಭೋಲ್ಕರ್
ನರೇಂದ್ರ ಅಚ್ಯುತ ದಾಭೋಲ್ಕರ್ ಮೂಢನಂಬಿಕೆ ಆಚರಣೆಗಳು ಮತ್ತು ಅವುಗಳಿಂದ ಶೋಷಣೆಗೊಳಗಾಗುತ್ತಿದ್ದವರನ್ನು ರಕ್ಷಿಸಲು ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು.
ನರೇಂದ್ರ ದಾಭೋಲ್ಕರ್ ಅವರು ಅಚ್ಯುತ ಹಾಗೂ ತಾರಾಬಾಯಿ ದಂಪತಿಗಳ ಹತ್ತು ಮಕ್ಕಳಲ್ಲಿ ಕಿರಿಯವರಾಗಿ 1945ರ ನವೆಂಬರ್ 1ರಂದು ಜನಿಸಿದರು. ಸತಾರಾ ನ್ಯೂ ಇಂಗ್ಲಿಷ್ ಶಾಲೆ ಹಾಗೂ ಸಾಂಗ್ಲಿಯ ವೆಲ್ಲಿಂಗ್ಡನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮೀರಜ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದರು. ಕಬಡ್ಡಿ ಪಟುವೂ ಆಗಿದ್ದ ಇವರು ಭಾರತವನ್ನು ಪ್ರತಿನಿಧಿಸಿದ್ದರು. ಈ ಸಾಧನೆಗಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಶಿವ ಛತ್ರಪತಿ ಯುವ ಪ್ರಶಸ್ತಿ ಗಳಿಸಿದ್ದರು.
ನರೇಂದ್ರ ದಾಭೋಲ್ಕರ್ 1990-2010ರ ನಡುವೆ ಅವರು ಅಸ್ಪೃಶ್ಯರೆಂದು ಪರಿಗಣಿತರಾದ ಜನಾಂಗೀಯರ ಸಮಾನತೆಗಾಗಿ ಮತ್ತು ಶೋಷಣೆಗಳ ರೂಪದ ಹಿಂಸೆಗಳ ವಿರುದ್ಧದ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು. ಜಾತಿ ಮತ್ತು ಮೂಢನಂಬಿಕೆಗಳ ಹೆಸರಿನಲ್ಲಿ ಜನರು ಜೀವ ಕಳೆದುಕೊಳ್ಳುವುದು ಮತ್ತು ಶೋಷಣೆಗೊಳಗಾಗುವುದನ್ನು ಕಂಡ ನೊಂದರು. ಮೂಢನಂಬಿಕೆಗಳನ್ನು ತೊಡೆದುಹಾಕುವತ್ತ ಗಮನ ಹರಿಸಿ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯನ್ನು ಸ್ಥಾಪಿಸಿದರು. ಆ ಮೂಲಕ ಮೂಢನಂಬಿಕೆ, ಮಾಟ-ಮಂತ್ರ ಹಾಗೂ ಪವಾಡಗಳ ಮೂಲಕ ರೋಗಗಳನ್ನು ನಿವಾರಣೆ ಮಾಡುವುದಾಗಿ ಹೇಳಿಕೊಳ್ಳುವ ಪವಾಡಪುರುಷರು ಹಾಗೂ ಸ್ವಘೋಷಿತ ದೇವಮಾನವರ ವಿರುದ್ಧ ಅಘೋಷಿತ ಹೋರಾಟಕ್ಕಿಳಿದರು. ಪವಾಡಗಳು ಮತ್ತು ಮೂಢನಂಬಿಕೆಗಳ ಬಗೆಗೆ ಪುಸ್ತಕಗಳನ್ನು ಬರೆದರು, ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. 3,000ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಯ ಬಗ್ಗೆ ಪ್ರಚಾರ ಮಾಡಿದರು.
ನರೇಂದ್ರ ದಾಭೋಲ್ಕರ್ ಅವರು ಮೂಢನಂಬಿಕೆ ವಿರೋಧಿ ಮತ್ತು ಬ್ಲ್ಯಾಕ್ ಮ್ಯಾಜಿಕ್ ಮಸೂದೆಯ ಕರಡು ಪ್ರತಿಯನ್ನು ಸಿದ್ಧಪಡಿಸಿ ಅದರ ಮಂಡನೆಗಾಗಿ ನಿರಂತರ ಹೋರಾಡಿದರು. ಇದು ನರಬಲಿ, ಅಘೋರಿ ಚಟುವಟಿಕೆ, ಬ್ಲ್ಯಾಕ್ ಮ್ಯಾಜಿಕ್, ಮ್ಯಾಜಿಕ್ ತಂತ್ರಗಾರಿಕೆ ಮುಂತಾದವುಗಳ ನಿವಾರಣೆಯ ಆಶಯ ಉಳ್ಳದಾಗಿತ್ತು. ಯಾವುದು ಧರ್ಮ ಯಾವುದು ಅಧರ್ಮ, ಎಂಬ ಸಂದಿಗ್ಧದಲ್ಲಿ ಶೋಷಣೆ ಎಂಬುದು ನಿರಂತರವಾಗಿರುವ ನಮ್ಮ ಸಮಾಜದಲ್ಲಿ ಇದು ಸುಲಭ ಸಾಧ್ಯವಾಗಲಿಲ್ಲ. ವಿಧಾನಸಭೆಯಲ್ಲಿ ಈ ಮಸೂದೆ 2003ರಲ್ಲಿ ಮಂಡನೆಯಾದರೂ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆ ಎಂದು ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಇದನ್ನು ವಿರೋಧಿಸಿದವು. ಮಸೂದೆಯಲ್ಲಿ ಎಲ್ಲಿಯೂ ಧರ್ಮ ಅಥವಾ ದೇವರ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ದಾಭೋಲ್ಕರ್ ಸಮರ್ಥಿಸಿದ್ದರು.
ನರೇಂದ್ರ ದಾಭೋಲ್ಕರ್ ಅವರ ಜೀವದ ಮೇಲೆ ಧಾರ್ಮಿಕ ತೀವ್ರವಾದಿಗಳ ಕಣ್ಣು ನೆಟ್ಟಿತು. "ನನ್ನ ದೇಶದಲ್ಲಿಯೇ ನನ್ನ ಜನರಿಂದಲೇ ನಾನು ಪೋಲೀಸ್ ರಕ್ಷಣೆಯನ್ನು ಪಡೆಯಬೇಕಾದರೆ ನನ್ನಲ್ಲೇ ಏನೋ ತಪ್ಪಿದೆ . ನಾನು ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇನೆ. ಈ ಹೋರಾಟ ಯಾರ ವಿರುದ್ಧವೂ ಅಲ್ಲ , ಆದರೆ ಎಲ್ಲರಿಗಾಗಿ. ಹಾಗಾಗಿ ನಾನು ಪೋಲೀಸ್ ರಕ್ಷಣೆಯನ್ನು ನಿರಾಕರಿಸುತ್ತೇನೆ" ಎಂಬ ನಿಲುವು ದಾಭೋಲ್ಕರ್ ಅವರದಾಗಿತ್ತು.
ನರೇಂದ್ರ ದಾಭೋಲ್ಕರ್ ಅವರು 2013ರ ಆಗಸ್ಟ್ 20ರಂದು ಪುಣೆಯಲ್ಲಿ ಎಂದಿನಂತೆ ಬೆಳಗಿನ ನಡಿಗೆಯಲ್ಲಿದ್ದಾಗ ದುಷ್ಕರ್ಮಿಗಳು ಅವರನ್ನು ಗುಂಡಿಟ್ಟು ಕೊಂದರು. ಅವರ ಮರಣದ ಒಂದು ದಿನದ ನಂತರ ಮಹಾರಾಷ್ಟ್ರ ಸರಕಾರವು ಮೂಢನಂಬಿಕೆ ವಿರೋಧಿ ಮಸೂದೆಯನ್ನು ಜಾರಿಗೊಳಿಸಲು ತೀರ್ಮಾನಿಸಿತು. ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಯಿತು.
On Remembrance Day of Doctor, social activist, rationalist Narendra Achyut Dabholkar
ಕಾಮೆಂಟ್‌ಗಳು