ಬಿ.ಡಿ. ಜತ್ತಿ
ಬಸಪ್ಪ ದಾನಪ್ಪ ಜತ್ತಿ
ಬಸಪ್ಪ ದಾನಪ್ಪ ಜತ್ತಿ ಭಾರತದ ಉಪಾಧ್ಯಕ್ಷರಾಗಿ, ಹಲವು ರಾಜ್ಯಗಳ ರಾಜ್ಯಪಾಲರಾಗಿ ಮತ್ತು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದವರು.
ಬಸಪ್ಪ ದಾನಪ್ಪ ಜತ್ತಿ ಅವರು 1912ರ ಸೆಪ್ಟೆಂಬರ್ 10ರಂದು, ಬಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಜನಿಸಿದರು. ತಂದೆ ದಾನಪ್ಪ ಜತ್ತಿ. ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸದ ಅನಂತರ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗಮಾಡಿ ಆರ್ಟ್ಸ್ ಪದವಿಯನ್ನು ಗಳಿಸಿದರು.
ಬಸಪ್ಪನವರು 10 ವರ್ಷದ ಬಾಲಕನಾಗಿದ್ದಾಗಲೇ 5 ವರ್ಷದ ಬಾಲಕ ಸಂಗವ್ವಳೊಂದಿಗೆ ವಿವಾಹವಾಯಿತು. ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು.ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು.
ಜತ್ತಿ ಅವರು ಮುಂದೆ ಸೈಕ್ಸ್ ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿಯನ್ನು ಗಳಿಸಿ ಅಂದಿನ ಜಮಖಂಡಿ ಸಂಸ್ಥಾನದಲ್ಲಿ ವಕೀಲರಾಗಿ ಜೀವನ ಆರಂಭಿಸಿದರು (1940-45). ಮುಂದೆ ಬೇಗನೆ ಸಾರ್ವಜನಿಕ ಕ್ಷೇತ್ರ ಪ್ರವೇಶಮಾಡಿದರು. ಜಮಖಂಡಿಯ ಪೌರಸಭೆಯ ಸದಸ್ಯರಾಗಿ ಎರಡುಬಾರಿ ಆಯ್ಕೆಯಾದರಲ್ಲದೆ ಅದರ ಅಧ್ಯಕ್ಷರಾಗಿಯೂ ಇದ್ದರು (1940-45). ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಮಾಡಲು ಶ್ರಮಿಸಿದರು. ವಿಲೀನಗೊಂಡ ಪ್ರದೇಶಗಳ ಪ್ರನಿನಿಧಿಯಾಗಿ ಜತ್ತಿಯವರು ಮುಂಬಯಿ ವಿಧಾನಸಭೆಗೆ ನಾಮಕರಣ ಹೊಂದಿದರು ಮತ್ತು ಅಲ್ಲಿಯ ಮುಖ್ಯಮಂತ್ರಿ ಬಿ.ಜಿ ಖೇರರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು (1948). 1952ರ ಚುನಾವಣೆಯಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾಗಿ ಆ ರಾಜ್ಯದ ಆರೋಗ್ಯ ಮತ್ತು ಕಾರ್ಮಿಕ ಉಪಮಂತ್ರಿಯಾದರು.
1956ರಲ್ಲಿ ರಾಜ್ಯ ಪುನರ್ರಚನೆಯಾದ ಜತ್ತಿಯವರು ನೂತನ ಮೈಸೂರು ರಾಜ್ಯದ (ಈಗ ಕರ್ನಾಟಕ) ಭೂಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ರಾಜ್ಯದ ಭೂಸುಧಾರಣಾ ಕಾಯಿದೆಗಳಿಗೆ ಜತ್ತಿ ಸಮಿತಿಯ ವರದಿ ತಳಹದಿಯಾಯಿತು. 1957 ಮತ್ತು 1967ರ ಚುನಾವಣೆಗಳಲ್ಲಿ ಅವರು ರಾಜ್ಯವಿಧಾನಸಭೆಗೆ ಆಯ್ಕೆಯಾದರು.
1958ರ ಜತ್ತಿಯವರು ಮೈಸೂರಿನ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ರಾಜ್ಯದ ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾದರು. 1962ರ ಚುನಾವಣೆಗಳ ಅನಂತರ ರಚಿತವಾದ ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಜತ್ತಿಯವರು ಹಣಕಾಸಿನ ಮಂತ್ರಿಯಾದರು. 1965ರ ವರೆಗೆ ಆ ಹುದ್ದೆಯಲ್ಲಿದ್ದರು. ಅನಂತರ 1968ರ ವರೆಗೆ ಅವರು ಆಹಾರ ಮಂತ್ರಿಯಾಗಿದ್ದರು. 1968ರಲ್ಲಿ ಅವರು ಪುದುಚೇರಿಯ ಉಪರಾಜ್ಯಪಾಲರಾಗಿ ನೇಮಕವಾದ್ದು. 1973ರಲ್ಲಿ ಅವರು ಒರಿಸ್ಸದ ರಾಜ್ಯಪಾಲರಾದರು. 1973-74ರಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಾಗ ಜತ್ತಿಯವರು ಅದರ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಜತ್ತಿ ಅವರು 1974ರಲ್ಲಿ ಭಾರತದ ಉಪರಾಷ್ಟ್ರಪತಿಗಳಾಗಿ 1979ರ ವರೆಗೆ ಸೇವೆ ಸಲ್ಲಿಸಿದರು. 1977ರ ಫೆಬ್ರವರಿ 11ರಿಂದ 1977ರ ಜುಲೈ 25 ವರೆಗೂ ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು.
ಜತ್ತಿ ಅವರು ಸಣ್ಣ ವಯಸ್ಸಿನಿಂದಲೂ ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡಿದ್ದವರು. ಬಸವೇಶ್ವರರ ಉಪದೇಶ ಮತ್ತು ವಿಚಾರಗಳ ಪ್ರಚಾರದ ಉದ್ದೇಶದಿಂದ ರಚಿತವಾಗಿರುವ ಬಸವ ಸಮಿತಿಗೆ ಜತ್ತಿಯವರು ಪ್ರಾರಂಭದಿಂದಲೂ ಅಧ್ಯಕ್ಷರಾಗಿದ್ದರು.
'ನನಗೆ ನಾನೇ ಮಾದರಿ' ಎಂಬುದು ಬಿ.ಡಿ.ಜತ್ತಿಯವರ ಆತ್ಮಕತೆ.
ಬಿ. ಡಿ. ಜತ್ತಿ ಅವರು 2002ರ ಜೂನ್ 7ರಂದು ನಿಧನರಾದರು.
On the birth anniversary of Basappa Danappa Jatti
ಕಾಮೆಂಟ್‌ಗಳು