ಸಿ.ಆರ್.ರಾವ್
ಸಿ.ಆರ್.ರಾವ್
ಕನ್ನಡದ ಮಣ್ಣಿನವರಾದ 102 ವರ್ಷ ಜೀವಿಸಿದ್ದ ಕಲ್ಯಂಪುಡಿ ರಾಧಾಕೃಷ್ಣ ರಾವ್ ಅವರು ವಿಶ್ವದ ಮಹಾನ್ ಗಣಿತಜ್ಞರಾಗಿ ಮತ್ತು ಸಂಖ್ಯಾಶಾಸ್ತ್ರಜ್ಞರಾಗಿ ಪ್ರಸಿದ್ಧರು.
ಸಿ.ಆರ್.ರಾವ್ ರವರು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ 1920ರ ಸೆಪ್ಟೆಂಬರ್ 10ರಂದು ಜನಿಸಿದರು. ಅವರ ಬಹುತೇಕ ಶಾಲಾ ವಿದ್ಯಾಭ್ಯಾಸ ತೆಲುಗಿನ ಪ್ರದೇಶಗಳಲ್ಲಿ ನಡೆದವು.
ಸಿ.ಆರ್.ರಾವ್ ಭಾರತೀಯ ಮತ್ತು ಅಮೇರಿಕನ್ ಗಣಿತಜ್ಞರು ಮತ್ತು ಸಂಖ್ಯಾಶಾಸ್ತ್ರಜ್ಞರು. ಅವರು ಜೀವಿತದ ಕೊನೆಯವರೆಗೂ ಪೆನ್ಸಿಲ್ವೇನಿಯಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಮತ್ತು ಬಫಲೋ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕರಾಗಿದ್ದರು. ರಾವ್ ಅವರನ್ನು ಹಲವು ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಾಧನಾ ಗೌರವಗಳು ಮತ್ತು ಪದವಿಗಳು ಅಲಂಕರಿಸಿದ್ದವು. 2002ರಲ್ಲಿ ಯುಎಸ್ ನ್ಯಾಷನಲ್ ಮೆಡಲ್ ಆಫ್ ಸೈನ್ಸ್ ಪ್ರಶಸ್ತಿ ಅವರಿಗೆ ಸಂದಿತ್ತು. ಅಮೆರಿಕನ್ ಸ್ಟಾಟಿಸ್ಟಿಕಲ್ ಸಂಸ್ಥೆಯು ಅವರನ್ನು ಲಿವಿಂಗ್ ಲೆಜೆಂಡ್ ಎಂದು ಗೌರವಿಸುತ್ತ, "ರಾವ್ ಅವರ ಕಾರ್ಯಗಳು ಮೂಡಿಸಿದ ಲಾಭಗಳು ಸ್ಟಾಟಿಸ್ಟಿಕ್ಸ್ ಕ್ಷೇತ್ರಕ್ಕೆ ಮಾತ್ರಾ ಸೀಮಿತವಾಗಿಲ್ಲದೆ; ಎಕನಾಮಿಕ್ಸ್, ಜೆನೆಟಿಕ್ಸ್, ಆಂಥ್ರೋಪಾಲಜಿ, ಜಿಯಾಲಜಿ, ನ್ಯಾಷನಲ್ ಪ್ಲಾನಿಂಗ್, ಡೆಮೊಗ್ರಫಿ, ಬಯೊಮೆಟ್ರಿ ಮತ್ತು ಮೆಡಿಸಿನ್ ಕ್ಷೇತ್ರಗಳಿಗೂ ಅಪಾರವಾಗಿ ಸಹಾಯ ತಂದಿವೆ" ಎಂದು ಶ್ಲಾಘಿಸಿತು. ದಿ ಟೈಮ್ಸ್ ಆಫ್ ಇಂಡಿಯಾ ಸಮೀಕ್ಷೆ ರಾವ್ ಅವರನ್ನು ಭಾರತದ ಹತ್ತು ಶ್ರೇಷ್ಠ ವಿಜ್ಞಾನ ಕ್ಷೇತ್ರದ ಸಾಧಕರಲ್ಲಿ ಒಬ್ಬರೆಂದು ಹೆಸರಿಸಿತ್ತು. ರಾವ್ ಅವರು ಇಂಡಿಯನ್ ಹಾರ್ಟ್ ಅಸೋಸಿಯೇಷನ್ನಿನ ಯೋಜನೆ ಮತ್ತು ಅಂಕಿಅಂಶಗಳ ಪ್ರಧಾನ ಸಲಹೆಗಾರರೂ ಆಗಿದ್ದರು.
ರಾವ್ ಅವರು 1943ರಲ್ಲಿ ಆಂಧ್ರ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 1948ರಲ್ಲಿ ಆರ್.ಎ.ಫಿಶರ್ ಅವರ ಮಾರ್ಗದರ್ಶನದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್.ಡಿ ಪಡೆದರು. 1965ರಲ್ಲಿ ಕೇಂಬ್ರಿಡ್ಜ್ ನಿಂದ ಇವರು ಎಸ್‌ಸಿ.ಡಿ ಪದವಿ ಪಡೆದರು.
ರಾವ್ ಅವರು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತು ಕೇಂಬ್ರಿಡ್ಜ್ ಆಂಥ್ರೋಪಾಲಜಿಕಲ್ ಮ್ಯೂಸಿಯಂನಲ್ಲಿ ಕೆಲಸ ಮಾಡಿದರು. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾಗಿ, ಜವಹರಲಾಲ್ ನೆಹರೂ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಅಂಕಿಅಂಶಗಳ ಅಧ್ಯಕ್ಷರಾಗಿ, ಪೆನ್ಸಿಲ್ವೇನಿಯಾ ಸ್ಟೇಟ್ ಯುನಿವರ್ಸಿಟಿಯ ಮಲ್ಟಿವೇರಿಯೇಟ್ ಅನಾಲಿಸಿಸ್ ಕೇಂದ್ರದ ನಿರ್ದೇಶಕರಾಗಿ ಹೀಗೆ ಇವರು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಸಿ.ಆರ್.ರಾವ್ ಅವರು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಮುಖ್ಯಸ್ಥರಾಗಿ ಹಾಗೂ ಸಂಶೋಧನೆ ಮತ್ತು ತರಬೇತಿ ಯೋಜನೆಗಳ ನಿರ್ದೇಶಕರಾಗಿ 40ಕ್ಕೂ ಹೆಚ್ಚು ವರ್ಷಗಳ ಅನುಪಮ ಸೇವೆ ಸಲ್ಲಿಸಿ ಗಣಿತ ಶಾಸ್ತ್ರದಲ್ಲಿನ ಅನೇಕ ಮೇಧಾವಿಗಳ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ರಾವ್ ಅವರ ಶಿಫಾರಿಸ್ಸಿನ ಮೇಲೆ ಟೋಕಿಯೋದಲ್ಲಿ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಫಾರ್ ಏಷಿಯಾ ಅಂಡ್ ಫೆಸಿಫಿಕ್ ಎಂಬ ಸಂಖ್ಯಾಶಾಸ್ತ್ರಜ್ಞರಿಗೆ ತರಬೇತಿ ನೀಡುವ ಸಂಸ್ಥೆ ಸ್ಥಾಪನೆಗೊಂಡಿತು.
ಸಿ.ಆರ್.ರಾವ್ ಅವರಿಗೆ ಸರ್ದಾರ್ ಪಟೇಲ್ ಅವಾರ್ಡ್, ರಾಯಲ್ ಸ್ಟ್ಯಾಟಿಸ್ಟಿಕಲ್ ಸೊಸೈಟಿ ಗೌರವ, ಇಂಡಿಯಾ ಸೈನ್ಸ್ ಅವಾರ್ಡ್, ಮಹಲನೋಬಿಸ್ ಪ್ರೈಸ್, ಶ್ರೀನಿವಾಸ ರಾಮಾನುಜನ್ ಅವಾರ್ಡ್, ಪದ್ಮಭೂಷಣ, ಪದ್ಮವಿಭೂಷಣ, ವಿಲ್ಕ್ಸ್ ಮೆಮೊರಿಯಲ್ ಅವಾರ್ಡ್ ಆಫ್ ದ ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್, ಎಸ್.ಎಸ್.ಭಟ್ನಾಗರ್ ಅವಾರ್ಡ್, ಜೆ.ಸಿ.ಬೋಸ್ ಅವಾರ್ಡ್, ಮ್ಯಾಥ್ ನೊಬೆಲ್ ಎಂಬ ನೊಬೆಲ್ ಪ್ರಶಸ್ತಿಗೆ ಸಮಾನಂತರವಾದ ಗೌರವ, ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಗೌರವಗಳು ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
102 ವರ್ಷಗಳ ಸಾಧನಾ ಜೀವನವನ್ನು ಕ್ರಮಿಸಿದ್ದ ಸಿ.ಆರ್.ರಾವ್ 2023ರ ಆಗಸ್ಟ್ 22ರಂದು ಈ ಲೋಕವನ್ನಗಲಿದರು.
Prof. C.R. Rao Sir 🌷🙏🌷
ಕಾಮೆಂಟ್‌ಗಳು