ಕಮಲಾ ರಾಮಕೃಷ್ಣ
ಕಮಲಾ ರಾಮಕೃಷ್ಣ
ವಿದುಷಿ ಕಮಲಾ ರಾಮಕೃಷ್ಣ ಅವರು ಹೆಸರಾಂತ ಗಮಕಿಯಾಗಿ "ಕುಮಾರ ವ್ಯಾಸ ಪ್ರಶಸ್ತಿ" ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ.
ಕಮಲಾ ಅವರು 1939ರ ಏಪ್ರಿಲ್ 17ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಹೆಚ್.ಡಿ. ಶೇಷಗಿರಿರಾಯರು. ತಾಯಿ ರಾಧಾಬಾಯಿ
ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗಮಕ ಪ್ರವೇಶ - ಗಮಕ ಪ್ರೌಢ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಸಾಧನೆ ಮಾಡಿದರು. ಗಮಕಿ ಕೃಷ್ಣಗಿರಿ ಕೃಷ್ಣರಾಯರಲ್ಲಿ ಗಮಕ ಶಿಕ್ಷಣ ಪಡೆದರು. ನಾಡಿನ ಹೆಸರಾಂತ ಗಮಕಿ ಕನಕ ಪುರಂದರ ಪ್ರಶಸ್ತಿ ಪುರಸ್ಕೃತರಾದ ಎಂ. ರಾಘವೇಂದ್ರರಾಯರ ಪರಿಚಯವಾಗಿ, ಅವರ ಪುತ್ರ ಗಮಕಿ ಎಂ.ಆರ್. ರಾಮಕೃಷ್ಣ ಅವರೊಂದಿಗೆ ವಿವಾಹವಾಯಿತು.
ಕಮಲಾ ರಾಮಕೃಷ್ಣ ಅವರು ರಾಘವೇಂದ್ರರಾಯರ ಪ್ರೋತ್ಸಾಹದಿಂದ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪ್ರವೇಶ - ಗಮಕ ಪ್ರೌಢ ಪರೀಕ್ಷೆಗಳಿಗೆ ಅಧ್ಯಾಪಕಿಯಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಗಮಕ ಪರೀಕ್ಷೆಗಳಿಗೆ ಪರೀಕ್ಷಕರಾಗಿ, ಗಮಕ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕೈಂಕರ್ಯ ಮಾಡಿದ್ದರು.
ಕಮಲಾ ರಾಮಕೃಷ್ಣ ಅವರು ಸಂಗೀತ ಶಿಕ್ಷಕಿಯಾಗಿ ದೇವರನಾಮ ಹಾಗೂ ಹನುಮದ್ವಿಲಾಸವನ್ನು ಆಸಕ್ತರಿಗೆ ಕಲಿಸಿದ್ದರು. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಇವರ ಗಮಕ ವಾಚನ ಪ್ರಸಾರವಾಗುತ್ತಿತ್ತು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಮೂಲಕ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಗಮಕ ಪ್ರಚಾರ ಮಾಡಿದರು. ಭಾರತ ಸ್ವಾತಂತ್ರ್ಯ ಸುವರ್ಣ ಮಹೋತ್ಸವ, ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ, ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್ತು, ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸಿದ ಸಂಗೀತ - ಗಮಕ ಸಮ್ಮೇಳನದಲ್ಲಿ ಗಮಕ ವಾಚನ ಮಾಡಿದ್ದರು. ಸುಗಮ ಸಂಗೀತ ಪರಿಷತ್ತು ನಡೆಸಿದ ಗೀತೋತ್ಸವದಲ್ಲಿ ಗಮಕ ವಾಚನ ಮಾಡಿದ್ದರು.
ಕಮಲಾ ರಾಮಕೃಷ್ಣ ಅವರಿಗೆ 1959ರಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ‘ಜೈಮಿನಿ ಭಾರತ’ ಕಾವ್ಯ ಪೂರ್ತಿಯಾಗಿ ವಾಚನ ಮಾಡಿದ ಸಂದರ್ಭದಲ್ಲಿ ‘ಗಮಕ ಕಲಾ ಪ್ರವೀಣೆ’ ಎಂಬ ಬಿರುದು ಸಂದಿತ್ತು. 2005-06ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ಸಂದಿತ್ತು. ಸುನಾದ ಚೈತನ್ಯಯೋಗ ಕಲಾಧಾಮದಿಂದ “ಗಮಕ ಸಾಧಕಿ” ಪ್ರಶಸ್ತಿ ಸಂದಿತ್ತು. ಇವೆಲ್ಲದಕ್ಕೂ ಮಿಗಿಲಾಗಿ, ಇವರ ಗಮಕ ಕಲಾ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು 2014ನೇ ಸಾಲಿನ “ಕುಮಾರವ್ಯಾಸ ಪ್ರಶಸ್ತಿ”ಯನ್ನು ನೀಡಿ ಗೌರವಿಸಿತ್ತು.
ಕಮಲಾ ರಾಮಕೃಷ್ಣ ಅವರು 2024 ವರ್ಷದ ಸೆಪ್ಟೆಂಬರ್ 10ರಂದು ಈ ಲೋಕವನ್ನಗಲಿದರು.
🌷🙏🌷
ಮಾಹಿತಿ ಕೃಪೆ: Sathyanarayana M R🌷🙏🌷
Gamaki Vidushi Kamala Ramakrishna
ಕಾಮೆಂಟ್‌ಗಳು