ಬಿಭೂತಿಭೂಷಣ
ಬಿಭೂತಿಭೂಷಣ ಬಂಡೋಪಾಧ್ಯಾಯ
ಬಿಭೂತಿಭೂಷಣ ಬಂಡೋಪಾಧ್ಯಾಯ ಶ್ರೇಷ್ಠ ಬಂಗಾಳಿ ಬರಹಗಾರರು. ಅವರ ಪಥೇರ್ ಪಾಂಚಾಲಿ (ದಿ ಸಾಂಗ್ ಆಫ್ ದಿ ರೋಡ್), ಅಪರಾಜಿತೋ, ಚಂದರ್ ಪಹಾರ್ ಮತ್ತು ಅರಣ್ಯಕ್ ಭಾರತೀಯ ಸಾಹಿತ್ಯದ ಅತ್ಯುತ್ತಮ ಕೃತಿಗಳೆಂದು ಖ್ಯಾತವಾಗಿದೆ. ಜೊತೆಗೆ ಸತ್ಯಜಿತ್ ರೇ ಅವರ ಚಲನಚಿತ್ರಗಳಾಗಿಯೂ ವಿಶ್ವಪ್ರಸಿದ್ಧಿ ಪಡೆದಿವೆ.
ಬಂಡೋಪಾಧ್ಯಾಯ ಅವರು ತಮ್ಮ ಅವರ ತಾಯಿಯ ತವರಾದ ಬಂಗಾಳದ ನಾಡಿಯಾದ ಕಲ್ಯಾಣಿ ಬಳಿಯ ಮುರತಿಪುರ ಗ್ರಾಮದಲ್ಲಿ 1894ರ ಸೆಪ್ಟೆಂಬರ್ 12ರಂದು ಜನಿಸಿದರು. ಅವರ ತಂದೆ ಮಹಾನಂದ ಬಂಡೋಪಾಧ್ಯಾಯ ಅವರು ಸಂಸ್ಕೃತ ವಿದ್ವಾಂಸರು ಮತ್ತು ವೃತ್ತಿಯಲ್ಲಿ ಕಥೆ ಹೇಳುವವರಾಗಿದ್ದರು. ತಾಯಿ ಮೃಣಾಲಿನಿ. ಅವರ ಬಾಲ್ಯದ ಮನೆ ಪಶ್ಚಿಮ ಬಂಗಾಳದ ಬ್ಯಾರಕ್‌ಪುರದಲ್ಲಿತ್ತು.
ಬಂಡೋಪಾಧ್ಯಾಯ ಅವರು ಬ್ರಿಟಿಷ್ ಭಾರತದಲ್ಲಿನ ಅತ್ಯಂತ ಹಳೆಯ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಬೊಂಗಾವ್ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು. ಮುಂದೆ ಕೋಲ್ಕತ್ತಾದ ಸುರೇಂದ್ರನಾಥ್ ಕಾಲೇಜಿನಲ್ಲಿ (ಆಗ ರಿಪಾನ್ ಕಾಲೇಜು) ಅರ್ಥಶಾಸ್ತ್ರ, ಇತಿಹಾಸ ಮತ್ತು ಸಂಸ್ಕೃತದಲ್ಲಿ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿ ಮತ್ತು ಕಾನೂನು ತರಗತಿಗಳಿಗೆ ಪ್ರವೇಶ ಪಡೆದರು, ಆದರೆ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ದಾಖಲಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಹೂಗ್ಲಿಯ ಜಂಗಿಪಾರಾದಲ್ಲಿನ ಶಾಲೆಯಲ್ಲಿ ಶಿಕ್ಷಕರಾದರು.
ಬಂಡೋಪಾಧ್ಯಾಯ ಅವರು ಬರಹಗಾರರಾಗುವ ಮೊದಲು ಬದುಕಿನ ನಿರ್ವಹಣೆಗಾಗಿ ವಿವಿಧ ಉದ್ಯೋಗಗಳಲ್ಲಿ ಕೆಲಸ ಮಾಡಿದರು. ಶಿಕ್ಷಕರಾಗಿ, ಗೋರಕ್ಷಿಣಿ ಸಭಾದ ಪ್ರವಾಸಿ ಪ್ರಚಾರಕರಾಗಿ, ನಂತರ ಖೇಲತ್ಚಂದ್ರ ಘೋಷ್ ಅವರ ಕಾರ್ಯದರ್ಶಿಯಾಗಿ ಎಸ್ಟೇಟ್ ನಿರ್ವಹಣೆ ಮುಂತಾದ ಕೆಲಸ ಮಾಡಿದರು. ಅಂತಿಮವಾಗಿ, ಬಂಡೋಪಾಧ್ಯಾಯ ಅವರು ತಮ್ಮ ಸ್ವಂತ ಸ್ಥಳಕ್ಕೆ ಮರಳಿದರು. ಅಲ್ಲಿ ಗೋಪಾಲನಗರ ಹರಿಪಾದ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಜೊತೆಗೆ ತಮ್ಮ ಮರಣದವರೆಗೂ ಬರಹವನನ್ನು
ಮುಂದುವರೆಸಿದರು. ಅವರು ಜಾರ್ಖಂಡ್‌ನ ಘಾಟ್‌ಶಿಲಾ ಎಂಬ ಪಟ್ಟಣದಲ್ಲಿ ತಂಗಿದ್ದಾಗ ಪಥೇರ್ ಪಾಂಚಾಲಿಯನ್ನು ಬರೆದು ಪ್ರಕಟಿಸಿದರು.
ಬಂಡೋಪಾಧ್ಯಾಯ ಅವರ ಕೃತಿಗಳು ಹೆಚ್ಚಾಗಿ ಗ್ರಾಮೀಣ ಬಂಗಾಳದಲ್ಲಿದ್ದ ಆ ಪ್ರದೇಶದ ಪಾತ್ರಗಳೊಂದಿಗೆ ನೆಲೆಗೊಂಡಿವೆ. ಪಥೇರ್ ಪಾಂಚಾಲಿ, ಆದರ್ಶ ಹಿಂದೂ ಹೋಟೆಲ್, ಇಚಮತಿ ಮತ್ತು ಬಿಪಿನರ್ ಸಂಸಾರ್ ಸೇರಿದಂತೆ ಅವರ ಹಲವಾರು ಕಾದಂಬರಿಗಳು ಬೊಂಗಾವ್‌ನಲ್ಲಿ ನಡೆದಿದ್ದು, ಅವರ ಅರಣ್ಯಕ್ ಭಾಗಲ್ಪುರದ ಕಾಡಿನ ಹಿನ್ನೆಲೆ ಹೊಂದಿದೆ.
1921 ರಲ್ಲಿ, ಬಂಡೋಪಾಧ್ಯಾಯರ ಮೊದಲ ಪ್ರಕಟಿತ ಸಣ್ಣ ಕಥೆ, "ಉಪೇಕ್ಷಿತ" ಬಂಗಾಳದ ಪ್ರಮುಖ ಸಾಹಿತ್ಯ ಪತ್ರಿಕೆಗಳಲ್ಲಿ ಒಂದಾದ ಪ್ರಬಾಸಿಯಲ್ಲಿ ಕಾಣಿಸಿಕೊಂಡಿತು. ಆದಾಗ್ಯೂ, 1928 ರವರೆಗೂ ಅವರು ಯಾವುದೇ ವಿಮರ್ಶಾತ್ಮಕ ಗಮನವನ್ನು ಪಡೆಯಲಿಲ್ಲ. ಅವರ ಮೊದಲ ಕಾದಂಬರಿ ಪಥೇರ್ ಪಾಂಚಾಲಿ (ಇಂಗ್ಲಿಷ್‌ನಲ್ಲಿ ಸಾಂಗ್ ಆಫ್ ದಿ ಲಿಟಲ್ ರೋಡ್) ಆರಂಭದಲ್ಲಿ ಧಾರಾವಾಹಿಯಾಗಿ, ನಂತರ 1929ರಲ್ಲಿ ಪುಸ್ತಕವಾಗಿ ಪ್ರಕಟವಾಯಿತು. ಪಥೇರ್ ಪಾಂಚಾಲಿ ಬಂಡೋಪಾಧ್ಯಾಯರನ್ನು ಬಂಗಾಳಿ ಸಾಹಿತ್ಯದಲ್ಲಿ ಪ್ರಾಮುಖ್ಯತೆಗೆ ತಂದಿತು. ಅದರ ಮುಂದುವರಿದ ಭಾಗವಾದ ಅಪರಾಜಿತೊ ಸಹಾ ಹಲವಾರು ಭಾಷೆಗಳಿಗೆ ಅನುವಾದಗೊಂಡಿತು. ಹೆಚ್ಚುವರಿಯಾಗಿ, ಈ ಎರಡನ್ನೂ ಸತ್ಯಜಿತ್ ರೇ ಅವರು ಚಲನಚಿತ್ರಗಳಾಗಿ ಮಾಡಿದರು ಮತ್ತು ಅಪುರ್ ಸನ್ಸಾರ್ ಜೊತೆಗೂಡಿ ಅತ್ಯಂತ ಯಶಸ್ವಿ ಅಪು ಟ್ರೈಲಾಜಿಯನ್ನು ಸೃಜಿಸಿದರು.
ಬಂಡೋಪಾಧ್ಯಾಯರ ಕೃತಿಗಳ ಬಗ್ಗೆ ಹೇಳುತ್ತಿದ್ದ ರೇ, "ಅವರ ಸಾಲುಗಳು ಪಾತ್ರಗಳಿಗೆ ಎಷ್ಟು ಚೆನ್ನಾಗಿ ಹೊಂದಿಕೆಯಾಗುತ್ತವೆ, ಎಷ್ಟು ಅಭಿವ್ಯಕ್ತಿ ಹೊಂದಿವೆ ಎಂದರೆ ಲೇಖಕರು ಯಾವುದೇ ಭೌತಿಕ ವಿವರಣೆಯನ್ನು ನೀಡದಿದ್ದರೂ ಸಹ, ಪ್ರತಿ ಪಾತ್ರವು ನಮ್ಮ ಮುಂದೆ ಸರಳವಾಗಿ ಕಾಣಿಸಿಕೊಳ್ಳುತ್ತದೆ. ಅದು ಮಾತನಾಡುವ ಪದಗಳು" ಎಂದಿದ್ದಾರೆ. ಅವರ ಸೃಷ್ಟಿಯಾದ "ತಾರಾನಾಥ್ ತಂತ್ರಿಕ್" ಬಂಗಾಳಿ ಓದುಗರಲ್ಲಿ ಜನಪ್ರಿಯವಾಗಿತ್ತು. ಇದರ ಸರಣಿಯನ್ನು ಅವರ ಮಗ ತಾರಾದಾಸ್ ವಿಸ್ತರಿಸಿದ್ದಾರೆ.
ಬಂಡೋಪಾಧ್ಯಾಯ ಅವರು 1950ರ ನವೆಂಬರ್ 1ರಂದು ನಿಧನರಾದರು.
On the birth anniversary of great writer Bibhuthi Bhushan Bandopadhyay. ಬಿಭೂತಿ ಭೂಷಣ
ಕಾಮೆಂಟ್‌ಗಳು