ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ವಿ. ಎಸ್. ಲಕ್ಷ್ಮಣ್


 ವಿ. ವಿ. ಎಸ್. ಲಕ್ಷ್ಮಣ್


ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಪಟುಗಳ ಸಾಲಿನಲ್ಲಿ ವಿ. ವಿ. ಎಸ್. ಲಕ್ಷ್ಮಣ್ ಒಬ್ಬರು. ಸಚಿನ್, ರಾಹುಲ್ ದ್ರಾವಿಡ್, ಲಕ್ಷ್ಮಣ್, ಗಂಗೂಲಿ ನಾಲ್ವರು ‘ಫೇಮಸ್ ಫೋರ್’ ಎಂದು ವಿಶ್ವಪ್ರಸಿದ್ಧರು.  

ವೆಂಗಿಪುರಪು ಸಾಯಿ ಲಕ್ಷ್ಮಣ್ 1974ರ  ನವೆಂಬರ್ 1ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು   ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರ ಕುಟುಂಬದಿಂದ ಬಂದವರು. 

ವಿ ವಿ ಎಸ್ ಲಕ್ಷ್ಮಣ್ ಭಾರತದ ಟೆಸ್ಟ್ ಕ್ರಿಕೆಟ್ಟಿನಲ್ಲಿ ಭಾರತದ ಮಹತ್ವದ ಆಟಗಾರರು.  ರಾಹುಲ್ ದ್ರಾವಿಡ್ ಮತ್ತು ವಿ ವಿ ಎಸ್ ಲಕ್ಷ್ಮಣ್ ಅಂದರೆ ಅದೆಂತದ್ದೋ ಭರವಸೆ.  ನಿಜ ತೆಂಡುಲ್ಕರ್ ಅಂತಹ ನೂರು ಶತಕಗಳನ್ನು ಬಾರಿಸಿರುವ ಒಬ್ಬ ಮಹತ್ವದ ಕ್ರಿಕೆಟ್ಟಿಗ, ಸೆಹವಾಗ್, ಯುವರಾಜ್ ಮುಂತಾದ  ಮನರಂಜನಾತ್ಮಕ ಕ್ರಿಕೆಟ್ಟಿಗ ಇದ್ದಾಗ ಉಳಿದ ಆಟಗಾರರು  ಅಷ್ಟೊಂದು ಪ್ರಸಿದ್ಧರಾಗಿ ಕಂಡದ್ದು ಸ್ವಲ್ಪ ಕಷ್ಟವೇ.  ಆದರೆ, ಆಸ್ಟ್ರೇಲಿಯ ತಂಡದ ಹಿಂದಿನ ಒಂದು ದಶಕಕ್ಕೂ ಹೆಚ್ಚಿನ ಸ್ವಾಮ್ಯದ ಹಿರಿತನದ ಎದುರು ಭಾರತವನ್ನು ಆ ತಂಡದ ಎದುರು ಸಮರ್ಥ ಪೈಫೋಟಿಯಾಗಿಸಿದ್ದು ವಿ ವಿ ಎಸ್ ಲಕ್ಷ್ಮಣ್ ಮತ್ತು ದ್ರಾವಿಡ್ ಜೋಡಿಯ ಅತ್ಯಂತ ಸುಭದ್ರವಾದ ಶಿಸ್ತು ಮತ್ತು ಶ್ರದ್ಧಾಪೂರ್ಣ ಕೊಡುಗೆಗಳು.  ಹೀಗಾಗಿ ವಿ ವಿ ಎಸ್ ಲಕ್ಷ್ಮಣರನ್ನು ಕಂಡರೆ ಇಡೀ ಕ್ರಿಕೆಟ್ ಲೋಕಕ್ಕೇ  ಅಪಾರವಾದ ಗೌರವ.  ಲಕ್ಷ್ಮಣರು ಗಳಿಸಿರುವ 17 ಟೆಸ್ಟ್ ಶತಕಗಳಲ್ಲಿ 6 ಶತಕಗಳು ಮತ್ತು ಒಂದು ದಿನದ ಪಂದ್ಯಗಳ  6 ಶತಕಗಳಲ್ಲಿ 4 ಶತಕಗಳು ಅಂದಿನ ಅತ್ಯಂತ ಸಮರ್ಥವಾದ ಆಸ್ಟ್ರೇಲಿಯಾ ತಂಡದ ಎದುರೇ ಬಂದಿತು ಎಂಬುದು ಅತ್ಯಂತ ಗಮನಾರ್ಹವಾದದ್ದು.  

1996ರ ವರ್ಷದಿಂದ ತಾವು ನಿವೃತ್ತವಾಗುವವರೆಗೆ  134 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಲಕ್ಷ್ಮಣ್ ಅವರು ಒಟ್ಟು 8,781 ರನ್ ಗಳಿಸಿದ್ದಾರೆ.  ಒಂದು ರೀತಿಯಲ್ಲಿ ಅವರು ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದಿರುವುದು ಕೂಡಾ ಅವರ ಟೆಸ್ಟ್ ಪಂದ್ಯಗಳಲ್ಲಿನ ಉತ್ತಮ ಆಟವನ್ನು ಕಾಯ್ದುಕೊಳ್ಳಲು ಸಹಾಯಕವಾಗಿರಬಹುದು.  ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯವೊಂದರಲ್ಲಿ 281ರನ್ ಗಳಿಕೆ ಅವರ ಹಿರಿಯ ಸಾಧನೆಯಾಗಿದೆ.  ಬ್ಯಾಟಿಂಗ್ನಲ್ಲಿ ಅಂಗೈನ ಕುಶಲತೆಯಿಂದ ಅವರು ಆಡುತ್ತಿದ್ದ ರೀತಿ ಮೋಹಕತೆಯಿಂದ ಕೂಡಿದ್ದು ಅವರನ್ನು ಎಲ್ಲೆಡೆ ಸರ್ವಮಾನ್ಯರೆನಿಸುವಂತೆ ಮಾಡಿದೆ.

ಸುಮಾರು ಹದಿನಾರು  ವರ್ಷ ಸುದೀರ್ಘ ಕಾಲ  ತಮ್ಮ ಸಾಮರ್ಥ್ಯವನ್ನು ಕಾಯ್ದುಕೊಂಡು ಭಾರತದ ಕ್ರಿಕೆಟ್  ರಂಗಕ್ಕೆ ಮಹತ್ವದ ಕೊಡುಗೆ ನೀಡಿದ ವಿ ವಿ ಎಸ್ ಲಕ್ಷ್ಮಣ್ ಅವರು ಮುಂದಿನ ತಲೆಮಾರಿನ ಬಹುತೇಕ ಆಟಗಾರರಿಗೆ ಮಾದರಿಯಾಗಿದ್ದಾರೆ.  ಈ ಮಹಾನ್ ಆಟಗಾರ  ವಿ ವಿ ಎಸ್ ಲಕ್ಷ್ಮಣರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

On the birth day of great cricketer VVS Laxman

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ