ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾರದಾ ಪ್ರಸಾದ್



 ಎಚ್. ವೈ.  ಶಾರದಾ ಪ್ರಸಾದ್


ಕನ್ನಡಿಗರಾದ ಎಚ್. ವೈ.  ಶಾರದಾ ಪ್ರಸಾದ್ ಅವರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಹುಕಾಲ ಮಾಧ್ಯಮ ಸಲಹೆಗಾರರಾಗಿದ್ದ ಸಮರ್ಥರು. ಉತ್ತಮ ಭಾಷಣಗಾರ್ತಿ ಎಂದು ಹೆಸರಾಗಿದ್ದ ಇಂದಿರಾ ಗಾಂಧೀ ಅವರ ಬಹುತೇಕ ಭಾಷಣಗಳನ್ನು ಬರೆದವರೂ ಶಾರದಾ ಪ್ರಸಾದ್.  ಸರ್ಕಾರಿ ಸೇವೆಯಲ್ಲಿ ಶ್ರೇಷ್ಠ ಮೌಲ್ಯಗಳಿಗೆ ಮಾದರಿ ಎಂದು ಎಲ್ಲೆಡೆ ವಂದ್ಯರಾದ ಇವರು ಕೆಲಕಾಲ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧೀ ಅವರಿಗೂ ಮಾಧ್ಯಮ ಸಲಹೆಗಾರರಾಗಿದ್ದರು.  ಅವರೊಬ್ಬ ಭವ್ಯ ಬರಹಗಾರರೂ, ವಿದ್ವಾಂಸರು, ಹಿಂದೂಸ್ಥಾನೀ - ಕರ್ನಾಟಕ ಸಂಗೀತಗಳ ಅರಿವುಳ್ಳ ಶ್ರೇಷ್ಠ ಅಭಿರುಚಿಯುಳ್ಳವರಾಗಿಯೂ ಹೆಸರಾಗಿದ್ದರು.  

ಶಾರದಾ ಪ್ರಸಾದ್ ಅವರು 1924ರ ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಚ್. ಯೋಗಾನರಸಿಂಹo ಅವರು ಸಂಗೀತ ಹಾಗೂ ಸಂಸ್ಕೃತದಲ್ಲಿ ಘನ ವಿದ್ವಾಂಸರಾಗಿ, ಶಿಕ್ಷಣಾಧಿಕಾರಿಗಳಾಗಿ, ಕಲಾನುರಾಗಿಗಳಾಗಿ, ಅಧ್ಯಾಪಕರಾಗಿ ಪ್ರಸಿದ್ಧರಾಗಿದ್ದವರು.  ತಾಯಿ ಸರಸ್ವತಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಅಪಾರವಾಗಿ ಶ್ರಮಿಸಿದವರು. ಈ ಮಹಾನ್ ದಂಪತಿಗಳ 8 ಮಕ್ಕಳಲ್ಲಿ ಶಾರದಾ ಪ್ರಸಾದ್ ಹಿರಿಯರು. ಇವರ ಸಹೋದರ ಎಚ್. ವೈ. ಮೋಹನ್ ರಾಮ್ ಪ್ರಸಿದ್ಧ ಸಸ್ಯಶಾಸ್ತ್ರಜ್ಞರಾಗಿದ್ದರು.  ಸಹೋದರಿ ನೀರಜಾ ಅಚ್ಯುತರಾವ್ ಸಂಗೀತ ಲೋಕದ‍ ಸಾಧಕಿ. ಮೋಹನ್ ರಾಮ್ ಅವರ ಪುತ್ರ ರಾಹುಲ್ ರಾಮ್ ಅವರು ಮಹಾನ್ ಗಿಟಾರ್ ವಾದಕ ಮತ್ತು ಸಂಗೀತ ಸಂಯೋಜಕರು.

ಶಾರದಾ ಪ್ರಸಾದ್ ಅವರ ಪ್ರೌಢಶಿಕ್ಷಣವೆಲ್ಲಾ ಮೈಸೂರಿನಲ್ಲಿ ನಡೆಯಿತು.

ಮಹಾರಾಜಾ ಕಾಲೇಜಿನಲ್ಲಿ ಓದುತ್ತಿದ್ದಾಗ, ಶಾರದಾ ಪ್ರಸಾದ್ ಮಹಾತ್ಮಾ ಗಾಂಧಿಯವರ 'ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ' ಸತ್ಯಾಗ್ರಹದಲ್ಲಿ ಪಾಲ್ಗೊಂಡರು. 'ಸೈಕಲ್ ಬ್ರಿಗೇಡ್'ಗಳ ಜೊತೆ ಹಳ್ಳಿ-ಹಳ್ಳಿಗಳನ್ನು ಸುತ್ತಿ, ಸ್ವದೇಶೀ ಜಾಗೃತಿಯನ್ನೂ, ದೇಶಪ್ರೇಮವನ್ನೂ, ಸಾರ್ವಜನಿಕರಲ್ಲಿ ಬಿತ್ತಿದರು. ಜೈಲುವಾಸ ಮಾಡಬೇಕಾಗಿ ಬಂತು. A window on the wall ಎಂಬುದು ಇವರ ಅಂದಿನ ಜೈಲುವಾಸದ ಕಥನವಾಗಿದೆ. ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಜೆ. ಸಿ. ರಾಲೋ ಅವರ ಹೃದಯವಂತಿಕೆಯಿಂದ ಜೈಲಿನಿಂದಲೇ ಪರೀಕ್ಷೆಯಲ್ಲಿ ಬರೆಯಲು ಅನುಮತಿ ಸಿಕ್ಕಿತು. ಶಾರದಾ ಪ್ರಸಾದ್ ಪ್ರಥಮ ರ್‍ಯಾಂಕ್‍ನಲ್ಲಿ ತೇರ್ಗಡೆಯೂ ಆದರು. 

ಶಾರದಾ ಪ್ರಸಾದರು ಮುಂಬೈನ 'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅದೇ ಸಮಯದಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ 'ನೀಮನ್ ಫೆಲೋಷಿಪ್' ದೊರಕಿತು. ಪತ್ರಿಕೋದ್ಯಮ, ವಿಶೇಷ ಅಧ್ಯಯನ ಮತ್ತು ಉಪನ್ಯಾಸಗಳನ್ನು ಕೈಗೊಂಡು ಮಾಧ್ಯಮದಲ್ಲಿ ಪರಿಣಿತಿ ಪಡೆದರು. ಮುಂದೆ ಭಾರತ ಸರ್ಕಾರದ ಪ್ರಕಟನಾ ವಿಭಾಗದ ಮುಖವಾಣಿಯಾಗಿದ್ದ 'ಯೋಜನಾ' ಪತ್ರಿಕೆಗೆ ಸಂಪಾದಕರಾದರು. ತೀಕ್ಷ್ಣಮತಿ, ಮೇಧಾವಿ, ಶಿಸ್ತುಬದ್ಧ ಕೆಲಸಗಾರ ಶಾರದಾ ಪ್ರಸಾದ್ ಇಂದಿರಾ ಗಾಂಧಿಯವರ ಕಣ್ಣಿಗೆ ಬಿದ್ದರು.  ಇಂದಿರಾ ಗಾಂಧಿ ಅವರು ಶಾರದಾ ಪ್ರಸಾದ್ ಅವರನ್ನು ತಮ್ಮ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಿದರು. ಪ್ರಧಾನಿಗಳಾದ ಇಂದಿರಾ ಗಾಂಧಿ ಅವರ  ಭಾಷಣಗಳನ್ನೆಲ್ಲ  ಶಾರದಾ ಪ್ರಸಾದ್ ಅವರೇ ಬರೆಯುತ್ತಿದ್ದರು. ಸರಕಾರಿ ಪತ್ರಿಕಾ ವಲಯದಲ್ಲಿ ಕೆಲಸಕ್ಕೆ ಸೇರಿದರೂ, ಸಂವಹನದ ಪ್ರಾಮುಖ್ಯ ಪತ್ರಿಕಾ ಧರ್ಮವಾದ, ಜ್ಞಾನ ಪ್ರಸಾರ, ಮತ್ತು ವಸ್ತುನಿಷ್ಠೆಗಳನ್ನು ಕಾಪಾಡಿಕೊಂಡು ಬಂದರು. ಶಾರದಾ ಪ್ರಸಾದ್ ಸರಕಾರದ ನೀತಿ, ಗೌಪ್ಯತೆಗಳಿಗೆ ನಿಷ್ಠರಾಗಿದ್ದುಕೊಂಡು, ಆ ಚೌಕಟ್ಟಿನಲ್ಲೇ ತಮ್ಮ ಪತ್ರಕರ್ತ ಮಿತ್ರರಿಗೆ ಸುದ್ದಿ ಸಮಾಚಾರಗಳ ನಿಧಿಯಾಗಿದ್ದಂತೆ, ಸಲಹೆಗಾರರೂ ಆಗಿದ್ದರು. ಎಂದೂ ಸುಳ್ಳು ಸುದ್ದಿ ವರದಿಮಾಡಲಿಲ್ಲ. ಸಮಾಜದ ಅಹಿತಕರ ವಿಷಯಗಳನ್ನು ವಿನಾಕಾರಣ ಯಾರೊಡನೆಯೂ ತರ್ಕಿಸುತ್ತಿರಲಿಲ್ಲ. ಯಾವ ಸಂಗತಿಗಳನ್ನೂ ಉತ್ಪ್ರೇಕ್ಷೆ ಮಾಡುತ್ತಿರಲಿಲ್ಲ. ರಾಷ್ಟ್ರದಲ್ಲಾಗುವ ಅನೇಕ ಕಾಲ ಕಾಲದ ಘಟನೆಗಳ ಪ್ರಾಮುಖ್ಯತೆಯನ್ನು ಅತಿಯಾಗಿ ಹಿಗ್ಗಿಸುವುದು, ಅಥವಾ ಕುಗ್ಗಿಸುವುದೂ ಅವರಿಗೆ ಸರಿಬರುತ್ತಿರಲಿಲ್ಲ. ಸತ್ಯನಿಷ್ಠೆ, ವಸ್ತುನಿಷ್ಠೆ, ಮತ್ತು ಸಮಾಜ ಬದ್ದತೆಯನ್ನು ಪರಿಪಾಲಿಸುತ್ತಿದ್ದುದ್ದಲ್ಲದೆ, ತಮ್ಮ ಮಿತ್ರರಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ತಮ್ಮ ವೈಯಕ್ತಿಕ ಹೆಸರು, ಲಾಭ ಇತ್ಯಾದಿ ಯಾವುದೇ ಆಮಿಷಗಳಿಗೆ ಎಂದೂ ಸಿಲುಕಲಿಲ್ಲ.  ತಮ್ಮ ನಿವೃತ್ತಿಯ ನಂತರವೂ ತಮ್ಮ ಹುದ್ದೆಯ ಸಂದರ್ಭದಲ್ಲಿನ ಯಾವುದೇ ಘಟನೆಯ ಗೌಪ್ಯ ವಿಚಾರಗಳ ಬಗ್ಗೆ ಯಾರು ಎಷ್ಟೇ ಪ್ರಯತ್ನಿಸಿದರೂ ಅನಗತ್ಯವಾಗಿ ಬಾಯಿ ಹರಿಯಬಿಡಲಿಲ್ಲ.  ಆದರೆ ತಮ್ಮ ಕಾಲದ ರಾಜಕೀಯ, ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಪ್ರತಿ ಆಗುಹೋಗುಗಳಿಗೂ ಸಾಕ್ಷಿ ಪ್ರಜ್ಞೆಯಾಗಿ ಸದಭಿರುಚಿಯಿಂದ ಮುಕ್ತವಾಗಿ ತಮ್ಮ ಅಭಿಪ್ರಾಯಗಳಿಗೆ ಅಭಿವ್ಯಕ್ತಿಕೊಟ್ಟವರೂ ಆದರು.  ಪತ್ರಿಕಾ ಬಂಧುಗಳಿಗೆ ಸನ್ಮಿತ್ರರಾಗಿ ಮಾರ್ಗದರ್ಶಿಯಂತೆ ನಡೆದುಕೊಂಡು ಎಲ್ಲೆಡೆ ಗೌರವಾನ್ವಿತರಾಗಿದ್ದರು.

ಶಾರದಾ ಪ್ರಸಾದ್ ಅವರು ಸದಾ ದಿಲ್ಲಿಯಲ್ಲಿದ್ದರೂ, ದೇಶದ ಪರಿಸ್ಠಿತಿಗಳನ್ನು ವಿದ್ಯುನ್ಮಾದ ಮಾಧ್ಯಮಗಳಿಂದ ಪಡೆದು ತಿಳಿದುಕೊಳ್ಳುತ್ತಿದ್ದರು. ಅಗತ್ಯವೆನಿಸಿದಾಗ, ಟೀಕೆ, ಟಿಪ್ಪಣಿ, ಬುದ್ಧಿಮಾತುಗಳಿಂದ ದೇಶವನ್ನು ಎಚ್ಚರಿಸುತ್ತಿದ್ದರು. ಶಾರದಾ ಪ್ರಸಾದ್ ಅವರಲ್ಲಿ ಕವಿಸಹಜವಾದ ಕುತೂಹಲ, ಅಂತಃಕರಣ, ಮಾನವೀಯ ಅರ್ದ್ರತೆ ಇತ್ತು. ದಿನದ ಬಹುಪಾಲು ಸಮಯ ರಾಜಕೀಯ ವಲಯಗಳಲ್ಲೇ ಇದ್ದರೂ, ಅವರ ಹೃದಯದಲ್ಲಿ, ಕಲೆ, ಸಾಹಿತ್ಯ, ಸಂಗೀತಗಳಿಗೂ ಎಡೆಯಿತ್ತು. ನಿರಾಡಾಂಬರ ಶೈಲಿಯಲ್ಲಿ ಲಾಲಿತ್ಯಪೂರ್ಣವಾಗಿ ಚಿತ್ರಿಸುವ ಭಾಷಾಶೈಲಿ ಅವರಿಗೆ ಕರಗತವಾಗಿತ್ತು. 

ಶಾರದಾ ಪ್ರಸಾದ್ ಅವರು ಇಂದಿರಾ ಗಾಂಧಿ ಅವರಿಗಷ್ಟೇ ಅಲ್ಲದೆ ಮೊರಾರ್ಜಿ ದೇಸಾಯಿ ಮತ್ತು ಹಾಗೂ ರಾಜೀವ್ ಗಾಂಧಿಯವರಿಗೆ ಸಹಾ ಮಾಧ್ಯಮ ಸಲಹಾಕಾರರಾಗಿದ್ದರು. ಸುಮಾರು 20 ವರ್ಷಗಳಕಾಲ ಪ್ರಧಾನಿಯವರ ಕಚೇರಿಯಲ್ಲೇ ಕೆಲಸಮಾಡಿದರು.  ಹೀಗಿದ್ದರೂ, ಯಾವುದನ್ನೂ ವೈಯಕ್ತಿಕತೆಗೆ ಬಳಸದೆ ಸಾಧಾರಣರಂತೆ ಬಾಳಿ ಸಾರ್ವಜನಿಕ ಜೀವನದಲ್ಲಿ ಘನತೆ, ಗೌರವ, ಋಜುತ್ವ, ಪ್ರಾಮಾಣಿಕತೆ, ಸಮಗ್ರತೆಗಳಿಗೆ ಮಾದರಿಯಾಗಿದ್ದರು.

ಶಾರದಾ ಪ್ರಸಾದ್ ಅವರ ಸಲಹೆಯ ಮೇರೆಗೆ ಭಾರತ ಸರ್ಕಾರ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಮತ್ತು ದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಸಂಸ್ಥೆಗಳನ್ನು ಸ್ಥಾಪಿಸಿತು. 

ಶಾರದಾ ಪ್ರಸಾದ್ ಅವರು ಅತ್ಯುತ್ತಮ ಬರಹಗಾರರೂ ಆಗಿದ್ದರು. Selected works of Jawaharlal Nehru, Exploring Karnataka, ಮೊಮ್ಮಕ್ಕಳು ಹೇಳಿದ ಅಜ್ಜಿ-ಕಥೆ, ಸಂಗೀತದ ಸಿರಿ, Indira Gandhi, A window on the wall, Rashtrapathi Bhavan (The Story of the President’s House),  Incredible India Life & Landscapes, ಸ್ವಾಮಿ ಮತ್ತು ಅವನ ಸ್ನೇಹಿತರು (ಆರ. ಕೆ. ನಾರಾಯಣ್ ಅವರ Swami and his friends ಅನುವಾದ), The Book, I Won't be writing and other essays, ಅರಿವಿನ ಆಡುಂಬೊಲ, The Headman of the Little Hill (ಶಿವರಾಮ ಕಾರಂತರ ಕುರಿತು), ಕಾಲ ದೇಶ, ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ; ಕಾರಂತರ ಮೈ ಮನಗಳ ಸುಳಿಯಲ್ಲಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಕುಡಿಯರ ಕೂಸು, ಬಾಳ್ವೆಯೇ ಬೆಳಕು ಮುಂತಾದವುಗಳ ಇಂಗ್ಲಿಷ್ ಅನುವಾದಗಳು ಹೀಗೆ ಅನೇಕ ಕೃತಿಗಳು ಅವರಿಂದ ಹೊರಹೊಮ್ಮಿವೆ. ಅವರು  ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲವು ವರ್ಷ ಅಂಕಣಕಾರರಾಗಿದ್ದರು.

ಶಾರದಾ ಪ್ರಸಾದ್ ಅವರು ಜಾಗತೀಕರಣದ ಪರಿಣಾಮಗಳ ಬಗ್ಗೆ, ಭಾಷಾ ಸಮಸ್ಯೆಗಳ ಬಗ್ಗೆ, ಬಾಲ ಕಾರ್ಮಿಕರ ಬಗ್ಗೆ, ಪ್ರಸ್ತುತದಲ್ಲಿನ ಗಾಂಧಿವಾದದ ಸ್ವರೂಪದ ಬಗ್ಗೆ, ತಾವು ಓದಿದ ಅಪರೂಪದ ಪುಸ್ತಕಗಳ ಬಗ್ಗೆ, ಆರ್. ಕೆ. ಲಕ್ಷ್ಮಣ್, ಸುಬ್ಬುಲಕ್ಷ್ಮಿ ಮುಂತಾದ ಅನೇಕ ವಿಶಿಷ್ಟ ಪ್ರತಿಭೆಗಳ ಬಗ್ಗೆ ಮಹತ್ವದ ಟಿಪ್ಪಣಿಗಳನ್ನು ಬರೆದಿದ್ದರು.

ಶಾರದಾ ಪ್ರಸಾದ್ ಅವರು ಕರ್ನಾಟಕದಿಂದ ಹೊರಗಿದ್ದರೂ ಇಲ್ಲಿನ ಸಾಹಿತಿಗಳು ಮತ್ತು ಕಲಾವಿದರಾದ ಶಿವರಾಮ ಕಾರಂತ, ಆರ್. ಕೆ. ನಾರಾಯಣ್, ತೀನಂಶ್ರೀ, ವಿ. ಸೀತಾರಾಮಯ್ಯ, ಮಲ್ಲಿಕಾರ್ಜುನ ಮನಸೂರ್, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಗಂಗೂಬಾಯಿ ಹಾನಗಲ್ ಮುಂತಾದವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಅವರಿಗೆ ಅನೇಕ ಮಹನೀಯರೊಂದಿಗೆ ಭವ್ಯ ಪತ್ರ ವ್ಯವಹಾರವಿತ್ತು.

ಶಾರದಾ ಪ್ರಸಾದ್ ಅವರಿಗೆ ಭಾರತ ಸರ್ಕಾರದ ಪದ್ಮಭೂಷಣ, ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪುರಸ್ಕಾರ,  ಮೈಸೂರು ವಿಶ್ವವಿದ್ಯಾಲಯದ 
ಗೌರವ ಡಾಕ್ಟೊರೇಟ್ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು

ಶಾರದಾ ಪ್ರಸಾದ್ ಅವರು 2008ರ ಸೆಪ್ಟೆಂಬರ್ 2ರಂದು  ತಮ್ಮ 84ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.

Great name for wisdom, integrity, honesty and Simplicity Dr. H. Y. Sharada  Prasad 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ