ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭೋಜ


 

ಭೋಜ

ನನ್ನನ್ನು ಸೆಳೆದ ಮತ್ತೊಬ್ಬ ರಾಜನ ಕಥೆ ಭೋಜರಾಜನದ್ದು.

ಭೋಜನ ಕಾಲ ಸುಮಾರು 1010-55. ಈತ ಮಾಲವದ ಪರಮಾರ ರಾಜಸಂತತಿಯ ಎಂಟನೆಯ ದೊರೆ. ಈಗಿನ ಮಧ್ಯಪ್ರದೇಶದ ಒಂದು ಜಿಲ್ಲೆಯಾಗಿರುವ ಧಾರಾನಗರವನ್ನು ರಾಜಧಾನಿಯಾಗಿ ಮಾಡಿಕೊಂಡು (ಮೊದಲಿಗೆ ಉಜ್ಜಯಿನಿ ರಾಜಧಾನಿ) ಈತ ಸುಮಾರು 40 ವರ್ಷಗಳಿಗೂ ಹೆಚ್ಚುಕಾಲ ರಾಜ್ಯವಾಳಿದನೆಂದೂ ಆಗ ಮಾಲವ ರಾಜ್ಯದ ವೈಭವ ಉತ್ತುಂಗ ಶಿಖರವೇರಿತ್ತೆಂದೂ ತಿಳಿದು ಬರುತ್ತದೆ. ಈತ ಚಾಳುಕ್ಯ, ಚೇದಿ ಮತ್ತು ಮುಸ್ಲಿಮ್ ರಾಜರುಗಳ ಜೊತೆ ಯುದ್ಧ ಮಾಡಿ ಜಯಗಳಿಸಿದ. ಸುಮಾರು 1055ರಲ್ಲಿ ಚಾಳುಕ್ಯ ದೊರೆ ಒಂದನೆಯ ಸೋಮೇಶ್ವರನೂ ಗುಜರಾತಿನ ದೊರೆ ಭೀಮನೂ ದಾಹಲದ ದೊರೆ ಕರ್ಣನು ಒಟ್ಟಾಗಿ ಭೋಜನನ್ನು ಯುದ್ಧದಲ್ಲಿ ಸೋಲಿಸಿದರೆಂದೂ ಗುಜರಾತ್ ಮತ್ತು ಚೇದಿ ರಾಜ್ಯಗಳ ಒಕ್ಕೂಟ ಸೈನ್ಯವನ್ನೆದುರಿಸಿ ಯುದ್ಧ ಮಾಡಿ ಸೋತು ಈತ ಮರಣ ಹೊಂದಿದನೆಂದು ತಿಳಿದು ಬರುತ್ತದೆ. 

ಭೋಜ ಸಮರ್ಥ ದೊರೆಯಾಗಿದ್ದ ಎಂಬುದಕ್ಕೆ ಇದೊಂದು ಉದಾಹರಣೆ. ಭೋಜರಾಜನ ಸಾಹಿತ್ಯಾಭಿರುಚಿ, ಕವಿತಾ ಸಾಮರ್ಥ್ಯ, ಶಾಸ್ತ್ರ ಪಾಂಡಿತ್ಯ ವಿದ್ವಾಂಸರಿಗೂ ಕವಿಗಳಿಗೂ ಅವನು ನೀಡುತ್ತಿದ್ದ ಪ್ರೋತ್ಸಾಹ ಮೊದಲಾದ ವಿಷಯಗಳು ಬೇರೆ ಬೇರೆ ಕಡೆಗಳಿಂದ ರಚಿತವಾಗಿರುವ ಭೋಜಪ್ರಬಂಧ ಎಂಬ ಭಿನ್ನ ಭಿನ್ನ ಕೃತಿಗಳಲ್ಲಿ ರಮಣೀಯವಾಗಿ ವರ್ಣಿತವಾಗಿವೆ. ಈ ಪ್ರಬಂಧಗಳಲ್ಲಿ ಬಲ್ಲಾಳ ರಚಿತ ಭೋಜ ಪ್ರಬಂಧ ಸುಪ್ರಸಿದ್ಧವಾಗಿದೆ. 

ಭೋಜ ನವ ವಿಕ್ರಮಾದಿತ್ಯ ಎಂಬ ಬಿರುದು ಧರಿಸಿಕೊಂಡಿದ್ದ. ಸರಸ್ವತಿ ದೇವಾಲಯವೆಂಬ ವಿಶ್ವವಿದ್ಯಾಲಯವನ್ನು ಧಾರಾ ನಗರದಲ್ಲಿ ಸ್ಥಾಪಿಸಿದ. ಭೋಪಾಲ್‍ ನಗರದ ಆಗ್ನೇಯದಲ್ಲಿ ಸುಮಾರು 647 ಚಕಿಮೀ ವಿಸ್ತೀರ್ಣದ ಭೋಜಪುರ ಸರೋವರವನ್ನು ಈತ ನಿರ್ಮಿಸಿದ್ದು ಅದು 15ನೆಯ ಶತಮಾನದವರೆಗೂ ಉಳಿದುಬಂತೆಂದು ತಿಳಿದುಬರುತ್ತದೆ.

ಭೋಜನಿಗೆ ಸಾಹಿತ್ಯದಲ್ಲಿ ಅಪಾರ ಅಭಿರುಚಿಯಿತ್ತು. ಈತ ಸ್ವಯಂ ಲೇಖಕನಾಗಿಯೂ ಸಂಸ್ಕೃತ ಸಾಹಿತ್ಯದಲ್ಲಿ ದೊಡ್ಡ ಸ್ಥಾನ ಗಳಿಸಿಕೊಂಡಿದ್ದಾನೆ. ಕಾವ್ಯ ಅಲಂಕಾರ, ವ್ಯಾಕರಣ, ಖಗೋಳ, ವಾಸ್ತು, ಮಂತ್ರ, ಪಶುವೈದ್ಯ, ನ್ಯಾಯ ಮೊದಲಾದ ಶಾಸ್ತ್ರ ವಿಷಯಗಳಿಗೆ ಸಂಬಂಧಪಟ್ಟಂತೆ ಈತ 30ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವನೆಂದು ತಿಳಿದು ಬರುತ್ತದೆ. ಅನೇಕ ಕೃತಿಗಳು ಉಪಲಬ್ಧವಿಲ್ಲ. ಚಂಪೂರಾಮಾಯಣ (ಕಾವ್ಯ), ಶೃಂಗಾರಪ್ರಕಾಶ (ಅಲಂಕಾರಶಾಸ್ತ್ರ), ಸರಸ್ವತಿ ಕಂಠಾಭರಣ (ಅಲಂಕಾರ ಗ್ರಂಥ ಮತ್ತು ವ್ಯಾಕರಣ ಗ್ರಂಥಗಳು) ತತ್ತ್ವಪ್ರಕಾಶ (ಶೈವದರ್ಶನ), ರಾಜ ಮಾರ್ತಾಂಡ (ಯೋಗದರ್ಶನ), ಸಮರಾಂಗಣ ಸೂತ್ರಧಾರ (ಶಿಲ್ಪಶಾಸ್ತ್ರ), ಯುಕ್ತಿ ಕಲ್ಪತರು (ರಾಜನೀತಿ), ರಾಜಮೃಗಾಂಕ (ಜ್ಯೋತಿಷ), ಶಾಲಿಹೋತ್ರ (ಪಶುವೈದ್ಯ)-ಇವು ಪ್ರಸಿದ್ಧವಾಗಿವೆ.  ಚಂಪೂ ರಾಮಾಯಣ ಸಂಸ್ಕೃತ ಚಂಪೂ ಕಾವ್ಯಗಳಲ್ಲೆಲ್ಲ ಅತ್ಯಂತ ಜನಪ್ರಿಯವಾದುದು. ಇದನ್ನು ಭೋಜ ಚಂಪೂ ಎಂದು ಕರೆಯುತ್ತಾರೆ. ಇದು ಅಸಮಗ್ರ ಕಾವ್ಯ. ಇದರಲ್ಲಿ ಬಾಲಕಾಂಡದಿಂದ ಸುಂದರಕಾಂಡ ಪೂರ್ಣವಾಗಿ ಒಳಗೊಂಡಂತೆ ರಾಮಾಯಣದ ಕಥೆ ಸ್ವಲ್ಪ ಹೆಚ್ಚು ಕಡಿಮೆ ಮೂಲ ರಾಮಾಯಣದಲ್ಲಿರುವಂತೆಯೇ ರಚಿತವಾಗಿದೆ. ಉಳಿದ ಯುದ್ಧಕಾಂಡವನ್ನು ಭಾರತ ಚಂಪೂ ತಿಲಕದ ಕರ್ತೃವಾದ ಲಕ್ಷ್ಮಣಕವಿ ರಚಿಸಿದ್ದಾನೆ. ಉತ್ತರಕಾಂಡದ ಕಥಾಭಾಗವನ್ನು ಉತ್ತರ ಚಂಪೂ ಎಂದು ಹೆಸರಿಟ್ಟು ಬೇರೆ ಬೇರೆ ಕವಿಗಳು ರಚಿಸಿದ್ದಾರೆ. ಇಂಥ ಹಲವಾರು ಉತ್ತರ ಚಂಪೂಗಳು ಉಪಲಬ್ಧವಾಗಿವೆ. ಚಂಪೂ ರಾಮಾಯಣದ ಒಂದೊಂದು ಕಾಂಡದ ಸಮಾಪ್ತಿ ವಾಕ್ಯದಲ್ಲೂ ಇತಿಶ್ರೀ ವಿದರ್ಭರಾಜ ವಿರಚಿತೇ ಚಂಪೂ ರಾಮಾಯಣೇ ಎಂದಿದೆ. 

ಧಾರಾನಗರವಿರುವುದು ಮಾಳವದಲ್ಲಿ, ವಿದರ್ಭದಲಲ್ಲ. ಆದ್ದರಿಂದ ಚಂಪೂ ರಾಮಾಯಣ ಬರೆದ ವಿದರ್ಭ ರಾಜನೂ ಶೃಂಗಾರ ಪ್ರಕಾಶಾದಿಗಳ ಕರ್ತೃವಾದ (ಮಾಳವ) ಭೋಜರಾಜನೂ ಬೇರೆ ಬೇರೆಯೆಂದೇ ಭಾವಿಸಲವಕಾಶವಿದೆ. ಅಲ್ಲದೆ ಈ ವಿದರ್ಭರಾಜನ ಹೆಸರು ಅವನ ಕೃತಿಯಾದ ಚಂಪೂ ರಾಮಾಯಣದಲ್ಲಿ ಎಲ್ಲೂ ಉಕ್ತವಾಗಿಲ್ಲ. ಯುದ್ಧಕಾಂಡವನ್ನು ರಚಿಸಿದ ಲಕ್ಷ್ಮಣಕವಿ ಮಾತ್ರ ಈತನ ಹೆಸರನ್ನು ಭೋಜನೆಂದು ಸ್ಪಷ್ಟವಾಗಿ ಹೇಳಿದ್ದಾನೆ. ಆದರೆ ಧಾರಾನಗರದವನೆಂದು ಹೇಳಿಲ್ಲ. ಹೆಸರು ಹೇಳದೆ ಬರೀ ವಿದರ್ಭರಾಜ ವಿರಚಿತೇ ಎಂದಿರುವ ಸಮಾಪ್ತಿ ವಾಕ್ಯವನ್ನೂ ಈ ಚಂಪೂ ರಾಮಾಯಣ ವೈದರ್ಭಿ ರೀತಿಗೆ ಅತ್ಯುತ್ತಮ ಉದಾಹರಣೆಯಾಗಿರುವುದನ್ನೂ ಒಟ್ಟಿಗೆ ಪರಿಶೀಲಿಸಿದರೆ ವಿದರ್ಭರಾಜ ವಿರಚಿತೇ ಎಂಬುದು ಹಿಂದೆ ವೈದರ್ಭೀ ರಾಜವಿರಚಿತೇ ಎಂದಿದ್ದಿರಬಹುದೇ ಎನಿಸುತ್ತದೆ. ಕಾಲಕ್ರಮದಲ್ಲಿ ವೈದರ್ಭೀ ರಾಜ ಎಂಬ ಪದದ ಸಂಪೂರ್ಣಾರ್ಥದ ಅರಿವಿಲ್ಲದ, ಗ್ರಂಥಪ್ರತಿಗಳನ್ನು ಬರೆಯುತ್ತಿದ್ದ ಲೇಖಕರಿಂದ ವಿದರ್ಭರಾಜ ಎಂದಾಗಿರಬಹುದು. 

ಮನೋಹರವಾದ ವೈದರ್ಭೀ ರೀತಿಯಲ್ಲಿ ರಚಿತವಾಗಿರುವ ಈ ಚಂಪೂ ರಾಮಾಯಣದಲ್ಲಿ ಎಲ್ಲ ಕಾವ್ಯ ಗುಣಗಳೂ ಮೂಡಿ ಬಂದಿವೆ. ಅದರ ಭಾಷೆ ಸ್ವಲ್ಪ ಪ್ರೌಢವಾದರೂ ನಿರರ್ಗಳವಾಗಿ ಹರಿದಿದೆ. ಅನುಪ್ರಾಸಾದಿಗಳೂ ಸಹಜ ಸುಂದರವಾದ ಉಪಮಾನಗಳೂ ಅದರಲ್ಲಿ ತುಂಬಿವೆ. ವರ್ಣನೆಗಳು ಪ್ರತಿಭಾಪೂರ್ಣವಾಗಿವೆ.

ಶೃಂಗಾರ ಪ್ರಕಾಶ ಲಕ್ಷಣ ಗ್ರಂಥ, ಶೃಂಗಾರರಸದ ವಿಚಾರವನ್ನು ಹೆಚ್ಚಾಗಿ ಪ್ರಸ್ತಾಪಿಸಿರುವುದರಿಂದ ಈ ಗ್ರಂಥಕ್ಕೆ ಶೃಂಗಾರಪ್ರಕಾಶ ಎಂಬ ಹೆಸರು ಬಂದಿದೆ. ದೊರೆತಿರುವ ಅಲಂಕಾರ ಗ್ರಂಥಗಳಲ್ಲಿ ಇದು ಅತ್ಯಂತ ದೊಡ್ಡಕೃತಿ. ಇದರಲ್ಲಿ 36 ಭಾಗಗಳಿವೆ. 1-8ರವರೆಗೆ ವ್ಯಾಕರಣ ವಿಚಾರವೂ 9-10ರವರೆಗೆ ದೋಷಗಳ ವಿಚಾರವೂ 10-12ರವರೆಗೆ ಮಹಾ ಕಾವ್ಯಲಕ್ಷಣ, ರೂಪಕ ವಿಚಾರಗಳೂ ಉಳಿದ 24 ಭಾಗಗಳಲ್ಲಿ ರಸವಿವೇಚನೆಯೂ ಪ್ರತಿಪಾದಿತವಾಗಿವೆ.

ಸರಸ್ವತೀ ಕಂಠಾಭರಣ ಅಲಂಕಾರಗ್ರಂಥ. ಇದರಲ್ಲಿ 5 ಪರಿಚ್ಛೇದಗಳಿವೆ. ಈ ಗ್ರಂಥಕ್ಕೆ ರತ್ನೇಶ್ವರ ದರ್ಪಣ ಎಂಬ ವ್ಯಾಖ್ಯಾನವನ್ನೂ ಹರಿನಾಥ ಮಾರ್ಗಣ ಎಂಬ ವ್ಯಾಖ್ಯಾನವನ್ನೂ ಲಕ್ಷ್ಮೀನಾಥಭಟ್ಟ ದುಷ್ಕರಚಿತ್ರ ಪ್ರಕಾಶಿಕಾ ಎಂಬ ವ್ಯಾಖ್ಯಾನವನ್ನೂ ಬರೆದಿರುವರು. 

ಭೋಜರಾಜ ಅಂದರೆ ಆತನ ಸಿಂಹಾಸನದ ಕಥೆ, ಆ ಸಿಂಹಾಸನದ ಬೊಂಬೆಗಳ ಕಥೆ ಇತ್ಯಾದಿಗಳು ಓದಿದ ನೆನಪಾಗುತ್ತದೆ.  ನಾಟಕ ಚಲನಚಿತ್ರಗಳಲ್ಲಿ ಅವನಿಗೂ ಕಾಳಿದಾಸನಿಗೂ ಗಂಟು ಹಾಕಿರುವುದು ಕೂಡಾ ಚರಿತ್ರೆಗೆ ಹೋಲುವುದಿಲ್ಲ.

ನಾನು ಶಾಲೆಯಲ್ಲಿ ಸಂಸ್ಕೃತ ಓದುವಾಗ ಭೋಜರಾಜನ ಕುರಿತ ಒಂದು ಕಥೆ ನನಗೆ ಆಪ್ತವಾಗಿತ್ತು. ಅದೂ ಕಥೆಯೇ ಆದರೂ ನೆನಪಿಸಿಕೊಳ್ಳುವುದಕ್ಕೆ ಇಷ್ಟವಾಗುತ್ತದೆ. 

ಭೋಜರಾಜ ಬಾಲಕನಿದ್ದಾಗ ತಂದೆ ತೀರುತ್ತಾನೆ. ಆಗ ಸೋದರಮಾವ ಮುಂಜ ರಾಜ್ಯ ರಕ್ಷಿಸಿ ಈ ಬಾಲಕನನ್ನು ರಾಜನನ್ನಾಗಿ ಮಾಡುವುದಾಗಿ ಮಾತು ಕೊಟ್ಟಿರುತ್ತಾನೆ. ನಂತರ ಮುಂಜನಲ್ಲಿ ಸ್ವಾರ್ಥ ಬೆಳೆದು ಬಾಲಕನ್ನು ಕೊಂದು ಸಾಮ್ರಾಜ್ಯವಾಳಿ ಮೆರೆಯಬೇಕು ಎಂಬ ಕನಸು ಮೂಡಿತು. 

ತಾನು ರಾಜ್ಯವಾಳಿ ಮುಂದೆ ತನ್ನ ಮಗನಿಗೆ ಪಟ್ಟ ಕಟ್ಟಬೇಕು ಎಂದು ನಿರ್ಧರಿಸಿದ. ನಾಲ್ವರು ಸೈನಿಕರೊಂದಿಗೆ ಮುಂಜ ಬಾಲಕನ್ನು ಕಳಿಸಿ ಕೊಲೆ ಮಾಡಲು ಆದೇಶ ನೀಡಿದ. ಆದರೆ, ಬಾಲಕನ ನಡೆ-ನುಡಿ, ಬುದ್ಧಿವಂತಿಕೆ ಕಂಡು ಕೊಲೆ ಮಾಡುವವರ ಕ್ರೌರ್ಯತನ ಕರಗಿ ಹೋಯಿತು. ಈತ ರಾಜ್ಯವಾಳಲು ಯೋಗ್ಯ ಎಂದು ಬಾಲಕನನ್ನು ಬಚ್ಚಿಟ್ಟು ರಾಜ್ಯಕ್ಕೆ ವಾಪಸ್ಸು ಹೋದರು. ಭೋಜ ಬಾಲಕ ಪತ್ರ ಕೊಟ್ಟಿರುವುದನ್ನು ರಾಜನಿಗೆ ಕೊಟ್ಟು ತಲೆ ತಗ್ಗಿಸಿ ನಿಂತರು.

"ಕೃತಯುಗದಲ್ಲಿ ಮಾಂದಾತ ರಾಜ ಈ ಭೂಮಂಡಲ ಆಳಿದ ಶೂರ. ಆದರೂ ಮರೆಯಾದ, ನಂತರ ತ್ರೇತಾಯುಗದಲ್ಲಿ ರಾವಣನನ್ನು ಸಂಹಾರ ಮಾಡಿ ರಾಮ ರಾಜ್ಯವಾಳಿದ. ಅವರೂ ಉಳಿಯಲಿಲ್ಲ. ನಂತರ ಅನೇಕರಾಜರು ಈ ಭೂಮಿಯನ್ನು ಆಳಿದರೂ ಭೂಮಿ ಮಾತ್ರ ಯಾರ ಜೊತೆಗೂ ಹೋಗಿಲ್ಲ. ಆದರೆ ಮುಂಜ ನೀನು ರಾಜ್ಯವಾಳು, ನಿನ್ನ ಜತೆ ಈ ಭೂಮಿ ಬರುತ್ತದೆ" ಎಂದು ಪತ್ರದಲ್ಲಿತ್ತು. ಪತ್ರ ಓದಿ ಮುಂಜ ಬೆರಗುಗೊಂಡು ಕಣ್ಣೀರು ಹಾಕಿದ. ಬಾಲಕನ ಮಾತಿನಿಂದ ಮನಸ್ಸು ಬದಲಾಗಿ ಸಿಂಹಾಸನ ಪಡೆಯುವ ಆಶೆ ಮಾಯವಾಗಿ ಹೃದಯ ಮೃದುವಾಯಿತು. 

ಯಾಕೊ ಅದನ್ನು ಕೇಳಿದಾಗ ನನ್ನ ಮನಸ್ಸೂ. ಮೃದುವಾಗಿದ್ದು ಸುಳ್ಳಲ್ಲ.  ಚರಿತ್ರೆ ಮಾಡದ್ದನ್ನು ಕಥೆಯೂ ಮಾಡಬಲ್ಲದು. ಆದರೆ ಭೋಜರಾಜನೂ ಯುದ್ಧದಲ್ಲಿ ಸತ್ತ ಎಂಬುದು ಚರಿತ್ರೆ ಆಗಿದ್ದಲ್ಲಿ ಅದನ್ನು ಮರೆತು ಆ ಜೀವಕ್ಕೆ ದೈವಿಕ ಗುಣಗಳ ಅಥವಾ ಅತಿಮಾನುಷ ಗುಣಗಳ ಬಣ್ಣ ಬಳಿಯುವುದು ಕೂಡಾ ಸಲ್ಲದೇನೊ.


ಕಾಮೆಂಟ್‌ಗಳು

  1. ಕಾವ್ಯ ಪ್ರೇಮಿಯ ರಾಜನಾದ
    ರೇ ಹಿಂಸೆ ತಾಂಡವವಾಡದು. ವಾಜಪೇಯಿ ಹಾಗಿದ್ದರು.

    ಮಾಳವ ಭಾರತದ ಯಾವ ಭಾಗ?

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ