ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೇಷಗೋಪಾಲನ್


 ಟಿ.ಎನ್.ಶೇಷಗೋಪಾಲನ್


ಮಧುರೈ ತಿರುಮಲೈ ನಂಬಿ ಶೇಷಗೋಪಾಲನ್  ಪ್ರಸಿದ್ಧ ಕರ್ನಾಟಕ ಗಾಯಕರು, ಸಂಗೀತಗಾರರು ಮತ್ತು ಸಂಯೋಜಕರು. ಅವರು ವೀಣೆ ಮತ್ತು ಹಾರ್ಮೋನಿಯಂ ವಾದಕರು ಮತ್ತು ಹರಿಕಥಾ ವಿದ್ವಾಂಸರಾಗಿಯೂ ಪ್ರಸಿದ್ಧರು.

ಟಿ. ಎನ್. ಶೇಷಗೋಪಾಲನ್ ಅವರು ತಮ್ಮ ಹೆಸರಿನ ಮುಂದೆ ಮಧುರೈ ಬಳಸುತ್ತಾರೆ.  ಆದರೆ ಅವರು ಜನಿಸಿದ ಸ್ಥಳ ತಮಿಳುನಾಡಿನ ನಾಗಪಟ್ಟಿಣಂ. ಅವರು 1948ರ ಸೆಪ್ಟೆಂಬರ್ 5ರಂದು ಜನಿಸಿದರು. ಮೊದಲು ತಮ್ಮ ತಾಯಿಯ ಬಳಿ ಕಲಿತು, ನಂತರ ರಾಮನಾಥಪುರಂ ಸಿ.ಎಸ್. ಶಂಕರಶಿವನ್ ಅವರ ಮಾರ್ಗದರ್ಶನದಲ್ಲಿ ಕಲಿತರು. ಅವರು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಪದವಿ ಮತ್ತು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಪದವಿ ಪಡೆದರು.  ಮುಂದೆ ಅಲ್ಲಿಯೇ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಶೇಷಗೋಪಾಲನ್ ಅವರು ಹರಿಕೇಶನಲ್ಲೂರು ಮುತ್ತಯ್ಯ ಭಾಗವತರ ಗುರುಪರಂಪರೆಯಂತೆ  ಹರಿಕಥಾ ಕಾರ್ಯಕ್ರಮಗಳಿಗೂ ಹೆಸರಾಗಿದ್ದಾರೆ.  

ಶೇಷಗೋಪಾಲನ್ ತಮ್ಮದೇ ಆದ ಸಂಯೋಜನೆಗಳೊಂದಿಗೆ ತಮ್ಮ ಸಂಗೀತ ಲೋಕವನ್ನು ವಿಸ್ತರಿಸುತ್ತಲೇ ಇದ್ದಾರೆ. ಅವರು ತಮ್ಮದೇ ಆದ ಸೊಗಸಾದ ತಿಲ್ಲಾನಗಳು, ಭಜನೆಗಳು, ನಾಮಾವಳಿಗಳು ಮತ್ತು ಅಭಂಗ್‌ಗಳಿಗೆ ಸಹಾ ಹೆಸರುವಾಸಿಯಾಗಿದ್ದಾರೆ. ಅವರು ಉತ್ತರ ಭಾರತದ ಸಂಗೀತಕ್ಕೂ  ಸಮಾನ ಗೌರವ ಹೊಂದಿದ್ದು ಹಲವಾರು ಜುಗಲ್ಬಂಧಿಗಳಲ್ಲಿ ಭಾಗವಹಿಸಿದ್ದಾರೆ. ಖ್ಯಾತ ಗಾಯಕಿ ಗಾಯತ್ರಿ ಗಿರೀಶ್ ಇವರ ಶಿಷ್ಯೆ.

ಶೇಷಗೋಪಾಲನ್ ಅವರನ್ನು 1984ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ಅಂತರರಾಷ್ಟ್ರೀಯ ಉತ್ಸವದಲ್ಲಿ ಹಾಡಲು ಆಹ್ವಾನಿಸಲಾಯಿತು. ಆ ಸಂದರ್ಭದಲ್ಲಿ ಪರ್ತ್, ಅಡಿಲೇಡ್, ಸಿಡ್ನಿ ಮತ್ತು ನ್ಯೂಜಿಲೆಂಡ್ಗಳಲ್ಲಿ ಪ್ರದರ್ಶನಗಳನ್ನು ನೀಡಿದರು. 1987ರಲ್ಲಿ ಅವರು ರಷ್ಯಾದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಸಿಂಗಾಪುರ, ಮಲೇಷ್ಯಾ, ಬಹ್ರೇನ್ ಮತ್ತು ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಲ್ಲಿ ಕಚೇರಿಗಳನ್ನು ನೀಡಿದ್ದಾರೆ.   ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ಹಲವಾರು ಬಾರಿ ಭೇಟಿ ನೀಡಿ ಕಾರ್ಯಕ್ರಮ ನೀಡಿದ್ದಾರೆ.

1983ರಲ್ಲಿ ಶೇಷಗೋಪಾಲನ್ ಅವರು "ಥೋಡಿ ರಾಗಂ" ಎಂಬ ತಮಿಳು ಚಲನಚಿತ್ರವನ್ನು ನಿರ್ಮಿಸಿ ನಾಯಕರಾಗಿ ನಟಿಸಿದರು. ಅವರು ಜಾಂಭವನ್ (2006) ಚಿತ್ರದಲ್ಲಿ ನಟ ಪ್ರಶಾಂತ್ ಅವರ ತಂದೆಯಾಗಿ ನಟಿಸಿದ್ದಾರೆ.

ಟಿ.ಎನ್.ಶೇಷಗೋಪಾಲನ್ ಅವರಿಗೆ ಕಂಚಿ ಕಾಮಕೋಟಿ ಪೀಠದಿಂದ ಹರಿಕಥಾ ಚೂಡಾಮಣಿ, ಮೈಸೂರಿನ ಚೌಡಯ್ಯ ಸ್ಮಾರಕ ಟ್ರಸ್ಟ್‌ನಿಂದ ಗಾಯಕ ಶಿಖಾಮಣಿ, ತಮಿಳು ನಾಡಿನ ಸಂಗೀತ ಕಲಾನಿಧಿ, ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ  ಅನೇಕ ಗೌರವಗಳು ಸಂದಿವೆ.

On the birthday of great musician Madurai T. N. Seshagopalan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ