ಗುಪ್ತರ ಕಾಲ
ಸಮುದ್ರ ಗುಪ್ತ ಮತ್ತು ಚಂದ್ರಗುಪ್ತ ವಿಕ್ರಮಾದಿತ್ಯ
Samudra Gupta and Chandragupta Vikramaditya
ಗುಪ್ತರು ಕ್ರಿ.ಶ. 4-6ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಆಳುತ್ತಿದ್ದ ಒಂದು ಪ್ರಮುಖ ರಾಜವಂಶ. ಗುಪ್ತರ ಕಾಲಕ್ಕೆ ಸಂಬಂಧಿಸಿದ ಅನೇಕ ಶಾಸನಗಳೂ ನಾಣ್ಯಗಳೂ ಸಾಹಿತ್ಯಕ ಆಧಾರಗಳೂ ದೊರೆಯುವುದರಿಂದ ಇವರ ಕಾಲದ ಇತಿಹಾಸವನ್ನು ಕುರಿತ ಅನೇಕ ವಿವರಗಳು ತಿಳಿದುಬಂದಿವೆ. ಗುಪ್ತರ ಕಾಲವನ್ನು ಭಾರತ ಇತಿಹಾಸದ ಸುವರ್ಣಯುಗವೆಂದು ವರ್ಣಿಸಲಾಗಿದೆ.
ಮೊದಲನೆಯ ಚಂದ್ರಗುಪ್ತ ಆಳ್ವಿಕೆಗೆ ಬಂದ ವರ್ಷವಾದ 320ರಿಂದ ಗುಪ್ತರ ಹೆಸರಿನಲ್ಲಿ ಒಂದು ಶಕೆಯನ್ನು ಗಣನೆಗೆ ತರಲಾಯಿತು. ತನ್ನ ಆಳ್ವಿಕೆಯ ಕೊನೆಯ ಕಾಲದಲ್ಲಿ ಸಮುದ್ರಗುಪ್ತನೇ ಸಮರ್ಥನಾದ ತನ್ನ ಉತ್ತರಾಧಿಕಾರಿಯೆಂದು ಯೋಚಿಸಿ, ಆಸ್ಥಾನಿಕರ ಸಮ್ಮುಖದಲ್ಲಿ ಚಂದ್ರಗುಪ್ತ ಸಮುದ್ರಗುಪ್ತನನ್ನು ತನ್ನ ಅನಂತರ ರಾಜನಾಗಿ ಆಳಲು ಆರಿಸಿದನೆಂದು ಹೇಳಿದೆ. ಸಮುದ್ರಗುಪ್ತ ಉತ್ತರದ ದಿಗ್ವಿಜಯಯಾತ್ರೆ ಕೈಗೊಂಡ. ಉತ್ತರದಲ್ಲಿ ಆಳುತ್ತಿದ್ದ ಅರಸರನ್ನು ಸೋಲಿಸಿ ಅವರ ರಾಜ್ಯಗಳನ್ನು ಮಾತ್ರ ತನ್ನದಕ್ಕೆ ಸೇರಿಸಿಕೊಂಡ. ದಕ್ಷಿಣಾಪಥದ ಅರಸರನ್ನು ಸೋಲಿಸಿದರೂ ಅವರನ್ನು ಬಂಧನದಿಂದ ಮುಕ್ತಗೊಳಿಸಿ ಅವರ ರಾಜ್ಯವನ್ನು ಅವರಿಗೆ ಹಿಂದಿರುಗಿಸಿ, ತನ್ಮೂಲಕ ಅವರು ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಂಡು ವಿಧೇಯರಾಗಿರುವಂತೆ ಮಾಡಿದ. ಸಮುದ್ರಗುಪ್ತ ಉತ್ತರಪ್ರದೇಶ, ಮಧ್ಯಭಾರತ, ಪೂರ್ವದಲ್ಲಿ ಬಂಗಾಳ, ಬಿಹಾರ ಮುಂತಾದ ಪ್ರದೇಶಗಳನ್ನೊಳಗೊಂಡ, ಉತ್ತರ ಭಾರತದ ವಿಸ್ತಾರಪ್ರದೇಶದ ಸಾಮ್ರಾಟನಾದ.
ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬಂಗಾಳದವರೆಗೂ ಉತ್ತರದ ಹಿಮಾಲಯದಿಂದ ದಕ್ಷಿಣದ ವಿಂಧ್ಯ ಪರ್ವತದ ವರೆಗೂ ಸ್ಥೂಲವಾಗಿ ಸಕಲ ಉತ್ತರಾಪಥ ಸಮುದ್ರಗುಪ್ತನ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಸಮುದ್ರಗುಪ್ತ ಅಶ್ವಮೇಧಯಾಗ ಮಾಡಿದ ಕುರುಹಾಗಿ ನಾಣ್ಯವೊಂದನ್ನು ಅಚ್ಚುಹಾಕಿಸಿದ. ಸಮುದ್ರಗುಪ್ತ ಸ್ವತಃ ಅನೇಕ ಕಾವ್ಯಗಳನ್ನು ರಚಿಸುವುದರ ಮೂಲಕ ಕವಿರಾಜನೆಂಬ ಪ್ರಶಸ್ತಿಗೆ ಅರ್ಹನಾಗಿದ್ದನೆಂದೂ ಸಂಗೀತಶಾಸ್ತ್ರದಲ್ಲಿ ತುಂಬುರುವನ್ನು ಮೀರಿಸಿದ್ದನೆಂದೂ ಶಾಸನದಲ್ಲಿ ಹೇಳಿದೆ.
ಸಮುದ್ರಗುಪ್ತ ಸು. 380ರ ವರೆಗೂ ಆಳಿದ.
ಸಮುದ್ರಗುಪ್ತನ ಅನಂತರ ಇಮ್ಮಡಿ ಚಂದ್ರಗುಪ್ತ ಪಟ್ಟಕ್ಕೆ ಬಂದ.
ಎರಡನೆಯ ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಗುಪ್ತರ ಸಾಮ್ರಾಜ್ಯ ಔನ್ನತ್ಯಕ್ಕೆ ಏರಿತು. ಇವನ ತಾಯಿ ದತ್ತಾದೇವಿ. ಇವನಿಗೆ ದೇವಗುಪ್ತ. ದೇವರಾಜ, ದೇವಶ್ರೀ ಎಂಬ ಬಿರುದುಗಳು ಇದ್ದುವು. ಇವನಿಗೆ ಇಬ್ಬರು ಪತ್ನಿಯರು; ಧ್ರುವದೇವಿ ಮತ್ತು ಕುಬೇರನಾಗ. 380ರ ವೇಳೆಗೆ ರಾಜ್ಯವಾಳತೊಡಗಿದ ಈತನೂ ಸುಮಾರು 35 ವರ್ಷಗಳಷ್ಟು ಕಾಲ ಆಳಿದ.
ಇವನ ತಂದೆಯ ಕಾಲದಲ್ಲಿ ಶಕ ಮತ್ತು ಕುಷಾಣ ವಂಶಗಳಿಗೆ ಸೇರಿದ ಕೆಲವು ಸಾಮಂತರು ಸಮುದ್ರಗುಪ್ತನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿದರೆಂದು ಮೇಲೆ ಹೇಳಿದೆ. ಆ ವಂಶದ ಅರಸರನ್ನು ಸಂಪೂರ್ಣವಾಗಿ ಸೋಲಿಸಿ, ಹೊಡಿದೋಡಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ತಂದೆಯಂತೆಯೇ ಇವನೂ ಕದನಗಳಲ್ಲಿ ಚತುರ. ತಂದೆಯಿಂದ ಪಡೆದ ರಾಜ್ಯವನ್ನು ಇವನು ಮತ್ತಷ್ಟು ವಿಸ್ತಾರಗೊಳಿಸಿ, ತನ್ನ ಸಾಮ್ರಾಜ್ಯದಲ್ಲಿ ಸುಭದ್ರವಾದ ಆಡಳಿತವಿರುವಂತೆ ಮಾಡಿದ. ಗುಜರಾತ್ ಮತ್ತು ಕಾಠಿಯಾವಾಡದ ಶಕ ಅರಸು ಇವನ ಮುಖ್ಯ ಶತ್ರು. ಅವನನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಇವನು ಪ್ರಾರಂಭದಿಂದಲೂ ವಿಸ್ತೃತವಾದ ಯೋಜನೆಯನ್ನು ಹಾಕಿಕೊಂಡ. ಅದಕ್ಕೆಂದೇ ಇವನು ಇತರ ಹಿಂದೂ ಅರಸುಮನೆತನಗಳೊಡನೆ ರಕ್ತಸಂಬಂಧ ಬೆಳೆಸಿದ. ಇವನ ಪತ್ನಿಯಾದ ಕುಬೇರನಾಗಳು ನಾಗವಂಶಕ್ಕೆ ಸೇರಿದವಳು. ಇವಳಿಂದ ಇವನಿಗೆ ಪ್ರಭಾವತೀಗುಪ್ತಳೆಂಬ ಮಗಳು ಹುಟ್ಟಿದಳು. ಇವಳನ್ನು ವಾಕಾಟಕ ವಂಶದ ಇಮ್ಮಡಿ ರುದ್ರಸೇನನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಭೌಗೋಳಿಕವಾಗಿ ವಾಕಾಟಕರ ಮತ್ತು ನಾಗರ ರಾಜ್ಯಗಳು ಇವನ ರಾಜ್ಯದ ಮೇರೆಗಳಾಗಿದ್ದುವು. ಶಕರೊಡನೆ ಇವನು ಕಾದುವಾಗ ವಾಕಾಟಕರ ಬೆಂಬಲವಿಲ್ಲದಿದ್ದಲ್ಲಿ ನಾಗರು ಸುಲಭವಾಗಿ ಇವನ ರಾಜ್ಯದ ಮೇಲೆ ನುಗ್ಗಬಹುದಾಗಿತ್ತು. ಎಂತಲೇ ವಾಕಾಟಕರೊಡನೆ ಸ್ನೇಹ ಇವನಿಗೆ ಬಹಳವಾಗಿ ಬೇಕಾಗಿತ್ತು. ಇವನು ಚಂದ್ರಗುಪ್ತ ವಿಕ್ರಮಾದಿತ್ಯ ಎಂದು ಖ್ಯಾತನಾದ. ವಿಕ್ರಮಾದಿತ್ಯನ ಹೆಸರು ಭಾರತದಲ್ಲಿ ದಂತಕಥೆ ಆಗಿದೆ. ಇಲ್ಲಿಯ ಜನಪ್ರಿಯ ಪಂಚಾಂಗವು ಚಾಂದ್ರಮಾನ ಪಂಚಾಂಗವಾಗಿದ್ದು ಈ ವಿಕ್ರಮನ ಹೆಸರಲ್ಲಿ ಇದೆ.
ಗುಜರಾತ್ ನಲ್ಲಿನ ರಾಜ ಶಕ-ಕ್ಷತ್ರಪ ವಂಶದ ಮೂರನೇ ರುದ್ರಸೇನ ನನ್ನು ಸೋಲಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡದ್ದು ಚಂದ್ರಗುಪ್ತ ವಿಕ್ರಮಾದಿತ್ಯನ ಮಹತ್ವದ ಸಾಧನೆಯಾಗಿದೆ. ಅವನ ಅಳಿಯ ಎರಡನೇ ರುದ್ರಸೇನ ಆಕಸ್ಮಿಕವಾಗಿ ಸತ್ತು ಪ್ರಭಾವತಿಗುಪ್ತನು ತನ್ನ ಎರಡು ಮಕ್ಕಳ ಪರವಾಗಿ ರಾಜ್ಯ ಆಳಿದನು. ಈ ಇಪ್ಪತ್ತೆರಡು ವರ್ಷದ ಆಳಿಕೆಯಲ್ಲಿ ವಾಕಾಟಕವು ಬಹುಮಟ್ಟಿಗೆ ಗುಪ್ತ ಸಾಮ್ರಾಜ್ಯದ ಭಾಗವಾಗಿತ್ತು. ವಾಕಾಟಕದ ಭೌಗೋಳಿಕ ಸ್ಥಾನವನ್ನು ಬಳಸಿಕೊಂಡು ಪಶ್ಚಿಮದ ಕ್ಷತ್ರಪರನ್ನು ಶಾಸ್ವತವಾಗಿ ಸೋಲಿಸಿದನು. ಅನೇಕ ಇತಿಹಾಸಕಾರರು ಈ ಅವಧಿಯನ್ನು ವಾಕಾಟಕ-ಗುಪ್ತ ಯುಗ ಎಂದು ಕರೆಯುತ್ತಾರೆ. ಗಂಗಾ ನದೀಮುಖದಿಂದ ಸಿಂಧೂ ನದೀಮುಖದವರೆಗೆ ಮತ್ತು ಇವತ್ತಿನ ಉತ್ತರ ಪಾಕಿಸ್ತಾನದಿಂದ ನರ್ಮದಾ ನದಿಯವರೆಗಿನ ವಿಶಾಲವಾದ ಭೂಭಾಗವನ್ನು ಚಂದ್ರಗುಪ್ತನು ತನ್ನ ಹಿಡಿತದಲ್ಲಿರಿಸಿಕೊಂಡಿದ್ದನು.
ಪಾಟಲೀಪುತ್ರವು ಅವನ ಸಾಮ್ರಾಜ್ಯದ ರಾಜಧಾನಿಯಾಗಿ ಮುಂದುವರೆಯಿತು. ಉಜ್ಜಯಿನಿ ಎರಡನೇ ರಾಜಧಾನಿಯಂತಿತ್ತು. ಗುಪ್ತ ವಂಶದ ಸುಂದರ ಬಂಗಾರದ ನಾಣ್ಯಗಳ ಬಾಹುಳ್ಯವು ಆ ಯುಗದ ವೈಭವಕ್ಕೆ ಸಾಕ್ಷಿಯಾಗಿದೆ. ಎರಡನೇ ಚಂದ್ರಗುಪ್ತನು ಶಕಪದ್ಧತಿಯಂತೆ ಬೆಳ್ಳಿಯ ನಾಣ್ಯಗಳನ್ನು ಹೊರತರಲು ಆರಂಭಿಸಿ ದನು.
ಫಾಹಿಯಾನ್‍ನು ಭಾರತವನ್ನು ಕ್ರಿ.ಶ. ಐದನೇ ಮತ್ತು ಏಳನೇ ಶತಮಾನಗಳ ನಡುವೆ ಜ್ಞಾನವನ್ನರಸಿ ಭಾರತಕ್ಕೆ ಭೇಟಿ ನೀಡಿದ ಮೂವರು ಯಾತ್ರಿಗಳಲ್ಲಿ ಒಬ್ಬನು. ಅವನು ಭಾರತಕ್ಕೆ ಬಂದಾಗ ಎರಡನೇ ಚಂದ್ರಗುಪ್ತನು ಉತ್ತರ ಭಾರತವನ್ನು ಆಳುತ್ತಿದ್ದನು. ಮರಣದಂಡನೆಯ ಶಿಕ್ಷೆ , ಭೂಕಂದಾಯ ಇಲ್ಲದೆ ಇರುವುದರ ಬಗ್ಗೆ ಮತ್ತು ಇನ್ನೂ ಕೆಲ ವಿಷಯಗಳ ಬಗ್ಗೆ ಅವನು ವರದಿ ಮಾಡಿದ್ದಾನೆ. ಬಹುತೇಕ ನಾಗರಿಕರು ಈರುಳ್ಳಿ(ಉಳ್ಳಾಗಡ್ಡಿ), ಬೆಳ್ಳುಳ್ಳಿ , ಮದ್ಯ ಮಾಂಸ ಸೇವಿಸುತ್ತಿರಲಿಲ್ಲ.
ಸಾಂಸ್ಕೃತಿಕವಾಗಿ ಎರಡನೇ ಚಂದ್ರಗುಪ್ತನ ಆಳಿಕೆಯ ಕಾಲವು ಸುವರ್ಣಯುಗವಾಗಿತ್ತು. ಅವನ ಆಸ್ಥಾನದಲ್ಲಿ ನವರತ್ನಗಳು ಎಂದು ಹೆಸರಾದ ಒಂಬತ್ತು ಜನರು ಇದ್ದರು ಎಂದು ಹೇಳಲಾಗಿದೆ. ಅವರಲ್ಲಿ ಕಾಳಿದಾಸನು ಅವರಲ್ಲಿ ಶ್ರೇಷ್ಠನಾದವನು. 'ಅಭಿಜ್ಞಾನ ಶಾಕುಂತಲ' ಸೇರಿದಂತೆ ಅನೇಕ ಅಮರ ಕೃತಿಗಳನ್ನು ಅವನು ರಚಿಸಿದ್ದಾನೆ. ಸುಪ್ರಸಿದ್ಧ ಖಗೋಲಶಾಸ್ತ್ರಜ್ಞ ಮತ್ತು ಗಣಿತಜ್ಞನಾದ ವರಾಹಮಿಹಿರನು ನವರತ್ನಗಳಲ್ಲಿ ಇನ್ನೊಬ್ಬನು.
ದೀಪಾವಳಿಯ ಮರುದಿನವಾದ ಪ್ರತಿಪದೆಯ ದಿನ ವಿಕ್ರಮಾದಿತ್ಯನು ಪಟ್ಟಕ್ಕೆ ಏರಿದನು. ಆ ದಿನವನ್ನು ವರ್ಷಪ್ರತಿಪದೆ ಎಂದೂ ಕರೆಯುತ್ತಾರೆ. ವಿಕ್ರಮಶಕೆಯು ಈ ದಿನ ಆರಂಭವಾಯಿತು. ಈ ದಿನವನ್ನು ಹೊಸವರ್ಷದ ಆರಂಭ ಎಂದು ಕೆಲವು ಕಡೆ ಆಚರಿಸುವರು.
ದೆಹಲಿಯ ಕುತುಬ್ ಮಿನಾರ್ ನ ಹತ್ತಿರವೇ ನಾಲ್ಕನೇ ಶತಮಾನದ ಒಂದು ಸ್ತಂಭವಿದೆ. ವಿಷ್ಣು ದೇವರ ಗೌರವಾರ್ಥ ಮತ್ತು ಎರಡನೇ ಚಂದ್ರಗುಪ್ತನ ನೆನಪಿನಲ್ಲಿ ಈ ಸ್ತಂಭವನ್ನು ನಿಲ್ಲಿಸಿದುದಾಗಿ ಅದರ ಮೇಲೆ ಬರೆದಿದೆ. ಲೋಹಶಾಸ್ತ್ರದಲ್ಲಿ ಪುರಾತನ ಭಾರತದ ಸಾಧನೆಯನ್ನು ಇದು ಮೆರೆಯಿಸುತ್ತದೆ. ಉಕ್ಕಿನ ಈ ಕಂಭವು 1600 ವರ್ಷಗಳಾದರೂ ತುಕ್ಕು ಹಿಡಿಯದೆ ಹಾಳಾಗದೆ ನಿಂತಿದೆ. ಇದು ಉತ್ತರಭಾರತದಲ್ಲಿ ಹಲವೆಡೆ ಕಾಣಸಿಗುವ ಅಶೋಕಸ್ತಂಭಗಳ ಹಾಗೆ ಇದೆ.
ಕಾಮೆಂಟ್‌ಗಳು