ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರಣ್ಯ ಕಾಂಡ


ಅರಣ್ಯಕಾಂಡ 
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರು ರಚಿಸಿದ ‘ಸಂಗ್ರಹ ರಾಮಯಣ' ಕೃತಿಯಿಂದ)

ಶ್ರೀರಾಮಚಂದ್ರನು ದಂಡಕಾರಣ್ಯದಲ್ಲಿದ್ದ ಋಷಿಗಳ ಪ್ರಾರ್ಥನೆಯಂತೆ ಸಜ್ಜನರ ಕಂಟಕರಾಗಿದ್ದ ರಾಕ್ಷಸರ ವಧೆ ಮಾಡಲು ನಿಶ್ಚಯಿಸಿದನು.  ದಂಡಕಾನನದಲ್ಲಿ ಪರ್ವತಾಕಾರದಂತೆ ಬಿದ್ದಿದ್ದ ವಿರಾಧನೆಂಬ ರಾಕ್ಷಸನು ಸರ್ವರಿಗೂ ಭಯಂಕರನಾಗಿದ್ದನು.  ಶ್ರೀ ಸೀತಾರಾಮರು ಆ ಮಾರ್ಗವಾಗಿ ಬಂದಾಗ ವಿರಾಧನು ಸೀತೆಯನ್ನು ಹಿಡಿದುಕೊಳ್ಳಲು ರಾಮಲಕ್ಷ್ಮಣರು ಆ ರಾಕ್ಷಸನ ತೋಳುಗಳನ್ನು ಕತ್ತರಿಸಿ ಅವನನ್ನು ಸಾಯಿಸಿ ಹಳ್ಳದಲ್ಲಿ ಹೂತುಬಿಟ್ಟರು. ಆಗ ಅಂತರಿಕ್ಷದಲ್ಲಿ ಒಬ್ಬ ಗಂಧರ್ವನು ಕಾಣಿಸಿಕೊಂಡು ತನಗೆ ಕುಬೇರನ ಶಾಪದಿಂದ ಈ ವಿಕಾರರೂಪ ಬಂದುದಾಗಿಯೂ, ಈಗ ದಾಶರಥಿಯಿಂದ ತನಗೆ ಶಾಪವಿಮೋಚನೆಯಾದುದಕ್ಕೆ ತಾನು ಧನ್ಯನಾದುದಾಗಿಯೂ ತಿಳಿಸಿ ಆತನಿಗೆ ನಮಸ್ಕರಿಸಿ ಮಾಯವಾದನು.

ಇಲ್ಲಿಂದ ಅವರು ಮೂವರೂ ಮುಂದೆ ಸಾಗಿ, ಅನೇಕ ಋಷಿಗಳ ಸಂದರ್ಶನ ಲಾಭದಿಂದ ಸಂತೋಷಪಟ್ಟರು.  ಶರಭಂಗ, ಸುತೀಕ್ಷ್ಣಾದಿ ಋಷಿವರ್ಯರನ್ನು ಕಂಡು ಆಶೀರ್ವಾದ ಪಡೆದರು.  ತಮ್ಮ ಸ್ವಸಾಮರ್ಥ್ಯದಿಂದ ಇಲ್ವಲ ವಾತಾಪಿಗಳೆಂಬ ರಾಕ್ಷಸರನ್ನು ನಾಶಪಡಿಸಿದ ಮತ್ತು ವಿಂಧ್ಯಪರ್ವತದ ಸೊಕ್ಕುಮುರಿದ ಅಗಸ್ತ್ಯ ಮಹಾಮುನಿಗಳನ್ನು ಕಂಡು ರಾಮನು ವಂದಿಸಲು ಆ ಮುನಿಪೋತ್ತಮರು ತಮ್ಮ ಬಳಿಯಿದ್ದ ಅಮೂಲ್ಯವಾದ ಧನುರ್ಬಾಣಗಳನ್ನು ರಘುವರನಿಗೆ ಅನುಗ್ರಹಿಸಿಕೊಟ್ಟರು.

ಮುಂದೆ ರಾಮನು ಗೋದಾವರಿ ತೀರದಲ್ಲಿದ್ದ ಬಹುಸುಂದರವಾದ ಪಂಚವಟಿಯಲ್ಲಿ ಕೆಲಕಾಲ ನೆಲೆಸಿ ಸುಖವಾಗಿದ್ದನು.  ಅಲ್ಲಿಗೆ ದಶರಥರಾಜನ ಮಿತ್ರನಾದ ಜಟಾಯುವೆಂಬ ಹಳೆಯ ಹದ್ದು ಬಂದು ರಾಮನೊಡನೆ ಸ್ನೇಹ ಬೆಳೆಸಿ, ಅವರು ಕಾಡಿನಲ್ಲಿ ಹೊರಸಂಚಾರ ಹೊರಟಾಗ ಸೀತಾಮಾತೆಯನ್ನು ರಕ್ಷಣೆಮಾಡುವ ಭರವಸೆ ಕೊಟ್ಟಿತು.

ಹೀಗಿರುವಲ್ಲಿ ಪಂಚವಟಿಗೆ ಶೂರ್ಪನಖಿಯೆಂಬ ರಾಕ್ಷಸಿಯು ಬಂದು ಸುಂದರಾಂಗನಾದ ರಾಮನನ್ನು ಕಂಡು ಮೋಹಿತಳಾದಳು.  ಈ ರಕ್ಕಸಿಯು ಸುಂದರಿಯಂತೆ ಬಂದು ರಾಮನ ಮುಂದೆ ಸುಳಿದು ತನ್ನನ್ನು ಮದುವೆಯಾಗುವಂತೆ ಯಾಚಿಸಿದಳು.  ಆಗ ರಾಮನು ಅವಳಿಗೆ ತನಗೊಬ್ಬ ಪತ್ನಿ ಇರುವುದಾಗಿಯೂ ತನ್ನ ತಮ್ಮನಾದ ಲಕ್ಷ್ಮಣನನ್ನು ಕೇಳಿಕೊಳ್ಳುವಂತೆಯೂ ತಿಳಿಸಿದನು.  ಆ ಮಾಯಾವಿಯು ಸೌಮಿತ್ರಿಯ ಬಳಿ ಬಂದಾಗ ತಾನು ರಾಮದಾಸನೆಂದೂ ತನ್ನ ಸ್ವಾಮಿಯ ಬಳಿಗೇ ಹೋಗುವಂತೆಯೂ ಶೂರ್ಪನಖಿಗೆ ತಿಳಿಸಲು ಈ ಅಡ್ಡಾಟದಿಂದ ಕೋಪಗೊಂಡ ರಕ್ಕಸಿಯು ಜಾನಕಿಯ ಮೇಲೆ ಬೀಳಲು ಹೋದಳು.  ಆಗ ರಾಘವನಾಜ್ಞೆಯಂತೆ ಲಕ್ಷ್ಮಣನು ಶೂರ್ಪನಖಿಯ ಕಿವಿಮೂಗುಗಳನ್ನು ಕೊಯ್ದು ಕಳುಹಿಸಿದನು.  ಇತ್ತ ಶೂರ್ಪನಖಿಯು ರೋದನ ಮಾಡುತ್ತಾ ಅಲ್ಲಿಂದ ಹೋಗಿ ತನ್ನ ಅಣ್ಣಂದಿರಾದ ಖರದೂಷಣರಲ್ಲಿ ತನಗಾದ ಅವಸ್ಥೆಯನ್ನು ತಿಳಿಸಿ ರಾಮನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಚೋದಿಸಿದಳು.  ಆಗ ಖರನು ತನ್ನ ಹದಿನಾಲ್ಕುಸಾವಿರ ಪಡೆಯೊಡನೆ ರಾಮನ ಮೇಲೆ ಬೀಳಲು ರಾಮನು ವೈಷ್ಣವಾಸ್ತ್ರದಿಂದ ಅವರನ್ನು ಸಂಹರಿಸಿದನು.  ಈ ದುಷ್ಟಶಿಕ್ಷಣದಿಂದ ಅಲ್ಲಿದ್ದ ಋಷಿಗಳಿಗೆಲ್ಲರಿಗೂ ನೆಮ್ಮದಿಯಾಯಿತು.

ಅಕಂಪನೆಂಬ ರಾಕ್ಷಸದೂತನು ಖರದೂಷಣರ ನಾಶವನ್ನು ರಾವಣಾಸುರನಿಗೆ ತಿಳಿಸಿದನಲ್ಲದೆ ರಾಮನನ್ನು ಗೆಲ್ಲುವುದು ಸಾಧ್ಯವಾಗದ ಕಾರಣ ಅವನ ಪತ್ನಿಯಾದ ಸೀತೆಯನ್ನು ಅಪಹರಿಸುವುದರಿಂದ ರಾಮನ ವಿನಾಶವಾಗುವುದೆಂದು ದುರ್ಬೋಧನೆ ಮಾಡಿದನು.  ಆ ವೇಳೆಗೆ ಕರ್ಣನಾಸಿಕ ಶೂನ್ಯಳಾದ ಶೂರ್ಪನಖಿ ಅಲ್ಲಿಗೆ ಬಂದು ತನ್ನ ಅವಮಾನ ಪ್ರತೀಕಾರಕ್ಕಾಗಿ ಹಾತೊರೆದು ಅಣ್ಣನಾದ ರಾವಣನಿಗೆ ಸೀತೆಯ ಸೌಂದರ್ಯವನ್ನು ತಾನೂ ಮತ್ತಷ್ಟು ವರ್ಣಿಸಿ ಆ ಕಾಮಾಂಧನ ದುರ್ಮಾರ್ಗಕ್ಕೆ ಕಾರಣಳಾದಳು.  ಆಗ ರಾವಣನಿಗೆ ಸೀತೆಯ ಮೇಲೆ ಮನಸ್ಸಾಗಿ ತನ್ನ ಕಾಮಿತಾರ್ಥದಲ್ಲಿ ಮಾರೀಚನ ಸಹಾಯವನ್ನು ಆಶಿಸಿದನು.

ರಾವಣನ ಮಾತಿನಂತೆ ಮಾರೀಚನು ಮಾಯಾಮೃಗದ ವೇಷಧಾರಿಯಾಗಿ ರಾಮಾಶ್ರಮದ ಮುಂದೆ ಸುಳಿದನು.  ಈ ಸುವರ್ಣ ಮೃಗವನ್ನು ಕಂಡ ಜಾನಕಿಯು ಹೇಗಾದರೂ ಮಾಡಿ ಬೇಟೆಯಾಡಿ ಕೊನೆಗೆ ಅದನ್ನು ಕೊಂದಾದರೂ ತನಗೆ ತಂದುಕೊಡುವಂತೆ ಪತಿಯನ್ನು ಪೀಡಿಸಿದಳು.  ಎಷ್ಟು ಬೇಡವೆಂದರೂ ಹೇಳದೆ ಹಠಮಾಡಿದ ಸೀತೆಯ ಕೋರಿಕೆಯನ್ನು ಈಡೇರಿಸುವುದಕ್ಕಾಗಿ ರಾಮನು ಲಕ್ಷ್ಮಣನಿಗೆ ಜೋಪಾನ ಹೇಳಿ ಆ ಹರಿಣದ ಬೆನ್ನಟ್ಟಿ ಹೋದನು.

ಹೀಗೆ ರಾಮನು ಆ ಕಾಂಚನ ಮೃಗವನ್ನು ಬಹುದೂರ ಅಟ್ಟಿಸಿಕೊಂಡು ಹೋದರೂ ಕೈಗೆ ಸಿಕ್ಕದುದರಿಂದ ಬಾಣದಿಂದ ಅದನ್ನು ಗುರಿಯಿಟ್ಟು ಹೊಡೆದನು.  ಆಗ ಮೃಗರೂಪಿಯಾದ ಮಾರೀಚನು ಲಂಕೇಶ್ವರನ ದುರ್ಬೋಧನೆಯಂತೆ ಸಾಯುವಾಗ ‘ಹಾ ಸೀತೆ! ಹಾ ಲಕ್ಷ್ಮಣಾ!’ ಎಂದು ರಾಮನ ಕಂಠದಂತೆಯೇ ಚೀರಿದನು.  ಆಗ ಅಪಾಯ ಶಂಕಿತಳಾದ ಸೀತೆಯು ಲಕ್ಷ್ಮಣನನ್ನು ನಿಷ್ಠುರ ವಚನಗಳಿಂದ ಬಲವಂತವಾಗಿ ಹೊರಡಿಸಲು, ನೊಂದ ಸೌಮಿತ್ರಿಯು ಕಾನನದಲ್ಲಿ ಆ ಧ್ವನಿ ಬಂದ ಕಡೆಗೆ ನಡೆದನು.  ಇತ್ತ ಕಪಟ ಮುನಿ ವೇಷಧಾರಿಯಾದ ದಶಾನನು ಸಾಮಾನ್ಯ ಸನ್ಯಾಸಿಯಂತೆ ಏಕಾಂಗಿಯಾಗಿದ್ದ ಸೀತೆಯ ಬಳಿಗೆ ಬಂದು ಅವಳ ಸೌಂದರ್ಯಕ್ಕೆ ಮಾರುಹೋದನು.  ನಿರ್ಮಲಾಂತಃಕರಣದಿಂದ ಅತಿಥಿಯನ್ನು ಉಪಚರಿಸಲು ಬಂದ ಜಾನಕಿಗೆ ಆ ದ್ರೋಹಿಯು ತನ್ನ ರಾಕ್ಷಸ ಸ್ವರೂಪವನ್ನು ತೋರಿಸಿ ತನ್ನ ವೃತ್ತಾಂತವನ್ನು ತಿಳಿಸಿ ಆಕೆಯನ್ನು ಮಾಯಾರಥದಲ್ಲಿ ಕುಳ್ಳಿರಿಸಿಕೊಂಡು ಕರೆದೊಯ್ದನು.  ಆಗ ಸೀತೆಯು ಗಡಗಡನೆ ನಡುಗಿ ಗಟ್ಟಿಯಾಗಿ ಅಳುತ್ತಿದ್ದಳು.  ಜಾನಕಿಯ ರೋದನ ಧ್ವನಿಯನ್ನು ಕೇಳಿದ ಕೂಡಲೇ ಜಟಾಯುವು ಅಲ್ಲಿಗೆ ಹಾರಿಬಂದು ರಾವಣನೊಡನೆ ಯುದ್ಧಮಾಡಿತು.  ಆದರೆ ರಾವಣನ ಮೋಸ ಯುದ್ಧದಿಂದ ಪಕ್ಷ ಕಳೆದುಕೊಂಡ ಜಟಾಯು ಕುಟುಕು ಜೀವಸಹಿತ ಭೂಮಿಗೆ ಬೀಳಲು ಆ ನೀಚನು ಮುಂದೆ ಸಾಗಿದನು.  ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದಾಗ ಅವನಿಜೆಯು ತನ್ನ ಅವಿವೇಕಕ್ಕಾಗಿ ಗೋಳಾಡುತ್ತಾ ತನ್ನ ಪತಿಗೆ ಗುರುತು ಸಿಕ್ಕಲೆಂದು ತನ್ನ ಆಭರಣಗಳನ್ನು ಚೂರು ಸೀರೆಯಲ್ಲಿ ಕಟ್ಟಿ ರಾವಣನಿಗೆ ತಿಳಿಯದಂತೆ ಕೆಳಗೆಸೆದಳು.  ಇದು ಅಲ್ಲಿದ್ದ ಕೆಲವು ಕಪಿಗಳ ಕೈಗೆ ಸಿಕ್ಕಲು ಅವು ತಮ್ಮ ಮುಖಂಡನಿಗೆ ತಲುಪಿಸಿದವು.

ಇತ್ತ ರಾವಣನು ಸೀತೆಯನ್ನು ಲಂಕೆಗೆ ಕರೆತಂದು ಘೋರ ರಾಕ್ಷಸಿಯರ ಕಾವಲಿನ ಮಧ್ಯೆ ಅಶೋಕವನದಲ್ಲಿಟ್ಟನು.  ಕೆಲವೇ ತಿಂಗಳಲ್ಲಿ ಸೀತೆ ತನ್ನವಳಾಗದಿದ್ದರೆ ದಶಕಂಠನು ಅವಳನ್ನು ಕೊಂದುಬಿಡುವುದಾಗಿ ಹೇಳಿ ಹೆದರಿಸಿ ಹೋದನು.

ಇತ್ತ ಲಕ್ಷ್ಮಣನು ರಾಘವನನ್ನು ಹುಡುಕಿಕೊಂಡು ಬಂದು ಅಗ್ರಜನಿಗೆ ನಡೆದ ಸಂಗತಿಯನ್ನು ತಿಳಿಸಿದನು.  ಇಬ್ಬರೂ ಆಶ್ರಮಕ್ಕೆ ಬಂದು ವೈದೇಹಿ ಇಲ್ಲದುದನ್ನು ಕಂಡು ತಲ್ಲಣಿಸಿದರು.  ಮುಂದೆ ರಾಮಲಕ್ಷ್ಮಣರು ಆ ಗೊಂಡಾರಣ್ಯದಲ್ಲಿ ಸೀತೆಯನ್ನು ಹುಡುಕುತ್ತಾ ನಡೆದರು.  ಮಧ್ಯರಾತ್ರಿಯಲ್ಲಿ ಅನೇಕ ಅಡಚಣೆಗಳು ಬಂದವು.  ಆಯೋಮುಖಿಯೆಂಬ ರಕ್ಕಸಿಯು ಇವರ ಮೇಲೆ ಬೀಳಲು ಲಕ್ಷ್ಮಣನು ಅವಳ ಕಿವಿಮೂಗುಗಳನ್ನು ಕೊಯ್ದು ಓಡಿಸಿದನು.  ಮುಂದೆ ಗುಹೆಯಂತೆ ಬಾಯುಳ್ಳ ತಲೆಯೇ ಇಲ್ಲದ, ಪರ್ವತಾಕಾರವಾದ ದೇಹವುಳ್ಳ ವಿಕಾರರೂಪಿಯಾದ ಕಬಂಧನೆಂಬ ರಾಕ್ಷಸನು ತನ್ನ ದೀರ್ಘಬಾಹುಗಳಿಂದ ದಾರಿಯಲ್ಲಿ ಬರುತ್ತಿದ್ದ ರಾಮಲಕ್ಷ್ಮಣರನ್ನು ಹಿಡಿದುಕೊಂಡನು.  ಅವರಿಬ್ಬರೂ ಆ ಘೋರರಾಕ್ಷಸನ ಬಾಹುಗಳನ್ನು ಕತ್ತರಿಸಿ ಅವನ ದೇಹವನ್ನು ಸುಟ್ಟುಹಾಕಿದರು.   ಒಬ್ಬ ಋಷಿಯ ಶಾಪಕ್ಕೊಳಗಾಗಿ ಈಗ ವಿಮೋಚನೆಗೊಂಡ ಆ ಕಬಂಧನು ದಿವ್ಯರೂಪಧಾರಣೆಮಾಡಿ ಆಕಾಶದಲ್ಲಿ ಕಾಣಿಸಿಕೊಂಡನು.  ರಾಮನನ್ನು ಹರಸಿ ಸೀತಾನ್ವೇಷಣೆಗೆ ಋಷ್ಯಮೂಕದಲ್ಲಿರುವ ಸುಗ್ರೀವನ ಸಹಾಯ ಪಡೆಯುವಂತೆ ಹೇಳಿ ಮಾಯವಾದನು.

ಮುಂದೆ ಲಕ್ಷ್ಮಣಸಮೇತನಾದ ರಾಮನು ಮಾತಂಗಮುನಿಯ ಶಿಷ್ಯಳಾದ ಮಹಾರಾಮಭಕ್ತೆಯಾದ ಶಬರಿಯು ಕೊಟ್ಟ ಕಂದಮೂಲ ಫಲಾದಿ ಆತಿಥ್ಯವನ್ನು ಸ್ವೀಕರಿಸಿ ಸಂತೋಷಪಟ್ಟು ಆಕೆಯ ಸದ್ಗತಿಗೆ ಕಾರಣನಾದನು.  ಅಲ್ಲಿಂದ ಮುಂದೆ ಇಬ್ಬರೂ ಋಷ್ಯಮೂಕವೆಂಬಲ್ಲಿಗೆ ನಡೆದರು.

ನಾಳೆ ಮುಂದುವರೆಯುವುದು


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ