ಗುರಜಾಡ ಅಪ್ಪಾರಾವ್
ಗುರಜಾಡ ಅಪ್ಪಾರಾವ್
ಗುರಜಾಡ ಅಪ್ಪಾರಾವ್ ಆಧುನಿಕ ತೆಲುಗು ಸಾಹಿತ್ಯದ ಆದ್ಯರಲ್ಲಿ ಒಬ್ಬರು. ಅವರು ಕನ್ನಡ ಭಾಷಾಸಾಹಿತ್ಯಗಳ ವಿಷಯದಲ್ಲಿಯೂ ಆಸಕ್ತಿ ಹೊಂದಿದ್ದು, ಕನ್ನಡವನ್ನು ಕುರಿತು ಅನೇಕ ಲೇಖನಗಳನ್ನು ಬರೆದಿದ್ದರು.
ಗುರಜಾಡ ಅಪ್ಪಾರಾವ್ 1861ರ ಸೆಪ್ಟೆಂಬರ್ 21ರಂದು ವಿಶಾಖಪಟ್ಟಣದಲ್ಲಿ ಜನಿಸಿದರು.
ಗುರಜಾಡ ಅಪ್ಪಾರಾವ್ ಅವರು 'ಕನ್ಯಾ ಶುಲ್ಕಂ' ಎಂಬ ನಾಟಕದಿಂದ ಅಭೂತಪೂರ್ವವಾದ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸಿದರು. ಬಾಲ್ಯವಿವಾಹ, ಅದರಿಂದ ಒದಗಬಹುದಾದ ಬಾಲವಿಧವಾ ಸಮಸ್ಯೆ, ಕನ್ಯಾಶುಲ್ಕ, ಕನ್ಯಾಬಲಿ, ಗಂಡಸು ಹೆಂಗಸಿಗೆ ಮಾಡುವ ನಾನಾ ರೀತಿಯ ಮೋಸಗಳು - ಇವೆಲ್ಲದರ ಚಿತ್ರಗಳು ಈ ನಾಟಕದಲ್ಲಿ ಹೆಣೆದುಕೊಂಡು ಬರುತ್ತವೆ. ಅಂದು ಆ ಪ್ರಾಂತದಲ್ಲಿ ಹಬ್ಬಿದ್ದ ಸಾಂಘಿಕ ದುಷ್ಟಪದ್ಧತಿಗಳನ್ನು ಖಂಡಿಸುವುದಷ್ಟೇ ಈ ನಾಟಕದ ಮೂಲ ಉದ್ದೇಶವಾಗಿದ್ದರೂ ಅದು ಇನ್ನೂ ಹಲವು ಕಾರ್ಯಗಳನ್ನು ಸಾಧಿಸಿತು. ಈ ನಾಟಕ ಸಂಪೂರ್ಣವಾಗಿ ಗದ್ಯರೂಪಕ. ಇದರಲ್ಲಿ ಅಂದಿನ ತೆಲುಗು ನಾಟಕಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದಂತೆ ಹಾಡುಗಳಿಲ್ಲ, ಪದಗಳೂ ಇಲ್ಲ, ಸಂಗೀತದ ನೆರವಿಲ್ಲದೆಯೇ ಇದು ಪಡೆದುಕೊಂಡ ಜನಪ್ರೀತಿ ಅಸಾಧಾರಣವಾದದ್ದು. ಅಷ್ಟೇ ಅಲ್ಲದೆ, ಇದರಲ್ಲಿ ಬಳಕೆಯಾಗಿರುವ ಗದ್ಯವಾದರೂ ಪಂಡಿತಜನರ ಮೆಚ್ಚಿಗೆಯನ್ನು ಗಳಿಸಬಹುದಾದ ಗ್ರಾಂಥಿಕ ಭಾಷೆಯದಲ್ಲ. ಗ್ರಾಂಥಿಕ ಭಾಷೆಗೂ ವ್ಯಾವಹಾರಿಕ ಭಾಷೆಗೂ ಅಂತರ ಯಾವ ಕಾಲದಲ್ಲಿಯೂ ಇರತಕ್ಕದ್ದೇ. ಆದರೆ ಅಂದು ತೆಲುಗಿನಲ್ಲಿ ಆ ಅಂತರ ಬಹಳ ತೀವ್ರವಾಗಿತ್ತು. ಅಪ್ಪಾರಾವ್ ತಮ್ಮ ಮೇರುಕೃತಿಯನ್ನು ಬಳಕೆಯ ತೆಲುಗಿನಲ್ಲಿಯೇ ರಚಿಸಿ ವ್ಯಾವಹಾರಿಕ ಭಾಷಾವಾದಿಗಳಲ್ಲಿ ಅಗ್ರಗಣ್ಯರಾದರು. ಅಷ್ಟೇ ಅಲ್ಲ. ವ್ಯಾವಹಾರಿಕ ಭಾಷೆ ಕಾವ್ಯನಾಟಕಗಳಿಗೂ ಉಪಯುಕ್ತವಾದ ಭಾಷೆಯಾಗಬಲ್ಲದು ಎಂಬುದನ್ನು ಪ್ರಯೋಗಿಸಿ ತೋರಿಸಿದರು.
ಕನ್ಯಾಶುಲ್ಕವಲ್ಲದೆ 'ಕೊಂಡುಭಟ್ಟೆಯಂ' ಎಂಬ ಇನ್ನೊಂದು ನಾಟಕವನ್ನೂ ಅಪ್ಪಾರಾವ್ ರಚಿಸಿದ್ದಾರೆ. ಈ ಕೃತಿಗಳಲ್ಲಿ ಅವರ ಹಾಸ್ಯದ ವಿಶ್ವರೂಪವೇ ಪ್ರಕಟವಾಗಿದೆಯೆಂದು ಹೇಳಬಹುದು. ಇವರು ಮಾನಸಿಕ ವ್ಯಾಪಾರಗಳ ಮರ್ಮಗಳನ್ನು ಬಹಳ ಚೆನ್ನಾಗಿ ಅರಿತವರು. ಇವರ ವಿಡಂಬನ ಶೈಲಿ ಪ್ರಸಿದ್ಧವಾದುದು.
ಅಪ್ಪಾರಾವ್ ಜಾನಪದ ಗೀತೆಗಳ ಸ್ವಾರಸ್ಯವನ್ನು ಕಂಡುಕೊಂಡು ಅನುಭವಿಸಿ ಆನಂದಿಸಿದ ರಸಿಕರು. ಆ ಗೇಯ ಕಾವ್ಯಗಳ ಧಾಟಿಯನ್ನು, ನುಡಿಯಾಕಾರವನ್ನು ಮೆಚ್ಚಿ ಅವನ್ನು ತಮ್ಮ ಭಾವಗೀತೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಮುತ್ಯಾಲ ಸರಾಲು (ಮುತ್ತಿನ ಸರಗಳು) ಎಂಬ ಹೆಸರಿನ ಇವರ ಒಂದು ಕವನ ಸಂಕಲನವೇ ಪ್ರಕಟವಾಗಿದೆ.
ಅಪ್ಪಾರಾವ್ ಎಂದೂ ತಾವು ನವ್ಯಸಾಹಿತ್ಯದ ಪ್ರಾರಂಭಕರ್ತರೆಂದು, ಮಹಾಸಾಹಿತಿಯೆಂದೂ ಎಂದೂ ಗರ್ವಪಡಲಿಲ್ಲ. ಇವರಿಗೆ ಕವಿಯಶಸ್ಸಿಗಿಂತ ಸಂಘಸಂಸ್ಕರಣವೇ ಪ್ರಧಾನವಾಗಿತ್ತು.
ಅಪ್ಪಾರಾವ್ ಆರಂಭಿಸಿದ ವ್ಯಾವಹಾರಿಕ ಭಾಷಾವಾದವೂ ಇವರ ಭಾವ ಕವಿತ್ವವೂ ಪರಸ್ಪರ ಪೋಷಕವಾಗಿವೆ. ಇವುಗಳಿಂದ ಅಂದು ತೆಲುಗು ಸಾಹಿತ್ಯಲೋಕದಲ್ಲಿ ಒಂದು ಹೊಸ ಚೈತನ್ಯವೇ ಹುಟ್ಟಿತು. ಆಮೇಲೆ ಬಂದ ಅನೇಕ ತೆಲುಗು ಕವಿಗಳು ಇವರು ಕಲ್ಪಿಸಿಕೊಂಡ ಹೊಸ ಛಂದಸ್ಸನ್ನೇ ಹೆಚ್ಚಾಗಿ ಅನುಸರಿಸಿದರು. ಇವರ ಕೃತಿಗಳ ಪ್ರಭಾವ ಆಮೇಲಿನ ತೆಲುಗು ಸಾಹಿತ್ಯದ ಮೇಲೆ ವಿಶೇಷವಾಗಿ ಕಾಣುತ್ತದೆ.
ಅಪ್ಪಾರಾವ್ 1887ರಿಂದ ಕೆಲವು ವರ್ಷಗಳ ಕಾಲ ಕಾಲೇಜು ಅಧ್ಯಾಪಕರಾಗಿದ್ದು ಶಿಕ್ಷಣಕ್ಷೇತ್ರದಲ್ಲಿಯೂ ಕೃಷಿ ಮಾಡಿದರು. ಆಮೇಲೆ ಮಹಾರಾಜ ಆನಂದ ಗಜಪತಿರಾಯರ ಆಪ್ತಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಇವರಿಗೆ ಚರಿತ್ರೆಯ ಸಂಶೋಧನೆಯಲ್ಲಿಯೂ ಸಂಗೀತ ನೃತ್ಯಾದಿಕಲೆಗಳಲ್ಲಿಯೂ ವಿಶೇಷವಾದ ಆಸಕ್ತಿಯಿತ್ತು. ರಾಜರ ಆಪ್ತಕಾರ್ಯದರ್ಶಿಯಾಗಿದ್ದಾಗ ಪದೇ ಪದೇ ಮದ್ರಾಸಿಗೆ ಹೋಗಿ ಬರುತ್ತಿದ್ದ ಅಪ್ಪಾರಾವ್ 1895ರಲ್ಲಿ ಶೇಷಗಿರಿಶಾಸ್ತ್ರಿಯವರ ಮನೆಯಲ್ಲಿ ನಡೆದ ಮೈಸೂರು ವೀಣೆ ಶೇಷಣ್ಣನವರ ಜಲತರಂಗ್ ವಾದನವನ್ನೂ ವೀಣಾ ವಾದನವನ್ನೂ ಕೇಳಿದುದಾಗಿ ತಮ್ಮ ದಿನಚರಿಯಲ್ಲಿ ಗುರುತಿಸಿದ್ದಾರೆ. ಬೆಂಗಳೂರಿಗೆ ಬಂದು ಸೆಂಟ್ರಲ್ ಕಾಲೇಜಿನ ಪ್ರೊ. ಟೇಟ್‍ನೊಡನೆ ಸಾಹಿತ್ಯ ವಿಮರ್ಶೆಯನ್ನು ಕುರಿತು ಚರ್ಚೆಮಾಡಿದರಂತೆ. ಅಪ್ಪಾರಾವ್ ಕನ್ನಡ ಭಾಷಾಸಾಹಿತ್ಯಗಳ ವಿಷಯದಲ್ಲಿಯೂ ಆಸಕ್ತಿ ಹೊಂದಿದ್ದು ಕನ್ನಡವನ್ನು ಕುರಿತು ಕೆಲವು ಲೇಖನಗಳನ್ನು ಬರೆದಿದ್ದಾರೆ.
ಗುರಜಾಡ ಅಪ್ಪಾರಾವ್ 1915ರ ನವೆಂಬರ್ 30ರಂದು ನಿಧನರಾದರು.
On the birth anniversary of great playwright Gurajada Venkata Apparao
ಕಾಮೆಂಟ್‌ಗಳು