ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಬರಿ

ಶಬರಿ

-೧-
ಕಾದಿರುವಳು ಶಬರಿ,
ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು

ವನವನವ ಸುತ್ತಿ ಸುಳಿದು
ತರುತರುವನಲೆದು ತಿರಿದು
ಬಿರಿವೂಗಳಾಯ್ದು ತಂದು
ತನಿವಣ್ಗಳಾಯ್ದು ತಂದು;

ಕೊಳದಲ್ಲಿ ಮುಳುಗಿ ಮಿಂದು
ಬಿಳಿ ನಾರು ಮುಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸತಿಲಲಿ ಕಾದು ನಿಂದು.

ಎಳಗಾಳಿ ತೀಡುತಿರಲು
ಕಿವಿಯೆತ್ತಿ ಆಲಿಸುವಳು
ಎಲೆಯಲುಗೆ ಗಾಳಿಯಲ್ಲಿ
ನಡೆ ಸಪ್ಪುಳೆಂದು ಬಗೆದು.

ದೂರಕ್ಕೆ ನೋಳ್ಪೆನೆಂದು
ಮರವೇರಿ ದಿಟ್ಟಿಸುವಳು
ಗಿರಿ ಮೇಲಕೈದಿ ಕೈಯ
ಮರೆ ಮಾಡಿ ನೋಡುತಿಹಳು

ಬಾ ರಾಮ, ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸಿಹಳು
ಕಳೆದಿಹವು ವರುಷ ಹಲವು.

-೨-
ಶಬರಿವೊಲು ಜನವು, ದಿನವೂ
ಯುಗಯುಗವು ಕರೆಯುತಿಹುದು
ಕರೆ ಇಳೆಗಳೇಳಲರಸಿ
ತವಕದಲಿ ತಪಿಸುತಿಹುದು.

ಭರವಸೆಗಳಳಿಯವಾಗಿ
ಮನವೆಲ್ಲ ಬಯಕೆಯಾಗಿ
ಹಗಲೆಲ್ಲ ಕಾದು ಕೂಗಿ
ಇರುಳೆಲ್ಲ ಜಾಗರಾಗಿ;

ಬಂದಾನೊ ಬಾರನೋ ಓ
ಕಂಡಾನೊ ಕಾಣನೋ ಓ
ಎಂದೆಂದು ಜಪಿಸಿ ತಪಿಸಿ
ಶಂಕಾತುರಂಗಳೂರಿ.

ಬಾ ರಾಮ, ಬಾರ, ಬಾರಾ
ಬಡವರನು ಕಾಯು ಬಾರಾ
ಕಂಗಾಣದಿವರ ಪ್ರೇಮ
ನುಡಿಸೋತ ಮೂಕ ಪ್ರೇಮ.

-ಕಾದಿರುವುದು ಜನವು
ರಾಮ ಬರುವನೆಂದು
ತಮ್ಮ ಪೂಜೆಗೊಳುವನೆಂದು

ಸಾಹಿತ್ಯ: ವಿ. ಸೀತಾರಾಮಯ್ಯ


Tag: Shabari, Kadiruvalu Shabari Rama baruvanendu, Kaadiruvalu Shabari

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ