ರಶ್ಮಿ ಪ್ರಸಾದ್
ರಶ್ಮಿ ಪ್ರಸಾದ್
ರಶ್ಮಿ ಪ್ರಸಾದ್ ಬಹುಮುಖಿ ಪ್ರತಿಭೆಗಳ ಸಂಗಮರು.
ಅಕ್ಟೋಬರ್ 15, ರಶ್ಮಿ ಅವರ ಜನ್ಮದಿನ. ಮೂಲತಃ ಇವರು ತುಮಕೂರಿನವರು. ತಂದೆ ಗಿರಿರಾಜ್ ಕರ್ನಾಟಕ ವಿದ್ಯುಚ್ಚಕ್ತಿ ಮಂಡಲಿಯಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದವರು. ತಾಯಿ ವಿಶಾಲ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರಶ್ಮಿ ಅವರು ಬಿ.ಎಸ್‍ಸಿ, ಬಿ.ಎಡ್ ವ್ಯಾಸಂಗ ನಡೆಸಿ, ವಿವಾಹಕ್ಕೆ ಮುಂಚಿತವಾಗಿ ಹೈಸ್ಕೂಲಿನಲ್ಲಿ ಉಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದರು.
ವಿವಾಹದ ನಂತರ ರಶ್ಮಿ ಪ್ರಸಾದ್ ಅವರು ತಮ್ಮ ಕುಟುಂಬದೊಂದಿಗೆ ಚಿಂತಾಮಣಿಯಲ್ಲಿ ನೆಲೆಸಿದ್ದಾರೆ. ಕುಟುಂಬ ನಿರ್ವಹಣೆಯೊಂದಿಗೆ ಬದುಕನ್ನು ಸಕ್ರಿಯವಾಗಿ ನಡೆಸುವ ಆಶಯವುಳ್ಳ ಇವರು, ಹಲವಾರು ಮಂದಿಗೆ ಬದುಕು ನಡೆಸಿಕೊಳ್ಳಲು ಅನುವಾಗುವಂತಹ ಸ್ವಯಂ ಉದ್ಯೋಗವನ್ನೂ ನಡೆಸುತ್ತಿದ್ದಾರೆ.
ಚಿಕ್ಕಂದಿನಿಂದಲೂ ಕ್ರೀಡೆ, ಸಾಹಿತ್ಯ, ಸಂಗೀತ, ನೃತ್ಯ, ಕಲೆ ಎಲ್ಲದರಲ್ಲೂ ರಶ್ಮಿ ಅವರಿಗೆ ಹುರುಪು. ವಿದ್ಯಾಭ್ಯಾಸದಲ್ಲಿ ಮುಂದಿದ್ದಂತೆಯೇ ಎಲ್ಲ ಚಟುವಟಿಕೆಗಳಲ್ಲೂ ಮುಂದು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಇವರಿಗೆ ಸಂದ ಬಹುಮಾನಗಳು ಅನೇಕ. ಶಾಲಾ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇವರ ಭಾಗವಹಿಕೆ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು.
ರಶ್ಮಿ ಅವರು ಶಾಲಾ ದಿನಗಳಲ್ಲಿ 'ಖೋ ಖೋ' ಆಟದಲ್ಲಿ ರಾಷ್ಟ್ರೀಯ ತಂಡದ ನಾಯಕಿಯ ಎತ್ತರಕ್ಕೆ ಏರಿದ್ದ ಪ್ರತಿಭೆ. ಕ್ರೀಡಾಳುವಾಗಿ ಅವರು ಗಳಿಸಿದ ಸಾಧನಾ ಪ್ರಶಸ್ತಿಗಳು ಅನೇಕ.
ರಶ್ಮಿ ಅವರು ವೀಣಾ ವಾದನದಲ್ಲಿ ವಿದುಷಿ ಶಾಂತಾ ಪುರುಷೋತ್ತಮ್ ಅವರ ಶಿಷ್ಯೆಯಾಗಿದ್ದು, ಸೀನಿಯರ್ಗೆ ಹೋಗುತ್ತಿದ್ದಾರೆ. ಅವರು ಭರತನಾಟ್ಯವನ್ನು ವಿದ್ವಾನ್ ಶ್ರೀನಿವಾಸ ಕೊರಟಗೆರೆ ಅವರಲ್ಲಿ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಏರೋಬಿಕ್ಸ್‍ನಲ್ಲೂ ಇವರಿಗೆ ಆಸಕ್ತಿ.
ಸಾಹಿತ್ಯದಲ್ಲಿ ರಶ್ಮಿ ಅವರ ಉತ್ಸಾಹಯುತ ಪ್ರತಿಭೆ ಹಲವು ಮುಖಿಯಾದದ್ದು. ಅವರು ಹಾಕುವ ಚಿತ್ರಸಹಿತ ಕವಿತೆಗಳನ್ನು ನೋಡುವುದು ಮತ್ತು ಓದುವುದು ಎರಡೂ ಚಂದ. ಅವರ ಹಲವು ರೀತಿಯ ಅಂತರಾಳದ ಸಂವೇದನಾಯುಕ್ತ ವಿಚಾರಪೂರ್ಣ ಲೇಖನಗಳು ಆಪ್ತವೆನಿಸವಂತದ್ದು. ಅವರ ಎಲ್ಲ ಪ್ರಸ್ತುತಿಗಳಲ್ಲೂ ಅಕರ್ಷಕ ಚಿತ್ರ ಪ್ರಸ್ತುತಿ ಮತ್ತು ಹೃದಯವಂತಿಕೆಯ ಅನುಭೂತಿಗಳು ಮೇಳೈಸುವ ರೀತಿ ಅಚ್ಚುಕಟ್ಟಿನದು.
ಪ್ರತಿ ವಿಶೇಷ ಸಂದರ್ಭಕ್ಕೂ ಹೊಂದುವಂತೆ ಕವಿತೆ, ಇಲ್ಲವೇ ವೈಚಾರಿಕ ಅನುಭೂತಿಗಳುಳ್ಳ ಚಿಂತನೆಗಳನ್ನು ರಶ್ಮಿ ಅವರ ಬರಹದಲ್ಲಿ ಓದುವುದೇ ಸಂತಸಕರ. ರಶ್ಮಿ ಅವರ ಬರಹಗಳು ಅನೇಕ ನಿಯತಕಾಲಿಕಗಳಲ್ಲಿ ಮೂಡಿ ವ್ಯಾಪಕವಾಗಿ ಮೆಚ್ಚುಕೆ ಗಳಿಸಿವೆ. ಅವರಿಗೆ ಅನೇಕ ಸಂಘಟನೆಗಳ ಬಹುಮಾನಗಳೂ ಸಂದಿವೆ.
ರಶ್ಮಿ ಅವರ ಒಂದು ಕವಿತೆ ಇಂತಿದೆ:
ಕದನ...
ಬದುಕಿಗೆ ಹಾಸುಹೊದ್ದ ಬವಣೆ
ನಿಲ್ಲಿಸದೆ ಸಾಗಿಹುದು ನಿತ್ಯದಬೇನೆ
ಮೂರುದಿನದ ಬಾಳಿನ ಪರಿಪಾಠ
ಎದುರಿಸಲೇಬೇಕು ನಿಂತು ಹೋರಾಟ.!!
ಮುಗಿಯಿತೆಂದರೆ ಒಂದು ಯುದ್ಧ
ಹಿಂದೆಯೇ ಮತ್ತೊಂದು ಯುದ್ಧಸಿದ್ದ
ಆಗಿರಲೇಬೇಕು ಇಲ್ಲಿ ಸರ್ವಸನ್ನದ್ಧ
ಸಿದ್ಧವಿರಲೇಬೇಕು ನಾವು ಸದಾಬದ್ದ.!!
ಮೊಳಗುತಿರಲು ರಣಕಹಳೆ
ನಿಲ್ಲದು ಕಾಲನೊಂದಿಗೆ ಕಾಲನಡೆ
ಬಗೆಹರಿದಷ್ಟೂ ಬಾಳಿನ ಬೀಜಬುತ್ತಿ
ತೆರೆದುಕೊಳ್ವುದು ಸಮಸ್ಯೆಗಳ ತತ್ತಿ.!!
ತಂದುಕೊಟ್ಟ ಗೆಲುವುಗಳ ಸಂಭ್ರಮ
ಕಬಳಿಸುವುದು ಸೋಲಿನ ಸಂಕಟಗಳು
ಕ್ಷಣಕ್ಷಣವೂ ಕಾಡುತಿಹುದು ಆಂತರ್ಯ
ಒಳಗೊಳಗೆ ದಹಿಸುತಿಹುದು ಮಾತ್ಸರ್ಯ.!!
ದೇಹವೆಂಬ ರಥವು ಚಲಿಸುತಿರಲು
ಅಂತರಾತ್ಮವು ಸಾರಥ್ಯ ವಹಿಸಿರಲು
ಆತ್ಮಸಾಕ್ಷಿಯ ದೀವಿಗೆಯ ಎದುರು
ಸೋಲದೆಂದೂ ಅಂತರ್ದನಿಯ ಬಾಳಹಾದಿ.!!
ರಶ್ಮಿ ಪ್ರಸಾದ್ ನನ್ನ ಬರಹ ಕೈಂಕರ್ಯದ ಆಪ್ತ ಬೆಂಬಲಿಗರು. ಅವರ ಬದುಕಿನ ನೋಟ, ಎಲ್ಲವನ್ನೂ ಸಮಚಿತ್ತದಿಂದ, ಅಗತ್ಯವಿದ್ದೆಡೆ ಬೇಕಾದ ಹಿತ ಮಿತದ ಜೊತೆಗೆ, ಬೇಕಾದ ಕಟ್ಟುನಿಟ್ಟನ್ನೂ ಬೆರೆಸಿ ಅವರು ಬದುಕು ಕಾಣುವ ರೀತಿ ಪ್ರೇರಿಸುವಂತದ್ದು. ಆತ್ಮೀಯರಾದ ರಶ್ಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Rashmi Prasad 🌷🌷🌷
ಕಾಮೆಂಟ್‌ಗಳು