ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವಾನಂದ ಹೆಗಡೆ


 ಕೆರೆಮನೆ ಶಿವಾನಂದ ಹೆಗಡೆ


ಕರಾವಳಿ ಉತ್ತರಕನ್ನಡದ ಹೊನ್ನಾವರದ ಗುಣವಂತೆ ರಾಷ್ಟೀಯ ಹೆದ್ದಾರಿಗೆ ಸಮೀಪದ ಹಳ್ಳಿ, ಹೆದ್ದಾರಿಯಲ್ಲಿ ನಿಂತರೆ ಅಲ್ಲಿ ಯಕ್ಷಗಾನದ ಮಧುರ ಸಂಗೀತದ ಕಂಪನ್ನು ಹರಡುವ ಶ್ರೀಮಯ ಯಕ್ಷಗಾನ ಕೇಂದ್ರವಿದೆ. ಇದರ ನಿರ್ದೇಶಕರು ಕೆರೆಮನೆ ಶಿವಾನಂದ ಹೆಗಡೆ. ಈ ಉತ್ಸಾಹಿ ಕಲಾವಿದ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಮತ್ತು ಯಕ್ಷಗಾನ ತರಬೇತಿ ಕೇಂದ್ರದ ನಿರ್ದೆೇಶಕರೂ ಆಗಿದ್ದಾರೆ.

ಶಿವಾನಂದ ಹೆಗಡೆ ಅವರು ಸುಪ್ರಸಿದ್ಧ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಹೆಸರಾದ ಕೆರೆಮನೆ ಯಕ್ಷಗಾನ ಪರಂಪರೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕೆರೆಮನೆ ಶಿವರಾಮ ಹೆಗಡೆಯವರ ಮೊಮ್ಮಗ, ಯಕ್ಷಗಾನವನ್ನು ಏಕವ್ಯಕ್ತಿ ಪ್ರದರ್ಶನ ಸಾಹಸಿಯಾಗಿ ಮೇಳವನ್ನು ಕಟ್ಟಿ ಮೆರೆಸಿದ ಕೆರೆಮನೆ ಶಂಭು ಹೆಗಡೆಯವರ ಮಗನಾದ ಕೆರೆಮನೆ ಶಿವಾನಂದ ಹೆಗಡೆ. ಅವರು ಈ ಶ್ರೇಷ್ಠ ಪರಂಪರೆಯನ್ನು ಮುಂದುವರೆಸುತ್ತ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಯಶಸ್ವಿಯಾಗಿ ಮುಂದುವರೆಸುತ್ತ ನಡೆದಿದ್ದಾರೆ. ಈ ಸಂಸ್ಥೆಗೆ ಇತ್ತೀಚೆಗೆ UNESCO ಮಾನ್ಯತೆಯ ಗೌರವ ಸಂದಿದೆ. 

ಅಕ್ಟೋಬರ್ 24 ನಮ್ಮ ಕೆರೆಮನೆ ಶಿವಾನಂದ ಹೆಗಡೆ ಅವರ ಜನ್ಮದಿನ.  ಶಿವಾನಂದ ಹೆಗಡೆ ತಮ್ಮ 12ನೆಯ ವಯಸ್ಸಿಗೇ ಗೆಜ್ಜೆಕಟ್ಟಿ ನರ್ತಿಸಿದವರು. ತಮ್ಮ ಪದವಿಶಿಕ್ಷಣ ಪೂರೈಸಿ, ಗುರು ಡಾ. ಮಾಯಾ ರಾವ್‌ ಅವರಲ್ಲಿ ಕೊರಿಯೋಗ್ರಫಿ ಅಭ್ಯಾಸ
ಮುಂದುವರೆಸಿದರು. ಕೋರಿಯೋಗ್ರಫಿಯ ತಜ್ಞತೆಗಾಗಿ ಮುಖ್ಯವಾಗಿ ಕಥಕ್‌ ಹಾಗೂ ಅದರ ಜೊತೆಗೆ ಸರೈಕಲಾಛಾವೊ, ಮಣಿಪುರಿ ಯುದ್ಧನೃತ್ಯ ಸಹಿತ ಜನಪದ ನೃತ್ಯಗಳನ್ನು ಕರಗತ ಮಾಡಿಕೊಂಡರು. ತಾತ ಕೆರೆಮನೆ ಶಿವರಾಮ ಹೆಗಡೆಯವರ ಸತತ ಮಾರ್ಗದರ್ಶನ, ತಂದೆಯವರ ನಿರ್ದೇಶನ ಅವರನ್ನು ಅಳಿವಿನಂಚಿನಲ್ಲಿರುವ ಯಕ್ಷಗಾನದ ಸೌಂದರ್ಯಾಂಶಗಳನ್ನು ರಕ್ಷಿಸುವ ಕಲಾವಿದರಲ್ಲಿ
ಮುಂಚೂಣಿಯಲ್ಲಿ ನಿಲ್ಲಿಸಿದೆ. ಅನುಭವಗಳ ಸಾರಥ್ಯದೊಂದಿಗೆ ಅನೇಕ ಯಕ್ಷಗಾನ ಕಮ್ಮಟಗಳನ್ನು ಅವರು ನಡೆಸಿದ್ದಾರೆ. ಯಕ್ಷಗಾನದಲ್ಲಿ ಅನೇಕ ಪ್ರಾತ್ಯಕ್ಷಿಕೆ ನೀಡಿರುವ ಇವರು ಕಲಾಜಗತ್ತಿನ ಯಕ್ಷಗಾನ ಪ್ರೇಮಿಗಳಿಗೆ ದೇಶ ವಿದೇಶಗಳಲ್ಲಿ ಪರಿಚಿತರು, ತಮ್ಮ ಕಲಾಕೇಂದ್ರದಲ್ಲಿ ಅನೇಕ ಯಕ್ಷಗಾನ ಕಲಾವಿದರನ್ನು ರೂಪಿಸಿರುವ ಇವರು ಯಶಸ್ವಿ ನಿರ್ದೇಶಕ ಮತ್ತು ಗುರು ಕೂಡ.

ಯಕ್ಷಗಾನ ಕಲಾಕುಟುಂಬದ ಐದನೇ ಪೀಳಿಗೆಯವರಾದ ಕೆರೆಮನೆ ಶಿವಾನಂದ ಹೆಗಡೆ ಸಹಜವಾಗಿಯೇ ಯಕ್ಷಗಾನವನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿದವರು. ಬಿ.ಎ. ಪೂರೈಸಿದ ಇವರು ತಂದೆಯ ದಾರಿಯನ್ನೇ ಹಿಡಿದರು. ಶ್ರೀಮತಿ ಮಾಯಾರಾವ್‌ ಅವರ
ನಿರ್ದೆಶನದಲ್ಲಿ ಕೋರಿಯೋಗ್ರಫಿ ಡಿಪ್ಲೋಮಾ ಹಾಗೂ ಕಥಕ್‌ ನ್ರತ್ಯ ಅಭ್ಯಸಿಸಿದರು ಹಾಗೂ ಭಾರತದ ಹಲವಾರು ಜನಪದ ರಂಗಭೂಮಿಗಳ ಅಧ್ಯಯನ ಮಾಡಿದರು. ಅಪ್ರತಿಮ ಕಲಾವಿದ, ಅಜ್ಜ ಶಿವರಾಮ ಹೆಗಡೆ ಮತ್ತು ತಂದೆ, ಶಂಭು ಹೆಗಡೆ ಅವರ ಮಾರ್ಗದರ್ಶನ ಶಿವಾನಂದ ಹೆಗಡೆಯವರ ವೃತ್ತಿ ಜೀವನ ರೂಪುಗೊಳಿಸಿದವು. ತಂದೆಯವರೊಂದಿಗೆ
ದೇಶ ವಿದೇಶದಲ್ಲಿ ಯಕ್ಷಗಾನ ಪ್ರದರ್ಶಿಸುವುದರೊಂದಿಗೆ ಅವರು ಆಧುನಿಕ ರಂಗಕ್ಕೂ ತಮ್ಮನ್ನು ತೆರೆದುಕೊಂಡರು. ನಾಟ್ಯ ಇನ್ಸ್ಟಿಟ್ಯೂಟ್‌ ಆಫ್‌ ಕಥಕ್‌ ಆಂಡ್‌ ಕೋರಿಯೋಗ್ಯಫಿ ತಂಡ, ನಾಟ್ಯ ಬ್ಯಾಲೆಟ್‌ ಸೆಂಟರ್‌ ತಂಡ ಮತ್ತು ಇಂಡಿಯನ್‌ ರಿವೈವಲ್‌ ಗ್ರೂಪ್‌, ಹೊಸದೆಹಲಿ ತಂಡದೊಂದಿಗೆ ಭಾರತವಿಡೀ ಸುತ್ತಿದ್ದಲ್ಲದೇ ಹಲವಾರು ಧಾರವಾಹಿಗಳಲ್ಲಿ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಟಕಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿವಿಧ ಆಧುನಿಕ ರಂಗ ಕಾರ್ಯಾಗಾರಗಳಲ್ಲಿನ ಇವರ ಭಾಗವಹಿಸುವಿಕೆ ಗಮನೀಯ. ಇವರು ಅಮೇರಿಕಾದ ಯುನಿವರ್ಸಿಟ ಆಫ್‌ ಲಾಸ್‌ ಎಂಜಲೀಸ್‌ನವರು 1996 ರಲ್ಲಿ ನಡೆಸಿದ ಅಪೆಕ್ಸ್‌ ಕಾರ್ಯಗಾರಕ್ಕೆ ಆಯ್ಕೆಯಾದ ಇಬ್ಬರು ಪ್ರತಿಭಾನ್ವಿತ ಯುವ ಭಾರತೀಯ ಕಲಾವಿದರಲ್ಲಿ ಒಬ್ಬರಾಗಿದ್ದರು.

ಆಧುನಿಕ ರಂಗಭೂಮಿಯ ಸ್ಪರ್ಶಕ್ಕೆ ಸಂವೇದನಾ ಶೀಲರಾಗಿರುವ ಶಿವಾನಂದ ಹೆಗಡೆ ತಮ್ಮ ವಿಶಿಷ್ಠ
ಪರಂಪರಾಗತ ಶೈಲಿಯ ಯಕ್ಷಗಾನ ಪ್ರದರ್ಶನಗಳಿಗೆ ದೇಶದಲ್ಲಿಯೇ ಪ್ರಸಿದ್ಧರು. ಯಕ್ಷಗಾನದಲ್ಲಿ ಪುರುಷ ಮತ್ತು ಸ್ತ್ರೀ ಪಾತ್ರಗಳೆರಡನ್ನೂ ಯಶಸ್ವಿಯಾಗಿ ನಿಭಾಯಿಸಬಲ್ಲ ಕಲಾವಿದರು. ಹೆಗಡೆಯವರ ಸಂಶೋಧನಾತ್ಮಕ ಪ್ರಯೋಗ
"ಆಟವೇ ಪಾಠ" ಮಕ್ಕಳಲ್ಲಿ ಯಕ್ಷಗಾನದ ಕುರಿತು ಉದ್ಬೋಧಕವಾದ ತಿಳುವಳಿಕೆಯನ್ನು ಶಾಲೆಗಳಲ್ಲಿ ಸೃಷ್ಠಿಸಿ ಸಂಚಲನ ಉಂಟುಮಾಡಿದೆ.
ಭಾವಿ ಜನಾಂಗಕ್ಕೆ ಯಕ್ಷಗಾನದ ಆಸಕ್ತಿ ಮೂಡಿಸುವಲ್ಲಿ ಇದು ಯಶಸ್ವಿಯಾದ ಪ್ರಯೋಗ.  ಅಲ್ಲದೇ ಪಾರಂಪರಿಕ ಯಕ್ಷಗಾನವನ್ನು ಕಲಿಸುವ ಶ್ರೀಮಯ ಯಕ್ಷಗಾನ ಕೇಂದ್ರ ಯಶಸ್ವಿಯಾಗಿ ನಡೆಸುತ್ತಿರುವುದೆ.  ಅನೇಕ ಸೃಜನಾತ್ಮಕ ಹೊಸ ಯೊಜನೆಗಳನ್ನು ಹೊತ್ತು  ತಮ್ಮ ಪರಂಪರಾಗತ ಯಕ್ಷ ಮೇಳದೊಂದಿಗೆ ಸಂಚರಿಸಿರುವ ಹೆಗಡೆಯವರು ಈಗಾಗಲೇ ಅಮೇರಿಕಾ, ಇಂಗ್ಲೆಂಡ್‌, ಸ್ಟೇನ್‌, ಬಹ್ರೇನ್‌, ಫ್ರಾನ್ಸ್‌, ಚೈನಾ, ನೇಪಾಳ, ಶ್ರೀಲಂಕಾ, ಸಿಂಗಾಪುರ, ಇಂಡೋನೇಷ್ಯಾ, ದುಬೈ, ಮಲೇಷಿಯಾ, ಫಿಲಿಫೈನ್ಸ್‌, ಲಾವೋಸ್‌ ಮತ್ತು ಮಯನ್ಮಾರ್‌ ಹೀಗೆ ನಾನಾ ಕಡೆಗಳಲ್ಲಿ ಯಕ್ಷಗಾನವನ್ನ ಜಾಗತಿಕವಾಗಿ ಕಲಾಪ್ರೇಮಿಗಳಿಗೆ ಯಶಸ್ವಿಯಾಗಿ ತಲುಪಿಸಿದ್ದಾರೆ.  ಅಮೇರಿಕಾದ ಇನ್‌ಕ್ರೆಡಿಬಲ್‌ ಇಂಡಿಯಾ 60 ಉತ್ಸವ, ಇಂಡೋನೇಷಿಯಾದ ಭಾರತ ಉತ್ಸವ (ನವೆಂಬರ್‌ 2009), ಕೇಂದ್ರ
ಸಂಗೀತ ನಾಟಕ ಅಕಾಡೆಮಿಯ ದೇಶಪರ್ವ-2010 ಮತ್ತು ಸಿಂಗಾಪುರದ ಎಸ್‌ಫ್ಲನೇಡ್‌ ಕಲಾ ಉತ್ಸವ-2012, 9 ನೇ ವಾರ್ಷಿಕ ಮ್ಯೂಸಿಕ್‌ ಮತ್ತು ಡಾನ್ಸ್‌ ಫೆಸ್ಟಿವಲ್‌, ಸ್ಯಾಂಡಿಯಾಗೋ, ಸಂತ ತ್ಯಾಗರಾಜ ಮ್ಯೂಸಿಕ್‌ ಫೆಸ್ಟಿವಲ್‌, ಕ್ಷೀವ್‌ಲ್ಯಾಂಡ್‌, ಒಟ್ಟೂ 2 ತಿಂಗಳ
ಅಮೇರಿಕಾ ಪ್ರವಾಸ-2016, ಇಂದ್ರಧನುಷ್‌ ಉತ್ಸವ-ಇಂಡಿಯನ್‌ ಕನ್ಸುಲೇಟ್‌ ಹಾಲ್‌, ದುಬೈ (2017) ಮುಂತಾದ ಕಡೆ ಹೆಗಡೆಯವರ ಪ್ರದರ್ಶನಗಳಿಗೆ ಅದ್ಭುತ ಪ್ರತಿಸ್ಪಂದನೆಗಳು ದೊರೆತಿವೆ. ಭಾರತದಲ್ಲಿ ಕಾಮನ್‌ವೆಲ್ತ್‌ ಫೆಸ್ಟಿವಲ್‌, ದೆಹಲಿ (2010), ಪಾರಂಪರಿಕ ನಾಟ್ಯೋತ್ಸವ, ನಾಟ್ಯ ಮಂದಿರ, ಗ್ವಾಲಿಯರ್‌ (2014),ದೆಹಲಿಯ ಇಂಟರ್‌ನ್ಯಾಷನಲ್‌ ಆರ್ಟ್‌ ಫೆಸ್ಟಿವಲ್‌ (2014), ಫೆಸ್ಟಿವಲ್‌ ಆಫ್‌
ಮ್ಯೂಸಿಕ್‌, ಡಾನ್ಸ್‌ ಹಿಡ್ರಾಮಾ, ಮೇಘದೂತ್‌ ಥಿಯೇಟರ್‌, ದೆಹಲಿ (2016), ಚೆನ್ನೈನಲ್ಲಿ ಭಾರತ ಸಂಗೀತ ಉತ್ಸವ, (2015), ನಿರಮ್‌
ಥಿರಮ್‌-2016, ಕಲಾಕ್ಷೇತ್ರ ಚೆನ್ನೈ, "ಲೋಕೋತ್ಸವ' ಪೋಕ್‌ ಫೆಸ್ಟಿವಲ್‌, ಗೋವಾ (2016), ಹಂಪಿ ಉತ್ಸವ (2017), ಲಕ್ಷ್‌ ಭಾತಖಾಂಡೆ ವಿಶ್ವವಿದ್ಯಾಲಯ, ಪುಣೆಯ "ಸುದರ್ಶನ್‌ ಮ್ಯೂಸಿಕ್‌ ಫೆಸ್ಟಿವಲ್‌' (2018), NSDಯ ಭಾರತ ರಂಗಮಹೋತ್ಸವ ಉತ್ಸವ (2019), ಜೆ.ಎನ್‌.ಯು ದೆಹಲಿ, ಸಯ್ಯಾಜಿ ರಾವ್‌ ವಿಶ್ವವಿದ್ಯಾಲಯ ಬರೊಡಾ, ಸೆರೆಂಡಿಪಿಟಿ ಆರ್ಟ್‌ ಫೆಸ್ಟಿವಲ್‌, ಪಣಜಿ, ಗೋವಾ, 668
Annual Art Festival, ಕಲಾಕ್ಷೇತ್ರ, ಚೆನ್ನೈ
21ನೇ ಭಾರತ ರಂಗ ಮಹೋತ್ಸವ,  NSD ದೆಹಲಿ (2020),'ಉತ್ಸವಂ-2021', ದಕ್ಷಿಣಚಿತ್ರ ಮ್ಯೂಸಿಯಂ, ಚೆನ್ನೈ (2021) ಅಲ್ಲದೇ ಸ್ಪಿಕ್‌ಮೇಕೆಯ ಸಹಯೊಗದಲ್ಲಿ ದೇಶದಾದ್ಯಂತ ಪ್ರದರ್ಶನ, ಯಕ್ಷಗಾನ ಪ್ರಾತ್ಯಕ್ಷಿಕೆ, ತರಬೇತಿ ನೀಡಿದ್ದಾರೆ. 

ಹೆಗಡೆಯವರು ಒಬ್ಬ ನಿರ್ದೇಶಕ, ನಟನಾಗಿರುವುದರ ಜತೆಗೆ ಯಶಸ್ವಿ ಸಂಘಟಕರೂ ಹೌದು. ಈ ಎಲ್ಲ ಸಾಧನೆಗಳ ಜತೆ ಪರಿಸರ ರಕ್ಷಣೆ, ಛಾಯಾಂಕ, ಬರಹಗಾರರು, ತಾಳಮದ್ದಳೆ ಅರ್ಥದಾರಿ ಮತ್ತು ಸಾಂಪ್ರದಾಯಿಕ ಕಲೆಗಳ ದಾಖಲಾತಿ ಕ್ಷೇತ್ರಗಳಲ್ಲೂ ಹೆಗಡೆಯವರು ಚಟುವಟಿಕೆಯನ್ನು ವಿಸ್ತರಿಸಿದ್ದಾರೆ.

ಹೆಗಡೆಯವರ ನಿರ್ದೇಶನದಲ್ಲಿ ಪಂಚವಟಿ, ಸೀತಾಪಹಾರ, ಲಂಕಾದಹನ, ವಾಲಿಮೋಕ್ಷ, ಸೀತಾವಿಯೋಗ, ಗದಾಯುದ್ಧ, ಕಾರ್ತವೀರ್ಯಾರ್ಜುನ,  ಶ್ರೀಕೃಷ್ಣ ಸಂಧಾನ, ಕಂಸವಧೆ, ದಕ್ಷಯಜ್ಞ ಸುಧನ್ವಕಾಳಗ, ಮಾರುತಿ ಪ್ರತಾಪ, ರಾಮಾಂಜನೇಯ, ಕೃಷ್ಣಾರ್ಜುನ, ಸುಭದ್ರಾ ಕಲ್ಯಾಣ, ಕನಕಾಂಗಿ ಕಲ್ಯಾಣ, ಸೌಗಂಧಿಕಾಹರಣ, ಭೀಷ್ಮ ವಿಜಯ, ಶರಸೇತು ಬಂಧನ, ಕಾಲಯವನ ಕಾಳಗ, ಜರಾಸಂದ ವಧೆ, ದಮಯಂತಿ ಪುನಃಸ್ವಯಂವರ, ಖಾಂಡವ ದಹನ, ಹಿಡಿಂಬಾ ವಿವಾಹ, ಚಕ್ರವ್ಯೂಹ, ವಿದ್ಯುನ್ಠತಿ ಕಲ್ಯಾಣ, ಜಾಂಬವತಿ ಕಲ್ಯಾಣ ಮುಂತಾದ ಪ್ರಸಂಗಗಳು ಜನಪ್ರಿಯತೆ ಪಡೆದಿದೆ.

ಹೆಗಡೆಯವರು ನಿರ್ವಹಿಸಿರುವ ಯಕ್ಷಗಾನದಲ್ಲಿ ಪ್ರಮುಖ ಪಾತ್ರಗಳಲ್ಲಿ ಶ್ರೀ ಕೃಷ್ಣನಾಗಿ - ಕೃಷ್ಣ ಸಂಧಾನ, ಕೃಷ್ಣಾರ್ಜುನ, ಜರಾಸಂಧ, ಸುಭದ್ರಾ ಕಾಲ್ಕಾಣ, ಕಂಸವಧೆ, ಮಾರುತಿ ಪ್ರತಾಪ, ಭೀಷ್ಮಪರ್ವ, ಗದಾಯುದ್ಧ, ಕರ್ಣಪರ್ವ, ಜಾಂಬವತೀ ಕಲ್ಯಾಣ ಪ್ರಸಂಗಗಳು; ಶ್ರೀರಾಮನಾಗಿ-ರಾಮಾಂಜನೇಯ, ಸೀತಾವಿಯೋಗ, ಪಂಚವಟಿ, ಸೀತಾಪಹಾರ, ವಾಲೀ ಮೋಕ್ಷ ಪ್ರಸಂಗಗಳು ಸೇರಿವೆ. ಉಳಿದಂತೆ ಕಾರ್ತವೀರ್ಯಾರ್ಜುನ ಕಾಳಗದಲ್ಲಿ ಕಾರ್ತವೀರ್ಯ, ರಾವಣ ಮತ್ತು 
ವಿಭೀಷಣ; ಸುಧನ್ವ  ಕಾಳಗದ ಸುಧನ್ವ, ಕಂಸವಧೆಯಲ್ಲಿ ಕಂಸ; ಅತಿಕಾಯ ಕಾಳಗದಲ್ಲಿ ಅತಿಕಾಯ; ಜರಾಸಂಧ ವಧೆಯಲ್ಲಿ ಜರಾಸಂಧ; ಸೌಗಂಧಿಕಾಹರಣದ ಭೀಮ; ದಮಯಂತಿ ಪುನಃ ಸ್ವಯಂವರದ  ಬಾಹುಕ ಮತ್ತು ಚೈದ್ಯರಾಣೀ, ಲಂಕಾದಹನದಲ್ಲಿ  ಆಂಜನೇಯ, ರಾವಣ; ಇಂದ್ರಜಿತು ರಾವಣವಧೆಯ ‌ಇಂದ್ರಜಿತು, ರಾವಣ; ಲಕ್ಷ್ಮಣ, ಮಂಡೋದರಿ; ದಕ್ಷಯಜ್ಞದಲ್ಲಿ ಈಶ್ವರ; ಸತ್ಯ ಹರಿಶ್ಚಂದ್ರದಲ್ಲಿ ‌ವಿಶ್ವಾಮಿತ್ರ, ವೀರಬಾಹುಕ, ಮಾತಂಗಕನ್ಯೆ ವಾಲೀಮೋಕ್ಷದಲ್ಲಿ  ವಾಲಿ; ಶ್ರೀರಾಮ ನಿರ್ಯಾಣದಲ್ಲಿ ಕಾಲಪುರುಷ; ಭೀಷ್ಮವಿಜಯದ ಭೀಷ್ಕ, ಸಾಲ್ವ; ಗದಾಯುದ್ಧದ ಭೀಮ, ದುರ್ಯೊಧನ; ಕೃಷ್ಣ ಸಂಧಾನದ ದ್ರೌಪದಿ, ಭೀಮ; ಕೀಚಕವಧೆಯ
ಸೈರೇಂದ್ರಿ, ಕೃಷ್ಣಾರ್ಜುನದಲ್ಲಿ ಸುಭದ್ರೆ, ರುಕ್ಮಿಣಿ ಇತ್ಯಾದಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಹೆಗಡೆಯವರು ದೆಹಲಿಯ ನಾಟ್ಯ ಬ್ಯಾಲೆಟ್‌ ಕೇಂದ್ರದ ಕೃಷ್ಣಲೀಲ, ರಾಮಲೀಲ, ತುಲಸಿ ಕೇ ರಾಮ್‌, ವೆಂಕಟೇಶ್ವರ ವಿಲಾಸ ಈ ಪ್ರದರ್ಶನಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಬೆಂಗಳೂರಿನ ನಾಟ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಕಥಕ್‌ ಹಾಗೂ ಕೊರಿಯೋಗ್ರಫಿ ಇವರ ಕೃಷ್ಣದೇವರಾಯ, ಹರ್ಷಪುಲಕೇಶಿ, ಭರತ ಬಾಹುಬಾಲಿ, ಹೊಯ್ಗಳ ವೈಭವ, ಅಮೀರ್‌ಕುಸ್ರೋ ಪ್ರದರ್ಶನಗಳಲ್ಲಿ ಮುಖ್ಯ ಕಲಾವಿದರಾಗಿದ್ದರು. "ಶೃಂಗಾರ ನಾರದಿಯಂ' ಎಂಬ ಸಂಸ್ಕೃತ ನೃತ್ಯ ನಾಟಕ (ಹಾಸ್ಯ) ಹಾಗೂ “ಪ್ರಗತಿ-ವಿಗತಿ'-ಆಧುನಿಕ ತಂತ್ರಜ್ಞಾನದ ಮಿಥ್ಯಾ ಬಳಕೆ ಇವೆರಡರ ನಿರ್ದೇಶನ ಮಾಡಿದ್ದರು. ಹಿಮಶ್ವೇತ(1989) ಕಾಲದ ಕಡಲು (2007) ಹಾಗೂ ಇತರ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅನೇಕ ವಿದ್ಯಾ ಸಂಸ್ಥೆಗಳಲ್ಲಿ ನಾಟಕಗಳ ನಿರ್ದೇಶನ, ಯಕ್ಷಗಾನ ಪ್ರಾತ್ಯಕ್ಷಿಕೆ ಮಾಡಿದ್ದಾರೆ. 

ಹೆಗಡೆ ಅವರು ಬೆಂಗಳೂರಿನ ನಾಟ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಕಥಕ್‌ ಅಂಢ್ ಕೊರಿಯೋಗ್ರಫಿ, ಶಿವಮೊಗ್ಗದ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ,  ದೆಹಲಿಯ ಜಾನಪದ ಮತ್ತು ಬುಡಕಟ್ಟು ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪ್ರಶಿಕ್ಷಣ ಪರಿಷತ್ತು,  ರಂಗಾಯಣ ರಂಗಸಮಾಜ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮುಂತಾದವುಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 

ಹೆಗಡೆ ಅವರಿಗೆ ಪ್ರತಿಷ್ಠಿತ ನಾಡೋಜ ಎಚ್‌.ಎಲ್‌.ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ, ಮದ್ರಾಸ್‌ ಕ್ರಾಪ್ಟ್‌ ಫೌಂಡೇಶನ್‌ ಮತ್ತು ಪ್ರೆಂಡ್ಸ್‌ ಆಫ್‌ ದಕ್ಷಿಣಚಿತ್ರ ಇವರಿಂದ ಚೆನ್ನೈನ ದಕ್ಷಿಣಚಿತ್ರ ಮ್ಯೂಸಿಯಂನಲ್ಲಿ 'ದಕ್ಷಿಣಚಿತ್ರ
ವಿರುದು' ಪ್ರಶಸ್ತಿ,  ಕುಸುಮ ಫೌಂಡೇಷನ್‌, ಕುಂದಾಪುರ ಇವರಿಂದ 'ಕುಸುಮಶ್ರೀ' ಪ್ರಶಸ್ತಿ, ಬೆಂಗಳೂರಿನ ಅಜಿತ್‌ ಕುಮಾರ್‌ ಸ್ಮಾರಕ ಸಾಂಸ್ಕೃತಿಕ ವೇದಿಕೆ (ರಿ) ಇವರಿಂದ ಜೀವಮಾನ ಸಾಧನೆಯ 'ಅಜಿತಶ್ರೀ' ಪ್ರಶಸ್ತಿ,  ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ, ಹುಕ್ಷಮಕ್ಕಿ ಇವರಿಂದ 'ಹುಕ್ಲಮಕ್ಕಿ ಪ್ರಶಸ್ತಿ', ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಕುವೆಂಪು ದೀಪ ಪ್ರಶಸ್ತಿ, ಆಂಜನೇಯ ಕೃಪಾ ಯಕ್ಷವೃಂದ, ಕೇಡಲಸರ ಇವರಿಂದ "ಯಕ್ಷರಾಜ ಪ್ರಶಸ್ತಿ', ಚೆಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ', ಕ್ಯಾಪ್ಟನ್‌ ಸಿ. ಪಿ.ಕೃಷ್ಣನ್‌ ನಾಯರ್‌ ಪ್ರಶಸ್ತಿ ಅಲ್ಲದೆ ವಿಶ್ವದೆಲ್ಲೆಡೆಯ ನೂರಾರು ಪ್ರಶಸ್ತಿ ಗೌರವಗಳು ಸಂದಿವೆ. 

ಹೆಗಡೆಯವರ ಸಾರಥ್ಯದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಆಟವೇ ಪಾಠ, ಭಾಸಂ ಯಕ್ಷಗಾನ ಭಾಗವತಿಕೆಯ ಸಂಶೋಧನೆ ಮತ್ತು ಅಧ್ಯಯನ ಯೋಜನೆ, ಕೆರೆಮನೆ ಶಂಭು ಹೆಗಡೆ ಸ್ಮಾರಕ ಬಯಲು ರಂಗ ಮಂದಿರ ನಿರ್ಮಾಣ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಸ್ಥಾಪನೆ, ಮಾಸದ ಆಟ, ಅಪೂರ್ವ ಪೂರ್ವ ಸ್ಮರಣೆ ಗೋಷ್ಠಿ, ಯಕ್ಷಗಾನ ಶಿಲ್ಪಗಳ ನಿರ್ಮಾಣ, ಶಾಲಾ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ, ಉಚಿತ ಪ್ರದರ್ಶನ, ಧನ ಸಹಾಯ ಮುಂತಾದ ಅನೇಕ ಯೋಜನೆಗಳು ಕೈಗೂಡುತ್ತಿವೆ.

ಮಹಾನ್ ಕಲಾವಿದ, ಅಪರಿಮಿತ ಸಾಹಸಿ, ಉತ್ಸಾಹಿ, ಸರಳ, ಸುಸಂಸ್ಕೃತ ಆತ್ಮೀಯ ಹೃದಯಿ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕಗಳನ್ನು ಹೇಳೋಣ. 

Happy birthday to our great yakshagana artiste Keremane Shivananda Hegde Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ