ಎಚ್. ಎನ್. ಆರತಿ
ಎಚ್. ಎನ್. ಆರತಿ
ವಿಶಾಲ ಮಿನುಗು ಕಣ್ಗಳ ಹಸನ್ಮುಖಿ ಎಚ್. ಎನ್. ಆರತಿ ಅವರು ಬೆಂಗಳೂರು ದೂರದರ್ಶನ ಕೇಂದ್ರದ 'ಚಂದನ' ವಾಹಿನಿಯ ಕಾರ್ಯಕ್ರಮಗಳ ಮುಖ್ಯಸ್ಥರಾಗಿ, ಪ್ರತಿಭಾನ್ವಿತ ಕವಯಿತ್ರಿಯಾಗಿ, ಪತ್ರಕರ್ತೆಯಾಗಿ ಮತ್ತು ಎಲ್ಲೆಡೆ ಆತ್ಮೀಯರಾಗಿ ಹೆಸರಾದವರು.
ನವೆಂಬರ್ 13, ಆರತಿ ಅವರ ಜನ್ಮದಿನ. ತಂದೆ ಹಂಪ ನಾಗರಾಜಯ್ಯ ಮತ್ತು ತಾಯಿ ಕಮಲಾ ಹಂಪನಾ ಇಬ್ಬರೂ ಕನ್ನಡ ಸಾಹಿತ್ಯಲೋಕದ ಧ್ರುವ ತಾರೆಗಳು. ಬೆಂಗಳೂರಿನಲ್ಲಿಯೇ ಬೆಳೆದ ಆರತಿ ಹಲವು ಚಿನ್ನದ ಪದಕಗಳೊಂದಿಗೆ ಎರಡು ಸ್ನಾತಕೋತ್ತರ ಪದವಿ ಪಡೆದವರು.
ಬೆಂಗಳೂರು ದೂರದರ್ಶನ ಕೇಂದ್ರ 'ಚಂದನ' ವಾಹಿನಿಯ ಕಾರ್ಯಕ್ರಮಗಳ ಮುಖ್ಯಸ್ಥರಾಗಿರುವ ಆರತಿ ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಕನ್ನಡ ಕಾವ್ಯಾಭಿವ್ಯಕ್ತಿಯಲ್ಲಿ, ಪ್ರವಾಸ ಸಾಹಿತ್ಯದಲ್ಲಿ ನಿರಂತರ ಕಂಗೊಳಿಸುತ್ತ ಬಂದಿದ್ದಾರೆ. ಅನುವಾದ ಕ್ಷೇತ್ರದಲ್ಲೂ ಅವರ ಗಣನೀಯ ಕೊಡುಗೆ ಇದೆ. ಪ್ರವಾಸ, ನಾಟಕ ಮುಂತಾದವು ಇವರ ವಿಶ್ವವ್ಯಾಪಿ ಆಸಕ್ತಿಗಳಲ್ಲಿ ನಮಗೆ ಕಾಣುವ ಕೆಲವು ವೈಶಿಷ್ಟ್ಯಗಳು.
ಕನ್ನಡದ ಪ್ರಸಿದ್ಧ ದೂರದರ್ಶನ ಕಾರ್ಯಕ್ರಮವಾದ ನಾ. ಸೋಮೇಶ್ವರ ಪ್ರಸ್ತುತಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಸುದೀರ್ಘ 4600ಕ್ಕೂ ಮೀರಿದ ಸಂಚಿಕೆಗಳ ನಿರ್ಮಾಣವೂ ಒಳಗೊಂಡಂತೆ ಆರತಿ ಅವರ ಬೆಂಗಳೂರು ದೂರದರ್ಶನಲ್ಲಿನ ಪ್ರಸಿದ್ಧ ಕಾರ್ಯಕ್ರಮ ನಿರ್ಮಾಣ ನಿರ್ವಹಣೆಗಳು ಅನೇಕ.
ಆರತಿಯವರ ಪ್ರಕಟಿತ ಕೃತಿಗಳಲ್ಲಿ ‘ಓಕುಳಿ', 'ಬಾ ಹೇಳಿಕಳಿಸೋಣ ಹಗಲಿಗೆ', 'ಸ್ಮೋಕಿಂಗ್ ಝೋನ್’ ಕವನ ಸಂಕಲನಗಳು, ‘ಬೆಟ್ಟದಡಿಯ ಬಿದಿರ ಹೂ’ ಪ್ರವಾಸ ಕಥನ, 'ಪ್ರಣಯ ಶತಕ' ಎಂಬ ಅನುವಾದಗಳು ಸೇರಿವೆ. ಅವರ ಹಲವಾರು ಕವನಗಳು ಇಂಗ್ಲಿಷ್, ಸ್ಲೊವೆನಿಯನ್ ಒಳಗೊಂಡಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.
ಆರತಿ ಅವರ 'ಸ್ಮೋಕಿಂಗ್ ಝೋನ್' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ಓಕುಳಿ’ ಕವನ ಸಂಕಲನಕ್ಕೆ ಲೇಖಕಿಯರ ಪರಿಷತ್ತಿನ ರಾಜ್ಯಮಟ್ಟದ ಪ್ರಶಸ್ತಿ, ‘ಬಾ ಹೇಳಿಕಳಿಸೋಣ ಹಗಲಿಗೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ 'ಅತ್ಯುತ್ತಮ ಕೃತಿ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಸಾಧನೆಗಾಗಿನ 'ಸಾಹಿತ್ಯಶ್ರೀ' ಸೇರಿದಂತೆ ಇವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಆರತಿ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕವಿ ಸಮ್ಮೇಳನಗಳಲ್ಲಿ ತಮ್ಮ ಕವಿತೆಗಳನ್ನು ಮಂಡಿಸಿದ್ದಾರೆ.
ಆರತಿ ಅವರ ಅಪರಿಮಿತ ಉತ್ಸಾಹ, ಸಾಧನೆಗಳೆಲ್ಲದರ ಜೊತೆಗೆ ಸರಳತೆ ಮತ್ತು ಅವರ ಸ್ನೇಹಪರತೆ ನನಗೆ ಸದಾ ಅಚ್ಚರಿ. ಆತ್ಮೀಯರಾದ ಆರತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Arathi Hn 🌷🌷🌷
ಕಾಮೆಂಟ್‌ಗಳು