ಶಿವ ಖೇರಾ
ಶಿವ ಖೇರಾ
‘ಶಿವ ಖೇರಾ’ ನಾನು ಬದುಕನ್ನು ಹೊಸ ನಿಟ್ಟಿನಲ್ಲಿ ಕಾಣುವ ಕುರಿತಾದ ಸೆಲ್ಫ್ ಹೆಲ್ಪ್ ಮಾದರಿಯ ಬರಹಗಳಲ್ಲಿ ಕೇಳಿದ ಮೊದಲ ಹೆಸರು. ಇಂದು ಅವರು ಹುಟ್ಟಿದ ದಿನ.
ಶಿವ ಖೇರಾ ಅವರ 'You can Win’ ಪುಸ್ತಕದ ಮೇಲಿನ 'Winners don’t do different things, they do things differently’ ನನ್ನನ್ನು ಅತ್ಯಂತ ಪ್ರಭಾವಿಸಿದ ಸಾಲು. ಆ ಪುಸ್ತಕವನ್ನು ಓದಿದ ನಂತರದಲ್ಲಿ ನಾನು 'The Seven Habits of highly effective people’, ‘Think and Grow Rich’, ‘The Secret’, ‘How to influence people’, ‘Who moved my cheese’, ‘Go and kiss the world’, ‘The Courage to be disliked’, ‘Unlimited Power’ ಮುಂತಾದ ಅನೇಕ ಆ ಬಗೆಯ ಪುಸ್ತಕಗಳನ್ನು ಓದಿದ್ದೇನೆ. ಕಳೆದ ಅರ್ಧ ಶತಕದಲ್ಲಿ ಓಶೋ, ಸ್ವಾಮಿ ಚಿನ್ಮಯಾನಂದ, ಸ್ವಾಮಿ ಸುಖಬೋಧಾನಂದ, ಶ್ರೀ ಶ್ರೀ ರವಿಶಂಕರ್, ಸದ್ಗುರು, ದೀಪಕ್ ಚೋಪ್ರಾ ಮುಂತಾದ ಅನೇಕರು ಆಧ್ಯಾತ್ಮಿಕ ಚಿಂತನಗಳನ್ನು ಸಹಾ ಹೀಗೆ 'do things differently’ ಎಂಬ ಪರಿಕಲ್ಪನೆಯಲ್ಲಿ ನಮ್ಮ ಯುಗದಲ್ಲಿ ತಂದಿದ್ದಾರೆ. ಇಂದು ವಿಶ್ವಾದಾದ್ಯಂತ '... ಮಿಲಿಯನ್ ಕಾಪೀಸ್ ಸೋಲ್ಡ್' ಎಂದು ಮೇಲೆ ಮುದ್ರಿಸಿಕೊಂಡ ಅಸಂಖ್ಯಾತ ಪುಸ್ತಕಗಳ ಭರಾಟೆ ಅಪರಿಮಿತವಾದದ್ದು.
ಒಮ್ಮೆ ಶಿವ ಖೇರಾ 2007ರ ವರ್ಷ ದುಬೈನಲ್ಲಿ ನಡೆಸಿದ ಕಾರ್ಯಾಗಾರಕ್ಕೆ ಅಂದಿನ ದಿನದಲ್ಲಿ ನನ್ನ ಜೇಬಿಗೆ ತುಂಬಾ ದುಬಾರಿ ಎನಿಸುವಷ್ಟು ಹಣ ಕೊಟ್ಟು ಕೂಡಾ ಭಾಗವಹಿಸಿದ್ದೆ. ಯಾಕೆ ಹೇಳಿದೆ ಅಂದ್ರೆ, ಅವರ 'Winners don’t do different things, they do things differently’ ಎಂಬ ಸಾಲು ನನ್ನ ಮೇಲೆ ಬೀರಿದ ಪ್ರಭಾವ ಅಂತದ್ದಿತ್ತು.
ಕಾಲಾನುಕ್ರಮದಲ್ಲಿ ಸ್ವಯಂಪ್ರೇರಣೆ ತರಹದ ಚಿಂತನೆಗಳಲ್ಲಿ ಸಹಾ ತನ್ನದೇ ಆದ ಮಿತಿಗಳಿವೆ, ಏಕತಾನತೆಗಳಿವೆ ಎಂಬ ಅನಿಸಿಕೆ ನನ್ನಲ್ಲಿ ಮೂಡಿದೆ ಎಂಬುದು ನಿಜವಾದರೂ, ಈ ಸೆಲ್ಫ್ ಮೋಟಿವೇಷನ್ ಚಿಂತನೆಗಳು ನನ್ನ ಬದುಕಿನ ಹಾದಿಯಲ್ಲಿ ಸಕ್ರಿಯ ಬದಲಾವಣೆಗಳ ಗಾಳಿ ತಂದವು ಎಂಬುದಂತೂ ಸತ್ಯ. ಇಂತದ್ದೇನನ್ನೂ ಓದದಿರುವವರ ಬಗ್ಗೆ ನನ್ನದೇನೂ ಅಪಸ್ವರವಿಲ್ಲ. ಆದರೆ, ಇವೆಲ್ಲವನ್ನೂ ಒಂದಿನಿತು ಕೂಡಾ ಕಂಡುಕೊಳ್ಳಲಿಕ್ಕೆ ಎಳ್ಳಷ್ಡೂ ಪ್ರಯತ್ನಿಸದೆ "ಓ ಅವನು ಹೇಳ್‍ಬಿಟ್ಟ ಅಂತ ಪಾಸಿಟಿವ್ ಥಿಂಕ್ ಮಾಡಿಬಿಟ್ರೆ ನನ್ ಬದುಕಿಗೆ ಬೇಕಿದ್ದು ಬಂದ್ಬಿಡತ್ತಾ ಅಂತ ತೆಗಳಿಕೊಂಡೇ ಇರುವ ಕೆಲವರ ಜೀವನ ಪೂರ್ತಿಯ ನರಳುವಿಕೆ ಒಪ್ಪಿತವಾಗುವುದಿಲ್ಲ".
ನಾನು 'ಯು ಕೆನ್ ವಿನ್' ಪುಸ್ತಕದ ಮೊದಲ ಪುಟವನ್ನು ಮರೆತಿಲ್ಲ. ಅದು ನನ್ನ ಅರ್ಥೈಕೆಯಲ್ಲಿ ಹೀಗಿದೆ:
ಒಂದೂರ ಉದ್ಯಾನವನದ ಬಳಿ ಒಬ್ಬ ಬಲೂನು ಮಾರುತ್ತಾ ತನ್ನ ಜೀವನವನ್ನು ನಿರ್ವಹಿಸುತ್ತಿದ್ದ. ಕೆಂಪು, ಹಳದಿ, ನೀಲಿ, ಹಸಿರು, ಬಿಳಿ ಇತ್ಯಾದಿ ಬಣ್ಣ ಬಣ್ಣದ ಬಲೂನುಗಳು ಆತನ ಬೆತ್ತದ ಕೋಲಿಗೆ ಸಿಂಗಾರವೋ ಎಂಬಂತೆ ಶೋಭಿಸುತ್ತಿದ್ದವು. ತನ್ನ ಬಳಿ ಯಾರೂ ಬಲೂನು ಕೊಳ್ಳದಿರುವ ಸಮಯದಲ್ಲಿ, ಹೀಲಿಯಂ ತುಂಬಿದ ಬಲೂನನ್ನು ಆಗಸಕ್ಕೇರಿಸುವುದು ಆತನ ಪ್ರತಿನಿತ್ಯದ ವಾಡಿಕೆ. ಒಂದು ರೀತಿಯಲ್ಲಿ ಅದು ಆತನ ಮಾರಾಟ ತಂತ್ರವೂ ಹೌದು. ಹಾಗೆ ಮೇಲಕ್ಕೇರಿದ ಬಲೂನನ್ನು ನೋಡುತ್ತಾ ಆ ಬಲೂನು ತಮಗೂ ಬೇಕು ಎಂದು ಮಕ್ಕಳು ತಮ್ಮ ಅಪ್ಪ ಅಮ್ಮಂದಿರನ್ನು ಪುಸಲಾಯಿಸಿ ಬಲೂನು ಕೊಂಡುಕೊಳ್ಳಲು ಬರುತ್ತಿದ್ದವು. ಹೀಗೆ ಬಲೂನು ಮಾರುವವನ ಬದುಕು ದಿನನಿತ್ಯ ಸಾಗುತ್ತಿತ್ತು.
ಒಮ್ಮೆ ಹೀಗೆ ಕಾರ್ಯಪ್ರವೃತ್ತನಾಗಿದ್ದ ಆತನ ಅಂಗಿಯನ್ನು ಕೆಳಗಿನಿಂದ ಯಾರೋ ಜಗ್ಗಿದಂತಾಯ್ತು. ಕೆಳಗೆ ನೋಡಲು ಒಬ್ಬ ಪುಟ್ಟ ಹುಡುಗ ಮುದ್ದು ಮುದ್ದಾಗಿ ಕೇಳಿದ, “ಅಂಕಲ್, ಅಂಕಲ್, ಕಪ್ಪು ಬಣ್ಣದ ಬಲೂನೂ ಮೇಲೆ ಹೋಗುತ್ತಾ ಅಂಕಲ್?”.
ಪುಟ್ಟ ಹುಡುಗನ ಮುದ್ದು ಮುಗ್ದತೆಗೆ ಆಕರ್ಷಿತನಾದ ಬಲೂನು ಮಾರುವವ ನುಡಿದ “ಹೌದು ಮರಿ, ಕಪ್ಪು ಬಣ್ಣದ ಬಲೂನೂ ಮೇಲೆ ಹೋಗುತ್ತೆ. ಬಲೂನಿನ ಬಣ್ಣ ಯಾವುದು ಮುಖ್ಯವಲ್ಲ ಪುಟ್ಟಾ; ಬಲೂನಿನ ಒಳಗಡೆ ಏನಿದೆಯೋ ಅದು, ಬಲೂನನ್ನು ಮೇಲಕ್ಕೇರಿಸುತ್ತೆ”.
ಇದು ನಮ್ಮ ಬದುಕಿಗೂ ಅನ್ವಯಿಸುವಂತದ್ದು. ನಮ್ಮೊಳಗೆ ಏನಿದೆಯೋ ಅದು ಮಾತ್ರವೇ ನಮ್ಮನ್ನು ಉನ್ನತಿಗೆ ಏರಿಸುವಂತದ್ದು. ಅದನ್ನು ಕಂಡುಕೊಂಡವರಿಗಷ್ಟೇ ಬದುಕು.
ಶಿವ ಖೇರಾ ಅವರ ಬರವಣಿಗೆಯ ಈ ಶೈಲಿಯನ್ನು ಹಿಂದೆ ಉಪಯೋಗಿಸಿದ್ದ ಅನೇಕರು ಇದ್ದಾರೆ. ಈ ಜಾಡನ್ನು ಕೆಲವು ಸ್ವಾಮೀಜಿಗಳೂ ತಮ್ಮ ಆಧ್ಯಾತ್ಮದೊಂದಿಗಿನ ಮ್ಯಾನೇಜ್ಮೆಂಟ್ ಚಿಂತನೆ ಎಂದು ಹೇಳಿ ಪ್ರಸಿದ್ಧಗೊಂಡಿರುವವರೂ ಅನೇಕರಿದ್ದಾರೆ.
ಹೀಗೆ ಜನರನ್ನು ಮೋಡಿ ಮಾಡಿ ಪ್ರಸಿದ್ಧರಾದ ಶಿವ ಖೇರಾ ಅವರ ಅಸಂಖ್ಯಾತ ಪುಸ್ತಕಗಳು ಮಾರಾಟವಾಗಿವೆ. ಅವರು ನಡೆಸುವ ಪ್ರೇರಣಾ ಶಿಬಿರಗಳು ವಿಶ್ವದೆಲ್ಲೆಡೆ ಪ್ರಖ್ಯಾತ. ಒಂದು ವಿಚಾರ ಅಂದರೆ ಶಿವ ಖೇರಾ ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದವರು!
ಶಿವ ಖೇರಾ ಜನಿಸಿದ್ದು 1949ರ ನವೆಂಬರ್ 13ರಂದು. ಅವರು ಈಗಿನ ಜಾರ್ಖಂಡ್ ರಾಜ್ಯಕ್ಕೆ ಸೇರಿದ ಧನಾಬಾದ್ ಎಂಬಲ್ಲಿ ಜನಿಸಿದರು. ಅವರು ಶಾಲೆಯಲ್ಲಿ ಪಕ್ಕಾ ಹಿಂದಿನ ಸಾಲಿನ ಹುಡುಗ. ಬಾಲಕ ಶಿವ ಖೇರಾ ಎದುರು ಸೀಟಿನ ಹುಡುಗರಿಗೆ ಕಿರಿಕಿರಿ ಮಾಡುತ್ತಾ, ಟೀಚರ್ಸ್‌ನ್ನು ಗೋಳು ಹೊಯ್ದುಕೊಳ್ಳುತ್ತಿದ್ದ. ಪರೀಕ್ಷೆಯ 8 ಸಬ್ಜೆಕ್ಟ್‌ಗಳಲ್ಲಿ ಈತ ಪಾಸಾಗುತ್ತಿದ್ದುದು ಒಂದರಲ್ಲಿ ಮಾತ್ರ! ಕೊನೆಗೆ 10ನೇ ಕ್ಲಾಸ್‌ನಲ್ಲೂ ಫೇಲಾಗಿಬಿಟ್ಟ. ಆದರೆ, ಹೈಯರ್ ಸೆಕೆಂಡರಿಯಲ್ಲಿ ಒಳ್ಳೆ ಮಾರ್ಕ್ಸ್ ಬಂತು... ಕಾರಣ ಆತ ಆರ್ಟ್ಸ್ ಸ್ಟೂಡೆಂಟ್.
ಶಿವ ಖೇರಾ ಅವರದ್ದು ಶ್ರೀಮಂತ ಮನೆತನವೇ ಆಗಿತ್ತು. ಅಜ್ಜನಿಗೆ ಧನಾಬಾದ್‌ನಲ್ಲಿ ಕಲ್ಲಿದ್ದಲು ಗಣಿ ಇತ್ತು. 1973ರ ಜನವರಿ 19ರಂದು ಕೇಂದ್ರ ಸರಕಾರ ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕರಣ ಮಾಡಿದಾಗ ಇವರ ಕುಟುಂಬ ವಸ್ತುಶಃ ಬೀದಿಗೆ ಬಂತು. ಅವರಿಗಾಗ 23 ವರ್ಷ. ಆಗಷ್ಟೇ ಮದುವೆ ಬೇರೆ ಆಗಿತ್ತು. ಮುಂದಿನ ವರ್ಷ ಇವರ ತಂಗಿ ಹುಟ್ಟಿದಳು. ಚೆನ್ನಾಗಿದ್ದ ಕುಟುಂಬ ಹೀಗೆ ಕಷ್ಟದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಾಗ ಏನು ಮಾಡುವುದೆಂದು ತೋಚಲಿಲ್ಲ. ಮನೆಯ ವಸ್ತುಗಳೆಲ್ಲ ಮಾರಿ ಮುಗಿದಿದ್ದವು.
ಶಿವ ಖೇರಾ ಯಾರೋ ಸಂಬಂಧಿಕರ ಪರಿಚಯದೊಂದಿಗೆ ಟೊರಾಂಟೋಗೆ ಹಾರಿದರು. ಎಂಬಿಎ ಮಾಡಿದ್ದ ಇವರ ಹೆಂಡತಿಗೆ ಅಲ್ಲೊಂದು ಸಣ್ಣ ಕೆಲಸ ಸಿಕ್ಕಿತು. ಹೊಟ್ಟೆ ಪಾಡು ಹೇಗೋ ಸಾಗಿತ್ತು. ಈತನೋ ಯಾವುದರಲ್ಲೂ ಎಕ್ಸ್‌ಪರ್ಟ್ ಅಲ್ಲ. ಏನೂ ಮಾಡದೆ ಟೈ ಕಟ್ಟಿಕೊಂಡು ತಿರುಗುತ್ತಿದ್ದಾಗ ಕೇಳಿದವರಲ್ಲಿ ಹೇಳುತ್ತಿದ್ದರು: "ನನ್ನದು ಎಕ್ಸ್‌ಪೋರ್ಟ್- ಇಂಪೋರ್ಟ್ ಬ್ಯುಸಿನೆಸ್!" ಅಂತ.
ಕೊನೆಗೊಂದು ದಿನ ಒಬ್ಬ ಸಿಕ್ಕಿದ. ಆತ ಶಿವ ಖೇರಾನನ್ನು ಸಂಶಯದಿಂದ ನೋಡಿದ. ಅವನಿಗೆ ಈತನ ಸುಳ್ಳುಗಳು ಅರ್ಥವಾಗಿದ್ದವು. ಈತನ ಭುಜಕ್ಕೆ ಕೈ ಹಾಕಿ ಕೇಳಿದ: "ಕಾರ್ ವಾಷ್ ಮಾಡ್ತೀಯಾ?" ಒಪ್ಪಿಕೊಂಡು ಕಾರ್ ವಾಷಿಂಗ್ ಕೆಲಸ ಶುರು ಮಾಡಿದರು. ಅದು ಅಷ್ಟೊಂದು ಹಿತ ನೀಡುವ ಕೆಲಸವಾಗಿರಲಿಲ್ಲ. ಒಂದು ದಿನ ಪೇಪರ್‌ನಲ್ಲಿ ವ್ಯಾಕ್ಯೂಂ ಕ್ಲೀನರ್ ಪ್ರಚಾರ ಮಾಡಲು ಜನ ಬೇಕಾಗಿದ್ದಾರೆ ಅಂತ ಜಾಹೀರಾತು ಬಂತು. ಕೆಲಸಕ್ಕೆ ಸೇರಿದರು.
ಒಂದು ದಿನ ಒಬ್ಬ ವ್ಯಕ್ತಿ ಶಿವ ಖೇರಾನನ್ನು ಮಿಕ ನೋಡುವಂತೆ ನೋಡಿದ. ಕೊನೆಗೆ ಹೇಳಿದ: ಇನ್ಶೂರೆನ್ಸ್ ಮಾರ್ತೀಯಾ? ಮಾರುವ ವ್ಯವಹಾರ ಆಗೊಲ್ಲ ಅಂತ ಖಡಾಖಂಡಿತವಾಗಿ ಹೇಳಿದರು. ಆತ ಅವನ ಪತ್ನಿ ಮತ್ತು ಶಿವ ಖೇರಾ ಅವರ ಪತ್ನಿಯ ಸ್ನೇಹವನ್ನು ಬಳಸಿಕೊಂಡು ಮತ್ತೆ ಗಂಟು ಬಿದ್ದರು. ಕೊನೆಗೆ ಹೆಂಡತಿ ಹೇಳಿದಳು: "ನೋಡಿ ನೀವು ಯಾವ ಎಕ್ಸಾಂನಲ್ಲೂ ಪಾಸಾಗೊಲ್ಲ. ಮೆಟ್‌ಲೈಫ್ ಎಕ್ಸಾಂಗೆ ಕೂತ್ಕೊಳ್ಳಿ. ಪಾಸಾಗೊಲ್ಲ ಅಂತ ಗೊತ್ತು. ಕಡೇ ಪಕ್ಷ ಅವರಿಗೆ ಬೇಜಾರಾಗೋದಾದ್ರೂ ತಪ್ಪುತ್ತಲ್ಲ!" . ಆಶ್ಚರ್ಯ ಎಂದರೆ ಶಿವ ಖೇರಾ ಪಾಸಾಗಿಬಿಟ್ಟಿದ್ದರು. ಮೆಟ್‌ಲೈಫ್‌ನ ಡಿಸ್ಟ್ರಿಕ್ಟ್ ಮ್ಯಾನೇಜರ್ ಈತನನ್ನು ಕರೆಸಿಕೊಂಡು, ನೋಡು ನೀನು ಎಫರ್ಟ್ ಮಾಡಿದ್ರೆ ವಾರಕ್ಕೆ 150 ಡಾಲರ್ ಸಂಪಾದಿಸಬಹುದು ಅಂದ. ಶಿವ ಖೇರಾ ಕೈನಲ್ಲಿ ಮೂರು ತಿಂಗಳ ಕಾಲ ನೂರಲ್ಲ, 200 ಶೇಕಡಾ ಪ್ರಯತ್ನ ಮಾಡಿದರೂ ಒಂದೇ ಒಂದು ಪಾಲಿಸಿ ಕೂಡಾ ಮಾರಲು ಆಗಲಿಲ್ಲ!
ಅಂದು ಹತಾಶನಾಗಿ ಕಣ್ಣೀರು ಹಾಕುವ ಸ್ಥಿತಿಯಲ್ಲಿದ್ದ ಶಿವ ಖೇರಾ ಬದುಕು ಬದಲಿಸಿದ ಘಳಿಗೆ ಬಂದೇ ಬಿಟ್ಟಿತು. ಅದು ಡಾ. ನಾರ್ಮನ್ ವಿನ್ಸೆಂಟ್ ಪೀಲೆ ಅವರ ಭಾಷಣ. ಅದು ಶಿವ ಖೇರಾ ಅವರನ್ನು ಅಪಾರವಾಗಿ ಪ್ರಭಾವಿಸಿತು.
ಅದುವರೆಗೆ ಕೇವಲ ಕಾಮಿಕ್ ಬುಕ್‌ಗಳನ್ನು ಓದುತ್ತಿದ್ದ ಶಿವ ಖೇರಾ ಓದುವ ಪ್ರವೃತ್ತಿ ಹೆಚ್ಚಿಸಿಕೊಂಡರು. ಲೈಬ್ರರಿಗೆ ಹೋದರು, ಜನರನ್ನು ಭೇಟಿಯಾದರು. ಎಲ್ಲಡೆ, ಎಲ್ಲರಿಂದ ಕಲಿಯತೊಡಗಿದರು. ಮೊದಲು ಜೈಲಿಗೆ ಹೋಗಿ ಖೈದಿಗಳಲ್ಲೊಂದು ಆತ್ಮವಿಶ್ವಾಸ ಮೂಡಿಸಿದರು. ಆತ್ಮಾಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳನ್ನು ಕೈಗೊಂಡರು. ಅಷ್ಟಾದರೂ ತಾನೊಬ್ಬ ನಿಜವಾದ ಶಕ್ತಿಶಾಲಿ ಎಂದು ಗುರುತಿಸಿಕೊಳ್ಳಲು ಅವರಿಗೆ 17 ವರ್ಷಗಳೇ ಬೇಕಾದವು. ಇವರು ಮೊದಲ ಪುಸ್ತಕ 'ಯೂ ಕ್ಯಾನ್ ವಿನ್’ ಬರೆಯಲು ಆರಂಭಿಸಿದ್ದು 1992ರಲ್ಲಿ, ಅದು ಮುಗಿದಾಗ 6 ವರ್ಷ ಕಳೆದಿತ್ತು.
ಮುಂದೆ ಶಿವ ಖೇರಾ ಪ್ರಸಿದ್ಧಿ ಎಲ್ಲೆಡೆ ವ್ಯಾಪಿಸಿತು.
ಶಿವ ಖೇರಾ ಅವರ ಕೆಲವು ಚಿಂತನೆಗಳು ಇಂತಿವೆ:
* ಸಾಧನೆ ಮಾಡಿದವರೆಲ್ಲ ಬೇರೆ ಏನನ್ನೋ ಮಾಡಿರೊಲ್ಲ. ಎಲ್ಲರೂ ಮಾಡುವುದನ್ನೇ ಬೇರೆ ರೀತಿ ಮಾಡಿರ್ತಾರೆ.
* ನನಗೆ ಸಾಧ್ಯ ಎಂದು ನೀವು ಯೋಚಿಸಿದರೆ ಖಂಡಿತಕ್ಕೂ ಸಾಧ್ಯವಾಗುತ್ತದೆ. ಆಗೊಲ್ಲ ಎಂದರೆ ಆಗೋದೇ ಇಲ್ಲ.
* ಯಶಸ್ಸು ಅಂದರೆ ಸಮಸ್ಯೆಗಳು ಇಲ್ಲದೆ ಇರುವುದಲ್ಲ,, ಸಮಸ್ಯೆಗಳನ್ನು ಮೀರಿ ನಿಲ್ಲೋದು.
* ಸಾಧನೆ ಎಂದರೆ ಸೋಲೇ ಇಲ್ಲದಿರುವುದಲ್ಲ, ಸೋಲುಗಳ ಸವಾಲನ್ನು ಎದುರಿಸಿ ನಿಲ್ಲೋದು.
* ಹೆಚ್ಚಿನವರು ಫೇಲ್ ಆಗೋದು ಟ್ಯಾಲೆಂಟ್ ಇಲ್ಲದೆ ಅಲ್ಲ, ಒಳಗೊಂದು ಉರಿಯುವ ನಿತ್ಯಾಗ್ನಿಯ ಕಿಚ್ಚು ಇಲ್ಲದೆ.
* ವಿಧೇಯನಾಗಿಲ್ಲದ ವ್ಯಕ್ತಿ ಯಾರನ್ನೂ ಕಮಾಂಡ್ ಮಾಡಲಾರ.
ಎಲ್ಲರೂ ಎಲ್ಲ ಕಾಲಕ್ಕೂ ಮಾಡಿದ್ದು ಸರಿ ಅಂತ ಏನಿಲ್ಲ. ಶಿವ ಖೇರಾ ಅವರ ಪುಸ್ತಕದಲ್ಲಿ ಇತರರಿಂದ ತೆಗೆದ ಅಂಶಗಳೇ ಇವೆ ಎಂಬ ಆರೋಪಗಳಿದ್ದವು. ಆತ ರಾಜಕೀಯದಲ್ಲಿ ಹಲವು ಯಶಸ್ವಿಯಾಗದ ಹೆಜ್ಜೆ ಇಟ್ಟವರು. ನಾವು ಸಾಗುವ ವಿಭಿನ್ನತೆಯ ನಡೆ (do things differently) ಸದಾ ಗೆಲುವು ತರುತ್ತದೆ ಎಂದೇನಿಲ್ಲ. ಮಾಡುವುದನ್ನು ವಿಭಿನ್ನತೆಯಿಂದ ಮಾಡುವ ಕ್ರಿಯಾಶೀಲತೆಯೇ ಬದುಕಿಗಿರುವ ಅರ್ಥ.
ನನ್ನ ಈ ಬರಹದ ಉದ್ದೇಶ. ವ್ಯಕ್ತಿ ಪ್ರಚಾರವಲ್ಲ. ಸರಿ ತಪ್ಪು ಶ್ರೇಷ್ಠತೆಗಳ ವಿಶ್ಲೇಷಣೆಯೂ ಅಲ್ಲ. ಇದು ಮೊದಲು ನನ್ನ ಪ್ರೇರಿಸಿದ 'winners don’t do different things, they do things differently’ ಎಂಬ ಮಾತಿನ ಆಕರ್ಷಣೆಯಿಂದ ಮೂಡಿದ್ದು.
On the birthday of Shiv Khera
ಕಾಮೆಂಟ್‌ಗಳು