ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೂಪಾ


ರೂಪಾ

ರೂಪಾ ಮತ್ತು ರೂಪಾದೇವಿ  ಎಂಬ ಹೆಸರುಗಳಿಂದ ಕರೆಯಲ್ಪಡುವ ರೂಪಾ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಹೆಸರಾಗಿದ್ದ ಕಲಾವಿದೆ.

ನವೆಂಬರ್ 7 ರೂಪಾ ಅವರ ಜನ್ಮದಿನ. ತಂದೆ ಕಲ್ಯಾಣಂ ರಘುರಾಮಯ್ಯ. ತಾಯಿ ಹಿರಿಯ ಪ್ರಸಿದ್ಧ ನಟಿ ಅದವಾನಿ ಲಕ್ಷ್ಮೀದೇವಿ.

ರೂಪಾ ತಮಿಳಿನಲ್ಲಿ 365 ದಿನಗಳ ಕಾಲ ಓಡಿದ 'ಒರು ತಲೈ ರಾಗಂ' ಚಿತ್ರದಲ್ಲಿ ನಾಯಕಿಯಾಗಿ ಪ್ರಸಿದ್ಧರಾದರು. ಅದರಲ್ಲಿ ಅವರು ಹೊಸಬರಾದ ಶಂಕರ್ ಅವರೊಂದಿಗೆ ಜೋಡಿಯಾಗಿದ್ದರು.

ರೂಪಾ ಅವರು ಪ್ರಮುಖವಾಗಿ 1980ರ ದಶಕದಲ್ಲಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು 1979ರಲ್ಲಿ ಪ್ರಾಯೋಗಿಕ ಚಲನಚಿತ್ರ ‘ಕಮಲ'ದಲ್ಲಿ ಪಾದಾರ್ಪಣೆ ಮಾಡಿದರು. ಇದು ಅವರಿಗೆ ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ತಂದುಕೊಟ್ಟಿತು. 1980ರಲ್ಲಿ 'ಸಿಂಹ ಜೋಡಿ' ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಸಹೋದರಿಯ ಪಾತ್ರವನ್ನು ನಿರ್ವಹಿಸಿದರು. 1983-87ರ ಅವಧಿಯಲ್ಲಿ ಕನ್ನಡ ಚಲನಚಿತ್ರಗಳಲ್ಲಿ ಎರಡನೇ ನಾಯಕಿ ಮತ್ತು ಪೋಷಕ ಪಾತ್ರಗಳಿಗೆ ಅವರು ಮೊದಲ ಆದ್ಯತೆಯಾಗಿದ್ದರು. ಅವರ ಪ್ರಮುಖ ಕನ್ನಡ ಚಲನಚಿತ್ರಗಳಲ್ಲಿ ಹಾಲು ಜೇನು, ಮುಳ್ಳಿನ ಗುಲಾಬಿ, ಬಂಧನ, ಅವಳ ಅಂತರಂಗ, ಮರಳಿ ಗೂಡಿಗೆ, ತ್ರಿಶೂಲ, ಆಹುತಿ  ಮುಂತಾದವು ಸೇರಿವೆ.

'ಅವಳ ಅಂತರಂಗ' ಚಿತ್ರದಲ್ಲಿನ ಅಭಿನಯಕ್ಕಾಗಿ ರೂಪಾ ಅವರು ಅತ್ಯುತ್ತಮ ನಟಿಯಾಗಿ (1984-85) ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿದ್ದರು.

ಡಾ. ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್ ಮತ್ತು ಲೋಕೇಶ್ ಸೇರಿದಂತೆ ಬಹುತೇಕ ಎಲ್ಲಾ ಕನ್ನಡ ನಟರೊಂದಿಗೆ ರೂಪಾ ಕೆಲಸ ಮಾಡಿದ್ದರು. ಹಾಲು ಜೇನು, ಸಮಯದ ಗೊಂಬೆ ಮತ್ತು ಯಾರಿವನು ಚಿತ್ರಗಳಲ್ಲಿ ಅವರು ವರನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಜೋಡಿಯಾಗಿದ್ದರು.  ಇವೆಲ್ಲವೂ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ದೊಡ್ಡ ಯಶಸ್ಸನ್ನು ಗಳಿಸಿದವಲ್ಲದೆ ರೂಪಾ ಅವರ ಅಭಿನಯಕ್ಕೂ ಮೆಚ್ಚುಗೆ ಸಂದವು.  1989ರ ನಂತರ ಅವರು ನಟನೆಯನ್ನು ನಿಲ್ಲಿಸಿದರು. ಸುಮಾರು ಇಪ್ಪತ್ತು ವರ್ಷಗಳ ನಂತರ ಅವರು 2008ರಲ್ಲಿ 'ಗಂಗಾ ಕಾವೇರಿ'ಯೊಂದಿಗೆ ಬೆಳ್ಳಿತೆರೆಗೆ ಮರಳಿದರು. 2011ರಲ್ಲಿ ಅವರು ನಾಯಕ ದುನಿಯಾ ವಿಜಯ್ ಅವರ ತಾಯಿಯಾಗಿ 'ಜರಾಸಂಧ'ದಲ್ಲಿ ನಟಿಸಿದರು.

ರೂಪಾ ದೇವಿ ಮತ್ತು ಅವರ ತಾಯಿ ಅದವಾನಿ ಲಕ್ಷ್ಮಿ ದೇವಿ ಇಬ್ಬರಿಗೂ ನಾಯಕನಾಗಿ ನಟಿಸಿದ ಹಿರಿಮೆಯನ್ನು ಡಾ.ರಾಜ್‌ಕುಮಾರ್ ಹೊಂದಿದ್ದಾರೆ.

ಹಸನ್ಮುಖಿಯಾಗಿ ಉತ್ತಮವಾಗಿ ಅಭಿನಯಿಸುತ್ತಿದ್ದ ರೂಪಾ ಅವರ ಪೋಗದಿರೆಲೊ ರಂಗ ಅಂತಹ ಗೀತೆಗಳಲ್ಲಿನ ಅಭಿನಯ ಈಗಲೂ ಮೆಚ್ಚುಗೆ ಹುಟ್ಟಿಸುತ್ತದೆ.

On the birthday of actress Roopa, Roopa Devi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ