ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ2


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 1

ಸಂಕ್ಷಿಪ್ತ ಭಾವ 

ಜಯದೇವ ಕವಿಯು ಇಲ್ಲಿ ವಿಷ್ಣುವಿನ ದಶಾವತಾರದ ವರ್ಣನೆ ಮಾಡುತ್ತ ಪ್ರತಿಯೊಂದು ಅವತಾರಕ್ಕೂ ಜಯವಾಗಲಿ ಎನ್ನುತ್ತಾನೆ. ಇಲ್ಲಿ ಒಟ್ಟು 11 ಭಾಗಗಳಿವೆ. 

ವೇದವನ್ನು ಸಮುದ್ರದ ತಲದಿಂದ ಎತ್ತಿತರಲು ಮೀನಿನ ರೂಪ ಧರಿಸಿದ್ದು. ಸಮುದ್ರಮಥನದ ಕಾಲದಲ್ಲಿ ಧರಣಿಯನ್ನು ಬೆನ್ನ ಮೇಲೆ ಹೊರಲು ಆಮೆಯ ರೂಪವನ್ನು ಹೊಂದಿದ್ದು. ರಕ್ಕಸನಿಂದ  ಭೂದೇವಿಯನ್ನು ರಕ್ಷಿಸಲು ಅಪೂರ್ವವಾದ ದಾಡೆಯ ವರಾಹ ರೂಪವನ್ನು ಎತ್ತಿದ್ದು. ಅದ್ಭುತವಾದ ನರಸಿಂಹನ ರೂಪದಲ್ಲಿ ಹಿರಣ್ಯಕಶಿಪುವನ್ನು ಕೊಂದದ್ದು. ವಾಮನನಾಗಿ ಬಂದು ಬಲಿಯ ಮುಂದೆ ತ್ರಿವಿಕ್ರಮನಾದದ್ದು. ದುಷ್ಟರನ್ನು ಶಿಕ್ಷಿಸಲು ಪರಶುರಾಮನಾಗಿ ಭೂಮಿಯಲ್ಲಿ ಸಂಚರಿಸಿದ್ದು. ರಾಕ್ಷಸ ರಾವಣನ ತಲೆಗಳನ್ನು ತರಿಯಲು ರಾಮನಾದದ್ದು. ಮೋಡದ ಕಾಂತಿಯ ಹಲಧರರೂಪದವನಾದದ್ದು. ಹಿಂಸೆಯನ್ನು ತಡೆಯಲು ಬುದ್ಧನಾಗಿ ಉಪದೇಶ ನೀಡಿದ್ದು. ಮ್ಲೇಚ್ಛರನ್ನು ಕೊನೆಗಾಣಿಸಲು ಕತ್ತಿಯನ್ನು ಎತ್ತಿ ಕಲ್ಕಿಯಾದದ್ದು...

ಹೀಗೆ ಇಲ್ಲಿ ಹತ್ತು ಅವತಾರಗಳ ವಿವರಗಳು ಸುಂದರವಾಗಿ ಸಂಗ್ರಹವಾಗಿವೆ. ಪ್ರತಿ ಪದ್ಯದ ಕೊನೆಯ ಸಾಲು ಲಯಬದ್ಧವಾಗಿವೆ

*ಹರಿ ಜಗದೀಶನೆ ಜಯವೆನುವೆ*
*ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೧

ಪ್ರಲಯ ಪಯೋಧಿಯ ಜಲದಿಂದೆತ್ತಿದೆ ವೇದವನೆ
ನೀನು ವಹಿತ್ರದ ತೆರದೊಳಖೇದವೆನೆ ಮೀನಿನ ರೂಪವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನುವೆ 1

ಕಡಲನು ಕಡೆವಂದಿಳೆಯನು ಬೆನ್ನೊಳು ತಳೆದೆ ಕಣ
ಮೆರೆವುದು ಧರಣೀ ಧಾರಣ ಕೀರ್ತಿ ಕಿರಣ
ಕಚ್ಛಪ ರೂಪವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನುವೆ. 2

ಅಸುರನು ಕೊಂಡುಯ್ದ ವನಿಯನೆತ್ತಿದೆ ದಾಡೆಯೊಳು
ತಿರೆಯಿರೆ ಶಶಿಯೊಳಡಂಗಿದ ಕರೆಯೆನಲು 
ಸೂಕರ ರೂಪವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನುವೆ. 3

ಅದ್ಭುತವೆನುವೆನು ತವ ಕರ ಬಿಸ ನಖ ಶೃಂಗವನು
ಬಗೆದೆ ಹಿರಣ್ಯ ಕಶಿಪು ತನು ಭೃಂಗವನು ನರಹರಿ ರೂಪವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನುವೆ. 4

ವಿಕ್ರಮನಾಗುತೆ ಬಲಿಯನ್ನು ಮೆಟ್ಟಿದೆ ವಾಮನನೆ 
ಆಡಿಯುಗುರುದಕದೊಳೀ ಜನವಮಳವೆನೆ 
ವಾಮನ ರೂಪನನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನುವೆ. 5

ದೊರೆಗಳ ನೆತ್ತರೊಳಿಳೆಯನು ತೊಳೆದಿಹೆ, ಪಾಪವನೆ
ಅಳಿಸುತಲಾರಿಪವೊಲು ಭವ ತಾಪವನೆ 
ಭೃಗುಪತಿ ರೂಪವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನುವೆ. 6

ದೈತ್ಯನ ತಲೆಗಳ ಬಲಿಗೈದಿಹೆ ನೀ ಲೀಲೆಯೆನೆ
ದಿಕ್ಷತಿ ವೃಂದದ ಬಹುದಿನದೀಪ್ಸೆಯೆನೆ 
ರಾಮ ಶರೀರವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನ್ನುವೆ. 7

ಬೆಳ್ಳನೆ ಮೈಯೊಳಗಿಹುದುಡೆ ಮೋಡದ ಕಾಂತಿಯೆನೆ 
ಹಲಹತಿ ಭೀತಿಯೊಳುಡುಗಿದ ಯಮುನೆಯೆನೆ 
ಹಲಧರ ರೂಪವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನುವೆ. 8

ಸದಯನೆ ಯಜ್ಞವ ಬೋಧಿಪ ವೇದವ ನಿಂದಿಸಿದೆ 
ಅಹಹಾ ಪಶುಘಾತವ ನೀ ಖಂಡಿಸಿದೆ 
ಬುದ್ಧ ಶರೀರವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನ್ನುವೆ. 9

ಮ್ಲೇಚ್ಛರ ನಿಧನಕೆ ಎತ್ತಿದೆ ನೀ ಕರವಾಳವನು
ಉಳ್ಕೆಯೊ ತಾನೆನೆ ಮಿಸುವ ಕರಾಳವನು
ಕಲ್ಕಿ ಶರೀರವನೆತ್ತಿದ ಕೇಶವ 
ಹರಿ ಜಗದೀಶನೆ ಜಯವೆನ್ನುವೆ. 10

ಶ್ರೀ ಜಯದೇವ ಕವೀಶ್ವರ ಕೃತಿಯನುದಾರವನು 
ಲಾಲಿಸು ಶುಭಸುಖಕರ ಭವಸಾರವನು 
ದಶವಿಧ ರೂಪವನೆತ್ತಿದ ಕೇಶವ
ಹರಿ ಜಗದೀಶನೆ ಜಯವೆನುವೆ. 11

*ಮೂಲ ಭಾಗ*
ಅಷ್ಟಪದೀ 1 ದಶಾವತಾರ ವರ್ಣನಮ್
ಮಾಲವರಾಗ ರೂಪಕತಾಳ

ಪ್ರಲಯಪಯೋಧಿಜಲೇ ಧೃತವಾನಸಿ ವೇದಂ
ವಿಹಿತವಹಿತ್ರ ಚರಿತ್ರಮಖೇದಂ
ಕೇಶವ ಧೃತಮೀನಶರೀರ ಜಯ ಜಗದೀಶ ಹರೇ || ಧ್ರುವಮ್||  ||೧||

ಕ್ಷಿತಿ ರತಿ ವಿಪುಲತರೇ ತವ ತಿಷ್ಠತಿ ಪೃಷ್ಠೇ
ಧರಣಿಧರಣಕಿಣಚಕ್ರಗರಿಷ್ಠೇ
ಕೇಶವ ಧೃತಕಚ್ಛಪರೂಪ ಜಯ ಜಗದೀಶ ಹರೇ ||೨||

ವಸತಿ ದಹನಶಿಖರೇ ಧರಣೀ ತವ ಲಗ್ನಾ 
ಶಶಿನಿ ಕಲಂಕಕಲೇವ ನಿಮಗ್ನಾ
ಕೇಶವ ಧೃತಸೂಕರರೂಪ ಜಯ ಜಗದೀಶ ಹರೇ ||೩||

ತವ ಕರಕಮಲವರೇ ನಖಮದ್ಭುತಶೃಂಗಂ
ದಲಿತಹಿರಣ್ಯಕಶಿಪುತನುಭೃಂಗಂ
ಕೇಶವ ಧೃತನರಹರಿರೂಪ ಜಯ ಜಗದೀಶ ಹರೇ ||೪||

ಛಲಯಸಿ ವಿಕ್ರಮಣೇ ಬಲಿಮದ್ಭುತವಾಮನ
ಪದನಖನೀರಜನಿತಜನಪಾವನ
ಕೇಶವ ಧೃತವಾಮನರೂಪ ಜಯ ಜಗದೀಶ ಹರೇ ||೫||

ಕ್ಷತ್ರಿಯರುಧಿರಮಯೇ ಜಗದಪಗತಪಾಪಂ
ಸ್ನಪಯಸಿ ಪಯಸಿ ಶಮಿತಭವತಾಪಂ 
ಕೇಶವ ಧೃತಭೃಗುಪತಿರೂಪ ಜಯ ಜಗದೀಶ ಹರೇ ||೬||

ವಿತರಸಿ ದಿಕ್ಷು ರಣೇ ದಿಕ್ಪತಿ ಕಮನೀಯಂ
ದಶಮುಖಮೌಲಿಬಲಿಂ ರಮಣೀಯಂ 
ಕೇಶವ ಧೃತರಾಮಶರೀರ ಜಯ ಜಗದೀಶ ಹರೇ ||೭||

ವಹಸಿ ವಪುಷಿ ವಿಶದೇ ವಸನಂ ಜಲದಾಭಂ
ಹಲಹತಿಭೀತಿಮಿಲಿತಯಮುನಾಭಂ 
ಕೇಶವ ಧೃತಹಲಧರರೂಪ ಜಯ ಜಗದೀಶ ಹರೇ ||೮||

ನಿಂದಸಿ ಯಜ್ಞ ವಿಧೇರಹಹ ಶ್ರುತಿಜಾತಂ ಸದಯಹೃದಯದರ್ಶಿತಪಶುಘಾತಂ 
ಕೇಶವ ಧೃತಬುದ್ಧಶರೀರ ಜಯ ಜಗದೀಶ ಹರೇ ||೯||

ಮ್ಲೇಚ್ಛನಿವಹನಿಧನೇ ಕಲಯಸಿ ಕರವಾಲಂ
ಧೂಮಕೇತುಮಿವ ಕಿಮಪಿ ಕರಾಲಂ 
ಕೇಶವ ಧೃತಕಲ್ಕಿಶರೀರ ಜಯ ಜಗದೀಶ ಹರೇ ||೧೦||

ಶ್ರೀ ಜಯದೇವಕವೇರಿದಮುದಿತಮುದಾರಂ
ಶ್ರುತಿ ಸುಖದಂ ಶುಭದಂ ಭವಸಾರಂ 
ಕೇಶವ ಧೃತದಶವಿಧರೂಪ ಜಯ ಜಗದೀಶ ಹರೇ || ೧೧||

ವೇದಾನುದ್ಧರತೇ ಜಗನ್ನಿವಹತೇ ಭೂಗೋಲಮುದ್ಬಭ್ರತೇ
ದೈತ್ಯಾನ್ದಾರಯತೇ ಬಲಿಂ ಛಲಯತೇ ಕ್ಷತ್ರಕ್ಷಯಂ ಕುರ್ವತೇ
ಪೌಲಸ್ತ್ಯಂ ಜಯತೇ ಹಲಂ ಕಲಯತೇ ಕಾರುಣ್ಯಮಾತನ್ವತೇ
ಮ್ಲೇಚ್ಛಾನ್ಮೂರ್ಚ್ಪಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ ||೧೨||

ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ