ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ3


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 2

*ಸಂಕ್ಷಿಪ್ತ ಭಾವ*

ಜಯದೇವನು ಈ ಅಷ್ಟಪದಿಯ ಮೂಲಕ ಶ್ರೀ ಕೃಷ್ಣನನ್ನು ನಾನಾಪ್ರಕಾರಗಳಲ್ಲಿ ಸ್ತುತಿಸಿದ್ದಾನೆ. ಲಕ್ಷ್ಮೀ ಕಾಂತನಾದ, ವನಮಾಲೆಯಿಂದ ಶೋಭಿತನಾದ, ಸೂರ್ಯನಂತೆ ತೇಜಸ್ಸುಳ್ಳವನಾದ,  ಭವವನ್ನು ಕಳೆಯುವವನಾದ, ಸದಾ ಮುನಿಗಳ ಮನದಲ್ಲಿ ಇರುವ ಹರಿಗೆ ಜಯವಾಗಲಿ.  ಕಾಲಿಯನೆಂಬ ಸರ್ಪವನ್ನು ಮರ್ದಿಸಿದ, ಯದುಕುಲದ ರವಿಯಾದ, ನರಕಾಸುರನನ್ನು ಸಂಹರಿಸಿ ಗರುಡವಾಹನನಾದ ಹರಿಗೆ ಜಯವಾಗಲಿ.

ಭವಬಂಧನವನ್ನು ದೂರಮಾಡುವ, ಮೂರು ಲೋಕದ ಒಡೆಯನಾದ, ದೂಷಣನನ್ನು ಗೆದ್ದಂತಹ, ರಾವಣನನ್ನು ಶಿಕ್ಷಿಸಿದ ಹರಿಗೆ ಜಯವೆನ್ನುವೆ.
ನೀಲಮೇಘದಂತಹ ಸುಂದರ ರೂಪದವನಾದ, ಗೋವರ್ಧನ ಗಿರಿಧರನಾದ, ಶ್ರೀಮುಖನಾದಂತಹ ಹರಿಗೆ ಜಯವಾಗಲಿ. ನಿನ್ನ ಪದಚರಣಗಳಲ್ಲಿ ಶರಣಾಗತರಾದವನ್ನು ಅರಿತು ಶುಭವನ್ನು ನೀಡು ಎನ್ನುತ್ತಾ,  ಜಯದೇವ ಕವಿಯ ಈ ರಚನೆಯು ಎಲ್ಲರಿಗೂ ಮಂಗಳವಾಗಲಿ ಎನ್ನುವ ಪ್ರಾರ್ಥನೆಯೊಂದಿಗೆ ಎರಡನೆಯ ಅಷ್ಟಪದಿ ಮುಗಿಯುತ್ತದೆ.

*ಎಸ್. ವಿ.ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೨

ರಮೆಯ ಪಯೋಧರದೆಡೆಯಿಂಬಾಗಿರೆ ಪಟ್ಟವನೆ
ಕುಂಡಲಗಳ ಸಲೆ ತೊಟ್ಟವನೆ
ಕೋಮಲ ನವ ವನ ಮಾಲೆಯಿನೆಸೆವವನೆ 
ದೇವನೆ ಹರಿ ಜಯಜಯವೆನುವೆ. 1

ರವಿಮಂಡಲದೊಳು ಮಂಡನದಂದದೆ ಹೊಳೆವವನೆ 
ಸುತ್ತಿದ ಭವವನು ಕಳೆವವನೆ
ಮುನಿ ಮಾನಸದೊಳು ವಿಹರಿಸ ಹಂಸನೆನೆ
ದೇವನೆ ಹರಿ ಜಯಜಯವೆನುವೆ. 2

ಕಾಲಿಯನೆನೆ ಸಂದಹಿಯನು ಮರ್ದನಗೈವವನೆ 
ಜನರಾನಂದಕೆ ಕಾರಣನೆ 
ನಿರ್ಮಲ ಯದುಕುಲ ನಲಿನ ದಿನೇಶನೆನೆ 
ದೇವನೆ ಹರಿ ಜಯಜಯವೆನುವೆ. 3

ಮಧು ಮುರ ನರಕಾಸುರರನು ಭರದೊಳು ಕೊಂದವನೆ 
ಗರುಡನನೇರುತೆ ಬಂದವನೆ 
ಸುರಕುಲ ಲೀಲಾಹ್ಲಾದ ನಿನಾದನೆನೆ ದೇವನೆ ಹರಿ ಜಯಜಯವೆನುವೆ. 4

ನಿರ್ಮಲ ಕಮಲದ ದಳವನು ಹೋಲುವ ಕಣ್ಣವನೆ 
ಭವ ಬಂಧನವನು ತೊಡೆವವನೆ  
ತ್ರಿಭುವನ ಭವನಕೆ ಮೂಲ ನಿಮಿತ್ತನೆನೆ ದೇವನೆ ಹರಿ ಜಯಜಯವೆನುವೆ. 5

ಭೂಷಣದಿಂದವನಿಜೆಯನಲಂಕರಿಸಿದೆ ನೀನು 
ದೂಷಣನನು ನೀ ಗೆದ್ದವನು 
ಕಳನೊಳು ನಿನ್ನಿಂದಳಿದನು ರಾವಣನು ದೇವನೆ ಹರಿ ಜಯಜಯವೆನುವೆ. 6

ಮೈಯಿದೊ ಹೊಸ ಮುಗಿಲಿನ ಹೊಗರನು ತಳೆದೆಸೆಯುತಿದೆ 
ಮಂದರ ಗಿರಿಯನು ನೀ ತಳೆದೆ 
ಶ್ರೀಮುಖ ಚಂದ್ರ ಚಕೋರನು ನೀನಾದೆ ದೇವನೆ ಹರಿ ಜಯಜಯವೆನುವೆ. 7

ನಿನ್ನಡಿದಾವರೆಯಡಿಯೊಳು ನಾವಿದೊ ಶರಣೆಂದು 
ಮುಡಿ ಬಾಗಿರುವುದನರಿತಿಂದು ಮಣಿದರಿಗೀವುದು ಶುಭವನು ನೀನೊಲಿದು 
ದೇವನೆ ಹರಿ ಜಯಜಯವೆನುವೆ. 8

ಶ್ರೀ ಜಯದೇವ ಕವೀಶ್ವರ ರಚಿತವಿದೆನಿಸಿಹುದು 
ಮೋದವನೀಯಲಿ ಗೇಯವಿದು 
ಸುಂದರ ಸೋಜ್ವಲ ಮಂಗಳ ಗೀತವಿದು ದೇವನೆ ಹರಿ ಜಯಜಯವೆನುವೆ. 

*ಮೂಲ ಭಾಗ*
ಗೀತಂ -ಅಷ್ಟಪದೀ-2-ಹರಿವಿಜಯ ಮಂಗಳಾಚರಣಮ್
ಗುರ್ಜರರಾಗ, ಪ್ರತಿಮಂಡತಾಲ

ಶ್ರಿತಕಮಲಾಕುಚಮಂಡಲ ಧೃತಕುಂಡಲ ಏ 
ಕಲಿತಲಲಿತವನಮಾಲ ಜಯ ಜಯ ದೇವ ಹರೇ ||ಧ್ರುತಮ್|| ||೧||

ದಿನಮಣಿಮಂಡಲಮಂಡನ ಭವಖಂಡನ ಏ ಮುನಿಜನಮಾನಸಹಂಸ ಜಯ ಜಯ ದೇವ ಹರೇ ||೨||

ಕಾಲಿಯವಿಷಧರಭಂಜನ ಜನರಂಜನ ಏ 
ಯದುಕುಲನಲಿನದಿನೇಶ ಜಯ ಜಯ ದೇವ ಹರೇ ||೩||

ಮಧುಮುರನರಕವಿನಾಶನ ಗರುಡಾಸನ ಏ 
ಸುರಕುಲಕೇಲಿನಿದಾನ ಜಯ ಜಯ ದೇವ ಹರೇ ||೪||

ಅಮಲಕಮಲದಲಲೋಚನ ಭವಮೋಚನ ಏ ತ್ರಿಭುವನಭುವನನಿಧಾನ ಜಯ ಜಯ ದೇವ ಹರೇ ||೫||

ಜನಕಸುತಾಕುಚ ಭೂಷಣ ಜಿತದೂಷಣ ಏ
ಸಮರಶಮಿತದಶಕಂಠ ಜಯ ಜಯ ದೇವ ಹರೇ ||೬||

ಅಭಿನವಜಲಧರಸುಂದರ ಧೃತಮಂದರ ಏ ಶ್ರೀಮುಖಚಂದ್ರಚಕೋರ ಜಯ ಜಯ ದೇವ ಹರೇ ||೭||

ತವ ಚರಣೇ ಪ್ರಣತಾ ವಯಮಿತಿ ಭಾವಯ ಏ
ಕುರು ಕುಶಲಂ ಪ್ರಣತೇಷು ಜಯ ಜಯ ದೇವ ಹರೇ ||೮||

ಶ್ರೀಜಯದೇವಕವೇರಿದಂ ಕುರುತೇ ಮುದಂ ಏ 
ಮಂಗಲಮುಜ್ವಲಗೀತಂ ಜಯ ಜಯ ದೇವ ಹರೇ ||೯||

ಪದ್ಮಾ ಪಯೋಧರತಟೀಪರಿರಂಭಲಗ್ನ_ ಕಾಶ್ಮೀರಚಂದನಮುರೋ ಮಧುಸೂದನಸ್ಯ 
ವ್ಯಕ್ತಾನುರಾಗಮಿವ ಖೇಲದನಂಗಖೇದ_ ಸ್ಟೇದಾಂಬುಪೂರಮನುಪೂರಯತು ಪ್ರಿಯಂ ವಃ ||೧೦||

ವಸಂತೇ ವಾಸಂತೀಕುಸುಮ ಸುಕುಮಾರೈರವಯವೈ_
ರ್ಭಮಂತೀಂ ಕಾಂತಾರೇ ಬಹುವಿಹಿತಕೃಷ್ಣಾನುಸರಣಾಂ 
ಅಮಂದಂ ಕಂದರ್ಪಜ್ವರಜನಿತಚಿಂತಾಕುಲತಯಾ ಚಲದ್ಘಾಧಾಂ ರಾಧಾಂ ಸರಸಮಿದಮೂಚೇ ಸಹಚರೀ||೧೧||

ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ