ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ13


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 12


*ಸಂಕ್ಷಿಪ್ತ ರೂಪ*


ರಾಧೆಯು ವಿರಹತಾಪದಿಂದ ಬೆಂದು ಹೇಗೋ ಕಷ್ಟದಿಂದ ಬಳ್ಳಿಮನೆಯನ್ನು ಸೇರಿ ಮಾಧವನಿಗಾಗಿ ಕಾಯುತ್ತಿರುವ ವಿಷಯವನ್ನು ಸಖಿಯು ಹರಿಗೆ ಹೇಳುವ ಭಾಗ ಇಲ್ಲಿದೆ.


ರಾಧೆಯು ನಿನಗಾಗಿ ಕೊರಗುತ್ತ ಕಾದಿರುವಳು. ಅವಳ ಚೆಂದುಟಿಯ ಸವಿಯನ್ನು ಹೀರುವ ನಿನ್ನ ಬರವಿಗಾಗಿ ಕಾತರಿಸುತ್ತಿರುವಳು. ನಿನ್ನ ಬಳಿಸಾರುವ ರಭಸದಲ್ಲಿ ಅವಳು ತುಂಬಾ ನೊಂದಿರುವಳು. ನಡೆಯುವುದೂ ಕಷ್ಟವಾಗಿ ಅಡಿಗಡಿಗೆ ಬೀಳುತ್ತ, ಏಳುತ್ತ ಸೊರಗಿರುವಳು. 


ಬಿಳಿಯ ತಾವರೆಯಂತೆ ಬಿಳಿಚಿಕೊಂಡಿರುವ ಅವಳು ನಿನ್ನೊಂದಿಗೆ ಹಿಂದೆ ಸವಿದ ಒಲವಿನ ಸಮಾಗಮದ ಕ್ಷಣಗಳನ್ನು ನೆನೆಯುತ್ತ ಅದರ ಬಲದಲ್ಲಿ ತನ್ನ ಪ್ರಾಣವನ್ನು ಹಿಡಿದಿಟ್ಟಿರುವಳು.


ನಿನಗಾಗಿ ಮಾಡಿಕೊಂಡ ಅಲಂಕಾರವನ್ನು ನೋಡಿಕೊಂಡು ಅತ್ತಿತ್ತ ತೊನೆದಾಡುವಳು. ಕೆಲವೊಂದು ಬಾರಿ ಅವಳು ನೀನೇ ಎಂಬ ಭಾವವನ್ನು ತಾಳಿ ಪರವಶಳಾಗುವಳು. ಇನ್ನೂ ಏಕೆ ಹರಿಯು ತಮ್ಮ ಸಂಕೇತದ ಸ್ಥಳಕ್ಕೆ ಬರುತ್ತಿಲ್ಲವೆಂದು ಅಡಿಗಡಿಗೆ ಹೇಳುತ್ತ ಕಾಯುತ್ತಿರುವಳು.


ಕತ್ತಲಿನ ಕಪ್ಪು ಬಣ್ಣವನ್ನು ನೀನೇ ಎಂದು ಭ್ರಮಿಸಿ ಅಪ್ಪಿಕೊಳ್ಳಲು ಹೋಗುವಳು. ನೀನು ಬಂದಿರುವೆಯೆಂದು ಭಾವಿಸಿ ಬಯಲನ್ನು ಮುದ್ದಿಸುವಳು.

ನಾಚಿಕೆಯನ್ನು ತೊರೆದು ನೀನು ತಡಮಾಡಿದೆಯೆಂದು ಬಹಳವಾಗಿ ನೊಂದು ವಿಲಪಿಸುತ್ತಿರುವಳು.


ಜಯದೇವಕವಿಯು ರಚಿಸಿದ ಈ ಗಾನವು  ಎಲ್ಲ ರಸಿಕರಿಗೂ ಅಮಿತವಾದ ಆನಂದವನ್ನು ಕೊಡಲಿ.

( ಇಲ್ಲಿಗೆ ಆರನೆಯ ಸರ್ಗ ಮುಗಿಯಿತು )


*ಪರಮೇಶ್ವರ ಭಟ್ಟರ ಕನ್ನಡ ರೂಪ*

ಅಷ್ಟಪದಿ 12


ನಾಥನೆ ಕೊರಗುತಲಿರುವಳು ರಾಧಿಕೆ ಮನೆಯೊಳಗೆ 

ಚೆಂದುಟಿ ಜೇನನು ರಹದೊಳು ಸವಿಯುವ ಹರಿ ನಿನಗೆ 

ಕಾತರಿಸುತೆ ತಾ ಕಣ್ಣಾಡಿಸುವಳು ದೆಸೆದೆಸೆಗೆ 1


ನಿನ್ನನು ಸಾರುವ ರಭಸದೊಳಿಂದುರೆ ನೊಂದವಳು

ಕೆಲವಡಿಗಳನಿಡುತುರುಳುತ ಬೀಳುವಳೇಳುವಳು. 2


ಬೆಳ್ಳನೆ ತಾವರೆ ನೂಲಿನ ಬಳೆಯನು ತಳೆದಿಹಳು

ಹಿಂದಿನ ಒಲವನು ನೆನೆಯತಲಸುವಿಡಿದಿಂದಿಹಳು. 3


ಸಿಂಗರವನು ಸಲೆ ನಿರುಕಿಸುತಡಿಗಡಿಗೊಲಿಯುವಳು ತಾನೆಯೆ ಮಧುರಿಪುವೆನ್ನುತಲಹ ಪರವಶಳಹಳು. 4


ಬಾರನದೇತಕೆ ಹರಿ ಸಂಕೇತದ ನೆಲೆಯೆಡೆಗೆ 

ಬೆಸಗೊಳುತಿಹಳವಳಾಳಿಯನಿರದಿಂತಡಿಗಡಿಗೆ. 5


ಮೋಡದ ತೆರನಿರುವಿರುಳಿನ ಕತ್ತಲ ಮೊತ್ತವನು

ಹರಿ ಬಂದಿಹನೆಂದಪ್ಪುತೆ ಮುದ್ದಿಸುವಳು ತಾನು. 6


ನೀ ತಡಮಾಡಿದೆಯೆನ್ನುತೆ ಲಜ್ಜೆಯ ಸಲೆ ತೊರೆದು 

ವಾಸಕಸಜ್ಜಿಕೆ ವಿಲಪಿಸುತಳುತಿಹಳುರೆ ನೊಂದು. 7


ಶ್ರೀಜಯದೇವನು ರಚಿಸಿದನಿಂತೀ ಗಾನವನು 

ರಸಿಕರಿಗಿದು ಕುಡಲಮಿತಾನಂದವನು. 8


*ಮೂಲ ಭಾಗ*

ಷಷ್ಠ ಸರ್ಗಃ_ ಧನ್ಯ ವೈಕುಂಠಕುಂಕುಮಮ್

ಅಥ ತಾಂ ಗಂತುಮಶಕ್ತಾಂ ಚಿರಮನುರಕ್ತಾಂ ಲತಾಗೃಹೇ ದೃಷ್ಟ್ಯಾ

ತಚ್ಚರಿತಂ ಗೋವಿಂದಃ ಮನಸಿಜಮಂದೇ ಸಖೀ ಪ್ರಾಹ


ಗೀತಂ_ ಅಷ್ಟಪದೀ_ 12

ಗುಣಕರೀರಾಗ, ರೂಪಕತಾಲ


ಪಶ್ಯತಿ ದಿಶಿ ದಿಶಿ ರಹಸಿ ಭವಂತಂ ತ್ವದಧರಮಧುರಮಧೂನಿ ಪಿಬಂತಂ ನಾಥ ಹರೇ ಜಗನ್ನಾಥ ಹರೇ

ಸೀದತಿ ರಾಧಾsವಾಸಗೃಹೇ  ||ಧ್ರುವಮ್||  ||೧||


ಹೃದಭಿಸರಣರಭಸೇನ ವಲಂತೀ

ಪತತಿ ಪದಾನಿ ಕಿಯಂತಿ ಚಲಂತೀ  ೨


ವಿಹಿತವಿಶದಬಿಸಕಿಸಲಯವಲಯಾ

ಜೀವತಿ ಪರಮಿಹ ತವ ರತಿಕಲಯಾ ೩


ಮುಹುರವಲೋಕಿತಮಂಡನಲೀಲಾ

ಮಧುರಿಪುರಹಮಿತಿ ಭಾವನಶೀಲಾ ೪


ತ್ವರಿತಮುಪೈತಿ ನ ಕಥಮಭಿಸಾರಂ

ಹರಿರಿತಿ ವದತಿ ಸಖೀಮನುವಾರಂ ೫


ಶಿಷ್ಯತಿ ಚುಂಬತಿ ಜಲಧರಕಲ್ಪಂ

ಹರಿರುಪಗತ ಇತಿ ತಿಮಿರಮನಲ್ಪಂ ೬


ಭವತಿ ವಿಲಂಬಿನಿ ವಿಗಲಿತಲಜ್ಞಾ

ವಿಲಪತಿ ರೋದಿತಿ ವಾಸಕಸಜ್ಜಾ ೭


ಶ್ರೀಜಯದೇವಕವೇರಿದಮುದಿತಂ

ರಸಿಕಜನಂ ತನುತಾಮತಿಮುದಿತಂ ೮


ವಿಪುಲಪುಲಕಪಾಲಿಃ ಸ್ಪೀತಸೀತ್ಕಾರಮಂತ_ ರ್ಜನಿತಜಡಿಮಕಾಕುವ್ಯಾಕುಲಂ ವ್ಯಾಹರಂತೀ

ತವ ಕಿತವ ವಿಧಾಯಾಮಂದಕಂದರ್ಪಚಿಂತಾಂ ರಸಜಲನಿಧಿಮಗ್ನಾ ಧ್ಯಾನಲಗ್ನಾ ಮೃಗಾಕ್ಷೀ ||೯||


ಅಂಗೇಷ್ಟಾ ಭರಣಂ ಕರೋತಿ ಬಹುಶಃ ಪತ್ರೇsಪಿ ಸಂಚಾರಿಣಿ

ಪ್ರಾಪ್ತಂ ತ್ವಾಂ ಪರಿಶಂಕತೇ ವಿತನುತೇ ಶಯ್ಯಾಂ ಚಿರಂ ಧ್ಯಾಯತಿ ಇತ್ಯಾಕಲ್ಪವಿಕಲ್ಪತಲ್ಪರಚನಾಸಂಕಲ್ಪಲೀಲಾಶತ_

ವ್ಯಾಸಕ್ತಾsಪಿ ವಿನಾ ತ್ವಯಾ ವರತನುರ್ನೈಷಾ ನಿಶಾಂ ನೇಷ್ಯತಿ ೧೦


ಕಿಂ ವಿಶ್ರಾಮ್ಯಸಿ ಕೃಷ್ಣ ಭೋಗಿಭವನೇ ಭಾಂಡೀರಭೂಮೀರುಹೇ ಭ್ರಾತರ್ಯಾಹಿ ನ ದೃಷ್ಟಿಗೋಚರಮಿತಃ ಸಾನಂದನಂದಾಸ್ಪದಂ

ರಾಧಾಯಾ ವಚನಂ ತದಧ್ರಗಮುಖಾನ್ನಂದಾಂತಿಕೇ ಗೋಪತೋ 

ಗೋವಿಂದಸ್ಯ ಜಯಂತಿ ಸಾಯುಮತಿಥಿಪ್ರಾಶಸ್ತ್ರಗರ್ಭಾ ಗಿರಃ ೧೧


|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯ ವಾಸಕ ಸಜ್ಜಾ ವರ್ಣನೇ ಧನ್ಯ ವೈಕುಂಠನಾಮ ಷಷ್ಠ ಸರ್ಗ: ||


ಕೃತಜ್ಣತೆ:

1. ಮೂಲ: ಜಯದೇವ ಕವಿಯ 'ಗೀತಗೋವಿಂದ'

 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ

3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ