ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ12


ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 11

*ಸಂಕ್ಷಿಪ್ತ ಭಾವ*

ಸಖಿಯು ರಾಧೆಗೆ ಮಾಧವನ ದೀನಸ್ಥಿತಿಯನ್ನು ವಿವರಿಸುತ್ತ ಮತ್ತಷ್ಟು ವಿವರಗಳನ್ನು ಹೇಳುವುದಲ್ಲದೆ ರಾಧೆಯನ್ನು ಮಾಧವನೆಡೆಗೆ ತೆರಳುವಂತೆ ಪ್ರಚೋದಿಸುವಳು.

ವನಮಾಲಿಯು ವೇಣುಗಾನವನ್ನು ಮಾಡುತ್ತ ಮಂದಾನಿಲನು ಸುಳಿಯುವ ಯಮುನಾತೀರದಲ್ಲಿರುವನು. ಗೋಪಿಯರ ಉನ್ನತ ಸ್ತನಗಳೊಡನೆ ಕ್ರೀಡಿಸಿದ ಕರಗಳನ್ನುಳ್ಳ ಗುಣಶಾಲಿಯಾದ ಅವನು ನಿನ್ನೊಡನೆ ರತಿಸುಖದ ಆಸೆಯಲ್ಲಿರುವನು.

ತಡಮಾಡದೆ ನಡೆ, ಗೆಳತಿ, ನಿನ್ನ ಹೃದಯೇಶನನ್ನು ಪಡೆದುಕೋ. ಅದೋ ಆಲಿಸು..ಅವನ ವೇಣುವಿನ ಧ್ವನಿ ನಿನ್ನ ಹೆಸರನ್ನೇ ನುಡಿಸುವಂತಿದೆ. ನಿನ್ನನ್ನು ಸ್ಪರ್ಶಿಸಿದ ಗಾಳಿಯು ತನ್ನನ್ನು ಸೋಂಕಿದರೆ ಅದೇ ಪುಣ್ಯವೆಂದು ಅವನು ಭಾವಿಸುವನು.

ಹಕ್ಕಿಯು ಹಾರಿದರೆ, ಎಲೆಗಳು ಅಲುಗಿದರೆ ನೀನೇ ಎಂದು ಭ್ರಮಿಸಿ ಸುತ್ತಲೂ ನೋಡುವನು. ನೀ ಬರುವ ಹಾದಿಯನ್ನೇ ಎದುರುನೋಡುತ್ತ ಕಾಲಿನಿಂದ ಚಿತ್ರವನ್ನು ರಚಿಸುತ್ತ ಕಾಯುತ್ತಿರುವನು .

ಕಾಲುಗಳಿಗೆ ಹಾಕಿರುವ ಸದ್ದು ಮಾಡುವ ಗೆಜ್ಜೆಗಳು ನಿನಗೆ ನಡೆಯಲು ತೊಂದರೆ ಮಾಡುತ್ತಿವೆ. ಅವನ್ನು ತೆಗೆದುಬಿಡು. ಬೇಗ ಹೊರಡು. ಲತಾಮಂಟಪಕ್ಕೆ ನಡೆ.  ಸುಂದರ ನೀಲದುಕೂಲವನ್ನು ಧರಿಸಿ ನಡೆ. 

ಬೆಳ್ಳಕ್ಕಿಗಳ ಸಾಲು ಮೇಘದ ಮೇಲಿನ ಮಿಂಚಿನಂತೆ ಶೋಭಿಸುತ್ತಿವೆ. ಹಾಗೆ ಹರಿಯ ಎದೆಯಲ್ಲಿ ಒರಗುವ ನೀನು ಸುಂದರವಾಗಿ ಕಾಣುವ ಸಮಯ ಬಂದಿದೆ.

ಉಟ್ಟಿರುವ ಉಡುಗೆ ಸಡಿಲವಾಗಿ ಕಳಚಿ ಬೀಳುತ್ತಿದೆ. ಹೊದಿಕೆಯಿಲ್ಲದ ನಿತಂಬ ನಿನ್ನದಾಗಿದೆ. ಚಿಗುರಿನ ಹಾಸಿಗೆಯಲ್ಲಿ ನಿನ್ನ ಜಘನಗಳನ್ನು ಸುಖದ ನಿರೀಕ್ಷೆಯಲ್ಲಿ ಇಡು. ರಾತ್ರಿ ಕಳೆಯುತ್ತಿದೆ. ಹರಿ ಒಲವಿನ ರಾಗವನ್ನು ನುಡಿಸುತ್ತಿರುವನು. ಭರದಿಂದ ಹೊರಡು. ಮಧುರಿಪುವಿನ ಕಾಮವನ್ನು ತಣಿಸು ಸಖಿ.

ಜಯದೇವನು ಹೀಗೆ ಸಖಿಯ ಮೂಲಕ ರಾಧೆಗೆ ಪ್ರಚೋದಿಸಿದ ಸುಂದರಕಥನವಿದು. ಅಂತಹಾ ಹರಿಗೆ ನಾವು ನಮಸ್ಕರಿಸುವಾ. ಆ ಸುಂದರ ಸುಕೃತನನ್ನು ಸೇವಿಸುವಾ. 11

*ಪರಮೇಶ್ವರ ಭಟ್ಟರ ಕನ್ನಡ ರೂಪ*

ಧೀರ ಸಮೀರನು ಮೆಲ್ಲನೆ ಸುಳಿಯುವ ಯಮುನೆಯ ತೀರದೊಳಿರುವನು ವನಮಾಲಿ
ಗೋಪೀಪೀನ ಪಯೋಧರ ಮರ್ದನ ಚಂಚಲ ಕರಯುಗನೊಪ್ಪುತಲಿರುವನು ಗುಣಶಾಲಿ. 1

ರತಿಸುಖಸಾರವಿದೆನುವಭಿಸಾರದೊಳಿರುವನು ಮಾರಮನೋಹರವೇಷನು ಕೇಶವನು
ಗಮನವಿಲಂಬನವನು ನೀಸೆಗದಿರೋವೊ ನಿತಂಬಿನಿ ನಡೆನಡೆ ಪಡೆ ಹೃದಯೇಶನನು. 2

ಹೆಸರನು ಉಸುರುತ ಕುರುಹನು ಸಾರುತಲದೊ ಹರಿಯಿನಿದೆನೆ ನುಡಿಸುತಲಿರುವನು ವೇಣುವನು
ನಿನ್ನನು ತಬ್ಬಿದ ಪವನನು ಸುಳಿದಿರಲೇಳುವ ರೇಣುವು ಸಹ ತಾ ಪಾವನವೆನ್ನುವನು. 3

ಹಕ್ಕಿಯು ಹಾರಿದರೆಲೆಯೊ೦ದಲುಗಿದರೊಡನೆಯೆ ಶಂಕಿಪನಾತನು ನಿನ್ನಾಗಮನವನು
ಸಚಕಿತ ನಯನನು ರಚಿಪನು ಹಸೆಯನು ನೀ ಬಹ ಪದವನು ನೋಡುತಲಿರುವನು ಮಾಧವನು. 4

ನಿನದಿಪ ಮಂಜೀರವನಿದನೊಯ್ಯನೆ ಹಗೆವೊಲು ತೊರೆ ನಡೆ ಭರದೊಳು ಕೇಳಿ ಸುಲೋಲವನು
ನಡೆ ಸಖಿ ಕುಂಜಕೆ ಸತಿಮಿರ ಪುಂಜಕೆ ಧರಿಸುತೆ ಮುದದೊಳು ಒಪ್ಪುವ
ನೀಲ ನಿಚೋಳವನು. 5

ಹಾರುವ ಬೆಳ್ಳಕ್ಕಿಗಳಿಂದೊಪ್ಪುವ ಮೋಡದ ಮೇಲಣ ಮಿಂಚೆನೆ
ಮೆರೆದರಿಯೆಲೆ ರಾಧೆ
ಸುಕೃತವಿಪಾಕದಿನೊಪ್ಪುವೆ ನೀ ಪುರುಷಾಯತ ಬಂಧದೆ ಹಾರವ ಧರಿಸಿದ ನ ಹರಿಯುರದೆ.  6

ಉಡೆ ಸಲೆ ಸಡಿಲುತಲಿರೆಯಿರೆ ರಶನವು ಕಳಚುತಲಿರೆಯಿರೆ ಛಾದನವಿರದ ನಿತಂಬವನು
ಪಂಕಜ ನಯನೆಯೆ ಕಿಸಲಯ  ಶಯನದೊಳಿಡು  ನೀ  ಹರ್ಷನಿದಾನಕೆ
ನಿಧಿಯಹ ಜಘನವನು. 7

*ಮೂಲರೂಪ*
ಗೀತಂ ಅಷ್ಟಪದೀ – 11 - - ಸಾಕಾಂಕ್ಷ ಪುಂಡರೀಕಾಕ್ಷೇತ್ಕಂಠಾ ಮಧುರಮ್ ಗುರ್ಜರೀರಾಗ, ಏಕತಾಲೀತಾಲ

ರತಿಸುಖಸಾರೇ ಗತಮಭಿಸಾರೇ ಮದನಮನೋಹರವೇಶಂ 
ನ ಕುರು ನಿತಂಬಿನಿ ಗಮನವಿಲ೦ಬನಮನುಸರ ತಂ ಹೃದಯೇಶಂ ||೧||

ಧೀರಸಮೀರೇ ಯಮುನಾತೀರೇ ವಸತಿ ವನೇ ವನಮಾಲೀ ಗೋಪೀಪೀನಪಯೋಧರಮರ್ಧನಚಂಚಲಕರಯುಗಶಾಲೀ ||ಧ್ರುವಮ್||

ನಾಮಸಮೇತಂ ಕೃತಸಂಕೇತಂ ವಾದಯತೇ ಮೃದುವೇಣುಂ 
ಬಹು ಮನುತೇsತನು ತೇ ತನುಸಂಗತಪವನಚಲಿತಮಪಿ ರೇಣುಂ ||೨||

ಪತತಿ ಪತತ್ರೇ ವಿಚಲತಿ ಪತ್ರೇ ಶಂಕಿತಭವದುಪಯಾನಂ 
ರಚಯತಿ ಶಯನಂ ಸಚಕಿತನಯನಂ ಪಶ್ಯತಿ ತವ ಪಂಥಾನಂ ||೩||

ಮುಖರಮಧೀರಂ ತ್ಯಜ ಮಂಜೀರಂ ರಿಪುಮಿವ ಕೇಲಿಸುಲೋಲಂ
ಚಲ ಸಖಿ ಕು0ಜಂ ಸತಿಮಿರಪುಂಜಂ ಶೀಲಯ ನೀಲನಿಚೋಲಂ||೪||

ಉರಸಿ ಮುರಾರೇರುಪಹಿತಹಾರೇ ಘನ ಇವ ತರಲಬಲಾಕೇ
ತಡಿದಿವ ಪೀತೇ ರತಿವಿಪರೀತೇ ರಾಜಸಿ ಸುಕೃತವಿಪಾಕೇ ||೫||

ವಿಗಲಿತವಸನಂ ಪರಿಹೃತರಸನಂ ಘಟಯ ಜಘನಮಪಿಧಾನಂ  ಕಿಸಲಯಶಯನೇ ಪಂಕಜನಯನೇ ನಿಧಿಮಿವ ಹರ್ಷನಿದಾನಂ ||೬||

ಹರಿರಭಿಮಾನೀ ರಜನಿರಿದಾನೀಮಿಯಮಪಿಯಾತಿ ವಿರಾಮಂ
ಕುರು ಮಮ ವಚನಂ ಸತ್ವರರಚನಂ ಪೂರೆಯ ಮಧುರಿಪುರಾಮಂ ||೭||

ಶ್ರೀ ಜಯದೇವೇ ಕೃತಹರಿಸೇವೇ ಭಣತಿ ಪರಮರಮಣೀಯಂ
ಪ್ರಮುದಿತಹೃದಯಂ ಹರಿಮತಿಸದಯಂ ನಮತ ಸುಕೃತಕಮನೀಯಂ ||೮||

ವಿಕಿರತಿ ಮುಹುಃ ಶ್ವಾಸಮಾಶಾಃ ಪುರೋ ಮುಹುರೀಕ್ಷತೇ 
ಪ್ರವಿಶತಿ ಮುಹುಃ ಕುಜಂ ಗುಂಜನ್ಮಹುರ್ಬಹುತಾಮೃತಿ 
ರಚಯತಿ ಮುಹುಃ ಶಯ್ಯಾಂ ಪರ್ಯಾಕುಲಂ ಮುಹುರೀಕ್ಷತೇ ಮದನಕದನಕ್ಲಾಂತಃ ಕಾಂತೇ ಪ್ರಿಯಸ್ತವ ವರ್ತತೇ ||೯||

ತ್ವದ್ಬಾಷ್ಪೇನ ಸಮಂ ಸಮಗ್ರಮಧುನಾ ತಿಗ್ರಾಂಶುರಸ್ತಂಗತೋ
ಗೋವಿಂದಸ್ಯ ಮನೋರಥೇನ ಚ ಸಮಂ ಪ್ರಾಪ್ತಂ ತಮಃ ಸಾಂದ್ರತಾಂ ಕೋಕಾನಾಂ ಕರುಣಸ್ವನೇನ ಸದೃಶೀ ದೀರ್ಘಾ ಮದಭ್ಯರ್ಥನಾ
ತನ್ಮುಗ್ದೇ  ವಿಫಲಂ ವಿಲಂಬನಮಸೌ ರಮ್ಮೋsಭಿಸಾರಕ್ಷಣಃ ||೧೦||

ಆಶ್ಲೇಷಾದನು ಚುಂಬನಾದನು ನಖೋಲ್ಲೇಖಾದನು ಸ್ವಾಂತಜ_ ಪ್ರೋದ್ಬೋಧಾದನು ಸಂಭ್ರಮಾದನು ರತಾರಂಭಾಹನು ಪ್ರೀತಯೋಃ ಅನ್ಯಾರ್ಥಂ ಗತಯೋರ್ಭಮಾತ್ಮಿಲಿತಯೋಃ ಸಂಭಾಷಣೈರ್ಜಾನತೋ – ರ್ದಂಪತ್ಯೋರಿಹ ಕೋ ನ ಕೋ ನ ತಮಸಿ ಕ್ರೀಡಾವಿಮಿಶ್ರೋ ರಸಃ ||೧೧||

ಸಭಯಚಕಿತಂ ವಿನ್ಯಸಂತೀ ದೃಶಂ ತಿಮಿರೇ ಪಥಿ
ಪ್ರತಿತರು ಮುಹುಃ ಸ್ಥಿತ್ವಾ ಮಂದಂ ಪದಾನಿ ವಿತನ್ವತೀಂ
ಕಥಮಪಿ ರಹಃ ಪ್ರಾಪ್ತಾಮಂಗೈರನಂಗತರಂಗಿಭಿಃ ಸುಮುಖಿ ಸುಭಗಃ ಪಶ್ಯನ್ಸ ತ್ವಾಮುಪೈತು ಕೃತಾರ್ಥತಾಂ ||೧೨||

ರಾಧಾಮುಗ್ಧ ಮುಖಾರವಿಂದಮಧುಪಸ್ತ್ರೈಲೋಕ್ಯಮೌಲಿಸ್ಥಲೀ_ ನೇಪಥ್ಯೋಚಿತನೀಲರತ್ನಮವನೀಭಾರಾವತಾರಾಂತಕಃ
ಸ್ವಚ್ಛಂದಂ ಪ್ರಜಸುಂದರೀಜನಮನಸ್ತೋಷಪ್ರದೋಷೋದಯಃ ಕಂಸಧ್ವಂಸನಧೂಮಕೇತುರವತು ತ್ವಾಂ ದೇವಕೀನಂದನಃ ||೧೩||

|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಅಭಿಸಾರಕಾವರ್ಣನೆ ಸಾಕಾಂಕ್ಷ ಪುಂಡರಿಕೋನಾಮ ಪಂಚಮ ಸರ್ಗಃ ||

ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ