ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ16


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 15

*ಸಂಕ್ಷಿಪ್ತ  ಭಾವ*

ಇಲ್ಲಿ ರಾಧೆಯು ತನ್ನ ವಿರಹದ ತಾಪದಲ್ಲಿ ಮಾಧವನನ್ನು ಕುರಿತು ಅವನು ತನ್ನನ್ನು ಬಿಟ್ಟು ಬೇರಾವಳೋ ಸುಂದರಿಯ ಜೊತೆಯಲ್ಲಿ ಸುಖಿಸುತ್ತಿರುವನೆಂದೇ ಭಾವಿಸಿದ್ದಾಳೆ. ಅವನು ಅವಳೊಂದಿಗೆ ಹೇಗೆಲ್ಲಾ ಕ್ರೀಡಿಸುತ್ತಿರಬಹುದೆಂಬ ಕಲ್ಪನೆ ಇಲ್ಲಿದೆ.

ಯಮುನಾ ನದಿಯ ತೀರದಲ್ಲಿ ಮಾಧವನು ತನ್ನ ಪ್ರೇಯಸಿಯೊಂದಿಗೆ ರಮಿಸುತ್ತಿರುವನು. ಅವಳ ತುಟಿಗಳನ್ನು ಮುದ್ದಿಸಿ ರಸವನ್ನು ಕುಡಿಯುವನು. ಚಂದ್ರನಲ್ಲಿನ ಗುರುತಿನಂತೆ ಅವಳಲ್ಲಿ ತಿಲಕವನ್ನು ಇಡುವನು.

ಕಾಮನ ಸೆಳೆತಕ್ಕೆ ಒಳಗಾದ ಮಾಧವನು ಅವಳಿಗೆ ಕಾನನದ ಕುಸುಮರಾಶಿಯನ್ನು ಮುಡಿಸುತ್ತ ನಲಿಯುವನು. ಅವಳ ಉನ್ನತವಾದ ಸ್ತನಗಳಲ್ಲಿ ಉಗುರುಗಳಿಂದ ರತಿಯ ಗುರುತುಗಳನ್ನು ಮಾಡುತ್ತ ಅಲ್ಲಿರುವ ಮಣಿಸರ, ಸೆರಗುಗಳನ್ನು ತೆಗೆಯುವನು.

ತಾವರೆಯ ಎಸಳಿನಂತಹ ಶರೀರದಲ್ಲಿ ಮರಕತವಲಯವನ್ನು ತೊಡಿಸುತ್ತ ಆಭರಣಗಳ ಕಾಂತಿಯನ್ನು ಹೆಚ್ಚಿಸುವನು. ರತಿಯ ವಿಲಾಸದ ಚಿನ್ನದ ಮಣೆಯಂತೆ ವಿಶಾಲವಾಗಿರುವ ನಿತಂಬಪ್ರದೇಶವನ್ನು ಕಾಮನ ಲೀಲೆಗಳೆಂಬ ಆಭರಣಗಳಿಂದ ಅಲಂಕರಿಸುತ್ತ ನಲಿಯುತ್ತಿರುವನು.

ಕೆಂಪಾದ ಚಿಗುರುಗಳಂತಹಾ, ಮಣಿಗಳಂತಹಾ ಉಗುರುಗಳನ್ನು ಹೊಂದಿದ ಅವಳ ಕಾಲುಗಳನ್ನು ಹೊರತೆಗೆಯುತ್ತ ಎದೆಯಲಿಟ್ಟು ಮುದ್ದಿಸುವನು. ಯಾರೋ ಆ ಸುಂದರಿಯನ್ನು ರಮಿಸುತ್ತ ನನ್ನನ್ನು ಸಂಪೂರ್ಣವಾಗಿ ಮರೆತಿರುವನು. ಸಖಿ,  ನಿರರ್ಥಕವಾಗಿ ಇಲ್ಲಿ ಏಕಿರುವುದು ಹೇಳು...

ಹರಿಯ ಗುಣಕೀರ್ತನವನ್ನು ಹರಿಪಾದ ಸೇವಕನಾದ ಜಯದೇವನು ಕಲಿಯುಗದ ಕಷ್ಟಗಳು ಕಳೆಯಲೆಂದು  ಈ ಸುಂದರ ಕಾವ್ಯವನ್ನು ರಚಿಸಿರುವನು.


*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೧೫

ರಮಿಸುತಲಿರುವನು ನಿಜಯಿ ಮುರಾರಿ ದಿನೋದದೆ ಯಮುನಾಪುಲಿನ ವನಂಗಳೊಳು
 ಒಗೆದೊಲವರವೆಸೆವಸಿಯಳ ಮುದ್ದಿ ಸಿದಿನಿದುಟಿ ಮೆರೆಯುವ ಸುಂದರ ವದನದೊಳು
ಸಪುಲಕಮೃಗಮದ ತಿಲಕವನಿಡುವನು ರಜನೀಕರನೊಳು ತೋರುವ ಮೃಗದವೊಲು. 1


ರತಿಪತಿಮೃಗವಿಹ ಕಾನನದೋಲಿಹ ತರಲಿತ ತರುಕಾನನದೊಳು ಮಾಧವನು
ಘನಚಯಕಾ೦ತಿಯ ಚಿಕುರದೊಳಿರಿಪನು ಕುರುವ ಕುಸುಮವನು ಚಪಲಾ ಸುಷುಮವನು. 2

ನಖಪದಶಶಿಯುತ ಮೃಗಮದರುಚಿರವಿಭೂಷಿತ ಸುಘನಪಯೋಧರ ಗಗನದೊಳು
ಘಟಿಯಿಸುತಿರುವನು ನಿರ್ಮಲ ಮಣಿಸರತಾರಕ ಪಟಲವನಹಹಾ ಮಾಧವನು. 3

ಕರತಲ ನಲಿನೀದಲದಿಂದೊಪ್ಪುವ ಹಿಮಶೀತಲ ಬಿಸಶಕಲದ ಮೃದುಭುಜದೆ 
ಮಧುಕರ ನಿಚಯದ ಮರಕತವಲಯವನಹ ಹರಿ ತೊಡಿಸುತಲಿರ್ದಪನತಿಮುದದೆ. 4

ರತಿಯರಸಿಯ ಮನೆ ನನೆಗಣೆಯನ ಹೊಸ ಚಿನ್ನದ ಮಣೆಯೆನೆ ಮೆರೆವ ನಿತಂಬವನು
ಕಾಮನ ತೋರಣವನು ಮಿಗೆ ನಗುತಿಹ ಮಣಿಮಯರಶನದಿನಳವಡಿಸುತಲಿಹನು. 5

ಕಮಲೆಯ ನಿಲಯವಿದೆನ್ನುವ ನಖಮಣಿಗಣದಿಂದೊಪ್ಪುವ ಚೆಂದಳಿರಡಿಗಳನು
ಯಾವಾಭರಣದ ಬಹಿರಾವರಣದಿನಳವಡಿಪನು ಉರದೊಳು ಕಳೆದದನಚ್ಯುತನು 6

ರಮಿಸುತಲಿರುವನು ಸದೃಶಳದಾವಳೊ ಸುದೃಶೆಯನಾ ಖಲ ಹಲಧರ ಸೋದರನು
ಏಕೆ ನಿರರ್ಥಕವೆನಲೀ ವಿಟಪೋದರದೊಳು ಚಿರಮಿಹುದೆಲೆ ಸಖಿ ನುಡಿ ನೀನು. 7

ಹರಿಗುಣಕೀರ್ತನ ಕತದಿಂದೀ ರಸಗಾನವನೊರೆದನು ಹರಿಪದ ಸೇವಕನು
ಕಲಿಯುಗದುರಿತವು ಪುಗದಿರಲೀ ಜಯದೇವಕವೀಶ್ವರ ವಿರಚಿತ ಕಾವ್ಯವನು. 8


*ಮೂಲಭಾಗ*
ಗೀತಂ - ಅಷ್ಟಪದೀ – 15 - ಹರಿರಸ ಮನ್ಮಥ ತಿಲಕಮ್
ಗುರ್ಜರೀರಾಗ, ಏಕತಾಲೀತಾಲ

ಸಮುದಿತಮದನೇ ರಮಣೀವದನೇ ಚುಂಬನವಲಿತಾಧರೇ ಮೃಗಮದತಿಲಕಂ ಲಿಖತಿ ಸಪುಲಕಂ ಮೃಗಮಿವ ರಜನೀಕರೇ
ರಮತೇ ಯಮುನಾಪುಲಿನವನೇ ವಿಜಯೀ ಮುರಾರಿರಧುನಾ ||ಧ್ರುವಮ್||  ೧

ಘನಚಯರುಚಿರೇ ರಚಯತಿ ಚಿಕುರೇ ತರಲಿತತರುಣಾನನೇ ಕುರುಬಕಕುಸುಮಂ ಚಪಲಾಸುಷಮಂ ರತಿಪತಿಮೃಗಕಾನನೇ   ೨

ಘಟಯತಿ ಸುಘನೇ ಕುಚಯುಗಗಗನೇ ಮೃಗಮದರುಚಿರೂಷಿತೇ ಮಣಿಸರಮಮಲಂ ತಾರಕಪಟಲಂ ನಖಪದಶಶಿಭೂಷಿತೇ   ೩

ಜಿತಬಿಸಶಕಲೇ ಮೃದುಭುಜಯುಗಲೇ ಕರತಲನಲಿನೀದಲೇ 
ಮರಕತವಲಯಂ ಮಧುಕರನಿಚಯಂ ವಿತರತಿ ಹಿಮಶೀತಲೇ   ೪

ರತಿಗೃಹಜಘನೇ ವಿಪುಲಾಪಘನೇ ಮನಸಿಜಕನಕಾಸನೇ ಮಣಿಮಯರಶನಂ ತೋರಣಹಸನಂ ವಿಕಿರತಿ ಕೃತವಾಸನೇ  ೫

ಚರಣಕಿಸಲಯೇ ಕಮಲಾನಿಲಯೇ ನಖಮಣಿಗಣಪೂಜಿತೇ ಬಹಿರಪವರಣಂ ಯಾವಕಭರಣಂ ಜನಯತಿ ಹೃದಿ ಯೋಜಿತೇ ೬

ರಮಯತಿ ಸುದೃಶಂ ಕಾಮಪಿ ಸುಭ್ರಶಂ ಖಲಹಲಧರಸೋದರೇ ಕಿಮಫಲಮವಸಂ ಚಿರಮಿಹ ವಿರಸಂ ವದ ಸಖಿ ವಿಟಪೋದರೇ  ೭

ಇಹ ರಸಭಣನೇ ಕೃತಹರಿಗುಣನೇ ಮಧುರಿಪುಪದಸೇವಕೇ ಕಲಿಯುಗರಚಿತಂ ನ ವಸತು ದುರಿತಂ ಕವಿನೃಪಜಯದೇವಕೇ  ೮

ನಾಯಾತಃ ಸಖಿ ನಿರ್ದಯೋ ಯದಿ ಶಠಸ್ತ್ವಂ ದೂತಿ ಕಿಂ ದೂಯಸೇ ಸ್ವಚ್ಛಂದಂ ಬಹುವಲ್ಲಭಃ ಸ ರಮತೇ ಕಿಂ ತತ್ರ ತೇ ದೂಷಣಂ 
ಪಶ್ಯಾದ್ಯ ಪ್ರಿಯಸಂಗಮಾಯ ದಯುತಸ್ಯಾ ಕೃಷ್ಣಮಾಣಂ ಗುಣೈ_
ರುತ್ಕಂಠಾರ್ತಿಭರಾದಿವ ಸ್ಪುಟದಿದಂ ಚೇತಃ ಸ್ವಯಂ ಯಾಸ್ಯತಿ  ೯

ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ