ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಕೆ. ಎ. ಚಾರಿ


 ಎಸ್. ಕೆ. ಎ. ಚಾರಿ


ಕನ್ನಡ ಚಿತ್ರರಂಗ ಕಂಡ ಮಹಾನ್ ನಿರ್ದೇಶಕರಲ್ಲಿ ಎಸ್. ಕೆ. ಅನಂತಾಚಾರಿ ಒಬ್ಬರು.  ಜನವರಿ 22,  ಈ ಮಹಾನ್ ಸಾಹಸಿಯ ಜನ ಶತಮಾನೋತ್ಸವ ಎಂದು ಪೂಜ್ಯ ಕಳಲೆ ಪಾರ್ಥಸಾರಥಿ ಅವರು ತಿಳಿಸುವ ಕೃಪೆ ಮಾಡಿದರು.

1923ರ ಜನವರಿ 23ರಂದು ಜನಿಸಿದ ತಲಕಾಡಿನ ಮೂಲದವರಾದ ಅನಂತಾಚಾರಿ
ಕನ್ನಡ ಕವಿಗಳ ಭಾವಗೀತೆಗಳನ್ನು ಮೊಟ್ಟಮೊದಲ ಬಾರಿಗೆ ಚಲನಚಿತ್ರಕ್ಕೆ ಅಳವಡಿಸಿದ ಕೀರ್ತಿವಂತರು.

ಸ್ವಯಂ ಆಧ್ಯಯನಗಳಿಂದ ಅಪಾರ ಜ್ಞಾನಸಿದ್ಧಿ ಪಡೆದ ಚಾರಿ ಅವರು 1963ರಲ್ಲಿ ಮೂಡಿಸಿದ ತಮ್ಮ 'ಗೌರಿ' ಚಿತ್ರದಲ್ಲಿ ಕುವೆಂಪು ಅವರ 'ಯಾವ ಜನ್ಮದ ಮೈತ್ರಿ' ಮತ್ತು ಕೆ. ಎಸ್. ನರಸಿಂಹ ಸ್ವಾಮಿ ಅವರ 'ಇವಳು ಯಾರು ಬಲ್ಲೆಯೇನು' ಹಾಡುಗಳನ್ನು ಅಳವಡಿಸಿದರು.  ಕನ್ನಡ ಚಿತ್ರರಂಗಕ್ಕೆ ಬಂದ ಪ್ರಥಮ ಭಾವಗೀತೆಗಳಾದ ಅವು ಸಾರ್ವಕಾಲಿವಾಗಿ ಇಂದೂ ತಮ್ಮ ಜನಪ್ರಿಯತೆಗಳನ್ನು ಉಳಿಸಿಕೊಂಡಿವೆ. ಶತದಿನೋತ್ಸವವನ್ನು ಕಂಡ ಈ ಚಿತ್ರ ಅವರಿಗೆ ಅಪಾರ ಕೀರ್ತಿ ತಂದಿತು. ರಂಗಭೂಮಿ ಮತ್ತು ಚಿತ್ರರಂಗಗಳಲ್ಲಿ ಪರಿಶ್ರಮ ಸಾಧಿಸಿದ್ದ ಸಾಹಿತಿ ಸಿ. ಕೆ. ನಾಗರಾಜರಾಯರು ಈ ಚಿತ್ರದ ಸಹನಿರ್ದೇಶಕರಾಗಿದ್ದುದು, ಚಿತ್ರದ ಸಾಹಿತ್ಯಕ ಮೌಲ್ಯಗಳನ್ನು ಹೆಚ್ಚಿಸಿತ್ತು. 'ಗೌರಿ' ಚಿತ್ರದಲ್ಲಿ ಪಾಲ್ಗೊಂಡ ಅಂದಿನ ಆ ಯುವ ಪ್ರತಿಭಾ ಪಡೆ ಒಂದು ಹೊತ್ತಿನ ಊಟ ಗಳಿಕೆಗಾಗಿ ಶ್ರಮ ಪಟ್ಟು ನಿರ್ಮಿಸಿದ ಆ ಚಿತ್ರ ಪಡೆದ ಯಶಸ್ಸು ಚಿತ್ರರಂಗದ ಅವಿಸ್ಮರಣೀಯ ಇತಿಹಾಸಗಳಲ್ಲೊಂದು. 

ಚಾರಿ ಅವರು 1964ರಲ್ಲಿ ಪುರಂದರ ದಾಸರ ಜೀವನವನ್ನಾಧರಿಸಿದ 'ನವಕೋಟಿ ನಾರಾಯಣ' ಚಿತ್ರ ನಿರ್ದೇಶಿಸಿ ರಾಜ್‍ಕುಮಾರ್ ಅವರಿಂದ ಅದ್ಭುತ ಅಭಿನಯ ಹೊರಹೊಮ್ಮಿಸಿತು. ಆ ಚಿತ್ರದಲ್ಲಿನ ಗೀತ ಸನ್ನಿವೇಶಗಳು ಇಂದೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿವೆ. 

ಚಾರಿ ಅವರು 1964ರಲ್ಲಿ ನಿರ್ದೇಶಿಸಿದ 'ಮನೆ ಅಳಿಯ' ಮತ್ತು 1965ರಲ್ಲಿ ನಿರ್ದೇಶಿಸಿದ 'ಮಾವನ ಮಗಳು' ಚಿತ್ರದಲ್ಲಿ ಜಯಲಲಿತಾ ಅಭಿನಯಿಸಿದರು. 'ಮನೆ ಅಳಿಯ'  ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಂಸಾ ಪತ್ರಗಳಿಸಿತು. 'ಮಾವನ ಮಗಳು' ಚಿತ್ರದಲ್ಲಿ ಅಳವಡಿಸಲಾಗಿರುವ  ಕುವೆಂಪು ಅವರ ಮತ್ತೊಂದು ಭಾವಗೀತೆ 'ನಾನೇ ವೀಣೆ ನೀನೇ ತಂತಿ' ಕೂಡಾ ಅಪಾರ ಜನಪ್ರಿಯತೆ ಗಳಿಸಿದೆ.

ರಾಜ್ ಕುಮಾರ್ - ಭಾರತಿ ಅಭಿನಯದ 'ಮಧುಮಾಲತಿ' ವಿಕ್ರಮಾದಿತ್ಯನ ಕಥೆ ಆಧರಿಸಿ ಹೆಸರಾಗಿತ್ತು. ಇದು ಭಾರತಿ ಅವರಿಗೆ ಪ್ರಧಾನ ಪಾತ್ರ ಸಂದ ಮೊದಲ ಚಿತ್ರಗಳಲ್ಲೊಂದು. 

1971ರಲ್ಲಿ ಚಾರಿ ಅವರು ನಿರ್ದೇಶಿಸಿದ 'ಸೋತು ಗೆದ್ದವಳು' ಬಹಳಷ್ಟು ಹೆಸರು ಮಾಡಿತು. ಪ್ರಶಸ್ತಿ ವಿಜೇತ ತಮಿಳು ಚಿತ್ರ'ಶಾರದ' ಅನ್ನು ಆಧರಿಸಿದ್ದರೂ ತಮ್ಮದೇ ಆದ ಬದಲಾವಣೆಗಳೊಂದಿಗೆ ಚಾರಿ ಅವರು ಮೂಡಿಸಿದ ಈ ಚಿತ್ರ ಅಪಾರ ಹೆಸರು ಮಾಡಿತು. ಮದುವೆಯಾದ ನಂತರ ತನ್ನ ಗಂಡನಿಂದ ಸುಖವನ್ನು ಪಡೆಯಲಾಗದ ಒಬ್ಬ ಅಭಾಗಿನಿಯ ಕರುಣಾಜನಕ ಕಥೆ ಈ ಚಿತ್ರದ ವಸ್ತು.  ಚೆಲ್ಲು ಹುಡುಗಿಯ ಪಾತ್ರದಲ್ಲಿ ಕಲ್ಪನಾ, ಅಸಹಾಯಕ ಗಂಡನಾಗಿ ಗಂಗಾಧರ್ ಅಭಿನಯಿಸಿದ ಈ ಚಿತ್ರ ಮಾಮೂಲಿ ಮಸಾಲೆಗಳಿಂದ ದೊರವಿದ್ದು ಸುಂದರ ಸಾಮಾಜಿಕ ಕಥೆಯಿಂದ ಹೆಸರಾಯಿತು.

ಮನಸ್ಸಾಕ್ಷಿ, ಮುಕುಂದ ಚಂದ್ರ, ಮಧುರ ಮಿಲನ, ಕುಂಕುಮ ರಕ್ಷೆ ಚಿತ್ರಗಳು ಚಾರಿ ಅವರು ನಿರ್ದೇಶಿಸಿದ ಇತರ ಚಿತ್ರಗಳು. 'ಮಾಡಿವೀಟ್ಟು ಪಿಳ್ಳೈ ' ಎಂಬ ಒಂದು ತಮಿಳು ಚಿತ್ರ ಹಾಗೂ ಒಂದು ಮಲಯಾಳಂ ಚಿತ್ರವನ್ನೂ ಅವರು ನಿರ್ದೇಶಿಸಿದ್ದರು.

1977ರಲ್ಲಿ ಚಾರಿ ಅವರು ತಮ್ಮ ನಿರ್ದೇಶನದ ಕೊನೆಯ ಚಿತ್ರ 'ಕುಂಕುಮ ರಕ್ಷೆ'ಯಲ್ಲಿ ರಜನೀಕಾಂತ್ ಅವರಿಗೆ ನಾಯಕನ ಪಾತ್ರ ನೀಡಿದ್ದರು.

ಕನ್ನಡ ಚಿತ್ರರಂಗಕ್ಕೆ ಅನೇಕ ಯಶಸ್ವಿ ಚಿತ್ರಗಳನ್ನ ನೀಡಿ ಸ್ಥಿರತೆ ತಂದುಕೊಟ್ಟ ಮಹನೀಯರಾದ ಎಸ್. ಕೆ. ಎ. ಚಾರಿ ಅವರು ಸ್ಮರಣಾರ್ಹರು. 

On the birth centenary of greatest director of film world S. K. Ananthachari

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ