ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗಲಕ್ಷ್ಮೀ ಹರಿಹರೇಶ್ವರ


 ನಾಗಲಕ್ಷ್ಮೀ ಹರಿಹರೇಶ್ವರ

ದೇಶ ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಚಾರಿಕೆ, ಸಂಘಟನೆ ಮತ್ತು ಸಮಾಜ ಸೇವೆಗೆ ಹೆಸರಾಗಿದ್ದವರು ಶಿಕಾರಿಪುರ ಹರಿಹರೇಶ್ವರ ಮತ್ತು ನಾಗಲಕ್ಷ್ಮೀ ಹರಿಹರೇಶ್ವರ ದಂಪತಿಗಳು.

ನಾಗಲಕ್ಷ್ಮೀ ಅವರು 1946ರ ಮೇ 20 ರಂದು ಜನಿಸಿದರು. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. ಶಿಶುವಿಹಾರ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಉಪಾಧ್ಯಾಯಿನಿಯಾಗಿದ್ದ  ಇವರು ಅಪಾರ ಅನುಭವವುಳ್ಳವರಾಗಿದ್ದರು. ಬೆಂಗಳೂರಿನಲ್ಲಿದ್ದಾಗ ಬಿ. ಎಸ್‌. ವೆಂಕಟರಾಮ್‌ ಅವರ ‘ಛಾಯಾ ಕಲಾವಿದರು’ ತಂಡದಲ್ಲಿ ತರಬೇತಿ ಪಡೆದು, ರಂಗಕರ್ಮಿಯಾಗಿ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿದ್ದರು. ಅಲ್ಲಿನ ಗಿರಿಜಮ್ಮ ಮುಕುಂದದಾಸ್‌ ಸರ್ಕಾರೀ ಪ್ರೌಢಶಾಲೆಯಲ್ಲಿ ನಾಟಕಶಾಸ್ತ್ರದ ಅಧ್ಯಾಪಕಿಯಾಗಿದ್ದರು; ಆಕಾಶವಾಣಿಯ ವಿವಿಧ ಬಗೆಯ ನಾಟಕಗಳಲ್ಲಿಯೂ ಭಾಗವಹಿಸಿದ್ದರು. 

ನಾಗಲಕ್ಷ್ಮೀ ಅವರು ಮದುವೆಯಾದ ನಂತರ, ಪತಿ ಹರಿಹರೇಶ್ವರ ಅವರೊಂದಿಗೆ ಮೊದಲು ಇರಾನ್‌ಗೆ ಹೋಗಿ, ನಂತರ ಅಮೆರಿಕದಲ್ಲಿ ಸುಮಾರು 25 ವರ್ಷ ನೆಲೆಸಿದ್ದರು. ಅಮೆರಿಕದ ನೆಲದಲ್ಲಿ ಶಿಕಾರಿಪುರ ನಾಗಲಕ್ಷ್ಮೀ - ಹರಿಹರೇಶ್ವರ ದಂಪತಿಗಳು ಮಾಡಿದ ಕನ್ನಡದ ಕೆಲಸ ಅದ್ಭುತವಾದದ್ದು. 

ಅಮೆರಿಕದಲ್ಲಿ ನೆಲೆಸಿದ್ದ ಅವಧಿಯಲ್ಲಿ ನಾಗಲಕ್ಷ್ಮೀ ಅವರು ಅಲ್ಲಿನ ಕನ್ನಡಿಗರ ಮಕ್ಕಳಿಗೆ ಇಂಗ್ಲಿಷ್‌ ಮೂಲಕ ಕನ್ನಡ ಕಲಿಸುವ ಕಾಯಕವನ್ನು ನಿರಂತರವಾಗಿ ಮಾಡಿದ್ದರು.  ಅಮೆರಿಕದ ಮಿಸ್ಸೌರಿಯ ಸೇಂಟ್‌ಲೂಯಿ, ನ್ಯೂಜೆರ್ಸಿಯ ಮೌಂಟ್‌ಲಾರೆಲ್‌ ಮುಂತಾದ ನಗರಗಳಲ್ಲಿ ಹಲವು ವರ್ಷಗಳ ಕಾಲ ವೈಯಕ್ತಿಕವಾಗಿಯೂ, ಕನ್ನಡ ಕೂಟಗಳ ಪ್ರಾಯೋಜಕತ್ವದಲ್ಲಿಯೂ ಕನ್ನಡ ತರಗತಿಗಳನ್ನು ನಡೆಸಿದ್ದರು. ಅದಕ್ಕಾಗಿ ಅವರು ಐವತ್ತು-ಅರವತ್ತು ಮೈಲಿ ಕಾರಿನಲ್ಲಿ ಪಯಣಿಸಿ, ಕನ್ನಡ ಕಲಿಸಿ, ಮನೆಗೆ ರಾತ್ರಿ ಹಿಂತಿರುಗುತ್ತಿದ್ದದ್ದೂ ಉಂಟು. ‘ಅಮೆರಿಕನ್ನಡ’ ಪತ್ರಿಕೆಯ ಪ್ರತಿ ಸಂಚಿಕೆಯಲ್ಲಿ ಪ್ರಕಟವಾದ ಸಚಿತ್ರ ಕನ್ನಡ ಪಾಠಗಳನ್ನು ಅಮೆರಿಕದ ಹಲವು ಕನ್ನಡ ಕೂಟಗಳು ತಮ್ಮ ಕನ್ನಡ ಶಾಲೆಗಳಲ್ಲಿ ‘ಪಠ್ಯ’ವಾಗಿ ಬಳಸಿಕೊಳ್ಳುತ್ತಿದ್ದವು.

ನಾಗಲಕ್ಷ್ಮೀ ಅವರು  ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಕೃಷಿ ವಿಧಾನಗಳು ಹಾಗೂ ಕನ್ನಡ ಭಾಷೆ ಅಧ್ಯಯನದ ಬಗ್ಗೆ ಪಿಎಚ್.ಡಿ. ಮಾಡುತ್ತಿದ್ದ ಅನೇಕ ಕನ್ನಡ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ಮಾಡಿದ್ದರು.

ಕ್ಯಾಲಿಫೋರ್ನಿಯಾದ ಸ್ಟಾಕ್‌ಟನ್‌ ನಗರದಲ್ಲಿದ್ದಾಗ, ಅಲ್ಲಿನ ಪೆಸಿಫಿಕ್‌ ವಿಶ್ವವಿದ್ಯಾನಿಲಯ ಪ್ರಾಯೋಜಿಸುತ್ತಿದ್ದ ಇಂಟರ್‌ಫೇಯ್ತ್‌ ಎಂಬ ಹೆಸರಿನ ಸರ್ವಧರ್ಮ ಸಮನ್ವಯ ಸಂಸ್ಥೆಯಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ವಿಚಾರಸಂಕಿರಣ ಮತ್ತು ಚರ್ಚಾಕೂಟದಲ್ಲಿ ಹಲವು ಬಾರಿ ಪತಿಯೊಡಗೂಡಿ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಉಪನ್ಯಾಸ ನೀಡಿದ್ದರು.  ಏಳೆಂಟು ವರ್ಷ ಅಮೆರಿಕದ ವಿವಿಧ ಶಾಲೆಗಳಲ್ಲಿ ಕೆಲಸ ಮಾಡುವಾಗ ಭಾರತೀಯ ಉಡುಪಾದ ಸೀರೆ ಉಟ್ಟು ಪಾಠ ಬೋಧಿಸಲು ಅವಕಾಶ ಕೊಟ್ಟರೆ ಮಾತ್ರ ಬೋಧಿಸುವುದಾಗಿ ಷರತ್ತು ಹಾಕುತ್ತಿದ್ದರು. ಅವರೊಳಗಿನ ಶಿಕ್ಷಕಿಯ ಸಾಮರ್ಥ್ಯವನ್ನು ಗುರುತಿಸಿದ ಅಮೆರಿಕನ್‌ ಶಿಕ್ಷಣ ಸಂಸ್ಥೆಗಳು ಅದಕ್ಕೆ ಒಪ್ಪಿಗೆ ಇತ್ತಿದ್ದವು. ಸ್ವಲ್ಪ ಕಾಲ ಕಂಪ್ಯೂಟರ್‌ ಇಂಜಿನಿಯರ್‌ (ಡೇಟಾ ಪ್ರೊಸೆಸಿಂಗ್‌) ಆಗಿ ಸಹ ಅವರು ಕೆಲಸ ಮಾಡಿದ್ದರು. 

ನಾಗಲಕ್ಷ್ಮೀ ಅವರು ಅಮೆರಿಕದ ಕನ್ನಡ ಕೂಟಗಳಲ್ಲಿ ಕೈಲಾಸಂ ಅವರ ‘ಹೋಂರೂಲ್‌ಉ’, ಪರ್ವತವಾಣಿಯವರ ‘ಇಷ್ಟಾರ್ಥ’, ಸಂಧ್ಯಾ ರವೀಂದ್ರನಾಥ್‌ ಅವರ ‘ಕಿಲಿಕಿಲಿ ಕುಳ್ಳ’ ಮುಂತಾದ ಹಲವಾರು ಕನ್ನಡ ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿದ್ದರು. ಹಿರಣ್ಣಯ್ಯ ಮಿತ್ರಮಂಡಳಿಯವರು ಅಮೆರಿಕಕ್ಕೆ ಬಂದಿದ್ದಾಗ, ಅವರೊಂದಿಗೆ ಸೇರಿ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿದ್ದರು. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಕೂಟದ ಸಾಹಿತ್ಯ ವಾರ್ಷಿಕ ‘ವಿಕ್ರಮ’ಕ್ಕೆ ಪ್ರಧಾನ ಸಂಪಾದಕಿಯಾಗಿದ್ದರು. ಹ್ಯೂಸ್ಟನ್‌, ಟೆಕ್ಸಾಸ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ, ಮತ್ತು ‘ದರ್ಶನ’ ಉದ್ಗ್ರಂಥಗಳ ಸಂಪಾದಕ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದ ಇವರ ಕತೆ, ಕವನ, ಪ್ರಬಂಧಗಳು ಅಮೆರಿಕನ್ನಡ, ಪ್ರಜಾವಾಣಿ, ಕನ್ನಡಪ್ರಭ, ದಟ್ಸ್‌ಕನ್ನಡ ಡಾಟ್‌ ಕಾಮ್‌ ಮತ್ತು ಸಾಕ್ಷಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. 
‘ಕಿಶೋರಿ’ ಇವರ ಕವನ ಸಂಕಲನ. 'ಭಾನುಮತಿ' ಪ್ರಬಂಧಗಳ ಸಂಕಲನ. ಲಲಿತ ಪ್ರಬಂಧಗಳಾದ ’ಚಿಂತನೆಯ ಅಲೆಗಳು', ಆಕಾಶವಾಣಿ ಚಿಂತನಾ ಕಾರ್ಯಕ್ರಮದಲ್ಲಿ ಪ್ರಸಾರಗೊಂಡಿದ್ದವು.  ಇತ್ತೀಚಿನ ವರ್ಷಗಳಲ್ಲಿ 'ಯಾತ್ರಿ' ಎಂಬ ಕನ್ನಡ  ಕೃತಿ,   ಶ್ಯಾಮಲಾ ಮಾಧವ ಅವರು ಅನುವಾದಿಸಿರುವ 'ಯಾತ್ರಿ' ಯ ಇಂಗ್ಲಿಷ್  ಆವೃತ್ತಿ ಹಾಗೂ 'ಹರಿ' (ಪತಿ ಶಿಕಾರಿಪುರ ಸಂಸ್ಮರಣಾ ಕೃತಿ) ಪ್ರಕಟಿಸಿದ್ದರು.

ನಾಗಲಕ್ಷ್ಮಿ ಅವರಿಗೆ ಕನ್ನಡದ ಕೆಲಸಕ್ಕಾಗಿ ಅಮೆರಿಕದಲ್ಲಿನ ವಿವಿಧ ರಾಜ್ಯಗಳ ಕನ್ನಡ ಸಂಘಗಳಿಂದ ಸನ್ಮಾನ ಸಂದಿದ್ದವು. ಅಮೆರಿಕದ ಹಲವಾರು ಕನ್ನಡಪರ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು, ಭಾರತದಲ್ಲಿ ಮೈಸೂರಿನ ಹೊಯ್ಸಳ ಕನ್ನಡ ಸಂಘ, ಸರ್ವಜ್ಞ ಕನ್ನಡ ಸಂಘ, ರೋಟರಿ ಸಂಸ್ಥೆ, ಕದಳಿ ಮಹಿಳಾ ವೇದಿಕೆ ಮುಂತಾದ ಸಾಹಿತ್ಯ ಮತ್ತು ಸಾಮಾಜಿಕ ಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನಗಳು ಸಂದಿದ್ದವು. ದರ್ಶನ ಗ್ರಂಥದ ಸಂಪಾದಕ ಸಲಹಾ ಸಮಿತಿ ಸದಸ್ಯೆಯಾಗಿದ್ದರು. ಕ್ಯಾಲಿಫೋರ್ನಿಯ ಕನ್ನಡಕೂಟ ವಾರ್ಷಿಕ ಸಾಹಿತ್ಯ ಸಂಚಿಕೆ 'ವಿಕ್ರಮ' ಸಂಪಾದಕಿ, ಅಮೆರಿಕೆಯ ತ್ರಿವೇಣಿ ಸಂಗಮ ಮೊದಲಾದ ಕನ್ನಡಕೂಟಗಳ ಸಕ್ರಿಯ ಕಾರ್ಯಕರ್ತೆಯಾಗಿದ್ದರು.  

ಅಮೆರಿಕದಿಂದ ಹಿಂದಿರುಗಿದ ನಂತರ ಹರಿಹರೇಶ್ವರ ದಂಪತಿಗಳು ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯರಾಗಿದ್ದರು.  ಮೈಸೂರು ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದ ಇವರ ‘ಚಿಂತನ’ ಕಾರ್ಯಕ್ರಮ ಜನಪ್ರಿಯವಾಗಿತ್ತು. 

ಅಮೆರಿಕದಲ್ಲಿ ತೊಂದರೆಗೊಳಗಾದ ಭಾರತೀಯ ನಾರಿಯರೊಡನೆ ಆಪ್ತ ಸಮಾಲೋಚನೆ ನಡೆಸಿ ಪರಿಹಾರ ಒದಗಿಸಿರುವುದು, ಅಲ್ಲಿನ ವಸತಿಹೀನ ಜನರ ಮಕ್ಕಳ ಶಾಲೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಿರುವುದು ಮತ್ತು ಬೆಂಗಳೂರಿನಲ್ಲಿ ಶ್ರೀರಾಮಪುರದಲ್ಲಿದ್ದಾಗ ವಯಸ್ಕರ ಶಿಕ್ಷಣ ಕೇಂದ್ರ ನಡೆಸಿ ಮನೆಗೆಲಸ ಮಾಡುವ ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಿದ್ದು ಮುಂತಾದವು ಅವರ ಸಮಾಜ ಸೇವೆಗೆ ನಿದರ್ಶನಗಳಾಗಿದ್ದವು.  ಭಾರತಕ್ಕೆ ಹಿಂದಿರುಗಿದ ಮೇಲೆ ಇಲ್ಲಿಯೂ ಕೆಲವು ಶಿಕ್ಷಣ ಸಂಸ್ಥೆಗಳ ಪೋಷಕ ಧರ್ಮದರ್ಶಿಗಳಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಸೇವೆ ಸಲ್ಲಿಸುತ್ತಿದ್ದರು.

ಹಿರಿಯ ವಯಸ್ಸಿನಲ್ಲಿ ಮಕ್ಕಳೊಂದಿಗಿರಲು ಅಮೆರಿಕದಲ್ಲಿದ್ದ ನಾಗಲಕ್ಷ್ಮಿ ಅವರು 2023 ಜನವರಿ 29ರಂದು ನಿಧನರಾದರು. ಮಹಾನ್ ಕ್ರಿಯಾಶೀಲ ದಂಪತಿಗಳಾದ ಶಿಕಾರಿಪುರ ಹರಿಹರೇಶ್ವರ ಮತ್ತು ನಾಗಲಕ್ಷ್ಮಿ ಹರಿಹರೇಶ್ವರ ಅವರ ಕೊಡುಗೆ ಕನ್ನ ಡ ಸಾಂಸ್ಕೃತಿಕ ಲೋಕದಲ್ಲೊಂದು ಅಮರ ಅಧ್ಯಾಯ.


Nagalakshmi Harihareshwara

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ