ಗೀತಗೋವಿಂದ19
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 18
*ಸಂಕ್ಷಿಪ್ತ ಭಾವ*
ಇಲ್ಲಿ ರಾಧೆಯ ಸಖಿಯು ಮಾಧವನ ಬಗ್ಗೆ ರಾಧೆಗೆ ಸಮಾಧಾನದ ನುಡಿಗಳನ್ನು ಹೇಳುವಳು.
ಮಾನಿನಿ, ಮಾಧವನಲ್ಲಿ ಕೋಪವನ್ನು ಬಿಡು. ಹರಿಯು ಬರುವನೆಂದು ತಂಗಾಳಿಯು ಸೌರಭವನ್ನು ಹೊತ್ತು ಬೀಸುತ್ತಿರುವನು. ಇದಕ್ಕಿಂತ ಇನ್ನು ಯಾವ ಸುಖವಿದೆ ಗೆಳತಿ?
ತಾಳೆಯ ಹಣ್ಣಿನಂತೆ ಬಿರುಸಾಗಿರುವ ನಿನ್ನ ಕುಚಕಲಶಗಳನ್ನು ಏಕೆ ನಿರರ್ಥಕಗೊಳಿಸುವೆ? ಹರಿಯ ಕೈಯಲ್ಲಿ ಕೊಡು.
ಬಾರಿಬಾರಿಗೂ ನಿನಗೆ ಹೇಳುತ್ತಿರುವೆ ಗೆಳತಿ, ಅತಿಶಯವಾದ ರುಚಿರನಾದ ಹರಿಯನ್ನು ಬಿಡದಿರು. ದುಗುಡದಿಂದ ನೀನು ಬರಿದೇ ಏಕೆ ರೋಧಿಸುವೆ? ಸಕಲ ಕಲಾವತಿಯರ ಬಳಗ ನಿನ್ನನ್ನು ನೋಡಿ ನಗುವುದು.
ತಾವರೆಯೆಲೆಯಿಂದ ರಚಿಸಿದ ತಣ್ಣನೆಯ ಹುಲ್ಲಿನ ಹಾಸಿಗೆಯಲ್ಲಿ ಹರಿಯನ್ನು ನೋಡು. ನಿನ್ನ ಕಣ್ಣುಗಳು ಸಾರ್ಥಕವಾಗಲಿ.
ಬಹಳವಾದ ದುಗುಡವನ್ನು ನೀನು ತಾಳುವುದು ಏಕೆ? ಗೆಳತಿ, ಎರಡನ್ನು ಎಣಿಸದ ನನ್ನ ಹಿತವಚನವನ್ನು ಕೇಳು.
ಹರಿಯು ಬಳಿಗೆ ಬಂದು ಸಿಹಿನುಡಿಗಳನ್ನು ನುಡಿಯುವನು. ಅತಿ ಕಠಿಣವಾಗಿ ಅವನೊಂದಿಗೆ ನಡೆದುಕೊಳ್ಳದಿರು.
ಶ್ರೀ ಜಯದೇವಕವಿಯು ರಚಿಸಿದ ಲಲಿತವಾದ ಈ ನುಡಿಗಳು ರಸಿಕರಿಗೆ ಹರಿಕಥೆಯ ಆಮೋದವನ್ನು ಕೊಡಲಿ.
( ಒಂಬತ್ತನೆಯ ಸರ್ಗ ಮುಗಿದುದು )
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೧೮
ಮಾಣೆಲೆ ಮಾನಿನಿ ಮಾಧವನೊಳು ಸಲೆ ಮಾನವನು
ಅಹ ಮಧುಪವನನು ಬೀಸುತಲಿರುವನು ಹರಿಬಹನು ತೆಯೊಳು ಮಿಗಿಲಿನ್ನಾವುದು ಸುಖವಿಹುದಿದಕೆ ಸಖಿ. 1
ತಾಳೆಯ ಹಣ್ಣಿಗೆ ಮಿಗಿಲೆನೆ ಬಿರುಸಿನೊಳಿರುವುದನು ಏಕೆ ನಿರರ್ಥಕಗೊಳಿಸುವೆ ನೀ ಕುಚಕಲಶವನು. 2
ಅಡಿಗಡಿಗೊರೆದಿಹೆ ನಿನಗಿದನನುಪಮ ವಚನವನು
ಬಿಡದಿರು ರಾಧೆಯೆ ಅತಿಶಯ ರುಚಿರ ಮುರಾರಿಯನು. 3
ದುಗುಡದೊಳೇತಕೆ ವಿಹ್ವಲಳೆನೆ ನೀ ರೋದಿಪುದು
ಸಕಲ ಕಲಾವತಿಯರ ಸಭೆ ಮಿಗೆ ನಗೆಗೂಡುವುದು. 4
ತಾವರೆಯೆಲೆಯೊಳು ರಚಿಸಿದ ತಣ್ಣನೆ ಹಸಲೆಯೊಳು
ಹರಿಯನು ನಿರುಕಿಸು ಸಾರ್ಥಕವೆನಿಸಲಿ ಕಣ್ಣುಗಳು. 5
ಬಗೆಯೊಳು ತಾಳುವುದೇತಕೆ ನೀನುರು ದುಗುಡವನು
ಕೇಳುವುದೆರಡನು ಬಗೆಯದ ನನ್ನೀ ವಚನವನು. 6
ಹರಿ ಬಳಿಗೈತಹನಿನಿದಹ ನುಡಿಗಳನಾಡುವನು
ನಿನ್ನೀ ಬಗೆಯನು ಮಾಡದಿರಿಂದತಿ ಕಠಿಣವನು. 7
ಶ್ರೀ ಜಯದೇವನು ರಚಿಸಿದ ನುಡಿಯಿದು ಲಲಿತವೆನೆ
ಕುಡುಗೆಮ ರಸಿಕರಿಗೀ ಹರಿಕಥೆಯಾಮೋದವನೆ. 8
*ಮೂಲರೂಪ*
ನವಮ ಸರ್ಗಃ - ಮುಗ್ಧ ಮುಕುಂದಮ್
ತಾಮಥ ಮನ್ಮಥಖಿನ್ನಾಂ ರತಿರಸಭಿನ್ನಾಂ ವಿಷಾದಸಂಪನ್ನಾಂ
ಅನುಚಿಂತಿತಹರಿಚರಿತಾಂ ಕಲಹಾಂತರಿತಾಮುವಾಚ ರಹಸಿ ಸಖೀ
ಗೀತಂ – ಅಷ್ಟಪದೀ – 18 - ಅಮಂದ ಮುಕುಂದಮ್
ಗುರ್ಜರೀರಾಗ, ಯತಿತಾಲ
ಹರಿರಭಿಸರತಿ ವಹತಿ ಮಧುಪವನೇ ಕಿಮಪರಮಧಿಕಸುಖಂ ಸಖಿ ಭವನೇ ಮಾಧವೇ ಮಾ ಕುರು ಮಾನಿನಿ ಮಾನಮಯೇ || ಧ್ರುವಮ್ || ೧
ತಾಲಫಲಾದಪಿ ಗುರುಮತಿಸರಸಂ
ಕಿಂ ವಿಫಲೀಕುರುಷೇ ಕುಚಕಲಶಂ ೨
ಕತಿ ನ ಕಥಿತಮಿದಮನುಪದಮಚಿರಂ
ಮಾ ಪರಿಹರ ಹರಿಮತಿಶಯರುಚಿರಂ ೩
ಕಿಮತಿ ವಿಷೀದಸಿ ರೋಧಿಷಿ ಏಕಲಾ ವಿಹಸತಿ ಯುವತಿಸಭಾ ತವ ಸಕಲಾ ೪
ಸಜಲನಲಿನೀದಲಶೀತಲಶಯನೇ ಹರಿಮವಲೋಕಯ ಸಫಲಯ ನಯನೇ ೫
ಜನಯಸಿ ಮನಸಿ ಕಿ ಮಿತಿ ಗುರುಖೇದಂ
ಶೃಣು ಮಮ ವಚನಮನೀಹಿತಭೇದಂ ೬
ಹರಿರುಪಯಾತು ವದತು ಬಹು ಮಧುರಂ
ಕಿ ಮಿತಿ ಕರೋಷಿ ಹೃದಯಮತಿವಿಧುರಂ ೭
ಶ್ರೀಜಯದೇವಭಣಿತಮತಿಲಲಿತಂ
ಸುಖಯತು ರಸಿಕಜನಂ ಹರಿಚರಿತಂ ೮
ಸ್ನಿಗ್ಧೇ ಯುತ್ಪರುಷಾಽಸಿ ಯತ್ಪ್ರಣಮತಿ ಸ್ತಬ್ಧಾsಸಿ ಯದ್ರಾಗಿಣಿ
ದ್ವೀಪಸ್ಥಾಽಸಿ ಯದುನ್ಮುಖೇ ವಿಮುಖತಾಂ ತಾಯಾಸಿ ತಸ್ಮಿನ್ಪ್ರಿಯೇ ತದ್ಯುಕ್ತಂ ವಿಪರೀತಕಾರಿಣಿ ತವ ಶ್ರೀಖಂಡಚರ್ಚಾ ವಿಷಂ ಸೀತಾಂಶುಸ್ತಪನೋ ಹಿಮಂ ಹುತವಹಃ ಕ್ರೀಡಾಮುದೋ ಯಾತನಾಃ | ೯
ಸಾಂದ್ರಾನಂದಪುರಂದರಾದಿದಿವಿಷ ದ್ವೃಂದೈರಮಂದಾದರಾ -
ದಾನಮ್ರೈರ್ಮುಕುಟೇಂದ್ರನೀಲಮಣಿಭಿ: ಸಂದರ್ಶಿತೇಂದಿಂದಿರಂ
ಸ್ವಚ್ಛಂದಂ ಮಕರಂದಸುಂದರಮಿಲನ್ಮಂದಾಕಿನೀಮೇದುರಂ ಗೋವಿಂದಪದಾರವಿಂದಮಶುಭಸ್ಕಂದಾಯ ವಂದಾಮಹೇ ೧೦
|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಕಲಹಾಂತರಿತಾವರ್ಣನೇ
ಮುಗ್ಧ ಮುಕುಂದೋನಾಮ ನವಮ ಸರ್ಗ: ||
ಕೃತಜ್ಣತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು