ಗೀತಗೋವಿಂದ24
ಅಷ್ಟಪದಿ 23
*ಸಂಕ್ಷಿಪ್ತ ಭಾವ*
ರಾಧೆಯನ್ನು ಕುರಿತು ಮಾಧವನು ಸರಸದ ನುಡಿಗಳನ್ನು ನುಡಿಯುತ್ತಿದ್ದಾನೆ. ನಿನ್ನನ್ನೆ ಅನುಸರಿಸುತ್ತಿರುವ ನನ್ನಲ್ಲಿ ವಿಹರಿಸು ಪ್ರಿಯೆ. ತಾವರೆಯಂತಹ ನಿನ್ನ ಪಾದಗಳನ್ನು ಈ ಚಿಗುರಿನ ಹಾಸಿಗೆಯಲ್ಲಿಡು. ನಿನ್ನ ಪಾದಗಳ ಕೆಂಪನ್ನು ಕಂಡು ಈ ಕೆಂದಳಿರು ವೈರಿಯನ್ನು ಕಂಡ ಹಾಗೆ ಧಿಕ್ಕರಿಸಲಿ.
ಬಹುದೂರದಿಂದ ನಡೆದು ಬಂದು ನೋಯುತ್ತಿರುವ ಪಾದಗಳನ್ನು ತಂಪಾದ ಹುಲ್ಲ ಮೇಲಿಡು. ಅಂದುಗೆಗಳಿಂದ ಕೂಡಿದ ಅವುಗಳನ್ನು ಮೃದುವಾಗಿ ನನ್ನ ಕೈಗಳಿಂದ ಒತ್ತುವೆನು.
ಮುಖಕಮಲದಿಂದ ಸುರಿಸುವ ಜೇನಿನ ಸವಿಯಂತೆ ನನ್ನಲ್ಲಿ ಮೃದುವಚನಗಳನ್ನು ನುಡಿ. ವಿರಹವನ್ನು ಕಳೆಯುವಂತೆ ನಿನ್ನೆದೆಯ ಸೌಂದರ್ಯಕ್ಕೆ ಅಡ್ಡಿಯಾಗಿರುವ ಈ ದುಕೂಲವನ್ನು ನಾನು ತೆಗೆದು ಹಾಕುವೆನು.
ಪ್ರಿಯನ ಆಲಿಂಗನದ ಭರದಲ್ಲಿ ಪುಳಕಿತವಾಗಿರುವ ನಿನ್ನ ಮೃದುವಾದ ಕುಚಗಳನ್ನು ನನ್ನೆದೆಯ ಮೇಲಿರಿಸು. ಮದನನ ತಾಪದ ಬೇಗೆಯನ್ನು ಪರಿಹರಿಸು.
ನಿನ್ನ ವಿರಹದಲ್ಲಿ ಸತ್ತಂತಾಗಿರುವ ನನ್ನನ್ನು ನಿನ್ನ ತುಟಿಗಳ ಅಮೃತಪಾನದಿಂದ ಬದುಕಿಸು. ನಿನ್ನಲ್ಲಿಯೇ ಮನವನ್ನು ನಾಟಿದ, ವಿರಹದ ತಾಪದಿಂದ ಬೆಂದಿರುವವನನ್ನು ಬದುಕಿಸು.
ನಿನ್ನ ಆಭರಣಾದಿಗಳ ಶಬ್ದಗಳು ನಿನ್ನ ಮಧುರವಾದ ಕಂಠದ ಧ್ವನಿಗೆ ಹೊಂದಿಕೊಂಡು ಬರಲಿ. ಕೋಗಿಲೆಯ ಉಲಿಯಂತೆ ಸವಿ ನುಡಿಗಳನ್ನು ಆಡಿ ನೊಂದ ನನ್ನ ಕಿವಿಗಳಿಗೆ ಸಂತಸವನ್ನು ಉಂಟುಮಾಡು.
ಕೋಪದಿಂದ ನನ್ನನ್ನು ನೋಡಿದ ನಿನ್ನ ಕಣ್ಣುಗಳು ನಾಚಿಕೆಯಿಂದ ಮುಚ್ಚಿಕೊಳ್ಳುತ್ತಿವೆ. ಸುಮ್ಮನೆ ರತಿಯ ಬಗೆಗಿನ ಖೇದವನ್ನು, ದುಗುಡವನ್ನು ಬಿಡು.
ಜಯದೇವನು ಹಾಡಿದ ಈ ಸಾಲುಗಳಲ್ಲಿ ಪದಪದಗಳಲ್ಲಿಯೂ ಮಾಧವನ ಮೋದವು ತುಂಬಿರುವುದು. ರಸಿಕಜನರಿಗೆಲ್ಲರಿಗೂ ರತಿರಸದ ಆನಂದವನ್ನು ಯಾವಾಗಲೂ ಇದು ಕೊಡಲಿ.
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೨೩
ನಿನ್ನನೆ ತಾನನುಸರಿಸುತಲಿರುವೀನಾರಾಯಣನೊಳು ಅರೆಚಣವಿಹರಿಸು ರಾಧಿಕೆ
ಮೆಲ್ಲನೆ ಕಿಸಲಯಶಯನದೊಳಿಡು ವರಕಾಮಿನಿ ತಾವರೆಯಂದದ ನಿನ್ನಡಿಯ
ತವ ಪದಪವಲ್ಲವವೈರಿವೊಲಿರುವೀ ತಳಿರಿನ ಪಾಸಿದು ಪಡೆಯಲಿ ಧಿಕ್ಕೃತಿಯ . 1
ಪಾಸಿನೊಳರೆಚಣವಿಡು ಬಹುದೂರವ ನಡೆದುರುನೋಯುವ ಮೆಲ್ಲಡಿ ಜೋಡಿಯನು
ಅಂದುಗೆವೋಲನುಸರಿಸಿದ ಶೂರನು ನಾ ಕರಕಮಲಗಳಿ೦ದಿದನೊತ್ತುವೆನು. 2
ವದನೇಂದುವಿನಿಂದಿಳಿಯುವ ಸೊದೆಯೆನೆ ವಿರಚಿಸು ವಚನವನೆನಗನುಕೂಲವನು
ವಿರಹವ ಕಳೆವೊಲು ಕಳೆವೆನು ನಿನ್ನ ಪಯೋಧರರೋಧಕವೆನುವ ದುಕೂಲವನು.3
ಪ್ರಿಯಪರಿರಂಭಣ ಭರದೊಳು ಪೊಂಪುಳಿವೋಗಿಹ ದುರ್ಲಭ ಕುಚಕಲಶವನಿದನು
ನನ್ನೆದೆಮೇಲಿರಿಸೋವೋ ಕಾಮಿನಿ ಶೋಷಿಸು ಮನಸಿಜತಾಪದ ಬೇಗೆಯನು.4
ಅಧರ ಸುಧಾರಸವನು ಕುಡು ಭಾಮಿನಿ ಬದುಕಿಸು ಸತ್ತವನಂತಿಹ ದಾಸನನು
ನಿನ್ನೊಳು ಮನವನು ನಾಟಿಸಿದೆನ್ನನು ವಿರಹಾನಲನಿಂದುರಿದ ವಿಲಾಸನನು. 5
ತವಮಣಿರಶನಾಗುಣವನು ಕಂಠನಿನಾದಕೆ ಅನುಗುಣವೆನುವೊಲು ನಿನದಿಸುತೆ ನಲಿಯಿಸು ಶಶಿಮುಖಿ ಕೋಗಿಲೆಯುಲಿಯೊಳು ನೊಂದನಿಗಿನಿದನು ಕಿವಿಗಳಿಗೀಂಟಿಸುತೆ. 6
ಅಸಫಲಕೋಪದೊಳೆನ್ನನು ಬೆಕ್ಕಸಗೊಳುವೊಲು ಮಾಡಿದ ನಿನ್ನೀ ಲೋಚನವು
ನಾಚಿಕೆಯಿಂದೆನೆ ಮುಗಿಯುತಲಿದೆ ಬಿಡು ನೀನು ವೃಥಾ ರತಿ ಖೇದವನು. 7
ಶ್ರೀ ಜಯದೇವನು ಹಾಡಿದ ಪದಪದದೊಳುಮಿರಿಸಿರುವನು ಮಧುರಿಪು ಮೋದವನು
ರಸಿಕ ಜನಂಗಳಿಗಾವಗಮೀ ನುಡಿ ಕುಡುಗೆ ಮನೋರಮರತಿರಸನೋದವನು.
ದ್ವಾದಶ ಸರ್ಗಃ- ಸುಪ್ರೀತ ಪೀತಾಂಬರಮ್
ಗತವತಿಸಖೀವೃಂದೇಽಮಂದತ್ರ ಪಾಭರನಿರ್ಭರ –
ಸ್ಮರಪರವಶಾಕೂತಸ್ಪೀತಸ್ಮಿತಸ್ನಪಿತಾಧರಾಮ್
ಸರಸಮನಸಂ ದೃಷ್ಟ್ವಾ ರಾಧಾಂಮುಹುರ್ನವಪಲ್ಲವ_
ಪ್ರಸವಶಯನೇ ನಿಕ್ಷಿಪ್ತಾಕ್ಷೀಮುವಾಚ ಹರಿಃ ಪ್ರಿಯಾಮ್ ||೧||
ಗೀತಂ – ಅಷ್ಟಪದೀ – 23- ಮಧುರಿಪು ವಿದ್ಯಾಧರ ಲೀಲಮ್
ವಿಭಾಸರಾಗ, ಏಕತಾಲ
ಕಿಸಲಯಶಯನತಲೇ ಕುರು ಕಾಮಿನಿ ಚರಣನಲಿನವಿನಿವೇಶಂ
ತವ ಪದಪಲ್ಲವವೈರಿಪರಾಭವಮಿದಮನುಭವತು ಸುವೇಶಂ
ಕ್ಷಣಮಧುನಾ ನಾರಾಯಣಮನುಗತಮನುಸರ ಮಾಂ ರಾಧಿಕೇ ||ಧ್ರುವಮ್|| ೧
ಕರಕಮಲೇನ ಕರೋಮಿ ಚರಣಮಹಮಾಗಮಿತಾಸಿ ವಿದೂರಂ
ಕ್ಷಣಮುಪಕುರು ಶಯನೋಪರಿ ಮಾಮಿವ ನೂಪುರಮನುಗತಿಶೂರಂ ೨
ವದನಸುಧಾನಿಧಿಗಲಿತಮಮೃತಮಿವ ರಚಯ ವಚನಮನುಕೂಲಂ ವಿರಹಮಿವಾಪನಯಾಮಿ ಪಯೋಧರರೋಧಕಮುರಸಿ ದುಕೂಲಂ ೩
ಪ್ರಿಯಪರಿರಂಭಣರಭಸವಲಿತಮಿವ ಪುಲಕಿತಮತಿದುರವಾಪಂ
ಮದುರಸಿ ಕುಚಕಲಶಂ ವಿನಿವೇಶಯ ಶೋಷಯ ಮನಸಿಜತಾಪಂ ||೪||
ಅಧರಸುಧಾರಸಮುಪನಯ ಭಾಮಿನಿ ಜೀವಯಮೃತಮಿವ ದಾಸಂ
ತ್ವಯಿ ವಿನಿಹಿತಮನಸಂ ವಿರಹಾನಲದಗ್ಧ ವಪುಷಮವಿಲಾಸಂ ೫
ಶಶಿಮುಖಿ ಮುಖರಯ ಮಣಿರಶನಾಗುಣಮನುಗುಣಕಂಠನಿನಾದಂ
ಶ್ರುತಿಯುಗಲೇ ಪಿಕರುತವಿಕಲೇ ಮಮ ಶಮಯ ಚಿರಾದವಪಾದಂ ೬
ಮಾಮತಿವಿಫಲರುಷಾವಿಕಲೀಕೃತಮವಲೋಕಿತಮಧುನೇದಂ
ಲಜ್ಜಿತಮಿವ ನಯನಂ ತವ ವಿರಮತಿ ಸೃಜಸಿ ವೃಥಾ ರತಿಖೇದಂ ೭
ಶ್ರೀಜಯದೇವಭಣಿತಮಿದಮನುಪದನಿಗದಿತಮಧುರಿಪುಮೋದಂ
ಜನಯತು ರಸಿಕಜನೇಷು ಮನೋರಮರತಿರಸಭಾವವಿನೋದಂ ೮
ಪ್ರತ್ಯೂಹಃ ಪುಲಕಾಂಕುರೇಣ ನಿಬಿಡಾಶ್ಲೇಷೇ ನಿಮೇಷೇಣ ಚ ಕ್ರೀಡಾಕೂತವಿಲೋಕಿತೇsಧರಸುಧಾಪಾನೇ ಕಥಾನರ್ಮಭಿಃ
ಆನಂದಾಧಿಗಮೇನ ಮನ್ಮಥಕಲಾಯುದ್ಧೇಽಪಿ ಯಸ್ಮಿನ್ನ ಭೂತ್
ಉದ್ಭೂತಃ ಸ ತಯೋರ್ಬಭವ ಸುರತಾರಂಭಃ ಪ್ರಿಯಂಭಾವುಕಃ ೯
ದೋರ್ಭ್ಯಾ೦ ಸಂಯಮಿತಃ ಪಯೋಧರಭರೇಣಾ ಪೀಡಿತಃ ಪಾಣಿಜೈ_
ರಾವಿದ್ಧೋ ದಶನೈಃ ಕ್ಷತಾಧರಪುಟಃ ಶೋಣೀತಟೇನಾಹತಃ
ಹಸ್ತೇನಾನಮಿತಃ ಕಚೇsಧರಮಧುಸ್ಕಂದೇನ ಸಮ್ಮೋಹಿತಃ
ಕಾಂತಃ ಕಾಮಪಿ ತೃಪ್ತಿಮಾಪತದಹೋ ಕಾಮಸ್ಯ ವಾಮಾ ಗತಿಃ ೧೦
ವಾಮಾಂಗೇ ರತಿಕೇಲಿಸಂಕುಲರಣಾರಂಭೇ ತಯಾ ಸಾಹಸ –
ಪ್ರಾಯಂ ಕಾಂತಜಯಾಯ ಕಿಂಚಿದುಪರಿಪ್ರಾರಂಭಿಯತ್ಸಂಭ್ರಮಾತ್ ನಿಷ್ಪಂದಾ ಜಘನಸ್ಥಲೀ ಶಿಥಿಲಿತಾ ದೋರ್ವಲ್ಲಿರುತ್ಕಂಪಿತಂ
ವಕ್ಷೋ ಮೀಲಿತಮಕ್ಷಿ ಪೌರುಷರಸಃ ಸ್ತ್ರೀಣಾಂ ಕುತಃ ಸಿದ್ಧತಿ ೧೧
ತಸ್ಯಾಃ ಪಾಟಲಪಾಣಿಜಾಂಕಿತಮುರೋ ನಿದ್ರಾಕಷಾಯೇ ದೃಶೌ
ನಿರ್ದೌತೋಽಧರಶೋಣಿತಮಾವಿಲುಲಿತಸ್ರಸ್ತಾಃಸ್ರಜೋ ಮೂರ್ಧಜಾಃ ಕಾಂಚೀದಾಮ ದರಶ್ಚಥಾಂಚಲಮಿತಿ ಪ್ರಾತರ್ನಿಖಾತೈರ್ದೃಶೋ –
ರೇಭಿಃ ಕಾಮಶರೈಸ್ತ್ರದದ್ಭುತಮಭೂತತ್ಕುರ್ಮನಃ ಕೀಲಿತಂ ೧೨
ವ್ಯಾಕೋಶ: ಕೇಶಪಾಶಸ್ತರಲಿತಮಲಕೈಃ ಸ್ವೇದಮೋಕ್ಷೌ ಕಪೋಲೌ
ಕ್ಲಿಷ್ಟಾ ಬಿಂಬಾಧರ ಶ್ರೀ ಕುಚಕಲಶರುಚಾ ಹಾರಿತಾ ಹಾರಯಷ್ಟಿಃ ಕಾಂಚೀಕಾಂತಿರ್ಹತಾಶಾ ಸ್ತನಜಘನಪದಂ ಪಾಣಿನಾಚ್ಛಾದ್ಯ ಸದ್ಯಃ
ಪಶ್ಯಂತೀ ಸತ್ರಪಾ ಸಾ ಕದಪಿ ವಿಲುಲಿತಾ ಮುಗ್ಧಕಾಂತಿರ್ಧಿನೋತಿ ೧೩
ಈಷನ್ಮೀಲಿತದೃಷ್ಟಿ ಮುಗ್ಧ ವಿಲಸತ್ಸೀತ್ಕಾರಧಾರಾವಶಾತ್
ಅವ್ಯಕ್ತಾಕುಲಕೇಲಿಕಾಕುವಿಕಸದ್ಧಂತಾಂಶುಧೌತಾದರಂ
ಶಾಂತಸ್ತಬ್ಧಪಯೋಧರಂ ಭೃಷಪರಿಷ್ವಂಗಾತ್ಕುರಂಗೀದೃಶೋ
ಹರ್ಷೋತ್ಕರ್ಷವಿಮುಕ್ತಿನಿಸ್ಸಹತನೋರ್ಧನ್ಯೋ ಧಯತ್ಯಾನನಂ ೧೪
ಅಥ ಸಹಸಾ ಸುಪ್ರೀತಂ ಸುರತಾಂತೇ ಸಾ ನಿತಾಂತಖಿನ್ನಾಂಗೀ
ರಾಧಾ ಜಗಾದ ಸಾದರಮಿದಮಾನಂದೇನ ಗೋವಿಂದಂ ೧೫
ಕೃತಜ್ಞತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು