ಶುಭಾ ಮಧುಸೂದನ್
ಡಾ. ಶುಭಾ ಮಧುಸೂದನ್
ಡಾ. ಶುಭಾ ಮಧುಸೂದನ್ ಅಂದರೆ ಮೊದಲು ನೆನಪಾಗುವುದು ಪ್ರತಿ ನಿತ್ಯ ಅವರು ಮೂಡಿಸುವ ಪ್ರೇರಣಾತ್ಮಕ ಸಂದೇಶಗಳು. ವೈಜ್ಞಾನಿಕ ತಳಹದಿ ಉಳ್ಳ ಸೃಜನಾತ್ಮಕ ಅಭಿವ್ಯಕ್ತಿಗಳಾಗಿರುವುದೇ ಅವು ನಮ್ಮನ್ನು ಆಪ್ತವಾಗಿ ಸ್ಪಂದಿಸುವುದಕ್ಕೆ ಮುಖ್ಯ ಕಾರಣ.
ಫೆಬ್ರುವರಿ 2 ಶುಭಾ ಅವರ ಜನ್ಮದಿನ. ಬೆಂಗೂರಿನ ಸ್ಟೆಲ್ಲಾ ಮೇರೀಸ್ ಶಾಲೆ, ಮೌಂಟ್ ಕಾರ್ಮೆಲ್ ಕಾಲೇಜು ವ್ಯಾಸಂಗದ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಪಿಎಚ್.ಡಿ ಸಾಧನೆ ಮಾಡಿದರು. ವಿಶ್ವಮಟ್ಟದಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಉತ್ಕೃಷ್ಟತೆಗೆ ಮಾನದಂಡವಾದ 'ಸಿಕ್ಸ್ ಸಿಗ್ಮಾ' ಕ್ಷೇತ್ರದಲ್ಲೂ ಉನ್ನತ ಸಾಧನೆ ಮಾಡಿದ್ದಾರೆ.
ಹೆಸರಾಂತ ವೈದ್ಯಕೀಯ ಸಂಸ್ಥೆಗಳಾದ ಫೋರ್ಟಿಸ್, ಸಾಗರ್ ಮುಂತಾದವುಗಳಿಗೆ ಹೆಲ್ತ್/ಕ್ಲಿನಿಕಲ್ ಸೈಕಲಾಜಿಸ್ಟ್ ಆಗಿ ಅವರ ಸೇವೆ ಹೆಸರು ಗಳಿಸಿವೆ. ತಮ್ಮದೇ ಆದ ಮನಸ್ವಿ ಡೈನಮಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೇತೃತ್ವ ವಹಿಸಿ, ಸೆಂಟರ್ ಫಾರ್ ಎಂಪ್ಲಾಯೀ ಅಸಿಸ್ಟೆನ್ಸ್ ಅಂಡ್ ಕಾರ್ಪೋರೇಟ್ ತರಬೇತಿ ಕಾರ್ಯಕ್ರಮಗಳ ಸೇವೆಗೂ ಅವರು ಹೆಸರಾಗಿದ್ದಾರೆ.
ಡಾ. ಶುಭಾ ಅವರು ಜನರಲ್ಲಿ ಮಾನಸಿಕ ಆರೋಗ್ಯಗಳ ಕುರಿತು ಕಾಳಜಿ ಮೂಡಿಸುವುದು, ಆತ್ಮವಿಶ್ವಾಸ ಬೆಳೆಸುವುದು, ನಕಾರಾತ್ಮಕ ವಿಚಾರಗಳಿಂದ ಮೂಡಿಸಿಕೊಳ್ಳುವ ಅಪಾಯಗಳಿಂದ ಮುಕ್ತರಾಗಿಸುವುದು ಮುಂತಾದ ಸದುದ್ದೇಶಗಳ ಕುರಿತಾಗಿ ನಿರಂತರ ದುಡಿಯುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಗಳಲ್ಲಿಯೂ ಅನೇಕ ಕಾರ್ಯಕ್ರಮ ನಿರೂಪಿಸಿದ್ದಾರೆ, ಸಂದರ್ಶನಗಳನ್ನು ಮಾಡಿದ್ದಾರೆ. 'ಅಂತರಗಂಗೆ' ಅಂತಹ ಅಂಕಣಗಾರ್ತಿಯಾಗಿ ನಿಯತಕಾಲಿಕಗಳಲ್ಲಿ ಪ್ರಬುದ್ಧ ಜನಪರ ಕಾಳಜಿಯ ಲೇಖನಗಳನ್ನು ಮೂಡಿಸಿದ್ದಾರೆ.
ಶುಭಾ ಅವರು ಇಷ್ಟೆಲ್ಲ ಸಾಧಿಸಿದ್ದರೂ ಸದಾ ನಗೆಮೊಗದಿಂದ ಸರಳ ಸಹೃದಯ ಭಾವದಲ್ಲಿ ಎಲ್ಲರೊಂದಿಗೆ ಬೆರೆತಿದ್ದಾರೆ. ಫೇಸ್ಬುಕ್ ಅಂತಹ ಮಾಧ್ಯಮವನ್ನು ತಮ್ಮ ಚಿಂತನರೂಪಕ ಕಿರು ಸಂದೇಶಗಳಿಂದ, ಬರಹಗಳಿಂದ, ವಿಡಿಯೋ ಪ್ರಸ್ತುತಿಗಳ ಮೂಲಕ ಪ್ರೇರಣಾತ್ಮಕವಾಗಿ ಮೂಡಿಸುವ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರಿನಂತೆಯೇ ಶುಭ ಮತ್ತು ಮಧು ಕಾಂಬಿನೇಷನ್ ಕೂಡಾ ಆಗಿದ್ದಾರೆ.
ಶುಭಾ ಮಧುಸೂದನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Dr. Shubha Madhu
ಕಾಮೆಂಟ್‌ಗಳು