ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಸುಮಾ ಆಯರಹಳ್ಳಿ


ಕುಸುಮಾ ಆಯರಹಳ್ಳಿ

ಈಕೆಯ ಉತ್ಸಾಹದ ಬರಹ ಮತ್ತು ಸೃಜನಶೀಲ ಅಭಿವ್ಯಕ್ತಿ ಚಿತ್ರಗಳನ್ನು ಕಂಡಾಗ ನನಗೂ ಹೀಗಿರಬೇಕು ಅಂತ ಆಸೆ ಆಗುತ್ತೆ.  ನನಗೆ ಗೊತ್ತಿದೆ.  ಇದು ನನ್ನೊಬ್ಬನ ಆಸೆ ಮಾತ್ರಾ ಅಲ್ಲ ಅಂತ.  ಈ ಕುಸುಮಾ ಆಯರಹಳ್ಳಿ ಎಂಬ ಕುಸುಮಬಾಲೆ ಉತ್ಸಾಹಕ್ಕೆ ಅನ್ವರ್ಥವಾಗಿ ಎಲ್ಲರಿಗೂ ಪ್ರೇರಣೆ.

ಫೆಬ್ರುವರಿ 15 ಕುಸುಮಾ ಜನ್ಮದಿನ. ಕುಸುಮಬಾಲೆ ಮತ್ತು ಕುಸುಮಾ ಆಯರಹಳ್ಳಿ ಎಂಬ ಎರಡೂ ಹೆಸರಲ್ಲಿ ಬರೆಯುತ್ತಿರುವ ಇವರು  ಬಾಲ್ಯ ಕಳೆದದ್ದು ಚಾಮರಾಜನಗರದಲ್ಲಿ. ತಂದೆಯ ಊರು ಮೈಸೂರು ಹತ್ತಿರದ ಆಯರಹಳ್ಳಿ. ಈಕೆ, ಕನ್ನಡ ಮತ್ತು  ಪತ್ರಿಕೋದ್ಯಮದಲ್ಲಿ ಎಂ.ಎ. ಪದವೀಧರೆ. 

ಕುಸುಮಾ ಒಂದೂವರೆ ದಶಕ ಮಾಧ್ಯಮಲೋಕದಲ್ಲಿ ಕೆಲಸ ಮಾಡಿ ಊರಿಗೆ ಕೃಷಿಗೆ ಮರಳಿದ್ದರು. ಈಗ 'ವಿಸ್ತಾರ ಮನರಂಜನಾ ವಾಹಿನಿ'ಯ ಕಂಟೆಂಟ್ ಹೆಡ್ ಆಗಿ ಮತ್ತೆ ಮಾಧ್ಯಮ ಜಗತ್ತಿನಲ್ಲಿ ತಮ್ಮನ್ನು ವಿಸ್ತರಿಸಿಕೊಂಡಿದ್ದಾರೆ. 

ಕುಸುಮಾ ಅನೇಕ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಸಣ್ಣಕಥೆ ಬರೆದಿದ್ದಾರೆ.  ಅವರು 'ವಿಜಯ ಕರ್ನಾಟಕ'ದಲ್ಲಿನ ತಮ್ಮ ಅಂಕಣದ ಮೂಲಕ 'ಕುಸುಮಬಾಲೆ' ಎಂದೇ ಪ್ರಸಿದ್ದರು. ಅವರ ಅಂಕಣ ಬರಹಗಳ ಸಂಕಲನ 'ಯೋಳೀನ್‌ಕೇಳಿ' 2018ನೇ ಸಾಲಿನ 'ಡಾ.ಹಾಮಾನಾ ಯುವ ಪ್ರಶಸ್ತಿ' ಪಡೆಯಿತು.  'ದಾರಿ' ಎಂಬುದು ಛಂದ ಪ್ರಕಾಶನದಿಂದ ಮೂಡಿ ಬಂದಿರುವ ಅವರ ಕಾದಂಬರಿ.

ಕುಸುಮಾ ಅವರಿಗೆ ಕೃಷಿ, ಸಾಹಿತ್ಯ, ನಾಟಕ, ಸಿನಿಮಾ, ಕಲೆ, ಶಿಕ್ಷಣ, ಗ್ರಾಮೀಣ ಪರಿಸರಗಳಲ್ಲಿ ಸಮಾಜ ಸೇವೆ ಹೀಗೆ ವಿಶಾಲ ಆಸಕ್ತಿ. ಹಸುರಲ್ಲಿ ಹಸುರಾಗಿ, ಮಕ್ಕಳಲ್ಲಿ ಮಗುವಾಗಿ, ಗೆಳೆಯರಲ್ಲಿ ಗೆಳೆತನವಾಗಿ, ಎಲ್ಲೆಲ್ಲೂ ಒಲವಿನ ಕುಸುಮದ ನಗೆಯಾಗಿ ಕಂಗೊಳಿಸುವ ಈ ಕುಸುಮಬಾಲೆ ಕುರಿತು ಮಾತುಗಳೇ ಬೇಕಿಲ್ಲ.  ಆಕೆಯನ್ನು ಕಂಡವರಿಗಂತೂ ಆಕೆ ಅನುಭವ.  ಇನ್ನೂ ಕಂಡಿಲ್ಲದೆ ದೂರದಲ್ಲಿ ಕುಳಿತು ಅವರ ಚಟುವಟಿಕೆಯ ಚಿತ್ರಗಳನ್ನು ನೋಡಿ,  ಅವರ ಚಟುವಟಿಕೆಗಳ ಬಗ್ಗೆ ಓದುತ್ತಿರುವ ನನ್ನಂತಹವರಿಗೆ ಅವರೊಂದು ವಿಸ್ಮಯ.

ಅಕ್ಕರೆಯ ಜೀವನೋತ್ಸಾಹಿ ಕುಸುಮಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Kusuma Ayarahalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ