ಶಿವರಾತ್ರಿ
ಶಿವರಾತ್ರಿ ಅಂದರೆ........
‘ಶಿವ’ ಎಂಬ ಪದದ ವಿಸ್ತಾರ “ಶಂ ಮಂಗಳಂ ಕರೋತಿ ಇತಿ ಶಿವಃ”. ‘ಶಂ’ ಎಂದರೆ ಮಂಗಳ, ‘ಕರೋತಿ’ ಎಂದರೆ ಸೃಷ್ಟಿಸುವವನು. ಶಿವನ ಸಾನ್ನಿಧ್ಯವು ನಮ್ಮ ಬದುಕಿನಲ್ಲಿ ಮಂಗಳವನ್ನುಂಟುಮಾಡುತ್ತದೆ. ಭಗವಾನ್ ಶಿವನು ಇಚ್ಛಾಶಕ್ತಿ, ವಿದ್ಯಾಶಕ್ತಿ ಮತ್ತು ಕ್ರಿಯಾಶಕ್ತಿ ಎಂಬ ಮೂರು ಶಕ್ತಿಗಳನ್ನು ಪ್ರತಿನಿಧಿಸುತ್ತಾನೆ.
ಶಿವರಾತ್ರಿ ಎಂಬುದು ರಾತ್ರಿ ಅಥವಾ ನಮ್ಮ ಆಂತರ್ಯದೊಳಗಿನ ಕತ್ತಲೆಯನ್ನು ನಾಶಪಡಿಸಿಕೊಳ್ಳಬೇಕಾದ ದಿನ. ನಮ್ಮೊಳಗಿನ ಮೇಲ್ಮಟ್ಟದಲ್ಲಿ ಅಜ್ಞಾನವೇನೋ ಇದೆ. ಹಾಗೆಯೇ ಜಗತ್ತಿನಿಂದ ಕಲುಷಿತವಾಗದ ಒಂದು ಕೇಂದ್ರವೂ ನಮ್ಮೊಳಗಿದೆ. ಈ ಕೇಂದ್ರದಲ್ಲಿ ಅಡಕವಾಗಿರುವ ಶಿವ ಎಂಬ ಶ್ರೇಷ್ಠತೆಗಳಾದ ಇಚ್ಛಾಶಕ್ತಿ, ವಿದ್ಯಾಶಕ್ತಿ, ಕ್ರಿಯಾಶಕ್ತಿಗಳನ್ನು ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳುವುದರಿಂದ ನಮ್ಮೊಳಗಿನ ಅಜ್ಞಾನವೆಂಬ ಕತ್ತಲೆಯನ್ನು ಕಳೆದುಕೊಳ್ಳಬಹುದಾಗಿದೆ.
ಇಚ್ಛಾಶಕ್ತಿ ಎಂದರೆ ಅವನ ಉದ್ಧೇಶವು ಸುಂದರವಾದುದು. ರಾತ್ರಿ ಅಥವಾ ಕತ್ತಲೆಯನ್ನು ನಾಶ ಮಾಡುವುದೇ ಶಿವನ ಉದ್ಧೇಶ. ಹಾಗಾಗಿ ನಾವು ಆ ಸುಂದರತೆಯೆಂಬ ಇಚ್ಛಾಶಕ್ತಿಯನ್ನು ನಮ್ಮೊಳಗೆ ತಂದುಕೊಳ್ಳಬೇಕು. ಸಾಮಾನ್ಯವಾಗಿ ನಮ್ಮ ಇಚ್ಛೆಗಳು ಹೆಸರು, ಕೀರ್ತಿ, ಹಣ ಇವುಗಳ ಸುತ್ತಾ ಸುತ್ತುತ್ತಿರುತ್ತದೆ. ಈ ಭೋಗಗಳನ್ನು ತಕ್ಕಮಟ್ಟಿಗೆ ನಮ್ಮದಾಗಿಸಿಕೊಳ್ಳುವುದರ ಜೊತೆ ಜೊತೆಗೆ ನಮ್ಮೊಳಗಿನ ಆಂತರಿಕ ಕತ್ತಲೆಯನ್ನು ನಾಶ ಮಾಡಿಕೊಳ್ಳುವುದೂ ನಮ್ಮ ಇಚ್ಛಾಶಕ್ತಿಯಾಗಬೇಕು.
ನಮಗೆ ಬೇಕಿರುವ ಸುಂದರತೆ ಎಂಬುದು ನಮ್ಮೊಳಗೇ ಇದೆ. ಆದರೆ ಕತ್ತಲೆ ಎಂಬ ಅಜ್ಞಾನದಲ್ಲಿ ಕಳೆದುಹೋಗುವ ನಾವು ನಮ್ಮಲ್ಲಿರುವ ಸುಂದರತೆಯನ್ನು ಬಿಟ್ಟು ನಮ್ಮ ಬಳಿಯಲ್ಲಿ ಇಲ್ಲದಿರುವ ಮತ್ತ್ಯಾವುದರಲ್ಲೋ ಅದನ್ನು ಅರಸುತ್ತಿರುತ್ತೇವೆ. ನಾವು ಗಾಢನಿದ್ರೆಯಲ್ಲಿರುವಾಗ, ಅದೊಂದು ಮಾಂತ್ರಿಕ ಸ್ಥಿತಿಯಾಗಿರುತ್ತದೆ. ಅದೆಷ್ಟು ಮೋಹಕವೂ, ಮಾಂತ್ರಿಕವೂ ಆಗಿರುತ್ತದೆಂದರೆ ಅದನ್ನು ಹಣದಿಂದ ಕೊಂಡುಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಅದು ಸಹಜವಾಗಿಯೇ ನಮ್ಮೊಡನೆಯೇ ಸದಾಕಾಲ ಜೊತೆಯಲ್ಲಿರುತ್ತದೆ. ಆದರೆ ನಮಗೆ ಈ ಅಮೂಲ್ಯತೆ ನಮ್ಮೊಳಗೇ ಇದೆ ಎಂಬುದರ ಜ್ಞಾನವೇ ಇರುವುದಿಲ್ಲ. ಪತಂಜಲಿ ಮಹರ್ಷಿಗಳು ನಿದ್ರೆಗೂ ಸಮಾಧಿಗೂ ಇರುವ ವೆತ್ಯಾಸವನ್ನು ಹೇಳುತ್ತಾರೆ. ನಿದ್ರೆಯಲ್ಲಿ ನೀವು ನಿದ್ರಿಸುತ್ತೀರಿ. ಸಮಾಧಿಯಲ್ಲಿ ನೀವು ಜಾಗೃತ ಸ್ಥಿತಿಯಲ್ಲಿರುತ್ತೀರಿ. ಆದ್ದರಿಂದ ಶಿವರಾತ್ರಿಯಲ್ಲಿ ಒಂದು ರಾತ್ರಿ ಅಥವಾ ಕತ್ತಲೆ ಇದೆ. ಆ ಕತ್ತಲೆಗೆ ಶಿವನ ಮಂಗಳ ಗುಣವನ್ನು ತರಬೇಕಾದ ಅಗತ್ಯವಿದೆ.
ಭಗವಾನ್ ಶಿವನು ಕತ್ತಲೆಯಲ್ಲ. ಶಿವನು ಕತ್ತಲೆ ತುಂಬಿದ ರಾತ್ರಿಯಲ್ಲಿ ಮಂಗಳ ಸ್ವರೂಪನಾಗಿದ್ದಾನೆ. ಮಂಗಳ ಸ್ವರೂಪನಾದ ಶಿವನು ಆತ್ಮದ ಕತ್ತಲರಾತ್ರಿಗೆ ಶಿವ ಪ್ರಜ್ಞೆಯನ್ನು ತರುತ್ತಾನೆ. ಭಗವಾನ್ ಶಿವನ ಪ್ರಜ್ಞೆಯೆಂದರೇನು? ಅದು ಮಂಗಳಂ ಅರ್ಥಾತ್ ಶುಭಕರವಾದುದು. ಇಚ್ಛಾಶಕ್ತಿಯೆಂದೆರೆ ಆಂತರ್ಯದೊಳಗಿನ ಅಂಧಕಾರವನ್ನು ನಾಶಮಾಡುವ ಸಂಕಲ್ಪ. ಈ ಉದ್ಧೇಶವನ್ನು ನಾವು ಜೀವಂತವಾಗಿರಿಸಿಕೊಳ್ಳಬೇಕು.
ರೈಟ್ ಸಹೋದರರು ವಿಮಾನವನ್ನು ರಚಿಸಲು ಯೋಚಿಸಿದಾಗ, ಅವರಲ್ಲಿದ್ದುದ್ದು ವಿಮಾನವನ್ನು ರಚಿಸಬೇಕೆಂಬ ಇಚ್ಛೆಮಾತ್ರಾ. ಆಗ ಅವರಿಗೆ ಅದಕ್ಕೆ ಬೇಕಾದ ತಂತ್ರಜ್ಞಾನವಿರಲಿಲ್ಲ. ಇಚ್ಛೆ ಮಾತ್ರ ಅವರಲ್ಲಿತ್ತು. ಆ ಇಚ್ಛೆಯಿಂದ ಅವರು ಅವಶ್ಯವಾದ ತಂತ್ರಜ್ಞಾನವನ್ನು ಕಲಿತುಕೊಂಡರು. ಪ್ರಯೋಗ ಮಾಡಿದರು. ಅನಂತರ ನಡೆದುದೆಲ್ಲಾ ಈಗ ಇತಿಹಾಸ. ಶುದ್ಧ ಉದ್ಧೇಶವೇ ಸೃಜನಶೀಲತೆಯ ತಾಯಿ. ಇಚ್ಛಾಶಕ್ತಿ ಎಂದರೆ ‘ನಾನು ನನ್ನ ಅಜ್ಞಾನವನ್ನು ಇಲ್ಲೇ ಈಗಲೇ ನಾಶ ಮಾಡುತ್ತೇನೆ’ ಎಂಬ ಬದ್ಧತೆ.
ಆದರೆ ಕೇವಲ ಇಚ್ಛಾಶಕ್ತಿಯನ್ನು ಪಡೆದರೆ ಸಾಲದು, ಉದಾಹರಣೆಗೆ ನೀವು ಡಾಕ್ಟರಾಗಬೇಕೆಂದಿದ್ದರೆ ವೈದ್ಯಕೀಯ ಪಠ್ಯಗಳ ಅಧ್ಯಯನ ಮಾಡದೆ, ಕೇವಲ ಸ್ವಯಂ ಸೂಚನೆಯಿಂದಲೇ ಡಾಕ್ಟರಾಗುವೆ ಎಂದು ತಿಳಿದುಕೊಂಡರೆ ಪ್ರಯೋಜನವಾಗಲಾರದು. ಆದ್ದರಿಂದ ವ್ಯಕ್ತಿಗೆ ಇಚ್ಛಾಶಕ್ತಿ ಇರಬೇಕಲ್ಲದೆ ವಿದ್ಯಾಶಕ್ತಿಯೂ ಇರಬೇಕಾಗುತ್ತದೆ. ಭಗವಾನ್ ಶಿವನು ವಿದ್ಯಾ ಶಕ್ತಿಯನ್ನೂ ಪ್ರತಿನಿಧಿಸುತ್ತಾನೆ. ವಿದ್ಯೆ ಎಂದರೆ ಅರಿವು. ವಿದ್ಯೆ ಎಂದರೆ ಸ್ಪಷ್ಟತೆ. ಸ್ಪಷ್ಟತೆಯನ್ನು ಪಡೆಯಬೇಕಾದರೆ ವಿದ್ಯಾಶಕ್ತಿಯನ್ನು ಸಾಧನೆಮಾಡಬೇಕು.
ಆದರೆ ನೆನಪಿಡಬೇಕಾದ ಒಂದು ವಿಚಾರವೆಂದರೆ ವಿದ್ಯೆ ಎಂದರೆ ಕೇವಲ ಶಬ್ಧ ಜ್ಞಾನವಲ್ಲ. ಶಿವಸೂತ್ರದ ಒಂದು ಸೂತ್ರದಲ್ಲಿ ಭಗವಾನ್ ಶಿವನು ‘ಜ್ಞಾನಂ ಬಂಧನಂ’ ಎಂದು ಹೇಳುತ್ತಾನೆ. ಅರ್ಥಾತ್ ವ್ಯಕ್ತಿಯಲ್ಲಿರುವ ಜ್ಞಾನವೂ ಬಂಧನವಾಗಬಹುದು. ಜಿಡ್ಡು ಕೃಷ್ಣಮೂರ್ತಿ ಅವರು ಹೇಳುವಂತೆ ವಿವರಿಸಲ್ಪಟ್ಟದ್ದು ವಿವರಣೆಯಲ್ಲ. ನೀರು ಎಂಬ ಶಬ್ಧವೇ ನೀರಲ್ಲ. ಗುಲಾಬ್ ಜಾಮೂನ್ ಎಂಬ ಶಬ್ಧವೇ ಗುಲಾಬ್ ಜಾಮೂನಲ್ಲ. ಬಹು ಮಂದಿಯ ಪಾಲಿಗೆ ಜ್ಞಾನವೆಂಬುದು ಕೇವಲ ಶಬ್ಧಗಳಷ್ಟೇ ಆಗಿವೆ. ಆದರೆ ಶಬ್ದವೇ ವಸ್ತುವಲ್ಲ. ವರ್ಣಿತವಾದುದೇ ವರ್ಣನೆಯಲ್ಲ.
ವಿದ್ಯೆ ಎಂದರೆ ಸ್ಪಷ್ಟತೆ ಎಂದರ್ಥ. ನೀವು ವಾಹನ ಸವಾರಿ ಮಾಡುವಾಗ ಇತರ ವಾಹನ ಸಂಚಾರ ಯಾವ ಕಡೆಗಿದೆ ಎಂಬುದನ್ನು ಯಾವುದೇ ಆಂತರಿಕ ಶಬ್ಧ ಬೆಂಬಲವಿಲ್ಲದೆಯೂ ಎಲ್ಲವನ್ನೂ ನೋಡುತ್ತಿರುತ್ತೀರಿ. ಅಂತೆಯೇ ಜೀವನದಲ್ಲಿಯೂ ಸಹಾ ನೀವು ಜ್ಞಾನವನ್ನಲ್ಲ, ಸ್ಪಷ್ಟತೆಯನ್ನು ಪೂಜಿಸಬೇಕು. ಶಕ್ತಿ ಎಂದರೆ ಬಲ. ವಿದ್ಯೆ ಎಂದರೆ ಸ್ಪಷ್ಟತೆ. ಸ್ಪಷ್ಟತೆಯ ಬಲವೇ ವಿದ್ಯಾಶಕ್ತಿ. ಶಾಬ್ಧಿಕ ಜ್ಞಾನವಲ್ಲ. ನಾವು ಸಂವೇದನಾಶೀಲರಾಗಿರುವುದು ಮುಖ್ಯ. ಒಳ್ಳೆಯ ಸಂಗೀತಗಾರನು ಭೈರವಿ ರಾಗವನ್ನು ಆಲಾಪನೆ ಮಾಡುವಾಗ ಅದನ್ನು ಎಷ್ಟು ವಿಸ್ತರಿಸಿದರೂ ಭೈರವಿ ರಾಗವನ್ನು ಬಿಟ್ಟು ಹೋಗುವುದಿಲ್ಲ. ವಿದ್ಯೆ ಎಂದರೆ ಆಂತರ್ಯದಲ್ಲಿ ನಾವು ಮೂಡಿಸುವ ಇಂತಹ ಸ್ಪಷ್ಟತೆಗಳೇ ಆಗಿವೆ. ಅದು ಶಬ್ಧಾತೀತವಾದದ್ದು. ಆದ್ದರಿಂದ ನಮ್ಮಲ್ಲಿ ಪರಂಪರೆಗಳಿಂದ ಬಂದ ಅನುಭಾವ ಹೇಳುತದೆ. “ಗುರು ಕೇವಲ ಬೀಜಗಳನ್ನಷ್ಟೇ ನೀಡಬಲ್ಲ” ಎಂದು. ವಿದ್ಯೆ ಎಂಬುದು ಒಂದು ಬೀಜಶಕ್ತಿ.
ಉತ್ತಮವಾದ ಇಚ್ಛೆಯನ್ನು ಹೊಂದಿ ಅದರ ಕುರಿತು ಸ್ಪಷ್ಟತೆಯನ್ನು ಪಡೆದ ಬಳಿಕ ಆ ಸ್ಪಷ್ಟತೆಯಂತೆಯೇ ನಡೆದುಕೊಳ್ಳಬೇಕು. ಇದೇ ಕ್ರಿಯಾಶಕ್ತಿ.
ಯಾವುದೇ ತತ್ವದ ಜ್ಞಾನವಿದ್ದರೂ ಅದರಂತೆ ನಡೆಯದಿರುವುದು ಜ್ಞಾನವಿಲ್ಲದಿರುವುದಕ್ಕೆ ಸಮ. ಧೂಮಪಾನವು ಆರೋಗ್ಯಕ್ಕೆ ಹಾನಿಕರ ಎಂಬುದು ನಮಗೆಲ್ಲಾ ಗೊತ್ತು. ಈ ವಿಷಯದ ಬಗ್ಗೆ ಯಾವುದೇ ಧೂಮಪಾನಿಯನ್ನು ಕೇಳಿ. ಆತ ಧೂಮಪಾನದ ಅಡ್ಡ ಪರಿಣಾಮಗಳ ಬಗ್ಗೆ ವಿದ್ವತ್ಪೂರ್ಣ ಭಾಷಣವನ್ನೇ ಬಿಗಿದಾನು. ಆದರೆ ಧೂಮಪಾನದ ಚಟವನ್ನು ಮಾತ್ರ ಬಿಡುವುದಿಲ್ಲ. ಅವನಲ್ಲಿ ಸ್ಥೂಲ ಜ್ಞಾನವಿದ್ದರೂ ಸೂಕ್ಷ್ಮ ಜ್ಞಾನವಿಲ್ಲ. ಜ್ಞಾನವು ವಿವೇಕವಾಗಿ ಪರಿವರ್ತಿತವಾಗಿರುತ್ತದೆ ಎಂಬ ಖಾತರಿಯೇನೂ ಇಲ್ಲ.
ಬಹಳಷ್ಟು ಮಂದಿ ತಮಗೆ ತಿಳಿದಿದೆ ಎನ್ನುತ್ತಾರೆ. ಆದರೆ ತಿಳಿದಂತೆ ನಡೆಯುವುದಿಲ್ಲ. ಅವರು ತಿಳಿದಿರುವ ಹಾಗೂ ತಿಳಿಯದಿರುವ ಸ್ಥಿತಿಗಳಿಂದ ಸಮ್ಮೋಹಿತರಾಗಿದ್ದಾರೆ. ಏಕೆಂದರೆ ಅವರ ಜ್ಞಾನವು ಅಜ್ಞಾನದ ವೇಷತೊಟ್ಟು ಜ್ಞಾನದಂತೆ ನಟಿಸುವುದು. ಇದು ಮನುಷ್ಯ ಸಿಲುಕಿಕೊಳ್ಳುವ ಅತಿ ದೊಡ್ಡ ಬಲೆ ಎಂದು ಹೇಳಬಹುದು.
ಭಗವಾನ್ ಶಿವನು ಸ್ಪಷ್ಟಜ್ಞಾನದ ಆಧಾರದ ಮೇಲೆ ಕ್ರಿಯಾಶೀಲನಾಗಬೇಕೆನ್ನುವುದಕ್ಕೆ ಒತ್ತು ನೀಡುತ್ತಾನೆ. ಇಚ್ಛಾಶಕ್ತಿಯ ಮೂಲಕ ಜ್ಞಾನೋದಯವಾಗಬೇಕೆಂಬ ಇಚ್ಛೆಯಿದೆ ಎಂದಾಗ, ವಿದ್ಯಾಶಕ್ತಿಯ ಮೂಲಕ ಸ್ಪಷ್ಟತೆಯನ್ನು ಹೊಂದಿ, ಕ್ರಿಯಾಶಕ್ತಿಯ ಮೂಲಕ ತಕ್ಷಣವೇ ತೊಡಗಿಕೊಳ್ಳಬೇಕು. ಮುಂದೂಡಕೂಡದು. ಇಂಥ ಧನಾತ್ಮಕತೆ ನಮ್ಮ ಜೀವನದ ಆರಂಭವಾಗಬೇಕು. ಆಗ ‘ವಿಸ್ಮಯ ಯೋಗ ಭೂಮಿಕಾ’ ಈ ಕ್ಷಣವೇ ಸಂಭವಿಸುತ್ತದೆ. ನೀವು ವಿಸ್ಮಯಃ ಎಂಬ ಸರಿಯಾದ ಮಾರ್ಗದಲ್ಲಿರುವಿರಿ. ಅರ್ಥಾತ್ ನಿಮ್ಮ ಆಂತರ್ಯದಲ್ಲಿ ಮಹಾವಿಸ್ಮಯ ಅಥವಾ ಆಶ್ಚರ್ಯವುಂಟಾಗುತ್ತದೆ. ಅದು ನಿಮ್ಮ ಯೋಗ ಭೂಮಿಕೆಯಾಗುತ್ತದೆ. ಈ ಭೂಮಿಕೆಯ ಮೇಲೆ ನಿಮ್ಮ ಆಧ್ಯಾತ್ಮಿಕ ಜೀವನ ನಿರ್ಮಾಣವಾಗಲಿದೆ.
ವ್ಯಕ್ತಿ ತನ್ನೊಳಗನ್ನು ತೆರೆದುಕೊಳ್ಳಲು ಸಾಧ್ಯವಾದರೆ ಹಲವು ರೀತಿಯ ವಿಸ್ಮಯಗಳು ಸಂಭವಿಸತೊಡಗುತ್ತವೆ. ಇದು ಕ್ರಿಯಾಶಕ್ತಿಯ ಅರಿವಿನಿಂದ ಮಾತ್ರ ಸಾಧ್ಯ. ಮನುಷ್ಯ ತಕ್ಷಣ ಕ್ರಿಯಾಶೀಲನಾಗಬೇಕು. ಈ ರೀತಿಯಲ್ಲಿ ಇಚ್ಛಾಶಕ್ತಿ, ವಿದ್ಯಾಶಕ್ತಿ ಮತ್ತು ಕ್ರಿಯಾಶಕ್ತಿಗಳು ಭಗವಾನ್ ಶಿವನನ್ನು ಆವಾಹಿಸುತ್ತವೆ. ಈ ಗುಣಗಳು ವ್ಯಕ್ತ ರೂಪತಳೆದಾಗ ‘ಶಂ ಮಂಗಳಂ ಕರೋತಿ’ ಅರ್ಥಾತ್ ಮಂಗಳವನ್ನು ಸೃಷ್ಟಿಸುವವನು ವ್ಯಕ್ತವಾಗಿ, ಭಗವಾನ್ ಶಿವನ ಊರ್ಜೆಯಾಗಿ ಪರಿಣಮಿಸುತ್ತದೆ. ಶಿವನೆಂದರೆ ಕತ್ತಲ ರಾತ್ರಿಯಲ್ಲ. ಈ ಗುಣಗಳು ನಮ್ಮ ಅಂತರಂಗದಲ್ಲಿರುವ ಕತ್ತಲನ್ನು ನಾಶ ಮಾಡುತ್ತವೆ. ಆ ಕಾರಣಕ್ಕಾಗಿಯೇ ನಾವು ಶಿವರಾತ್ರಿಯ ಉತ್ಸವವನ್ನು ಆಚರಿಸುತ್ತೇವೆ. ಎಲ್ಲರಿಗೂ ಮಂಗಳ ಉಂಟಾಗಲಿ.
(ಸ್ವಾಮೀ ಸುಖಬೋಧಾನಂದರ ಶಿವಸೂತ್ರಗಳು ಕೃತಿ ಆಧಾರಿತ)
Art by: Kalen Garr
Shivarathri
ಕಾಮೆಂಟ್‌ಗಳು