ಎಚ್. ಎಸ್. ಮುಕ್ತಾಯಕ್ಕ
ಎಚ್.ಎಸ್. ಮುಕ್ತಾಯಕ್ಕ
ಎಚ್. ಎಸ್. ಮುಕ್ತಾಯಕ್ಕ ಕನ್ನಡದ ಪ್ರಸಿದ್ಧ ಕವಯಿತ್ರಿ. ಕನ್ನಡದಲ್ಲಿ ಅವರ ಗಜಲುಗಳ ಕೊಡುಗೆ ಮಹತ್ವದ್ದು.
ಜನವರಿ 28, ಮುಕ್ತಾಯಕ್ಕ ಅವರ ಜನ್ಮದಿನ. ಇವರು ಕರ್ನಾಟಕದ ರಾಯಚೂರು ಜಿಲ್ಲೆಯವರು. ಇವರು ಕನ್ನಡದ ಮಹಾನ್ ಸಾಹಿತಿಗಳಾಗಿದ್ದ ಶಾಂತರಸ ಅವರ ಪುತ್ರಿ.
ಮುಕ್ತಾಯಕ್ಕ ಅವರು ರಾಯಚೂರಿನ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಒಂದೆಡೆ ಶಾಂತರಸರು ಹೀಗೆ ಹೇಳುತ್ತಾರೆ. "ಎಲ್ಲ ಕನ್ನಡ ಕವಿಗಳಂತೆ ನನ್ನ ಮಗಳು ಎಚ್. ಎಸ್. ಮುಕ್ತಾಯಕ್ಕನೂ ಪ್ರೇಮಗೀತೆಗಳನ್ನು ಬರೆದು ಗಝಲ್ ಎಂದು ಪ್ರಕಟಿಸುತ್ತಿದ್ದಳು. ಆಕೆಗೆ ಅದು ಸರಿಯಲ್ಲವೆಂದು ಹೇಳಿ ಗಝಲ್ ಬಗ್ಗೆ ಅಭ್ಯಾಸ ಮಾಡಿಸಿದೆ. ಬಹು ತೀವ್ರ ಆಕೆ ಗಝಲಿನ ಅಂತಃಸತ್ವವನ್ನು ಅರಿತುಕೊಂಡು ರಚನೆ ಮಾಡತೊಡಗಿದಳು. ಇದರ ಪರಿಣಾಮವಾಗಿ 2002ರಲ್ಲಿ ಆಕೆಯ “ನಲವತ್ತು ಗಝಲ್‌ಗಳು” ಎಂಬ ಶುದ್ಧ ಗಝಲ್‌ಗಳ ಸಂಗ್ರಹ ಪ್ರಕಟವಾಯಿತು. ನನಗೆ ಗೊತ್ತಿರುವಂತೆ ಇದು ಉರ್ದು ಗಝಲ್‌ಗಳ ಪರಂಪರೆ, ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಕನ್ನಡದಲ್ಲಿ ಪ್ರಕಟವಾದ ಶುದ್ಧ ಗಝಲ್‌ಗಳ ಮೊಟ್ಟಮೊದಲಿನ ಸಂಗ್ರಹ". ಹೀಗೆ ಮುಕ್ತಾಯಕ್ಕ ಅವರು ತಮ್ಮ ತಂದೆ ಶಾಂತರಸರಂತೆ ಗಜಲಿನ ಸಾಧ್ಯತೆಗಳ ಶೋಧ ಮತ್ತು ವಿಸ್ತಾರದಲ್ಲಿ
ಪ್ರಯೋಗಶೀಲರು.
ಮುಕ್ತಾಯಕ್ಕ ಅವರ ಪ್ರಕಟಿತ ಕೃತಿಗಳಲ್ಲಿ ನಾನು ಮತ್ತು ಅವನು, ನೀವು ಕಾಣಿರೆ ನೀವು ಕಾಣಿರೆ, ಕಭೀ ಕಭೀ, ತನ್ ಹಾಯಿ, ನಿನಗಾಗಿ ಬರೆದ ಕವಿತೆಗಳು ಮುಂತಾದವು ಅವರ ಕಾವ್ಯ ಸಂಗ್ರಹಗಳು. ಇವರ ಗಜಲುಗಳು ನಲವತ್ತು ಗಜಲುಗಳು, ಮೂವತ್ತೈದು ಗಜಲುಗಳು, ನಲವತ್ತೈದು ಗಜಲುಗಳು, ಮೈಂ ಅವ್ರ ಮೇರೆ ಲಮ್ಹೆ , ಮೆಹರ್‍ಬಾನಿಯಾ ಎಂಬ ಸಮಗ್ರ ಗಜಲುಗಳ ಸಂಗ್ರಹ ಮುಂತಾದ ರೂಪಗಳಲ್ಲಿ ವಿವಿಧ ಕಾಲ ಘಟ್ಟದಲ್ಲಿ ಮೂಡಿಬಂದಿವೆ. ಶಿವಶರಣಿ ಮುಕ್ತಾಯಕ್ಕ (ಮಕ್ಕಳಿಗಾಗಿ), ಢಕ್ಕೆಯ ಬೊಮ್ಮಣ್ಣ (ಸಂಶೋಧನೆ), ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳು (ವೈಚಾರಿಕ), ಅಪ್ಪ (ಸಂಪಾಧನೆ), ಮದಿರೆಯ ನಾಡಿನಲ್ಲಿ ( ಪ್ರವಾಸಕಥನ), ಅವನು ಮಧು ಸಾವು (ಬಿಡಿ ದ್ವಿಪದಿಗಳ ಸಂಗ್ರಹ) , ಅಪ್ಪ ನಾನು ಕಂಡಂತೆ (ಶಾಂತರಸರ ನೆನಪುಗಳು)
ಮುಂತಾದವು ಅವರ ಬರಹ ವೈವಿಧ್ಯಗಳಲ್ಲಿವೆ. ಅವರ ಅನೇಕ ವಿಮರ್ಶೆ ಹಾಗೂ ವಿವಿಧ ಬರಹಗಳು ಪ್ರಕಟಗೊಂಡಿವೆ.
ಮುಕ್ತಾಯಕ್ಕ ಅವರ ಒಂದು ಕವಿತೆ ಹೀಗೆ ಗಮನ ಸೆಳೆಯತ್ತದೆ:
ಅರ್ಧರಾತ್ರಿಯಲ್ಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು ಪ್ರೇಮವೆಂಬುದು ಎಂಥಾ ಮರುಳಾಟವೆಂದು ಭಾರವಾಯಿತು ಮನಸ್ಸು ಬಿರುಗಾಳಿಯಲ್ಲಿ ದೀಪ ಉರಿಸಿದ್ದೇಕೆಂದು ಕಣ್ಣೆವೆಯು ಕೇಳಿತು ನನ್ನೆರಡು ಕೈ ಹಿಡಿದು ನೋಡಿದಾ ನೋಟದಲಿ ಏನಿತ್ತು ಏನಿಲ್ಲ ಕೊನೆ ಗಳಿಗೆಯಲಿ ಭಾಷೆ ತಪ್ಪಿದವರಾರೆಂದು ತೊಯ್ದ ಕೆನ್ನೆಯು ಕೇಳಿತು ಇರುಳ ತಂಪಿನಲಿ ನೆನಪಾಯಿತು ಬಿಸಿಯಪ್ಪುಗೆಯ ಒಡನಾಟ ತಪ್ಪಿದ್ದು ಇನ್ನೊಂದು ಬಟ್ಟಲನು ತುಂಬುವವರಾರೆಂದು ಮಧುಪಾತ್ರೆಯು ಕೇಳಿತು ಯಾವುದೋ ನೋವೊಂದು ನಯನ ಹೂಗಳಲ್ಲಿ ಇಬ್ಬನಿಯ ಸುರಿಸುತಿಹುದು ಕೊನೆಯಿಲ್ಲವೆ ‘ಮುಕ್ತಾʼ ಇದೆಕೆಂದು ಎಲ್ಲೋ ಅಡಗಿದ್ದ ನಗೆಯು ಕೇಳಿತು.
ವಿಮರ್ಶಕಿ ಎಂ.ಎಸ್.ಆಶಾದೇವಿ ಹೀಗೆ ನುಡಿಯುತ್ತಾರೆ: "ಗಝಲ್ ಪ್ರಕಾರವು ಅತ್ಯಂತ ಆಕರ್ಷಕವಾದುದು. ನಿಜ, ಆದರೆ ಅದು ಎಲ್ಲರಿಗೂ ಒಲಿಯುವುದು ಸಾಧ್ಯವೇ ಇಲ್ಲ. ಆರಂಭದಿಂದ ಕೊನೆಯವರೆಗೂ ತುರೀಯಾವಸ್ಥೆಯ ಅನುರಕ್ತಿಯನ್ನು ಅದು ಬೇಡುತ್ತದೆ. ಸದಾ ಭಾವೋಲಿಪ್ತವಾದ, ಆದರೂ ಹುಸಿಯಾಗದ ಅಪರೂಪದ ಮನಸ್ಥಿತಿಯಿಲ್ಲದಿದ್ದರೆ ಗಝಲುಗಳನ್ನು ಬರೆಯುವುದು ಸಾಧ್ಯವಿಲ್ಲ. ಅಪ್ಪಟ ಗಝಲುಗಳ ಮಾತೇ ಬೇರೆ. ಅವು ಭಾವ-ನಾದದ ನದಿಗಳಂತೆ, ಹರಿಯುತ್ತಲೇ ಇರುತ್ತವೆ. ಯಾವ ಊರುಗೋಲುಗಳು ಬೇಡ ಅವುಗಳಿಗೆ. ನದಿಯ ಜೀವಂತಿಕೆ, ಮಾರ್ದವ, ಆರ್ತತೆ, ಸೌಂದರ್ಯ, ಸ್ವಚ್ಛಂದತೆ ಎಲ್ಲವೂ ಮಾಂಸಲವಾಗಿ ಓದುಗರನ್ನು ಮುಟ್ಟಿ ಮೀಯಿಸುತ್ತವೆ. ಈ ಎಲ್ಲವೂ ಮುಕ್ತಾಯಕ್ಕನವರ ಗಝಲ್‌ಗಳಲ್ಲಿ ಇವೆ ಎಂದೇ ಅವು ಕನ್ನಡದ ಕಾವ್ಯಾಸಕ್ತರನ್ನು ಎಂದಿಗೂ ಸೆಳೆದಿವೆ."
ಮುಕ್ತಾಯಕ್ಕ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಮುಕ್ತಾಯಕ್ಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of our great poetess H.S. Mukthayakka 🌷🌷🌷
ಕಾಮೆಂಟ್‌ಗಳು