ಮಾಳವಿಕಾ
ಮಾಳವಿಕಾ ಅವಿನಾಶ್
ಮಾಳವಿಕಾ ಅವಿನಾಶ್ ದಕ್ಷಿಣ ಭಾರತೀಯ ಕಿರುತೆರೆ ಮಾಧ್ಯಮದಲ್ಲಿ ಅಪಾರ ಸಾಧನೆ ಮಾಡಿರುವ ಕಲಾವಿದೆ.
ಜನವರಿ 28 ಮಾಳವಿಕಾ ಅವಿನಾಶ್ ಜನ್ಮದಿನ. ಅವರು ಕನ್ನಡ ಮತ್ತು ತಮಿಳು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾರ್ಯನಿರತರು. ದಕ್ಷಿಣ ಭಾರತೀಯ ಸಿನಿಮಾಗಳಲ್ಲೂ ಪಾತ್ರವಹಿಸುತ್ತಾರೆ. ತಮ್ಮದು ಸಮಾಜವಾದಿ ದೃಷ್ಟಿ ಎಂದು ಗುರುತಿಸಿಕೊಳ್ಳುವ ಮಾಳವೀಕ ರಾಜಕೀಯವನ್ನೂ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ನೃತ್ಯ ಮತ್ತು ಸಿತಾರ್ ವಾದನವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ ಮಾಳವಿಕಾ ಜಿ. ವಿ. ಅಯ್ಯರ್ ಅವರ ಕೃಷ್ಣಾವತಾರ ಮತ್ತು ಪ್ರೇಮಾ ಕಾರಂತರ ‘ನಕ್ಕಳಾ ರಾಜಕುಮಾರಿ’ ಮುಂತಾದ ಚಿತ್ರಗಳಲ್ಲಿ ಬಾಲಕಿಯಾಗಿ ನಟಿಸಿದ್ದರು. ಹಲವಾರು ವರ್ಷಗಳ ಹಿಂದೆ ದೂರದರ್ಶನದಲ್ಲಿ ಮಾಳವಿಕಾ ಅವರು ನಾಯಕಿಯಾಗಿ ನಟಿಸಿದ್ದ ಒಂದು ಚಿತ್ರ ನೋಡಿದ ನೆನಪು. ಆ ಚಿತ್ರವನ್ನು ದೂರದರ್ಶನದಲ್ಲಿ ಎಂದೋ ನೋಡುವ ಮುಂಚೆ ಅವರು ಫೋನ್ ಕಾರ್ಯಕ್ರಮದಲ್ಲಿ ಉದಯ ಟಿ.ವಿ ಯಲ್ಲಿ ಕರೆ ಮಾಡಿದವರೊಡನೆ ಹರ್ಷದಿಂದ ಮಾತನಾಡುತ್ತಾ ಚಿತ್ರಗೀತೆಗಳನ್ನು ಭಿತ್ತರಿಸುವ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದನ್ನು ನೋಡಿದ್ದೂ ನೆನಪಿದೆ. ಮಧ್ಯೆ ಇವೆಲ್ಲಾ ಯಾರಿಗೆ ಬೇಕು ಎಂಬಂತೆ ಅವರು ಹೊರಟು ಹೋಗಿದ್ದರು. ಒಂದು ಸಂದರ್ಶನದಲ್ಲಿ ಅವರ ಮಾತು ಓದಿದೆ. “ನಾನು ಮಾಡುತ್ತಿದ್ದ ಕೆಲಸ ಯಾಕೋ ಅಷ್ಟು ಖುಷಿ ತರುತ್ತಿರಲಿಲ್ಲ. ನಾನು ಶಾಲೆ ಬಿಟ್ಟು ಸಿನಿಮಾವನ್ನು ಹುಡುಕಿಕೊಂಡೇನೂ ಬಂದಿರಲಿಲ್ಲ. ಹಾಗಾಗಿ ನನ್ನ ಮುಂದೆ ವಿಭಿನ್ನ ಆಯ್ಕೆಗಳಿದ್ದವು. ಕಾನೂನು ಓದಿದೆ. ಪುನಃ ಇಷ್ಟವಾಗುವಂತಹ ಕೆಲಸಗಳು ಹತ್ತಿರ ಬಂದಾಗ ಕಾನೂನು ಕ್ಷೇತ್ರವನ್ನು ವೃತ್ತಿಯಾಗಿ ಮಾಡಿಕೊಳ್ಳದೆ ಅಭಿನಯ ಕ್ಷೇತ್ರಕ್ಕೇ ಬಂದೆ” ಎನ್ನುತ್ತಾರೆ. ಕಿರುತೆರೆಯಲ್ಲಿ ನ್ಯಾಯಾಲಯದ ವ್ಯಾಜ್ಯಗಳನ್ನು ಹೋಲುವ ಕಾರ್ಯಕ್ರಮಗಳನ್ನು ಸಹಾ ಅವರು ನಿರ್ವಹಿಸಿದ್ದಾರೆ. ಅವರದು ನೇರ ಮಾತು. ಅವರ ದೂರದರ್ಶನದ ಧಾರಾವಾಹಿಗಳಲ್ಲಿನ ಧೈರ್ಯವಂತ ಪಾತ್ರಗಳಂತೆ!
ಮಾಳವಿಕಾ ಅವರು ಕನ್ನಡಿಗರಿಗೆ ಪುನಃ ದಕ್ಕಿದ್ದು ಟಿ. ಎನ್. ಸೀತಾರಾಂ ಅವರ ಸುಂದರ ಧಾರವಾಹಿಗಳಾದ ‘ಮಾಯಾಮೃಗ’, ‘ಮನ್ವಂತರ’ ಮತ್ತು ‘ಮುಕ್ತ’ ಧಾರಾವಾಹಿಗಳ ಮೂಲಕ. ಮಧ್ಯಮ ವರ್ಗದ ವಿಭಿನ್ನ ನೆಲೆಗಳನ್ನು ಟಿ. ಎನ್. ಸೀತಾರಾಂ ದ್ರಶ್ಯ ಕಾವ್ಯವಾಗಿಸಿದ ಈ ಧಾರಾವಾಹಿಗಳಲ್ಲಿ ಅಭಿನಯಿಸಿದ ಬಹಳಷ್ಟು ಕಲಾವಿದರು ಕನ್ನಡ ಜನತೆಗೆ ಅತ್ಮೀಯರಾಗಿಬಿಟ್ಟಿದ್ದಾರೆ. ಇವರಲ್ಲಿ ಮಾಳವಿಕಾ ಪ್ರಮುಖ ಹೆಸರು. ಮಾಳವಿಕಾ ಅವರು ಕಾನೂನು ಓದಿದ್ದನ್ನು ವೃತ್ತಿಯಾಗಿ ಕಿರುತೆರೆಯಮೇಲೆ ಮೂಡಿಸಿದವರು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಕೆ. ಬಾಲಚಂದರ್. ‘ಅಣ್ಣಿ’ ಎಂಬ ಈ ತಮಿಳು ಧಾರವಾಹಿಯಲ್ಲಿ ಮನೆಯ ಸೊಸೆಯಾಗಿ, ಜವಾಬ್ಧಾರಿಯುತ ಹೆಣ್ಣಾಗಿ, ತನ್ನ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳುವ ಗಾಂಭೀರ್ಯ ಪ್ರವೃತ್ತಿಯ ವ್ಯಕ್ತಿಯಾಗಿ ಮಾಳವಿಕಾ ಅವರು ನೀಡಿದ ಅಭಿನಯ ಗಮನಾರ್ಹವಾದದ್ದು. ‘ನಿಲವೈ ಪಿಡಿಪ್ಪೋಮ್’ ಎಂಬುದು ಅವರು ಅಭಿನಯಿಸಿದ ಬಾಲಚಂದರ್ ನಿರ್ದೇಶನದ ಮತ್ತೊಂದು ಪ್ರಮುಖ ಧಾರಾವಾಹಿ. ಅವರ ‘ಅರಸಿ’ ಎಂಬ ಧಾರಾವಾಹಿಯ ಪಾತ್ರ ಅವರಿಗೆ ಜನಪ್ರಿಯತೆಯ ಜೊತೆಗೆ ಪ್ರಶಸ್ತಿಯನ್ನೂ ತಂದುಕೊಟ್ಟಿತು. ‘ಚಲ್ಲಮೆ’ ಅವರ ಮತ್ತೊಂದು ಪ್ರಖ್ಯಾತ ಧಾರಾವಾಹಿ. ‘ಚಿದಂಬರ ರಹಸಿಯಂ’, ‘ರಾಜ ರಾಜೇಶ್ವರಿ’, ‘ಕಾಮಿಡಿ ಕಾಲೋನಿ’ ಮುಂತಾದವು ಅವರ ಇನ್ನಿತರ ಕಿರುತೆರೆ ತಮಿಳು ಧಾರಾವಾಹಿಗಳು.
ಹೀಗೆ ಕನ್ನಡ ಮತ್ತು ತಮಿಳು ಭಾಷೆಗಳ ಮಧ್ಯೆ ಅವರ ಪ್ರತಿಭೆ ವಿಶಿಷ್ಟವಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಡಾ. ಎಸ್. ಎಲ್. ಭೈರಪ್ಪನವರ ‘ಗೃಹಭಂಗ’ ಕಾದಂಬರಿಯ ನಂಜಮ್ಮನ ಪಾತ್ರ ಅವರಿಗೆ ದಕ್ಕಿದ್ದು ವಿಶೇಷ ಸಂಗತಿ. ಯಾವುದೇ ಮಹತ್ವದ ನಟಿ ಕೂಡ ಅಭಿನಯಿಸಲು ಕಾದು ನಿಲ್ಲುವಂತಹ ಪಾತ್ರವದು. ‘ಗೃಹಭಂಗ’ ಕಾದಂಬರಿಯಲ್ಲಿ ನಂಜಮ್ಮನಾಗಿ ಅವರು ನೀಡಿದ ಅಭಿನಯ ಮನಸ್ಸಿನಲ್ಲಿ ನೆಲೆ ನಿಲ್ಲುವಂತದ್ದು. ‘ಮಹಾಪರ್ವ’ ಧಾರಾವಾಹಿಯ ಕೆಲವೊಂದು ಕಂತುಗಳಲ್ಲಿ ಅವರು ನ್ಯಾಯಾಧೀಶರ ಪಾತ್ರ ನಿರ್ವಹಿಸಿದ್ದರು.
ಮಾಳವಿಕಾ ಅವರ ತಮಿಳು ಧಾರಾವಾಹಿಗಳಲ್ಲಿನ ಅಭಿನಯದಿಂದ ಪ್ರೇರಿತಗೊಂಡ ತಮಿಳು ಚಿತ್ರರಂಗ ಅವರನ್ನು ಹಲವಾರು ಚಿತ್ರಗಗಳಿಗೆ ಸಹಾ ಕೂಗಿ ಕರೆಯಿತು. ಹಲವಾರು ಚಲನಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಲ್ಲಿ ಸಹಾ ಅವರು ಆಗಾಗ ಮೂಡಿಬರುತ್ತಿದ್ದಾರೆ. ‘ಅಗ್ನಿ’ಯಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ‘ಬದುಕು ಜಟಕಾಬಂಡಿ’ ಮತ್ತು ‘ಆರದಿರಲಿ ಬೆಳಕು’ ಕಾರ್ಯಕ್ರಮಗಳಲ್ಲಿ ಪ್ರಮುಖ ಸೂತ್ರಧಾರಿಣಿಯೂ ಆಗಿದ್ದಾರೆ. ಭರತನಾಟ್ಯ ಕಲಾವಿದೆಯಾಗಿ ಸಹಾ ಅವರು ಕಾರ್ಯಕ್ರಮ ನೀಡಿದ್ದಿದೆ. ಹಲವಾರು ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಸರಣಗೊಳ್ಳುತ್ತಿವೆ.
ಹಲವು ಧಾರಾವಾಹಿ ಸಿನಿಮಾಗಳಲ್ಲಿ ಮಾಳವಿಕಾ ಅವರು ಚುನಾವಣೆಯಲ್ಲಿ ಗೆದ್ದ ಸನ್ನಿವೇಶಗಳಿವೆ. ಮಾಳವಿಕಾ ಅವರ ಮಾತುಕತೆ, ಪಾತ್ರ ನಿರ್ವಹಣೆ, ಬರಹಗಳಲ್ಲಿ ಸಾಮಾಜಿಕ ಕಳಕಳಿಗಳ ಅಭಿವ್ಯಕ್ತಿಯಿದೆ. ಇದಕ್ಕೆ ಪೂರಕವೆಂಬಂತೆ ಅವರು ಹಲವು ರಾಜಕೀಯ ಪಕ್ಷಗಳಲ್ಲಿ ಕೆಲಕಾಲ ಅತ್ತಿಂದಿತ್ತ ಎಂಬ ಸಂದಿಗ್ಧ ನಿಲುವುಗಳಿಗೆ ಸಿಲುಕಿದಂತೆ ಕಂಡರೂ, ಭಾಜಪಕ್ಕೆ ಹಿಂದಿರುಗಿ ಆ ಪಕ್ಷದ ವಕ್ತಾರರಾಗಿ ಆಗಾಗ್ಗೆ ಸಂಪರ್ಕ ಮಾಧ್ಯಮಗಳಲ್ಲಿ ಕಾಣುತ್ತಿದ್ದಾರೆ.
ತಮ್ಮ ಪ್ರತಿಭೆ, ಸಂಸ್ಕೃತಿ, ಭಾಷೆ, ಕಲಾನಿಷ್ಟೆಗಳಿಂದ ಇಂದಿನ ಕಲಾಲೋಕದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಷ್ಠಾಪಿತರಾಗಿರುವ ಮಾಳವಿಕಾ ಹಾಗೂ ಅವರ ಪತಿ ಚಿತ್ರರಂಗದ ಜನಪ್ರಿಯ ಕಲಾವಿದ ಅವಿನಾಶ್ ಎಲ್ಲ ರೀತಿಯಲ್ಲೂ ಅನುರೂಪದ ಪ್ರತಿಭಾವಂತ ಜೋಡಿ. ನಾವು ಈ ಜನಪ್ರಿಯ ಜೋಡಿಯ ಸಾಧನೆಗಳನ್ನು ನಿರಂತರ ಕೇಳುತ್ತಿರುವಂತಾಗಲಿ. ಕಷ್ಟಪಟ್ಟು ದುಡಿಯುವ ಈ ಕಲಾವಿದರು ಬದುಕಿನಲ್ಲಿ ಎಲ್ಲ ರೀತಿಯಲ್ಲಿ ಸುಖಿಸುವಂತಾಗಲಿ. ಮಾಳವಿಕಾ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.
On the birthday of our talented actress Malavika Avinash
ಕಾಮೆಂಟ್‌ಗಳು